ಸುಶೀಲಾ ಕೊಪ್ಪರ (೧೬.೦೩.೧೯೨೪ – ೨೫.೦೨.೨೦೦೬): ಕನಿಷ್ಠ ಮೆಟ್ರಿಕ್ಯುಲೇಷನ್ ಆದರೂ ಪಾಸುಮಾಡಬೇಕೆಂಬ ಹಂಬಲದಿಂದ ಹೈಸ್ಕೂಲಿಗೆ ಸೇರಿದ ಮೊದಲ ವರ್ಷವೇ ತಾಯಿಯ ಒತ್ತಾಯಕ್ಕೆ ಮಣಿದು ೧೪ರ ವಯಸ್ಸಿಗೆ ಗಂಡನ ಮನೆ ಸೇರಿ, ಸ್ತ್ರೀ ಸಮಾನತೆ, ಹಕ್ಕು ಬಾಧ್ಯತೆಗಳ ಬಗ್ಗೆ ಸದಾ ಚಿಂತಿಸುತ್ತಿದ್ದು, ಆಕಸ್ಮಿಕವಾಗಿ ಪತ್ರಿಕದ್ಯೋಮವನ್ನು ಆಯ್ಕೆ ಮಾಡಿಕೊಂಡು ಪತ್ರಿಕೋದ್ಯಮದ ಬಗ್ಗೆ ‘ಪತ್ರಿಕೋದ್ಯಮಕ್ಕೆ ಮಹಿಳೆಯರ ಕೊಡುಗೆ’ ಎಂಬ ಪುಸ್ತಕ ಬರೆದ ಮೊದಲ ಮಹಿಳೆ ಎನಿಸಿದ ಸುಶೀಲಾ ಕೊಪ್ಪರ ರವರು ಹುಟ್ಟಿದ್ದು ಬೆಳಗಾಂ ಜಿಲ್ಲೆಯ ಬೆಳಗಾಂ ತಾಲ್ಲೂಕಿನ ಹುದಲಿ ಎಂಬ ಗ್ರಾಮದಲ್ಲಿ ೧೯೨೪ರ ಮಾಚ್ ೧೬ ರಂದು. ತಂದೆ ಮಧ್ವರಾಯರು, ತಾಯಿ ಕಮಲಾಬಾಯಿ.
ಮಿಡ್ಲ್‌ಸ್ಕೂಲ್‌ವರೆಗೆ ಓದಿದ್ದು ಹುದಲಿಯಲ್ಲಿ. ಅಂಚೆ ಕಚೇರಿಯಲ್ಲಿ ಕೆಲಸದಲ್ಲಿದ್ದ ತಂದೆಗೆ ಆಗಾಗ್ಗೆ ವರ್ಗಾವಣೆ. ಬಿಜಾಪುರಕ್ಕೆ ವರ್ಗವಾದಾಗ ಸೇರಿದ್ದು ಹೈಸ್ಕೂಲಿಗಾದರೂ ಮದುವೆಯಾಗಿ ರೈಲ್ವೆ ಕೆಲಸದಲ್ಲಿದ್ದ ಗಂಡನೊಡನೆ ತೆರಳಿದ್ದು ಮುಂಬಯಿಗೆ. ಪ್ರೊ. ವಿ.ಎಂ. ಇನಾಂದಾರ್ ಹಾಗೂ ಆಕಾಶವಾಣಿ, ವಾರ್ತಾ ಮತ್ತು ಪ್ರಸಾರ ಖಾತೆಯಲ್ಲಿದ್ದ ಎಲ್.ಎಂ.ಇನಾಂದರ್ ಇವರ ಸೋದರರು.
ಮುಂಬಯಿಯ ಗಂಡನ ಮನೆಗೆ ಹೋದಾಗ ಆ ಮನೆಯ ಸುತ್ತಮುತ್ತಲ ಪರಿಸರದ ರೀತಿ ರಿವಾಜುಗಳನ್ನು ನೋಡಿದಾಗ ತನ್ನ ಪತಿಗೆ ತಾನು ಬೌದ್ಧಿಕವಾಗಿ ಸರಿಸಮಾನಳಲ್ಲವೆಂಬ ಭಾವನೆ ಬೆಳೆದು, ಮನಸ್ಸಿನಲ್ಲಿ ಒಂದು ರೀತಿಯ ಕೀಳರಿಮೆಗೊಳಗಾದರು. ಇಂಗ್ಲಿಷ್ ಭಾಷೆ ಹಾಗೂ ಬ್ರಿಟಿಷರ ರೀತಿ ನೀತಿಗಳೇ ಎಲ್ಲೆಡೆ ವಿಜೃಂಭಿಸುತ್ತಿದ್ದು, ‘ಮ್ಯಾನರ್ಸ್’ಗಳ ಪರಿಚಯ ವಿಲ್ಲವೆಂಬ ಕೊರಗು ಕಾಡತೊಡಗಿತು. ಈ ಕೀಳರಿಮೆಯಿಂದ ಹೊರಬರಲು ಸ್ತ್ರೀ, ಕಿರ್ಲೊಸ್ಕರ್, ಮನೋಹರಗಳಂತಹ ಉಚ್ಚಮಟ್ಟದ ಪತ್ರಿಕೆಗಳನ್ನು ಓದುತ್ತಿದ್ದುದಲ್ಲದೆ ಮರಾಠಿ ಸಾಹಿತ್ಯವನ್ನು ವಿಶೇಷ ಆಸ್ಥೆಯಿಂದ ಓದ ತೊಡಗಿದರು. ಸಾಹಿತಿಗಳಾದ ವಿ.ಸ. ಖಾಂಡೇಕರ್, ಕಮಲಾಬಾಯಿ ಫಡಕೆಯವರ ಪತಿ ನಾ.ಸಿ.ಫಡಕೆ, ಮಾಮಾ ವರೆರಕರ, ಹರಿನಾರಾಯಣ ಆಪ್ಟೆ, ಕುಮದಿನಿ ರಾಂಗಣಿಕರ ಮುಂತಾದ ಮರಾಠಿ ಬರಹಗಾರರ ಕೃತಿಗಳನ್ನು ಓದಿದಂತೆ ಮನೋಹರ ಗ್ರಂಥಮಾಲೆಯಿಂದ ಪ್ರಕಟವಾಗುತ್ತಿದ್ದ ಕನ್ನಡದ ಸಾಹಿತ್ಯಕೃತಿಗಳನ್ನು ತರಿಸಿ ಓದತೊಡಗಿದರು.
ಮಗಳು ಹುಟ್ಟಿದಾಗ ವಿಜಾಪುರಕ್ಕೆ ತಾಯಿಯ ಮನೆಗೆ ಬಂದಾಗ ಕೊಣ್ಣೂರ ಎಂಬ ನಿವೃತ್ತ ಹೈಸ್ಕೂಲು ಮುಖ್ಯೋಪಾಧ್ಯಾಯರಲ್ಲಿ ಇಂಗ್ಲಿಷ್ ಕಲಿತು, ಗಂಡನ ಮನೆಗೆ ಬರುತ್ತಿದ್ದ ವರ್ಲ್ಡ್‌ರಿಪ್ರಿಂಟ್‌ಸೊಸೈಟಿ ಪುಸ್ತಕಗಳನ್ನು ಓದತೊಡಗಿದರು.
ಸ್ವಾತಂತ್ರ್ಯ ಚಳವಳಿಯು ಪರಾಕಾಷ್ಠೆಗೇರಿ, ಸ್ವಾತಂತ್ರ್ಯ ಘೋಷಣೆಯಾಗಿ ಭಾರತ-ಪಾಕಿಸ್ತಾನಗಳೆಂದು ವಿಭಜನೆಯಾದಾಗ ಇವರ ಗಂಡನಿಗೆ ರಾಜಾಸ್ತಾನದ ಆಜ್ಮೀರಿಗೆ ವರ್ಗವಾಯಿತು. ನಿತ್ಯ ರೈಲಿನಲ್ಲಿ ತುಂಬಿ ಬರುತ್ತಿದ್ದ ನಿರಾಶ್ರಿತರ ಕಥೆಯನ್ನು ಕಣ್ಣಾರೆಕಂಡರು. ಇವರ ಜೀವನ ಪದ್ಧತಿಯೆ ಬದಲಾಗಿ ಹೋಗಿ ಸಮಾಜ ಕಲ್ಯಾಣ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ಸದಸ್ಯರಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡರು. ‘ವಿದ್ಯೆವಿನಯದಿಂದ ಶೋಭಿಸುತ್ತದೆ’ ಎಂಬ ತಂದೆಯ ಮಾತನ್ನು ನೆನೆಯುತ್ತಾ ಇಂಗ್ಲಿಷ್‌ನ ಗಾಲ್ಸ್‌ವರ್ದಿ, ಸಾಮರ್‌ಸೆಟ್‌ಮಾಮ್ ಮುಂತಾದವರ ಕೃತಿಗಳನ್ನು ಓದತೊಡಗಿದರು. ಹೆಣ್ಣಿಗಾಗಲಿ, ಗಂಡಿಗಾಗಲಿ ಅನ್ಯಾಯವಾದಾಗ ಅನ್ಯಾಯ ಅನ್ಯಾಯವೇ ಎಂಬ ತೀರ‍್ಮಾನಕ್ಕೆ ಬಂದು ಒಬ್ಬ ಪುರುಷನಿಗಾದ ಅನ್ಯಾಯದ ವಿರುದ್ಧ ಕತೆ ಬರೆದು ಕರ್ಮವೀರ ಪತ್ರಿಕೆಗೆ ಕಳುಹಿಸಿದರು. ಅಜ್ಮೀರದಲ್ಲಿದ್ದರೂ ಕರ್ಮವೀರ ಪತ್ರಿಕೆಯ ಚಂದಾದಾರರಾಗಿದ್ದುದರಿಂದ, ಕಳುಹಿಸಿದ ಕತೆ ಕೆಲದಿವಸಗಳಲ್ಲೇ ಪ್ರಕಟಗೊಂಡ ವಿಷಯ ತಿಳಿದಾಗ ಇವರ ಆನಂದ ಹೇಳತೀರದಾಗಿತ್ತು. ನಂತರ ಜಯಂತಿ ಪತ್ರಿಕೆ, ದ.ಬಾ. ಕುಲಕರ್ಣಿಯವರ ದೀಪಾವಳಿ ವಿಶೇಷಾಂಕ, ದೆಹಲಿಯ ಕನ್ನಡ ಸಂಘ ನಡೆಸುತ್ತಿದ್ದ ‘ಕನ್ನಡ ಗುಡಿ’ ಮುಂತಾದ ಪತ್ರಿಕೆಗಳಿಗೂ ಕಳುಹಿಸತೊಡಗಿದರು.
ಹೀಗೆ ಇವರ ಹಲವಾರು ಕಥೆಗಳು ಪ್ರಕಟಗೊಂಡ ನಂತರ ‘ಲೇಖಕನ ಹೆಂಡತಿ ಮತ್ತು ಇತರ ಕಥೆಗಳು’ ಎಂಬ ಹೆಸರಿನಿಂದ ಕಥಾ ಸಂಗ್ರಹವನ್ನು ತಂದರು.
ರೈಲ್ವೆಕಾಲನಿಯಲ್ಲಿದ್ದ ೧೦-೧೨ ಕುಟುಂಬದವರನ್ನೇ ಸೇರಿಸಿ ಕನ್ನಡ ಸಂಘವೊಂದನ್ನು ಸ್ಥಾಪಿಸಿ ವಿ.ಸೀ. ಕಾರಂತರು, ಶ್ರೀರಂಗರನ್ನಲ್ಲದೆ ದೆಹಲಿಯಿಂದಲೂ ಕನ್ನಡ ಜನರನ್ನು ಕರೆಯಿಸಿ ಕಾರ್ಯಕ್ರಮ ನಡೆಸತೊಡಗಿದರು. ಒಮ್ಮೆ ಬಂದ ಬಿ.ಎಸ್. ರಾಮರಾಯರು ಕೈಲಾಂಸ ರ ‘ದಿ ಪರ್ಪಸ್’ ನಾಟಕವನ್ನು ಏಕಪಾತ್ರಾಭಿನಯ ಮಾಡಿ ರಂಜಿಸಿದರು.
‘ಲೇಖಕನ ಹೆಂಡತಿ ಮತ್ತು ಇತರ ಕಥೆಗಳು’ ಸಂಕಲನಕ್ಕೆ ರಾಜ್ಯ ಸರಕಾರದ ಪ್ರಶಸ್ತಿ ಬಂದಿದ್ದಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಸುವ ಕನ್ನಡ ರತ್ನ ಪರೀಕ್ಷೆಗೆ ಪಠ್ಯವಾಗಿಯೂ ಆಯ್ಕೆಯಾಗಿತ್ತು. ಕಥೆ ಬರೆಯುವುದರ ಜೊತೆಗೆ ಹಲವಾರು ಲೇಖನಗಳನ್ನು ಸಂಯುಕ್ತ ಕರ್ನಾಟಕದ ಪತ್ರಿಕೆಯ ಮಹಿಳಾ ಪುಟಕ್ಕೆ ಬರೆಯತೊಡಗಿದರು. ಹೀಗೆ ಬರೆದುದರ ಸಂಕಲನವೇ ‘ಮಹಿಳೆಯರಲ್ಲಿ ಮಾತುಕತೆ’ಯಾಗಿ ಪ್ರಕಟಗೊಂಡಿತು. ಇವರ ಮತ್ತೊಂದು ಕಥಾಸಂಕಲನ ‘ಸಾಲುದೀಪ’.
ಆಕಸ್ಮಿಕ ಅವಘಡ ಒಂದು ಘಟಿಸಿ ಸಾವಿಗೀಡಾದ ಪತಿಯಿಂದ ಧೃತಿಗೆಟ್ಟಾಗ, ಪತ್ರಿಕೆಗಳಿಗೆ ಬರೆದು ಗಳಿಸಿದ ಜನಪ್ರಿಯತೆಯಿಂದ ೧೯೫೮ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸಿದಾಗ ಉತ್ತರ ಕರ್ನಾಟಕದವರಾದ ಸುಶೀಲರವರಿಗೆ ಗ್ರಂಥ ಭಂಡಾರದ ಮೇಲ್ವಿಚಾರಣೆಯ ಹುದ್ದೆ ದೊರೆಯಿತು. ೧೯೬೪ರವರೆಗೂ ಸಂಯುಕ್ತ ಕರ್ನಾಟಕದಲ್ಲಿದ್ದು ೧೯೬೪-೭೩ ರವರೆಗೆ ಪ್ರಜಾವಾಣಿ, ೧೯೭೪-೭೫ ರವರೆಗೆ ಹಿಂದಿ ಸುದ್ದಿ ಸಂಸ್ಥೆ, ೧೯೭೫-೭೭ ರವರೆಗೆ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ಸೇರಿದರು.
ಕಥೆ ಬರೆದಂತೆ ಹಲವಾರು ಲೇಖನಗಳು, ಸಂದರ್ಶನಗಳು, ರೇಡಿಯೋ ರೂಪಕಗಳನ್ನೂ ಬರೆದರು. ಇದೇ ಸಂದರ್ಭದಲ್ಲಿ ಮರಾಠಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಸ. ಖಾಂಡೇಕರರ ಕಾದಂಬರಿ ಒಂದನ್ನು ‘ಕಮರಿದ ಕನಸು’ ಎಂದು, ‘ಅಶ್ರು’ ಎಂಬ ಕಾದಂಬರಿಯನ್ನು ಅದೇ ಹೆಸರಿನಿಂದ ಕನ್ನಡಕ್ಕೆ ಅನುವಾದಿಸಿದಾಗ ಕನ್ನಡ ಪ್ರಭ ಹಾಗೂ ಕರ್ಮವೀರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇದಲ್ಲದೆ ಮರಾಠಿಯ ಶಿರವಾಡಕರ್ ಮತ್ತು ವಸಂತ ಕಾನಟ್ಕರರ ಮೂರು ನಾಟಕಗಳನ್ನು ‘ನಟಸಾಮ್ರಾಟ’, ‘ಪ್ರೇಮತರಂಗ’ ಮತ್ತು ‘ಚದುರಂಗ’ ಎಂಬ ಹೆಸರಿನಿಂದ ಅನುವಾದಿಸಿದರು.
ಮಗಳಿಗೆ ಮದುವೆಯಾಗಿ ಕೆನಡಾಕ್ಕೆ ತೆರಳಿದಾಗ ಇವರೂ ವಿದೇಶಯಾತ್ರೆ ಕೈಗೊಂಡು ರಚಿಸಿದ ಪುಸ್ತಕ ‘ಪಡುವಣದ ಪತ್ರಮಾಲೆ’ ಹಾಗೂ ‘ಪತ್ರಿಕೋದ್ಯಮಕ್ಕೆ ಮಹಿಳೆಯರ ಕೊಡುಗೆ’ ಎಂಬ ಪುಸ್ತಕಗಳು.
ಕೆನಡಾದಿಂದ ಹಿಂದಿರುಗಿದ ನಂತರ ಸಮಯದ ಸದುಪಯೋಗಕ್ಕಾಗಿ ಕರ್ನಾಟಕ ಪ್ರೆಸ್ ಅಕಾಡಮಿಗೆ ಸೇರಿ ಹತ್ತು ವರ್ಷಕಾಲ ಸುದ್ದಿ ಸಂಗ್ರಹಕಾರರಾಗಿ ತೊಡಗಿಸಿಕೊಂಡರು. ೧೯೯೪ ರಲ್ಲಿ ಪ್ರೆಸ್ ಅಕಾಡಮಿ ಅವಾರ್ಡ್ ಪಡೆದು ಮತ್ತು ಕೆನಡಾಕ್ಕೆ ಪ್ರಯಾಣ ಬೆಳೆಸಿದರು.
ಹೀಗೆ ಪತ್ರಿಕೋದ್ಯಮ, ಸಮಾಜಸೇವೆಯ ನಡುವೆಯೂ ರಚಿಸಿದ ಕೃತಿಗಳು ಹಲವಾರು. ೨ ಕಥಾ ಸಂಕಲನಗಳಲ್ಲದೆ ನೆಹರು ವಿಚಾರ ದರ್ಶನ (ಹಿಂದಿ ಅನುವಾದ), ಅಮ್ಮ ರಿಟೈರ್ ಆಗ್ತಾಳೆ (ಮರಾಠಿ ಅನುವಾದ) ಸವಿಗಂಧ (ಮಕ್ಕಳ ಕಥಾಸಂಕಲನ-ಇಂಗ್ಲಿಷ್‌ನಿಂದ) ಮುಂತಾದ ಅನುವಾದ ಕೃತಿಗಳೂ ಸೇರಿ ಒಟ್ಟು ೧೦ ಕೃತಿಗಳು ಪ್ರಕಟಿತ.
‘ಲೇಖಕನ ಹೆಂಡತಿ ಮತ್ತು ಇತರ ಕಥೆಗಳಿಗೆ’ ರಾಜ್ಯಪ್ರಶಸ್ತಿ; ‘ಮಹಿಳೆಯರಲ್ಲಿ ಮಾತುಕತೆ’ ಲೇಖನ ಸಂಗ್ರಹಕ್ಕೆ ಧಾರವಾಡದ ಜನತಾಶಿಕ್ಷಣ ಸಮಿತಿ ಪ್ರಶಸ್ತಿ; ‘ಅಶ್ರು’ ಕಾದಂಬರಿ ಅನುವಾದಕ್ಕೆ ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿ ನಿಧಿ ಪ್ರಶಸ್ತಿ ಮತ್ತು ಕೆನಡಾ ಕನ್ನಡ ಸಂಘದಿಂದ ‘ಡಿಸ್ಟಿಂಗ್ವಿಷ್ಡ್ ಮೆಂಬರ್ ಅವಾರ್ಡ್’ ಮುಂತಾದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದ ದಿಟ್ಟಮಹಿಳೆ ಸಾಹಿತ್ಯ ಹಾಗೂ ಪತ್ರಿಕಾ ಲೋಕದಿಂದ ದೂರವಾದದ್ದು ೨೦೦೬ರ ಫೆಬ್ರವರಿ ೨೫ ರಂದು.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.