ಶ್ಲೋಕ – 12
ಜ್ಞಾನ ಸಾಧನಗಳನ್ನು ವಿವರಿಸಿದ ಕೃಷ್ಣ ಮುಂದಿನ ಆರು ಶ್ಲೋಕಗಳಲ್ಲಿ ಶಬ್ದದ ಮಿತಿಯಿಂದ ಆಚೆಗಿರುವ ಭಗವಂತನ ವರ್ಣನೆಯನ್ನು ನಮ್ಮ ಮುಂದಿಡುತ್ತಾನೆ. ದೇವರು ಹೇಗಿದ್ದಾನೆ, ಆತನ ರೂಪವನ್ನು ಹೇಗೆ ಅನುಸಂಧಾನ ಮಾಡಬೇಕು ಎನ್ನುವ ವಿಚಾರವನ್ನು ಕೃಷ್ಣ ಇಲ್ಲಿ ಸುಂದರವಾಗಿ ವರ್ಣಿಸಿದ್ದಾನೆ. ಈ ಶ್ಲೋಕಗಳಲ್ಲಿ ಒಂದೊಕ್ಕೊಂದು ವ್ಯತಿರಿಕ್ತ(Contradicting)ವಾಗಿ ಕಾಣುವ ಅನೇಕ ವಿಷಯಗಳನ್ನು ನಾವು ಕಾಣಬಹುದು. ಉದಾಹರಣೆಗೆ: ಭಗವಂತ ನಿರ್ಗುಣ ಆದರೆ ಆತ ಸರ್ವಗುಣಪೂರ್ಣ; ಭಗವಂತ ಅಚಲ ಆದರೆ ಆತ ಚಲಿಸುತ್ತಾನೆ; ಭಗವಂತ ನಿರಾಕಾರ ಆದರೆ ಆತ ಸಾಕಾರ; ಭಗವಂತನನ್ನು ತಿಳಿಯಲು ಅಸಾಧ್ಯ ಆದರೆ ಆತನನ್ನು ತಿಳಿಯಬಹುದು; ಭಗವಂತನಿಗೆ ಇಂದ್ರಿಯಗಳಿಲ್ಲ ಆದರೆ ಆತನಿಗೆ ಇಂದ್ರಿಯಗಳಿವೆ; ಆತ ದೂರದಲ್ಲಿದ್ದಾನೆ ಆದರೆ ಹತ್ತಿರದಲ್ಲಿದ್ದಾನೆ; ಇತ್ಯಾದಿ. ಈ ರೀತಿಯ ವರ್ಣನೆಯನ್ನು ಭಗವಂತನಿಗಲ್ಲದೆ ಇನ್ಯಾರಿಗೂ ಕೊಡಲು ಬರುವುದಿಲ್ಲ. ಇವೆಲ್ಲವುದರ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.
ಜ್ಞೇಯಂ ಯತ್ ತತ್ ಪ್ರವಕ್ಷ್ಯಾಮಿ ಯಜ್ ಜ್ಞಾತ್ವಾSಮೃತಮಶ್ನುತೇ ।
ಅನಾದಿಮತ್ ಪರಂ ಬ್ರಹ್ಮ ನ ಸತ್ ತನ್ನಾಸದುಚ್ಯತೇ ॥೧೨॥
ಜ್ಞೇಯಮ್ ಯತ್ ತತ್ ಪ್ರವಕ್ಷ್ಯಾಮಿ ಯತ್ ಜ್ಞಾತ್ವಾ ಅಮೃತಮ್ ಅಶ್ನುತೇ ।
ಅನಾದಿಮತ್ ಪರಮ್ ಬ್ರಹ್ಮ ನ ಸತ್ ತತ್ ನ ಅಸತ್ ಉಚ್ಯತೇ – ಯಾವುದನ್ನು ತಿಳಿದು ಸಾವನ್ನು ಗೆಲ್ಲುವನೋ ಅಂಥ ‘ಜ್ಞೇಯ’ವನ್ನು ಹೇಳುತ್ತೇನೆ: ಹುಟ್ಟಿರದ,[ದೇಹದಿಂದಲೂ ಹುಟ್ಟದ] ಪರಬ್ರಹ್ಮವೆ ಜ್ಞೇಯ. ಅದು ಕಣ್ಣಿಗೆ ಕಾಣುವ ಮಣ್ಣು-ನೀರು-ಬೆಂಕಿಗಿಂತಲು ಬೇರೆ; ಕಾಣದ ಗಾಳಿ –ಆಗಸಗಳಿಗಿಂತಲೂ ಬೇರೆ ಎನ್ನಿಸಿದೆ.
ಇಲ್ಲಿ ಕೃಷ್ಣ ಜ್ಞಾನ ಸಾಧನಗಳ ಮೂಲಕ ತಿಳಿದುಕೊಳ್ಳಬೇಕಾದ ಜ್ಞೇಯನ ಬಗ್ಗೆ ವಿವರಿಸುತ್ತ ಹೇಳುತ್ತಾನೆ: “ಯಾವುದನ್ನು ಪ್ರತ್ಯಕ್ಷವಾಗಿ ಶಬ್ದಗಳು ಹೇಳಲಾರವೋ, ಯಾವ ಜ್ಞಾನವನ್ನು ತಿಳಿದುಕೊಂಡು ನೀನು ಅಮೃತತ್ವವನ್ನು ಸವಿಯುವೆಯೋ-ಅದನ್ನು ನಾನು ನಿನಗೆ ಹೇಳುತ್ತೇನೆ” ಎಂದು. ಭಗವಂತ ಅನಾದಿಮತ್. ಆತನಿಗೆ ನಶ್ವರವಾದ ಪಂಚಭೂತಗಳಿಂದಾದ ಯಾವ ಆಕಾರವೂ ಇಲ್ಲ. ಆತ ಜ್ಞಾನಾನಂದ ಸ್ವರೂಪ. ಭಗವಂತನ ಗುಣಕ್ರಿಯೆ ಎಲ್ಲವೂ ಅನಾದಿಮತ್. ಸದ್ಗುಣಗಳಿಂದ ತುಂಬಿರುವ ಭಗವಂತ ನಮಗೆ ಪೂರ್ಣತೆಯನ್ನು ಕೊಡುವವ. ಆತ ಸರ್ವರಕ್ಷಕ, ಆತನಿಂದ ಹಿರಿದಾದ ತತ್ವ ಇನ್ನೊಂದಿಲ್ಲ. ಇಂಥಹ ಭಗವಂತನನ್ನು ನಾವು ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಅದು ನಮ್ಮ ಅರಿವಿಗೆ ಎಟುಕದ್ದು. ಹೀಗಿದ್ದರೂ ಕೂಡಾ ಆತನನ್ನು ನಮ್ಮ ಸಾಮರ್ಥ್ಯಕ್ಕನುಗುಣವಾಗಿ ನಾವು ಯಥಾರ್ಥ ತಿಳಿಯಲು ಸಾಧ್ಯ.