ಸುಖ, ದುಃಖ ಮತ್ತು ವಾಸ್ತು: ಮನೆಯೊಂದು ನಂದನವನ ಇದ್ದ ಹಾಗೆ. ವಾಸ್ತು ಸರಿಯಾಗಿದ್ದರೆ ಅಲ್ಲಿ ಸುಖ, ಸಮೃದ್ಧಿಗಳು ಕಾಲು ಮುರಿದುಕೊಂಡು ಬಿದ್ದಿರುತ್ತವೆ. ವಾಸ್ತುಪ್ರಕಾರ ಮಣ್ಣಿನ ಗುಡಿಸಲು ನಿರ್ವಿುಸಿದರೂ ಅದು ಮಹಲಾಗಿ ಪರಿವರ್ತನೆಗೊಂಡು ಶುಭ ಪರಿಣಾಮ ಕೊಡುತ್ತದೆಂಬುದು ಋಷಿವಾಕ್ಯ. ಕಾರಣ ನಿವಾಸಿಗಳ ಜೀವನವನ್ನು ಸುಖ ಸಂಸಾರವಾಗಿ ಪರಿವರ್ತಿಸುವ ಅದರ ಸಾಮರ್ಥ್ಯ. ಹಣ ಇದೆಯೆಂದು ಬೇಕಾಬಿಟ್ಟಿ ಖರ್ಚು ಮಾಡಿ ಮನೆ ಕಟ್ಟಿಸಿ ಸದಾ ದುಃಖ ಅನುಭವಿಸುವ ಸಾವಿರಾರು ಕುಟುಂಬಗಳನ್ನು ಕಾಣುತ್ತೇವೆ. ಎಲ್ಲದಕ್ಕೂ ಒಂದು ನಿಯಮವಿದೆ. ಪ್ರತಿಯೊಂದು ವಸ್ತುವಿಗೂ, ಜೀವಿಗೂ, ಪ್ರಕೃತಿಶಕ್ತಿಗೂ, ಆಕಾಯಶಕಾಯಕ್ಕೂ ಅದರದೇ ಆದ ಪ್ರಭಾವಿ ಶಕ್ತಿಯಿದೆ. ಇದು ಹೇಗೆಂದರೆ ಭರದಿಂದ ಹರಿಯುವ ತೊರೆಯಲ್ಲಿ ನೀರು ರಭಸದಿಂದ ಮುನ್ನುಗ್ಗುವಂತೆ. ನೀರು ಹರಿಯುವ ದಿಕ್ಕಿಗೆ ಈಜಾಡಿದರೆ ಯಾವುದೇ ತೊಂದರೆಯಿಲ್ಲ. ವಾಸ್ತು ಎಂದರೆ ಸಹಜತೆಯೊಡನೆ ಸೌಹಾರ್ದಯುತ ಹೊಂದಾಣಿಕೆ. ಸಂಘರ್ಷಕ್ಕೆ ಇಳಿದರೆ ಸಮಸ್ಯೆ ಖಂಡಿತ. ಹಾಗಾಗಿ ನಾವು ಪ್ರಕೃತಿಶಕ್ತಿಗಳೊಡನೆ ಘರ್ಷಣೆ ಮಾಡದೆ ಗೆಳೆತನ ಬೆಳೆಸಿದರೆ ಎಲ್ಲವೂ ಸುಖಮಯ.
ಉತ್ತರ ನಿರ್ಮಾಣದಲ್ಲಿನ ಪ್ರಬಲ ವಾಸ್ತುದೋಷ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ನೈಋತ್ಯ ಮತ್ತು ಈಶಾನ್ಯದಲ್ಲಿ ದೋಷವಿಲ್ಲದಿದ್ದರೆ ಕೀರ್ತಿ, ಅಪಘಾತರಹಿತ ಜೀವನ ಮತ್ತು ಸುಖಸಂಸಾರ ಎಂಬುದು ಸಿದ್ಧಾಂತ. ವಾಯವ್ಯ ಸರಿಯಿದ್ದರೆ ಮಾನಸಿಕ ಶಾಂತಿ, ಕೋರ್ಟ್-ಕಚೇರಿ ತಗಾದೆಗಳಿಲ್ಲ. ಆಗ್ನೇಯ ಚೆನ್ನಾಗಿದ್ದರೆ ದಾಂಪತ್ಯಸುಖ, ಪತಿ-ಪತ್ನಿ-ಮಕ್ಕಳ ಹೊಂದಾಣಿಕೆಯ ಜೀವನ. ಇವೆಲ್ಲಾ ಸ್ವಯಂ ಅನುಭವದ, ಬರಡಾಗದ ನಿತ್ಯ ಸತ್ಯಗಳು. ಋಷಿಮುನಿಗಳು ಆಚರಣೆಯಿಂದ ಜ್ಞಾನಿಗಳಾದರೆ ಜನಪದರು ಅನುಭವದಿಂದ ಜ್ಞಾನಿಗಳಾದವರು. ಅವರು ಅಕ್ಷರಜ್ಞಾನಿಗಳಲ್ಲವಾದರೂ ಅನುಭವಿಸಿದ ಸುಖ-ದುಃಖಗಳನ್ನು ಸಮಚಿತ್ತದಿಂದ, ಸರಳ ಸತ್ಯದ ನಿರೂಪಣೆಯಿಂದ ಸಮಾಜಕ್ಕೆ ಧಾರೆ ಎರೆದವರು. ಅವರ ನಂಬುಗೆಗಳೆಲ್ಲ ಅನುಭವವೇದ್ಯ. ಸತ್ಯ ಯಾವಾಗಲೂ ಸತ್ವಪರಿತ.
ಮನುಷ್ಯನಿಗೆ ಆಸೆ ಇರಬೇಕು, ಆದರೆ ದುರಾಸೆ ಇರಬಾರದು. ಆಸೆ ಜೀವಚೈತನ್ಯ ಚಿಮ್ಮಿಸಿದರೆ, ದುರಾಸೆ ಕುಕೃತ್ಯಗಳಿಗೆ ಪ್ರಚೋದನೆ ನೀಡುತ್ತದೆ. ಸುಖ-ದುಃಖಗಳಲ್ಲಿ ಯಾವುದು ಬೇಕೆಂದು ಆರಿಸುವವರು ನಾವೇ. ನಾವು ದೊಡ್ಡವರ ಹಿಂದೆ ಹೋದರೆ ಚಿಕ್ಕವರಾಗುತ್ತೇವೆ. ಚಿಕ್ಕವರ ಹಿಂದೆ ಹೋದರೆ ದೊಡ್ಡವರಾಗುತ್ತೇವೆ. ಇವೆರಡೂ ನೆಮ್ಮದಿ ಕೊಡುವುದಿಲ್ಲ. ಹಾಗಾಗಿ ಸದಾ ಸರಿಸಮಾನರೊಡನೆ ಓಡಾಡಬೇಕು. ಅದು ಸತ್ಸಂಗವೇ ಇರಬೇಕು. ಅದೇ ರೀತಿ ಬೇರೆ ವಾಸ್ತುವಿನ ಅನುಕರಣೆ ಬೇಡ. ಬದಲಾಗಿ ನಿರ್ವಣದಲ್ಲಿ ಅಳವಡಿಕೆ ಇರಲಿ. ನೈಋತ್ಯವನ್ನು ಘಾಸಿಗೊಳಿಸಬದಿರಿ. ಈಶಾನ್ಯವನ್ನು ವ್ಯತ್ಯಾಸಗೊಳಿಸಬೇಡಿ. ಈಶಾನ್ಯ ಚೆನ್ನಾಗಿದ್ದರೆ ಸಂಪತ್ತು ಕೂಡಿ ಬರುತ್ತದೆ. ಹೀಗಾಗಿ ದಿಕ್ಕು ತಪ್ಪಿಸಿ ದಿಕ್ಕಾಪಾಲಾಗದಿರಿ ಎಂಬ ಕಳಕಳಿ ನಮ್ಮದು.
ನಂಬಿ ಕೆಟ್ಟವರಿಲ್ಲ, ನಂಬದೆ ಉದ್ಧಾರ ಆದವರಿಲ್ಲ. ನಂಬಿಕೆಯ ನಡವಳಿಕೆಯೇ ಸುಖಸಂಸಾರಕ್ಕೆ ನಂದಾದೀಪ. ಮನೆಯಲ್ಲಿ ನೈರುತ್ಯ ಮುಚ್ಚಿದ್ದರೆ ಅನಾಹುತಗಳಿಗೆ ಬಾಗಿಲು ಬಂದ್. ಈಶಾನ್ಯ ತೆರೆದಿದ್ದರೆ ಭಾಗ್ಯದ ಹೆಬ್ಬಾಗಿಲು ತೆರೆದಂತೆ. ಇವು ಎರಡೂ ಸೂಕ್ಷ್ಮ ಸಂವೇದಿ ದಿಕ್ಕುಗಳು. ಹಾಗೆಯೇ ಪೂರ್ವ, ಆಗ್ನೇಯ, ನೈಋತ್ಯ, ಉತ್ತರ ವಾಯವ್ಯದ ಗೇಟು ಮತ್ತು ಸಿಂಹದ್ವಾರಗಳು ಮಾರಕ ಪರಿಣಾಮಗ ಕೊಡುತ್ತವೆ. ಪಂಚಭೂತಗಳು ಮತ್ತು ನವಗ್ರಹಗಳು ಬೇರೆ ಬೇರೆ ಎನಿಸಿದರೂ ಮಾನವನ ಜೀವನದ ಮೇಲೆ ಪರಿಣಾಮ ಬೀರುವುದರಲ್ಲಿ ಒಂದೇ ನಾಣ್ಯದ ಎರಡು ಮುಖಗಳಂತೆ ವರ್ತಿಸುತ್ತವೆ. ಆದ್ದರಿಂದ ವಾಸ್ತು ಕೆಟ್ಟರೆ, ನವಗ್ರಹಗಳು ಕೈಬಿಟ್ಟರೆ ನಮ್ಮ ಜೀವನ ಬಟಾಬಯಲು. ವಾಸ್ತು ಸರಿಯಾಗಿದ್ದರೆ ಸುಖಜೀವನ.
(ಲೇಖಕರು ವಾಸ್ತುಶಾಸ್ತ್ರ ವಿದ್ವಾಂಸರು ಮತ್ತು ಜ್ಯೋತಿಷ್ಯದಲ್ಲಿ ಪರಿಣತರು. ಪತ್ರಿಕೋದ್ಯಮ, ಲಲಿತಕಲೆಗಳಲ್ಲಿ ಆಸಕ್ತರು.)