Wednesday , 24 April 2024
Sosale Ayyashastrigalu

ಸೋಸಲೆ ಅಯ್ಯಾಶಾಸ್ತ್ರಿಗಳು

ಸೋಸಲೆ ಅಯ್ಯಾಶಾಸ್ತ್ರಿಗಳು (೨೦.೩.೧೮೫೪ – ೧೭.೫.೧೯೩೪): ಕನ್ನಡ ರಂಗಭೂಮಿ ಮತ್ತು ಸಾಹಿತ್ಯದಲ್ಲಿ ಪ್ರಸಿದ್ಧಹೆಸರಾಗಿದ್ದಾರೆ. ಅವರ ‘ಸ್ವಾಮಿ ದೇವನೆ ಲೋಕಪಾಲನೆ ಗೀತೆ’ ನಾಡಿನ ಅತ್ಯಂತ ಪ್ರಸಿದ್ಧಿ ಪಡೆದ ಪ್ರಾರ್ಥನಾ ಗೀತೆಯಾಗಿದೆ.

ಜೀವನ: “ಸ್ವಾಮಿ ದೇವನೆ ಲೋಕ ಪಾಲನೆ ತೇ ನಮೋಸ್ತು ನಮೋಸ್ತುತೆ” ಎಂಬ ಗೀತೆ ಶಾಲೆಯಿಂದ ಮೊದಲ್ಗೊಂಡು ಪ್ರಸಿದ್ಧ ಚಲನಚಿತ್ರಗಳವರೆಗೆ ಕನ್ನಡ ನಾಡಿನಲ್ಲಿ ವ್ಯಾಪಿಸಿರುವ ಪ್ರಸಿದ್ಧ ಹಾಡು. ಈ ಗೀತೆಯ ರಚನೆಕಾರರು ಸೋಸಲೆ ಅಯ್ಯಾ ಶಾಸ್ತ್ರಿಗಳು. ಅಯ್ಯಾ ಶಾಸ್ತ್ರಿಗಳು ಸುಸಂಸ್ಕೃತ ಮನೆತನದ ತಿರುಮಕೂಡಲು ನರಸೀಪುರದ ಸೋಸಲೆ ಎಂಬ ಹಳ್ಳಿಯಲ್ಲಿ ಮಾರ್ಚ್ ೨೦, ೧೮೫೪ರ ವರ್ಷದಲ್ಲಿ ಜನಿಸಿದರು. ಇವರ ಮೊದಲಿನ ಹೆಸರು ವೆಂಕಟಸುಬ್ಬುಶರ್ಮ. ತಂದೆ ಸೋಸಲೆ ಗರಳಪುರಿ ಶಾಸ್ತ್ರಿಗಳು ಮತ್ತು ತಾಯಿ ಸುಬ್ಬಮ್ಮನವರು.

ಸಕಲ ಶಾಸ್ತ್ರ ಪಾರಂಗತ: ಅಯ್ಯಾ ಶಾಸ್ತ್ರಿಗಳ ಪ್ರಾರಂಭಿಕ ಶಿಕ್ಷಣ ಮನೆಯಲ್ಲಿಯೇ ನೆರವೇರಿತು. ನಂತರ ಮೈಸೂರಿಗೆ ಹೋಗಿ ವೇ|| ಪೆರಿಯಾಸ್ವಾಮಿ ತಿರುಮಲಾಚಾರ್ಯನರಲ್ಲಿ ವ್ಯಾಕರಣ, ತರ್ಕ, ಅಲಂಕಾರಾದಿ ಶಾಸ್ತ್ರಾಧ್ಯಯನ ನಡೆಸಿದರು. ಅವರಿಗೆ ಸಾಹಿತ್ಯದಂತೆ ಚಿತ್ರಕಲೆ, ಸಂಗೀತದಲ್ಲಿ ಕೂಡಾ ವಿಶೇಷ ಪರಿಣತಿಯಿತ್ತು.

