old couple

ಸುಖೀ ದಾಂಪತ್ಯದ ಗುಟ್ಟು

ನಾನೊಮ್ಮೆ ಪಾಶ್ಚಾತ್ಯ ದೇಶದಲ್ಲಿದ್ದಾಗ ಒಬ್ಬರು “ನಿಮಗೆ ಮದುವೆಯಾಗಿ ಎಷ್ಟು ವರ್ಷವಾಯಿತು” ? ಎಂದು ಕೇಳಿದರು. ನಾನು “ಇಪ್ಪತ್ತೆಂಟು ವರ್ಷ” ಎಂದೆ, ಆವರು, ” ಒಬ್ಬಳೇ ಹೆಂಡತಿಯೊಂದಿಗೆ ಅಷ್ಟು ವರ್ಷ ಹೇಗಿದ್ದೀರಿ ?” ಎಂದು ಆಶ್ಚರ್ಯ ಪಟ್ಟರು. ನಾನು ಅವರಿಗೆ ಹೇಳಿದೆ, ” ನನ್ನದೇನೂ ವಿಶೇಷವಲ್ಲ, ನನ್ನ ಅಜ್ಜ, ಅಜ್ಜಿ ದಂಪತಿಗಳಾಗಿ ಎಪ್ಪತ್ತು ವರ್ಷಗಳ ಕಾಲ ಇದ್ದರು ” ಅವರಿಗೆ ನಂಬಲಾಗಲಿಲ್ಲ.

ನನ್ನಜ್ಜ, ಅಜ್ಜಿ ಚೆನ್ನಾಗಿಯೇ ಬದುಕಿದರು. ಅಂದರೆ ಅವರಲ್ಲಿ ಜಗಳ, ಮನಸ್ತಾಪ , ವಿಚಾರ ಭೇದ ಇರಲಿಲ್ಲವೆಂದಲ್ಲ. ಒಂದೊಂದು ಬಾರಿ ಜಗಳವಾಡುತ್ತಿದ್ದರೆ ಏಳೇಳು ಜನ್ಮದಲ್ಲಿ ವೈರಿಗಳಾಗಿದ್ದರೇನೋ ಎನಿಸುತಿತ್ತು. ಆದರೆ ಕೆಲವು ಕ್ಷಣಗಳು ಮಾತ್ರ ಊಟ ಮುಗಿದ ಮೇಲೆ ನನ್ನಜ್ಜ ವರ್ತಮಾನ ಪತ್ರಿಕೆ ಓದುವರು. ಆಗ ನಮ್ಮ ಅಜ್ಜಿ ಪಕ್ಕದಲ್ಲೇ ಕೂತು ಕೇಳಬೇಕು. ಆಕೆ ಅಲ್ಲಿಲ್ಲದಿದ್ದರೆ ಅವಳನ್ನು ಹುಡುಕಾಡಿ, ಕರೆದುಕೊಂಡು ಬಂದು ಕೂಡಿಸಿಕೊಳ್ಳುವರು. ಆಕೆಗೋ ಪೂರ್ತಿ ಕಿವುಡು. ಕೂಗಿದರೂ ಕೇಳಿಸುತ್ತಲಿರಲಿಲ್ಲ . ಆದರೆ ಅಜ್ಜ ಆಕೆಗೆ ಅಂದಿನ ರಾಜೆಕೀಯ, ದಿನದ ವಾರ್ತೆಗಳನ್ನೆಲ್ಲ ವರ್ಣಿಸಿ ಹೇಳುವರು. ಆಕೆ ನಡುನಡುವೆ ನಕ್ಕು,” ಹೌದೇ ಇಂದಿರಮ್ಮ ಹಾಗಂದಳೇ? ಮುರಾರಿ (ಮುರಾರ್ಜಿ) ಏನಂತಾರೆ ಅದಕ್ಕೆ ?” ಅವರು ಹೇಳುವುದೇನೋ, ಅವಳು ಕೇಳುವುದೇನೋ ? ಹೀಗೆ ಸುಮಾರು ಒಂದು ತಾಸು ತಪ್ಪದೇ ನಡೆಯುತ್ತಿತ್ತು.

