hasanaamba

ಹಾಸನಾಂಬೆಯ ದೇವಾಲಯ

ಭಗವಂತನ ಕೃಪೆಯಿದ್ದರೆ ಅರಳಿದ ಹೂವು ಬಾಡುವುದಿಲ್ಲ. ಹಚ್ಚಿದ ದೀಪ ಆರುವುದಿಲ್ಲ. ಸದ್ಯದ ಆಧುನಿಕ ಯುಗದಲ್ಲೂ ಈ ಮಾತನ್ನು ನಿಜವಾಗಿಸಿ ಪವಾಡದರ್ಶನ ಮಾಡಿಸುತ್ತಿರುವುದು ಹಾಸನ ಜಿಲ್ಲೆಯ ಹಾಸನಾಂಬೆ ಕ್ಷೇತ್ರ.

ದೇವಾಲಯಗಳೆಂದರೆ ಪ್ರತಿನಿತ್ಯ ಪೂಜೆ, ಆರತಿ, ದರ್ಶನ ಹೀಗೆ ನಡೆಯುತ್ತವೆ. ಆದರೆ ಹಾಸನ ನಗರದ ಅಧಿದೇವತೆ ಹಾಸನಾಂಬೆಯ ದರ್ಶನ ಮಾಡಬೇಕೆಂದರೆ ಭಕ್ತರು ಒಂದು ವರ್ಷ ಕಾಯಬೇಕು. ಹಾಸನಾಂಬೆಯ ದೇವಾಲಯದ ಬಾಗಿಲು ತೆರೆಯುವುದು ವರ್ಷಕ್ಕೆ ಒಮ್ಮೆ ಮಾತ್ರ.

ಪ್ರತಿವರ್ಷ ಆಶ್ವಯುಜ ಮಾಸದ ಪೌರ್ಣಿಮೆಯ ನಂತರ ಬರುವ ಗುರುವಾರದಂದು ಶಾಸ್ತೋಕ್ತವಾಗಿ ಬಾಗಿಲನ್ನು ತೆರೆಯಲಾಗುತ್ತದೆ. ನಂತರ ಬಲಿಪಾಡ್ಯಮಿಯ ಮಾರನೆಯ ದಿನ ಬಾಗಿಲನ್ನು ಮುಚ್ಚಲಾಗುತ್ತದೆ. ಈ ವರ್ಷ ಇದೇ ಅ. 12ರಿಂದ ಆರಂಭವಾಗುವ ಹಾಸನಾಂಬಾ ದರ್ಶನ 21ರವರೆಗೆ ಮುಂದುವರಿಯಲಿದೆ.

ಪ್ರತಿವರ್ಷ ದೇವಾಲಯದ ಬಾಗಿಲನ್ನು ತೆಗೆದಾಗ ನೆರೆದ ಜನರಿಗೆ ಅಲ್ಲೊಂದು ಅಚ್ಚರಿ ಕಂಡುಬರುತ್ತದೆ. ಕಳೆದ ವರ್ಷ ಬಾಗಿಲು ಹಾಕುವಾಗ ಬೆಳಗಿಸಿದ್ದ ನಂದಾದೀಪವು ತಾಯಿ ಎದುರಿನಲ್ಲಿ ಪ್ರಜ್ವಲಿಸುತ್ತಿರುತ್ತದೆ. ಜೊತೆಗೆ ದೇವಿಗೆ ಅಲಂಕಾರ ಮಾಡಿದ್ದ ಹೂವುಗಳು ಬಾಡದೆ ನಳನಳಿಸುತ್ತಿರುತ್ತವೆ. ಇದು ಹಾಸನಾಂಬೆಯ ಪ್ರತ್ಯಕ್ಷ ಪವಾಡ. ಒಂದು ವರ್ಷದವರೆಗೆ ಆರದ ದೀಪ, ಬಾಡದ ಹೂವು ಭಕ್ತರನ್ನು ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ಯುತ್ತದೆ.

ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ

ಹಾಸನಾಂಬೆ ದೇಗುಲ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕ್ಷೇತ್ರ. ಪೌರಾಣಿಕ ಕತೆಯ ಪ್ರಕಾರ ಕಾಶಿಯಿಂದ ವಿಹಾರಕ್ಕೆ ಬಂದ ಸಪ್ತಮಾತೃಕೆಯರು ಇಲ್ಲಿನ ಪ್ರಕೃತಿಸೌಂದರ್ಯವನ್ನು ಕಂಡು ಇಲ್ಲಿಯೇ ನೆಲೆಯಾಗಿದ್ದಾರೆ ಎನ್ನಲಾಗುತ್ತದೆ. ಮೂರು ವಿವಿಧ ಸ್ಥಳಗಳಲ್ಲಿ ನೆಲೆಯಾಗಿರುವ ಸಪ್ತಮಾತೃಕೆಯರಲ್ಲಿ ವೈಷ್ಣವಿ, ಮಹೇಶ್ವರಿ ಮತ್ತು ಕೌಮಾರಿಯರು ಹುತ್ತದ ರೂಪದಲ್ಲಿ ನೆಲೆಯಾದ ಕ್ಷೇತ್ರವೇ ಹಾಸನಾಂಬೆ ಸನ್ನಿಧಾನ. ಸಹೋದರ ಸಿದ್ದೇಶ್ವರನು ನಿಯಮ ಮೀರಿ ಅನ್ಯರ ಮನೆಯಲ್ಲಿ ನೀರು ಸೇವನೆ ಮಾಡಿದ್ದರಿಂದ ಕೋಪಗೊಂಡ ಸಪ್ತಮಾತೃಕೆಯರು, ‘ನೀನು ಮಾಡಿದ ತಪ್ಪಿಗಾಗಿ ವರ್ಷಕ್ಕೆ ಒಮ್ಮೆ ಮಾತ್ರ ನಿನಗೆ ನಮ್ಮ ದರ್ಶನ ದೊರೆಯಲಿ’ ಎಂದು ಶಾಪವಿತ್ತರು. ಅದರಂತೆ ಬಾಗಿಲು ಮುಚ್ಚುವ ಕೊನೆಯ ದಿವಸ ಸಿದ್ದೇಶ್ವರ ಜಾತ್ರೆಯಂದು ಹಾಸನಾಂಬೆ ಮತ್ತು ಸಿದ್ದೇಶ್ವರಸ್ವಾಮಿಯ ಮುಖಾಮುಖಿ ಪದ್ಧತಿ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆಯುವ ಪದ್ಧತಿ ರೂಢಿಯಲ್ಲಿದೆ.

ಚೋಳರ ಕಾಲದ ಪಾಳೆಯಗಾರ ಸಂಜೀವನಾಯಕನಿಗೆ ದೇವಿ ಪ್ರತ್ಯಕ್ಷಳಾಗಿ, ತಾನು ಇಲ್ಲಿ ನೆಲೆಯಾಗುವುದಾಗಿಯೂ, ತನಗೆ ದೇವಾಲಯವನ್ನು ಕಟ್ಟಿಸುವಂತೆ ಹೇಳುತ್ತಾಳೆ. ಅದರಂತೆ 12ನೇ ಶತಮಾನದಲ್ಲಿ ಈಗಿರುವ ದೇವಾಲಯವು ನಿರ್ವಣವಾಗಿದೆ. ಮೊದಲು ಸಿಂಹಾಸನಪುರಿ ಎಂದು ಕರೆಯಲಾಗುತ್ತಿದ್ದ ಊರಿನಲ್ಲಿ ಹಾಸನಾಂಬೆ ನೆಲೆಯಾಗಿದ್ದರಿಂದ ಹಾಸನ ಎಂಬ ಹೆಸರು ಬಂದಿದೆ.

ದೇವಿಯ ಉಗ್ರದೃಷ್ಟಿ

ವರ್ಷದವರೆಗೂ ಮುಚ್ಚಿರುವ ದೇವಾಲಯದ ಬಾಗಿಲು ತೆರೆದಾಗ ದೇವಿಯ ದೃಷ್ಟಿ ಉಗ್ರವಾಗಿರುತ್ತದೆ ಎಂಬ ಕಾರಣದಿಂದ ಬಾಗಿಲಿಗೆ ನೇರವಾಗಿ ಬಾಳೆಕಂದನ್ನು ನೆಡಲಾಗಿರುತ್ತದೆ. ಬಾಗಿಲು ತೆಗೆದ ಕೂಡಲೇ ದೇವಿಯ ಉಗ್ರ ದೃಷ್ಟಿ ಬಾಳೆಕಂದಿನ ಮೇಲೆ ಬೀಳುತ್ತದೆ. ನಂತರ ತಳವಾರ ಸಮುದಾಯದವರು ಬಾಳೆಕಂದನ್ನು ಪೂಜಿಸಿ ಕತ್ತರಿಸುತ್ತಾರೆ. ಈ ಪ್ರಕ್ರಿಯೆಯ ನಂತರ ದೇವಿಯ ದರ್ಶನ ಆರಂಭವಾಗುತ್ತದೆ.

ದೇವಾಲಯದ ಬಾಗಿಲು ತೆರೆದು ಮತ್ತೆ ಮುಚ್ಚುವವರೆಗೂ ಈ ಭಾಗದ ಯಾರ ಮನೆಯಲ್ಲೂ ಎಣ್ಣೆಯ ಒಗ್ಗರಣೆ, ಕರಿಯುವ ತಿಂಡಿ ಪದಾರ್ಥವನ್ನು ಮಾಡುವುದಿಲ್ಲ. ಕಾರಣ ಅದರ ಹೊಗೆಯಿಂದ ದೇವಿಗೆ ಕಣ್ತೆರೆದು ದರ್ಶನ ನೀಡಲಾಗದು ಎಂಬ ನಂಬಿಕೆ ಇದೆ.

ಕಲಿಗಾಲದ ಅಂತ್ಯದ ಕುರುಹು

ಪರಮಭಕ್ತೆಯಾಗಿದ್ದ ಗೃಹಿಣಿಯೊಬ್ಬಳಿಗೆ ಅತ್ತೆ ನೀಡಿದ ಇನ್ನಿಲ್ಲದ ಹಿಂಸೆಯಿಂದ ನೊಂದ ಆಕೆ ಹಾಸನಾಂಬೆಯನ್ನು ಪ್ರಾರ್ಥಿಸಿದಳು. ಆಗ ದೇವಿಯು ಪ್ರತ್ಯಕ್ಷಳಾಗಿ ತನ್ನ ಸಾನಿಧ್ಯದಲ್ಲೇ ನೆಲೆಯಾಗುವಂತೆ ಆಶೀರ್ವದಿಸಿದಳು. ಆ ಪ್ರಕಾರ ಸೊಸೆಕಲ್ಲು ದೇವಾಲಯದಲ್ಲಿದೆ. ಸೊಸೆಕಲ್ಲು ಪ್ರತಿವರ್ಷವೂ ಹಾಸನಾಂಬೆಯ ಕಡೆಗೆ ಚಲಿಸುತ್ತಿದ್ದು, ಮುಂದೊಂದು ದಿನ ಅದು ದೇವಿಯ ಪಾದದಲ್ಲಿ ಲೀನವಾಗುತ್ತದೆ. ಅಲ್ಲಿಗೆ ಕಲಿಗಾಲವು ಅಂತ್ಯ ಕಾಣುತ್ತದೆ ಎಂಬುದು ಇಲ್ಲಿನ ಹಿರಿಯರ ವಿಶ್ಲೇಷಣೆ.

ಹೋಗುವ ಮಾರ್ಗ

ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ಮೂಲಕ 180 ಕಿ.ಮೀ. ದೂರವಿದ್ದು, ಬಸ್ಸು ಮತ್ತು ರೈಲಿನ ಮೂಲಕ ಹೋಗಬಹುದು. ವರ್ಷಕ್ಕೆ ಒಂದು ಬಾರಿ ಮಾತ್ರ ಇಲ್ಲಿ ದರ್ಶನಕ್ಕೆ ಅವಕಾಶವಿರುತ್ತದೆ.

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *