Hulluru Srinivasa Joisaru

ಹುಲ್ಲೂರು ಶ್ರೀನಿವಾಸ ಜೋಯಿಸರು

ಹುಲ್ಲೂರು ಶ್ರೀನಿವಾಸ ಜೋಯಿಸರು (೨೯-೩-೧೮೯೨ – ೮-೧೧-೧೯೫೬): ಸಂಶೋಧಕ, ರಾಷ್ಟ್ರಪ್ರೇಮಿ, ಕರ್ನಾಟಕ ಏಕೀಕರಣಕ್ಕೆ ದುಡಿದ, ಪುರೋಹಿತ ಮನೆತನಕ್ಕೆ ಸೇರಿದ ಹುಲ್ಲೂರು ಶ್ರೀನಿವಾಸ ಜೋಯಿಸರ ಕುಟುಂಬದ ಹಿರಿಯರು ಸುಮಾರು ಮೂರು ನೂರು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಳಿಯ ಅಂಬಳೆ ಗ್ರಾಮದಿಂದ ಚಿತ್ರದುರ್ಗ ಜಿಲ್ಲೆಯ ಹುಲ್ಲೂರಿಗೆ ವಲಸೆ ಬಂದವರು. ತಂದೆ ಪಾಂಡುರಂಗ ಜೋಯಿಸ್, ತಾಯಿ ಪಾರ್ವತಮ್ಮ. ಪ್ರಾಥಮಿಕ ಶಿಕ್ಷಣ ಪಡೆದುದು ಚಿತ್ರದುರ್ಗದಲ್ಲಿ, ಮೆಟ್ರಿಕ್ ಪಾಸು ಮಾಡಿದ ನಂತರ ಕೆಲಕಾಲ ನೌಕರಿಯಲ್ಲಿದ್ದರು. ನಂತರ ಲಾ ಪದವಿ ಪಡೆದು ವಕೀಲಿ ವೃತ್ತಿ ಆರಂಭಿಸಿದರು.

ವಕೀಲರಾಗಿದ್ದರೂ ಅಧ್ಯಯನ ಶೀಲರಾಗಿದ್ದು ಇತಿಹಾಸ ಸಂಶೋಧನೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಕರ್ನಾಟಕ ಏಕೀಕರಣ, ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಚಿತ್ರದುರ್ಗದ ಇತಿಹಾಸದ ಜೊತೆಗೆ ಕರ್ನಾಟಕದ ಇತಿಹಾಸದ ಬಗ್ಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಐತಿಹಾಸಿಕ ಸ್ಥಳಗಳು, ವ್ಯಕ್ತಿಗಳು, ಘಟನೆಗೆ ಸಂಬಂಸಿದಂತೆ, ಭಾಷೆ, ಧರ್ಮ, ಸಂಸ್ಕೃತಿ, ಶೌರ್ಯ, ಸಾತ್ವಿಕತೆ, ಆದರ್ಶ, ಉದಾರತೆ ಮೊದಲಾದ ಗುಣಗಳನ್ನು ಚಿತ್ರಿಸುವ ಉದ್ದೇಶದಿಂದ ಅವರು ಇಪ್ಪತ್ತೈದು ವರ್ಷಗಳ ಕಾಲ ಸುಮಾರು ಮುನ್ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದು ಕನ್ನಡಿಗರ ಕಣ್ಣು ತೆರೆಸಿದ್ದಾರೆ. ಇವರು ರಚಿಸಿದ ಹತ್ತು ಪುಸ್ತಕಗಳಲ್ಲಿ ಗಂಡುಗಲಿ ಕುಮಾರರಾಮ, ಕನ್ನಡ ಕಲಿ ಸಿರುಮನ ಚರಿತೆ ಬಹುಮುಖ್ಯವಾದುವು. ‘ಚಿತ್ರದುರ್ಗದ ಬಖೈರು’ ಇವರು ಸಂಪಾದಿಸಿ ಪ್ರಕಟಿಸಿದ ಅಮೂಲ್ಯ ಐತಿಹಾಸಿಕ ದಾಖಲೆಯ ಕೃತಿ.

ಶ್ರೀ ತ.ರಾ.ಸು. ಮತ್ತು ಜಿ. ವರದರಾಜರಾಯರು ಕ್ರಮವಾಗಿ ಹಂಸಗೀತೆ ಮತ್ತು ಕುಮಾರರಾಮನ ಸಾಂಗತ್ಯ ಕೃತಿಗಳನ್ನು ಶ್ರೀನಿವಾಸ ಜೋಯಿಸರಿಗೆ ಅರ್ಪಿಸಿ ಗೌರವ ತೋರಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಿಕಾ ವರದಿಗಾರರಾಗಿ, ಚಿತ್ರದುರ್ಗ ಜಿಲ್ಲೆಯ ಪತ್ರಿಕೋದ್ಯಮಿಗಳ ಸಂಘದ ಅಧ್ಯಕ್ಷರಾಗಿ, ಮೈಸೂರು ಸಂಸ್ಥಾನ ಪತ್ರಿಕೋದ್ಯೋಗಿಗಳ ಸಂಘದ, ಮೈಸೂರು ಪ್ರಾದೇಶಿಕ, ಐತಿಹಾಸಿಕ ಪತ್ರಗಳ ಶೋಧನಾ ಸಮಿತಿ, ಯೋಜನಾ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದರು. “ಇತಿಹಾಸ ಸಂಶೋಧನಾ ಪ್ರಸಕ್ತ, ಐತಿಹ್ಯ ವಿಮರ್ಶನ ವಿಚಕ್ಷಣ” ಸಂದ ಬಿರುದು ಗೌರವಗಳು.

೨೦೦೦ ವರ್ಷದಷ್ಟು ದೀರ್ಘ ಇತಿಹಾಸ ಹೇಳುವ, ತಾವೇ ಸ್ಥಾಪಿಸಿದ ಚಿತ್ರದುರ್ಗದ ಪ್ರಾಚ್ಯವಸ್ತು ಸಂಗ್ರಹಾಲಯದ ಗೌರವ ಕ್ಯೂರೇಟರಾಗಿಯೂ ಸೇವೆ ಸಲ್ಲಿಸಿ ನಿಧನರಾದದ್ದು ೮.೧೧.೧೯೫೬ರಲ್ಲಿ.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.7 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *