Wednesday , 24 April 2024
HM Ramaradya

ಹು.ಮ. ರಾಮಾರಾಧ್ಯ

ಹು.ಮ. ರಾಮಾರಾಧ್ಯ (೦೬.೦೪.೧೯೦೭ – ೨೦.೧೨.೧೯೭೩): ಗಮಕ ಕಲಾವಿದರಾದ ರಾಮಾರಾಧ್ಯರು ಹುಟ್ಟಿದ್ದು ನಂಜನಗೂಡಿನ ಬಳಿಯ ಹುಲ್ಲಹಳ್ಳಿ. ತಂದೆ ಮಲ್ಲಾರಾಧ್ಯ, ತಾಯಿ ಪಾರ್ವತಮ್ಮ. ಓದಿದ್ದು ಮೈಸೂರಿನಲ್ಲಿ. ಅಧ್ಯಾಪಕರಾಗಿ ಉದ್ಯೋಗಕ್ಕೆ ಸೇರಿದ್ದು ತಾಂಡವಪುರದಲ್ಲಿ.

ಎಳೆವೆಯಿಂದಲೇ ನಾಟಕದ ಕಲೆಯಗೀಳು. ಹುಲ್ಲಹಳ್ಳಿಯ ’ದಿ ಅಸೋಸಿಯೇಟೆಡ್ ಡ್ರಾಮ್ಯಾಟಿಕ್ಸ್’ ಕಂಪನಿಯ ಕಾಳಿದಾಸ, ಸದಾರಮೆ, ಗುಲೇಬಕಾವಲಿ ಮೊದಲಾದ ನಾಟಕಗಳ ನಟ. ಸುಶ್ರಾವ್ಯ ಕಂಠದ ಹಾಡುಗಾರ. ಗುಬ್ಬಿಕಂಪನಿಯ ನಟರಾಗಿಯೂ ಹಲವಾರು ವರ್ಷ ಪಡೆದ ಅನುಭವ.

ಕೆಲಕಾಲ ತಾಂಡವಪುರ, ರಾವದೂರು ಮುಂತಾದೆಡೆ ಪ್ರಾಥಮಿಕ ಶಾಲಾ ಅಧ್ಯಾಪಕರ ಉದ್ಯೋಗ. ಪಂಡಿತ್ ಪರೀಕ್ಷೆಗೆ ಕುಳಿತವರು ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗಿಯಾದರು. ೧೯೪೨ರಲ್ಲಿ ಪಂಡಿತ ಪರೀಕ್ಷೆಯಲ್ಲಿ ತೇರ್ಗಡೆ. ಬೆಂಗಳೂರಿನ ಮಲ್ಲೇಶ್ವರಂ ಬಾಲಕರ ಪ್ರೌಢಶಾಲೆಯಲ್ಲಿ ದೊರೆತ ಉಪಾಧ್ಯಾಯರ ಹುದ್ದೆ. ಸಿದ್ಧವನಹಳ್ಳಿ ಕೃಷ್ಣಶರ್ಮರು ೧೯೪೨ರಲ್ಲಿ ಸ್ಥಾಪಿಸಿದ ಗಾಂಧಿ ಸಾಹಿತ್ಯ ಸಂಘದ ಒಡನಾಟ. ಕಾವ್ಯವಾಚನ. ಕೀರ್ತನೆಯ ಕಡೆ ಬೆಳೆದ ಒಲವು. ರಾಗ, ಭಾವ, ಸಾಹಿತ್ಯ ಮೂರು ಭಾಗಗಳನ್ನು ಮೈಗೂಡಿಸಿಕೊಂಡಿದ್ದು ಅಪರೂಪದ ಗಮಕ ಎನಿಸಿದ್ದರು. ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳಿಗೆ ಕಲಿಸಿದ ಗಮಕ ಕಲೆ. ಪ್ರಖ್ಯಾತ ಗಮಕ ವ್ಯಾಖ್ಯಾನಕಾರರಾದ ಮತ್ತೂರು ಕೃಷ್ಣಮೂರ್ತಿಯವರು ಇವರ ಶಿಷ್ಯರಲ್ಲೊಬ್ಬರು. ಕಾವ್ಯವಾಚನದಲ್ಲಿ ನಿಷ್ಣಾತರಾಗಿದ್ದ ಆರಾಧ್ಯರು ಹಳಗನ್ನಡ ಕಾವ್ಯಗಳಲ್ಲಿ ಪಂಡಿತರೆನಿಸಿದ್ದರು.

ಹಲವಾರು ಸಾಹಿತ್ಯ ಕೃತಿಗಳ ರಚನೆ. “ವೀರಭೂಮಿ” ಮಕ್ಕಳಿಗಾಗಿ ರಚಿಸಿದ ಪಠ್ಯಪುಸ್ತಕ. ಆದರ್ಶ ಮಹಿಳಾ ರತ್ನಗಳು ಇವರ ಇನ್ನೊಂದು ಪ್ರಖ್ಯಾತಕೃತಿ. ಮತ್ತೆರಡು ಪ್ರಮುಖ ಸಂಪಾದನೆಗಳೆಂದರೆ ೨ ಸಂಪುಟಗಳಲ್ಲಿ ೧೫೦೦ ಪುಟಗಳ ‘ಗಾದೆಗಳ ಮಹಾಕೋಶ’, ಗಮಕಚಂದ್ರಿಕೆ – ಗಮಕ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿದ ಕೃತಿ.

ಸಂದ ಪ್ರಶಸ್ತಿ ಗೌರವಗಳು ಹಲವಾರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸನ್ಮಾನ. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ನಾಡಿನ ಸಹೃದಯದಿಂದ ಗಮಕ ಕಲಾ ಪ್ರಪೂರ್ಣ ಪ್ರಶಸ್ತಿ, ೧೯೭೨ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಗಮನಸಮ್ಮೇಳನದ ಕಾರ್ಯದರ್ಶಿಯಾಗಿ ಯಶಸ್ವಿಗೊಳಿಸಿದ ಗಮಕ ಸಮ್ಮೇಳನ. ಈ ದಿನ ಅವರ ಶತಮಾನೋತ್ಸವದ ಸವಿನೆನಪು.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *