Hungunda

ಬಾದಾಮಿ ಚಾಲುಕ್ಯರು : ಹುನಗುಂದದ ಬಾದಾಮಿ ಚಾಲುಕ್ಯರ ಅವಶೇಷಗಳು

ವಿಜಾಪುರ ಜಿಲ್ಲೆಯ ಹುನಗುಂದ ನಗರದಲ್ಲಿ ರಾಮಲಿಂಗೇಶ್ವರ ದೇವಾಲಯದತ್ತ ಇತಿಹಾಸಕಾರರ ಗಮನವಿನ್ನೂ ಸೆಳೆದಿಲ್ಲ.[1] ಬಹುಪುರಾತನವಾದ ಈ ದೇವಾಲಯವನ್ನು ಇತ್ತೀಚೆ ಜೀರ್ಣೋದ್ಧಾರ ಮಾಡಿದ್ದರೂ ಅದಿನ್ನೂ ಹಾಳು ಸ್ಥಿತಿಯಲ್ಲಿ ಇದ್ದಂತೆ ಕಾಣುವುದು. ಒಳಹೊರ ಭಾಗಕ್ಕೆಲ್ಲ ಸುಣ್ಣ ಬಳಿಯಲಾಗಿರುವುದರಿಂದ ಅದರ ಕಲಾಸಂಪತ್ತೂ ಅಡಗಿಕೊಂಡುಬಿಟ್ಟಿದೆ.

ಈ ದೇವಾಲಯದ ಸಭಾಮಂಟಪದ ಭುವನೇಶ್ವರಿಯಲ್ಲಿಯ ಶಾಸನವನ್ನು ಈ ಮೊದಲು ಗುರುತಿಸಿ, ಪ್ರಕಟಿಸಲಾಗಿದೆ(SII XI, Pt, I.,No.೧೧೩ of ೧೦೭೪). ಅರಸರ ಬಸದಿಗೆ ದತ್ತಿ ಕೊಟ್ಟ ಬಗ್ಗೆ ಇಲ್ಲಿ ಉಲ್ಲೇಖ ಬರುವುದರಿಂದ, ಈ ಶಾಸನಕ್ಕೂ ಮತ್ತು ರಾಮಲಿಂಗೇಶ್ವರ ದೇವಾಲಯಕ್ಕೂ ಸಂಬಂಧವಿಲ್ಲ ಎನ್ನುವ ಮಾತು ಸ್ಪಷ್ಟ.

ದಿನಾಂಕ ೧೨-೨-೭೪ರಂದು ನಾನು ಈ ದೇವಾಲಯವನ್ನು ನೋಡಿದಾಗ ಅದು ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರಿದುದೆಂದು ತಿಳಿದು ಆಶ್ಚರ್ಯಗೊಂಡೆ. ಈ ದೇವಾಲಯದ ಕಾಲ ನಿರ್ಣಯಿಸಲು (ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ಕಾಲದ ಸುಮಾರಿಗೆ ಸೇರಿದ್ದು, ಎನ್ನಲು) ಮಂಟಪದ ಚೌಕಾಕಾರದ ಕಂಬಗಳು ಹಾಗೂ ಭುವನೇಶ್ವರಿಯಲ್ಲಿಯ ಉಬ್ಬು ಶಿಲ್ಪಗಳು ಸಾಕ್ಷಿ ನೀಡುವುವು. ಮಂಟಪವನ್ನು ಉಳಿದ ಚಾಲುಕ್ಯ ದೇವಾಲಯಗಳಂತೆ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮಧ್ಯ ಅಂಗಳದ ಭುವನೇಶ್ವರಿಯಲ್ಲಿ ಮೂರು ಉಬ್ಬುಚಿತ್ರ ಹೊಂದಿದ ಫಲಕಗಳಿವೆ. ಮೊದಲನೆಯ ಫಲಕದಲ್ಲಿ (ಪ್ರವೇಶ ಮಾಡಿದ ಕೂಡಲೇ ಕಾಣುವುದು) ನಂದಿಯನ್ನೇರಿದ ಶಿವ ಪಾರ್ವತಿಯರ ಚಿತ್ರವಿದೆ. ನಂದಿಯ ಹಿಂಭಾಗದಲ್ಲಿ ಶಿವನೆಡೆಗೆ ಮುಖಮಾಡಿ, ಅಭದ್ರವಾಗಿ ಸುಖಾಸನದಲ್ಲಿ ಪಾವರ್ತಿ ಕುಳಿತಿರುವಳು. ಅವಳ ಎಡಗೈಯಲ್ಲಿ ಪದ್ಮವಿದೆ. ಚತುರ್ಭುಜನಾದ ಶಿವ, ಎರಡು ಕೈಗಳಲ್ಲಿ ತಂಬೂರಿಯನ್ನು, ಇನ್ನುಳಿದ ಎರಡರಲ್ಲಿ ಡಮರು ಮತ್ತು ತ್ರಿಶೂಲಗಳನ್ನು ಹಿಡಿದಿರುವನು. ಅವನೂ ಸುಖಾಸನದಲ್ಲಿರುವನು. ಸುತ್ತಲೂ ಗಣಧರರಿರುವರು. ನಂದಿಯ ಹಿಂದಿನ ಪಾದದ ಬಳಿ ನವಿಲನ್ನೇರಿದ ಕಾರ್ತಿಕೇಯನಿರುವನು. ವಿವರ ಮತ್ತು ಶೈಲಿಯಲ್ಲಿ ಇದು ನಾಗನಾಥ ದೇವಾಲಯದ ಭುವನೇಶ್ವರಿಯ ಶಿಲ್ಪಗಳನ್ನು ಹೋಲುವುದು. ಭುವನೇಶ್ವರಿಯ ಮಧ್ಯಭಾಗದ ಎರಡು ಚಿತ್ರಗಳು ಹಾಳಾದಂತೆ ಕಂಡುಬರುವುದು. ನಂತರ ಇರುವ ಶಿಲ್ಪ ಗರುಡವನ್ನೇರಿದ ಚತುರ್ಭುಜ ವಿಷ್ಣುವಿನದಾಗಿದೆ. ವಿಷ್ಣುವಿನ ಹಸ್ತದಲ್ಲಿ ಚಕ್ರ, ಗದೆ, ಶಂಖ ಮತ್ತು ಪದ್ಮಗಳಿವೆ. ಸುತ್ತಲೂ ಮುನಿವೃಂದ ಹಾಗೂ ಗಣವೃಂದ ಇವೆ. ಈ ಶಿಲ್ಪ ಚಾಲುಕ್ಯರ ಕಾಲದ ವಿಷ್ಣುವಿನ ಸಾಂಪ್ರದಾಯಿಕ ಶಿಲ್ಪವನ್ನು ಜ್ಞಾಪಕಕ್ಕೆ ತರುವುದು.[2]

ನಂತರ ಅಂಧಕಾಸುರನ ದೇಹದ ಮೇಲೆ ನಿಂತು ನಟಿಸುವ ನಟರಾಜನ ಶಿಲ್ಪವಿದೆ ಅಷ್ಟಭುಜನಾದ ಶಿವನ ಬಲಗೈಗಳಲ್ಲಿ ಅಕ್ಷಮಾಲಾ, ಫಲಕ (ಡಾಲು), ತ್ರಿಶೂಲ ಮತ್ತು ಖಡ್ಗ; ಎಡಗೈಗಳಲ್ಲಿ ಡಮರು, ಲೋಲಮುದ್ರ ನಾಗ ಮತ್ತು ಪಾತ್ರೆಗಳಿವೆ. ಅವನ ಹಿಂಭಾಗದಲ್ಲಿ ನಂದಿಯೂ ಮತ್ತು ಪಾದಭಾಗದಲ್ಲಿ ನರ್ತಿಸುವ ಕಾರ್ತಿಕೇಯ ಮತ್ತು ಗಣೇಶನ ಚಿತ್ರಗಳೂ ಇವೆ.

ಮಂಟಪದ ಕಂಬಗಳು ಚೌಕಾಕಾರವಾಗಿದ್ದು, ಚಂದ್ರಾಕೃತಿಯ ಉಬ್ಬು ಹೊಂದಿವೆ.

ಈ ಎಲ್ಲ ಕುರುಹುಗಳಲ್ಲದೆ ಹೊರಭಾಗದಲ್ಲಿರುವ ನಾಗಗಳನ್ನು ಹಿಡಿದಿರುವ ಗರುಡನ ಉಬ್ಬುಶಿಲ್ಪ ಹಾಗೂ ಇನ್ನುಳಿದ ಗಣಗಳ ಶಿಲ್ಪಗಳಿಂದ, ಈ ದೇವಾಲಯವು ಬಾದಾಮಿ ಚಾಲುಕ್ಯರ ಕಾಲದ್ದೆಂದು ಸುಲಭವಾಗಿ ಗ್ರಹಿಸಬಹುದಾಗಿದೆ.

ಗರ್ಭಗುಡಿ ಮತ್ತು ಸುಕನಾಸಿಗಳು ಮಂಟಪಕ್ಕಿಂತ ಕೆಳಮಟ್ಟದಲ್ಲಿವೆ. ಸುಕನಾಸಿಯಲ್ಲಿ ದುಂಡುಸ್ತಂಭಗಳೆರಡು ಕಂಡುಬರುವುವು. ದೇವಸ್ಥಾನದ ಈ ಭಾಗ ನಂತರ ಮಾರ್ಪಾಟು ಹೊಂದಿರುವುದರಲ್ಲಿ ಅನುಮಾನವಿಲ್ಲ. ಮೂಲದಲ್ಲಿ ಈ ದೇವಾಲಯದ ಗರ್ಭಗುಡಿಯ ಮೇಲೆ ಮತ್ತೊಂದು ಗರ್ಭಗುಡಿ ಇದ್ದ ಬಗ್ಗೆ ಇಂದಿಗೂ ಇರುವ ಮೇಲಂತಸ್ತಿನಿಂದ ಊಹಿಸಬಹುದಾಗಿದೆ.