ರಾಜಗುರು: ಗುರುಗಳಾಗಿದ್ದ ತಿರುಮಲಾಚಾರ್ಯಂರೇ ಸ್ಥಾಪಿಸಿದ್ದ ಮೈಸೂರಿನ ಸದ್ವಿದ್ಯಾ ಶಾಲೆಯಲ್ಲಿ ಉಪಾಧ್ಯಾಯ ವೃತ್ತಿ ಪ್ರಾರಂಭ ಮಾಡಿದರು. ನಂತರ ಕೆಲಕಾಲ ಜಗನ್ಮೋಹನ ಮುದ್ರಾಕ್ಷರ ಶಾಲೆಯಲ್ಲಿ ಪ್ರಾಚೀನ ಸಂಸ್ಕೃತ ಗ್ರಂಥ ಪರಿಶೋಧನಾ ಕಾರ್ಯವನ್ನು ನಿರ್ವಹಿಸಿದರು. ೧೮೮೯ರಿಂದ ಹೊಸದಾಗಿ ಸ್ಥಾಪಿತವಾಗಿದ್ದ ಭಾಷೋಜ್ಜೀವಿನೀ ಸಂಸ್ಥೆಯಲ್ಲಿ ಕನ್ನಡ ಪಂಡಿತರ ಹುದ್ದೆ ನಿರ್ವಹಿಸಿದರು. ೧೮೯೪ರಿಂದ ೧೯೦೧ರವರೆಗೆ ಮೈಸೂರು ಅರಮನೆಯಲ್ಲಿ ರಾಜಗುರುಗಳ ಪಟ್ಟ ಅವರಿಗೆ ಸಂದಿತ್ತು.

ವೃತ್ತಿ ರಂಗಭೂಮಿಗೆ ಪುನಃಶ್ಚೇತನ: ಮೈಸೂರಿನಲ್ಲಿ ನಾಟಕ ಸಂಘವೊಂದನ್ನು ಕಟ್ಟಿ ಹಲವಾರು ವರ್ಷ ವ್ಯವಸ್ಥಾಪಕರಾಗಿ ದುಡಿದು ವೃತ್ತಿ ರಂಗಭೂಮಿಯ ನಾಟಕ ಕಲೆಯನ್ನು ಪುನರುಜ್ಜೀವನಗೊಳಿಸಿದರು.

ಗ್ರಂಥ ರಚನೆ: ಸೋಸಲೆ ಅಯ್ಯಾಶಾಸ್ತ್ರಿಗಳು ಹಲವಾರು ಗ್ರಂಥಗಳ ಪ್ರಕಟಣೆ ಮಾಡಿದ್ದರು. ಅವರ ನಾಟಕಗಳಲ್ಲಿ ಕರ್ನಾಟಕ ವಿಕ್ರಮೋರ್ವಶೀಯ, ಕರ್ನಾಟಕ ರಾಮಾಯಣ, ಕರ್ನಾಟಕ ನಳಚರಿತ್ರೆ, ಪ್ರತಾಪಸಿಂಹ ಚರಿತ್ರೆ, ಹರಿಶ್ಚಂದ್ರ ನಾಟಕ ಮುಂತಾದುವು ಸೇರಿವೆ. ಅವರ ಷಟ್ಪದಿ ಕಾವ್ಯಗಳು-ಶೇಷರಾಮಾಯಣಂ, ಉತ್ತರ ರಾಮಾಯಣದ ರಾಮಾಶ್ವಮೇಧ, ದಮಯಂತಿ ಚರಿತ್ರೆ ಮುಂತಾದವು. ಚಂಪೂಕಾವ್ಯಗಳು-ರಾಜಭಕ್ತಿ ಲಹರಿ, ಯಕ್ಷಪ್ರಶ್ನೆ, ಮಹಿಶೂರ ಮಹಾರಾಜ ಚರಿತಂ ಮುಂತಾದವು. ಸಂಸ್ಕೃತ ಚಂಪೂಕಾವ್ಯಗಳು-ಚಾಮರಾಜೇಂದ್ರ ಪಟ್ಟಾಭಿಷೇಕಂ, ಕೃಷ್ಣಾಂಬ ಪರಿಣಯಂ. ಸಂಸ್ಕೃತ ಸ್ತೋತ್ರಗಳು-ಶ್ರೀಮನ್ಮಹಾರಾಜಾಶೀರ್ವಾದ ಪಂಚರತ್ನಂ, ಶ್ರೀಮದ್ಯುವರಾಜಾಶೀರ್ವಾದ ಪಂಚರತ್ನಂ. ಗ್ರಂಥ ಪರಿಷ್ಕರಣ-ಕರ್ನಾಟಕ ಶಬ್ದಾನುಸಾರ, ಕರ್ನಾಟಕ ಕಾದಂಬರೀ, ನಾಗರಸನ ಕರ್ನಾಟಕ ಭಗವದ್ಗೀತೆ, ಶ್ರೀಕೃಷ್ಣರಾಯ ವಾಣೀವಿಲಾಸ ವಚನಭಾರತ, ಚಂಪೂರಾಮಾಯಣ (ಯುದ್ಧಕಾಂಡ), ಶ್ರೀಕೃಷ್ಣ ಭೂಪಾಲೀಯಂ (ಅಲಂಕಾರ ಗ್ರಂಥ) ಮುಂತಾದುವು.