ಒಂದು ದಿನ ನಾನು ಅಜ್ಜನನ್ನು ಕೇಳಿದೆ, “ಅಜ್ಜ, ನೀನು ಯಾಕೆ ಅಜ್ಜಿಗೆ ಪೇಪರ್ ಓದಿ ಹೇಳುತ್ತೀ ? ಆಕೆಗೆ ಏನೂ ತಿಳಿಯುವುದೂ ಇಲ್ಲ, ಕೇಳಿಸುವುದೂ ಇಲ್ಲ.” ” ಅಜ್ಜ ಹೇಳಿದ, ” ನನಗೆ ಗೊತ್ತಿಲ್ಲೇನು ಆಕೆಗೆ ಕೇಳಿಸುವುದಿಲ್ಲವೆಂದು ? ಗಂಡಾ ತನಗೋಸ್ಕರ ಒಂದು ತಾಸು ಕುಳಿತು ಏನೋ ವಿಚಾರ ಹೇಳುತ್ತಾರೆ ಎಂಬ ತೃಪ್ತಿ ಆಕೆಗೆ. ಅದಕ್ಕೆ ಹೀಗೆ ಮಾಡುತ್ತೇನೆ,” ನಾನು ಅಜ್ಜಿಯನ್ನು ಕೇಳೀದೆ, ” ಅಜ್ಜಿ, ನಿನಗೆ ರಾಜಕಾರಣ ತಿಳಿಯುವುದಿಲ್ಲ, ಕೇಳಿಸುವುದೂ ಇಲ್ಲ, ಯಾಕೆ ಕೂತು ಕೇಳುತ್ತೀ ?” ಆಕೆ ಹೇಳಿದಳು, ” ಹುಚ್ಚಪ್ಪಾ, ನನಗೇನು ತಿಳಿದೀತೋ ರಾಜಕಾರಣ ? ಯಾರಿಗೆ ಬೇಕೋ ಅದು? ನಾ ಯಾಕ ಸುಮ್ಮನೇ ಕೂತು ಕೇಳ್ತೀನ ಗೊತ್ತದ ಏನು? ನಾ ಕೇಳಿದರ ಅವರಿಗೊಂದು ಸಮಾಧಾನ, ಅವರಿಗೆ ಸಮಾಧಾನ ಆದರ ಅಷ್ಟೇ ಸಾಕು ನನಗ.”

ಎಷ್ಟು ಅದ್ಭುತ ಈ ಬದುಕುವ ರೀತಿ ? ಗಂಡನ ತೃಪ್ತಿಗೆಂದು ಹೆಂಡತಿ, ಹೆಂಡತಿಯ ಪ್ರೀತಿಗಾಗಿ ಪ್ರಯತ್ನಿಸುವ ಗಂಡ, ಅದೂ ಮದುವೆಯಾಗಿ ಐವತ್ತು ವರ್ಷಗಳ ನಂತರ. ಅವರ ದೀರ್ಘ ದಾಂಪತ್ಯದ ಗುಟ್ಟು ಇದು.

ಬದುಕಿನ ಸಂಭಂಧಗಳು ತುಂಬ ನಾಜೂಕು. ಅವುಗಳನ್ನು ಭದ್ರ ಮಾಡುವ ಒಂದೇ ಸಾಧನ ತ್ಯಾಗ. ತ್ಯಾಗ ಬಹು ದೊಡ್ಡದಾಗಬೇಕಿಲ್ಲ. ಸಣ್ಣ ಪುಟ್ಟ ಹೊಂದಾಣಿಕೆಗಳು, ಪರಸ್ಪರ ಆಸಕ್ತಿಗಳನ್ನು ಗಮನಿಸಿ ಅವುಗಳಿಗೆ ಪ್ರಾಮುಖ್ಯತೆ ನೀಡಿದಾಗ ಸಂತೃಪ್ತಿ ತಾನಾಗಿ ಮೂಡುತ್ತದೆ.

ನಾನೇ ಹೆಚ್ಚು ನಾನೇ ಸದಾ ಗೆಲ್ಲಬೇಕು ಎಂಬ ಅಹಂಕಾರದಿಂದ ಸಂಭಂದದ ಬೆಸುಗೆ ಬಿಚ್ಚಿ ಹೋಗುತ್ತದೆ. ಸುಖೀ ಸಂಸಾರದಲ್ಲಿ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದಿಲ್ಲ. ಮತ್ತೊಬ್ಬರ ಶಕ್ತಿಗಳನ್ನು ಮೆಚ್ಚಿಕೊಳ್ಳುತ್ತ ಅವರ ಕೊರತೆಗಳನ್ನು ಮರೆಯುತ್ತಾ ಸಾಗಿದಾಗ ನೂರು ವಸಂತಗಳು ಉರುಳಿದರೂ, ದಾಂಪತ್ಯ ಮದುವೆಯ ದಿನದ ಸುವಾಸನೆಯನ್ನು ಉಳಿಸಿಕೊಳ್ಳುತ್ತದೆ. ಬದುಕು ಸಾರ್ಥಕವಾಗುತ್ತದೆ.

ಕೃಪೆ – “ಕರುಣಾಳು ಬಾ ಬೆಳಕೆ” ಡಾ. ಗುರುರಾಜ ಕರ್ಜಗಿ.

ಸಂದರ್ಭಿಕ ಚಿತ್ರ

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 3.98 ( 8 votes)

ಇವುಗಳೂ ನಿಮಗಿಷ್ಟವಾಗಬಹುದು

ವಾಟ್ಸಪ್‌ ಕಥೆ: ಹೆಣ್ಣಿನ ಸಮಾನತೆ

ವಾಟ್ಸಪ್‌ ಕಥೆ: ಹೆಣ್ಣಿನ ಸಮಾನತೆ

ಹೆಂಗಸಿನ ಬುದ್ಧಿ ಮೊಳಕಾಲು ಕೆಳಗೆ ಎಂಬ ಗಾದೆಯನ್ನೂ ಸಹ ದೂಷಿಸುತ್ತ, ‘ಹೆಣ್ಣು ಹೆರಲಿಕ್ಕೆಂದೇ ಇರುವ ಯಂತ್ರವಲ್ಲ, ಅಡುಗೆ ಮನೆಗೆ ಸೀಮಿತಳಲ್ಲ. …

Leave a Reply

Your email address will not be published. Required fields are marked *