ಹುನುಗುಂದ(ಪೊನ್ನುಗುಂದ)ವು ಬಾದಾಮಿ ಚಾಲುಕ್ಯರ ಕಾಲದಲ್ಲಿ ಪ್ರಮುಖ ಕೇಂದ್ರವಾಗಿರಬೇಕು. ಈ ಊರಿನಲ್ಲಿ ಅನೇಕ ಬಸದಿಗಳಿದ್ದ ಬಗ್ಗೆ ತಿಳಿದುಬಂದಿದೆ.

ಮೇಗುಡಿ ಬಸದಿಯನ್ನು ಬೆಟ್ಟದ ಮೇಲೆ ಕಟ್ಟಲಾಗಿತ್ತು. ಅದರ ಅವಶೇಷಗಳಿನ್ನೂ ಉಂಟು. ಕ್ರಿ.ಶ.೧೮೭೦ರಲ್ಲಿ ಶ್ರೀ ದೊಡ್ಡಪ್ಪನವರು ನಾಗರಾಳ ಅವರು ಕಟ್ಟಿಸಿದ ಬಾವಿಯಲ್ಲಿ ಈ ದೇವಾಲಯದ ಸುಂದರವಾದ ಉಬ್ಬುಶಿಲ್ಪಗಳನ್ನು ಬಳಸಿಕೊಳ್ಳಲಾಗಿದೆ. ಇಲ್ಲಿಯ ಯಕ್ಷ, ಗಂಧರ್ವ ಹಾಗೂ ಗಣಗಳ ಉಬ್ಬುಶಿಲ್ಪಗಳು ಪಟ್ಟದಕಲ್ಲು, ಐಹೊಳೆ ಮುಂತಾದೆಡೆಯಲ್ಲಿ ಕಂಡುಬರುವ ಶಿಲ್ಪಗಳೆಷ್ಟೇ ಉತ್ತಮವಾಗಿವೆ.

ಈ ಊರಿನಲ್ಲಿಯ ಮತ್ತು ಅದರ ಪರಿಸರದಲ್ಲಿಯ ಐತಿಹಾಸಿಕ ಅವಶೇಷಗಳ ಬಗ್ಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ.

[1] ಗೆಜೆಟಿಯರ್ ಆಫ್ ದಿ ಬಾಂಬೆ ಪ್ರೆಸಿಡೆನ್ಸಿ, ಬಿಜಾಪುರ, XXIII(೧೮೮೪), ಪು. ೬೫೩ರಲ್ಲಿ ಹುನಗುಂದದ ಬಗ್ಗೆ ಒಂದು ಟಿಪ್ಪಣಿ ಇದೆ. ಅಲ್ಲಿ ರಾಮಲಿಂಗೇಶ್ವರದ ಬಗ್ಗೆ ಉಲ್ಲೇಖವಿದೆ. ಆದರೆ ಅದರ ಕಾಲನಿರ್ಣಯವಾಗಲೀ ಹಾಗೂ ಶಿಲ್ಪಶೈಲಿಯ ವಿವರವಾಗಲೀ ಇಲ್ಲ. ಅಲ್ಲಿ ಕೊಟ್ಟಿರುವ ರಾಮಲಿಂಗೇಶ್ವರ ದೇವಾಲಯದ ವರ್ಣನೆಯನ್ನಿಂದು ನಾವು ಹುನುಗುಂದದಲ್ಲಿ ಕಾಣುವುದಿಲ್ಲ. [2] ಈ ಲೇಖನದೊಡನೆ ಇರುವ ರೇಖಾಚಿತ್ರಗಳನ್ನೆಲ್ಲಾ ಸಿದ್ಧಗೊಳಿಸಿದ ನನ್ನ ಸಂಶೋಧನ ವಿದ್ಯಾರ್ಥಿನಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕು.ಡೋರಿಸ್ ಛಾದಮ ಅವರಿಗೆ ನನ್ನ ಅಭಿಮಾನಪೂರ್ಣ ವಂದನೆಗಳು.

ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಎಸ್. ಶೆಟ್ಟರ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ಎ. ಮುರಿಗೆಪ್ಪ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ

Review Overview

User Rating: 4.85 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ …

Leave a Reply

Your email address will not be published. Required fields are marked *