ಪ್ರಶಸ್ತಿ ಗೌರವಗಳು: ಉತ್ತರ ಭಾರತದ ಜ್ಞಾನ ಸುಂದರಿ ಎಂಬ ವಿದುಷಿಯನ್ನು ತಮ್ಮ ಕವಿತಾ ಸಾಮರ್ಥ್ಯದಿಂದ ಸೋಲಿಸಿ ಶ್ರೀಮನ್ ಮಹಾರಾಜರ ಮೆಚ್ಚುಗೆಗೆ ಪಾತ್ರರಾಗಿ ಮಹಾವಿದ್ವಾನ್ (೧೯೦೫), ಕವಿತಿಲಕ (೧೯೧೨) ಮೊದಲಾದ ಪ್ರಶಸ್ತಿ ಗಳಿಸಿದರು.

ವಿದಾಯ: ಹೀಗೆ ವಿವಿಧ ರೀತಿಯಲ್ಲಿ ಕನ್ನಡ ನಾಡಿನ ಘನವೇತ್ತ ವಿದ್ವಾಂಸರಾಗಿ ಗೌರವಿಸಲ್ಪಡುತ್ತಿದ್ದ ಸೋಸಲೆ ಅಯ್ಯಾ ಶಾಸ್ತ್ರಿಗಳು ಮೇ ೧೭, ೧೯೩೪ರ ವರ್ಷಲ್ಲಿ ಈ ಲೋಕವನ್ನಗಲಿದರು. ತಮ್ಮ ಸಾಧನೆಗಳಲ್ಲಿನ ಪ್ರಖ್ಯಾತಿಯ ಮೂಲಕ ಅವರು ಈ ನಾಡಿನಲ್ಲಿ ಅಜರಾಮರರಾಗಿದ್ದಾರೆ.

ಸ್ವಾಮಿ ದೇವನೆ ಲೋಕ ಪಾಲನೆ ಗೀತೆ

ಸೋಸಲೆ ಅಯ್ಯಾ ಶಾಸ್ತ್ರಿಗಳ ಪಸಿದ್ಧ ಗೀತೆ ‘ಸ್ವಾಮಿ ದೇವನೆ ಲೋಕ ಪಾಲನೆ’
ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ
ನೇಮಿಸೆಮ್ಮೊಳು ಧರ್ಮಕಾರ್ಯವ ತೇ ನಮೋಸ್ತು ನಮೋಸ್ತುತೇ
ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ
ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ

ರಾತ್ರೆನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ ಪೋದುದೊ ಕತ್ತಲೆ

ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ
ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟ ಯೋಚನೆ ಗೈಯದಾ
ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ

ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು

ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ
ನಿನ್ನ ಪೂಜಿಪ ಹಸ್ತವೇ ಬಲುದೊಡ್ಡದಲ್ಲವೆ ದೇವನೇ
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ

ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯೂ
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ಧಿಯೂ
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ
ದೀನಪಾಲನೆ ನಿನ್ನ ಧೀನದೊಳಿರ್ಪನಮ್ಮನು ಪಾಲಿಸೈ

ಶ್ರೀಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ
ಭೂಮಿಯಲ್ಲಿ ಯಮಗ್ನಿಯಲ್ಲಿಯು ಬಾನಿನಲ್ಲಿಯು ನೀನಿಹೆ
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ

wikipedia

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *