ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ

ನಮ್ಮ ದೇಶದ ಹೆಂಗಳೆಯರ ಗೌರವದ ಉಡುಪು..
ನಮ್ಮ ದೇಶದ ಹೆಂಗಳೆಯರ ಗೌರವದ ಉಡುಪು ಸೀರೆ

ಭಾರತೀಯ ನಾರಿ ಅಂದಾಕ್ಷಣ, ನೆನಪಿಗೆ ಬರುವವಳೇ ಸೀರೆಯುಟ್ಟ ನಾರಿ. ನಮ್ಮ ದೇಶೀಯ ಸಂಸ್ಕೃತಿಯ ಜೀವಾಳವೇ ಸೀರೆ. ನೀರೆಯ ಅಂದದ ಉಡುಪಾದ ಸೀರೆಗೆ ಅದರದ್ದೇ ಆದ ಗೌರವಗಳಿವೆ. ಅಂದಗಾತಿಯರ ಅಂದವನ್ನು ಮತ್ತಷ್ಟು ಹೆಚ್ಚಿಸುವ ಸೀರೆಗೆ ಮತ್ತು ಸೀರೆಯುಡುವ ಶೈಲಿಗೆ ವಿದೇಶಿಯರೂ ಮನಸೋತಿದ್ದಾರೆ.

ನಮ್ಮ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳಲ್ಲಿಯೇ ಅತ್ಯಂತ ಪುರಾತನ ಉಡುಗೆ ಸೀರೆ. ಅನಾದಿ ಕಾಲದಿಂದ ಸೀರೆಯು ನಮ್ಮ ದೇಶದ ಮಹಿಳೆಯರ ಪ್ರಮುಖ ಉಡುಗೆ. ಸೀರೆಯ ಬಳಕೆ ಎಲ್ಲಿಂದ ಪ್ರಾರಂಭವಾಯಿತು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಎಲ್ಲಿಯೂ ಇಲ್ಲ. ಆದರೆ, ಕ್ರಿಸ್ತ ಪೂರ್ವ 2000 ವರ್ಷಗಳ ಹಿಂದಿನ ಶಿಲಾಶಾಸನಗಳಲ್ಲಿ, ವೇದ ಪುರಾಣಗಳಲ್ಲಿ ಸೀರೆಯ ಉಲ್ಲೇಖವಿದೆ. ಈ ಉಲ್ಲೇಖಗಳು, ಅತ್ಯಂತ ಪುರಾತನ ಕಾಲದಿಂದ ಭಾರತದಲ್ಲಿ ಸೀರೆಯ ಬಳಕೆ ಇತ್ತು ಎನ್ನುವುದರ ಕುರಿತು ಸಾಕಷ್ಟು ಪುರಾವೆಗಳನ್ನು ಒದಗಿಸಿವೆ. ಹೇಗೆ ಹಿಂದೂ, ಸಂಪ್ರದಾಯ, ನಂಬಿಕೆ, ಸಂಸ್ಕೃತಿಗೆ ನಿರ್ದಿಷ್ಟ ಸಂಸ್ಥಾಪಕರಿಲ್ಲವೋ, ಹಾಗೇ ಸೀರೆಯ ಉಡುಗೆಗೂ ಕೂಡ ನಿರ್ದಿಷ್ಟ ನಿರ್ಮಾತೃರಿಲ್ಲ. ಇದು ಅನಾದಿಯಿಂದ ಸಂಸ್ಕೃತಿಯೊಂದಿಗೇ ಸಾಗಿ ಬಂದ ಉಡುಪು.

ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಸರಿ ಸುಮಾರು ಏಕಕಾಲದಲ್ಲಿ ಬೆಳವಣಿಗೆಯಾಯಿತೆಂದು ನಂಬಲಾಗಿರುವ ಸೀರೆ, ಭಾರತೀಯ ಸಂಸ್ಕೃತಿಯ ಪ್ರತೀಕಗಳಲ್ಲಿ ಒಂದಾಗಿ ಪರಿಗಣಿತವಾಗಿದೆ.

ಸೀರೆಯನ್ನುಡುವ ಸಂಸ್ಕೃತಿ ಭಾರತದಲ್ಲಿ ನಾಲ್ಕು ಸಾವಿರ ವರ್ಷಗಳಿಂದ ಬಳಕೆಯಲ್ಲಿದ್ದು, ಅದು ಇಂದಿಗೂ ಮುಂದುವರಿದಿದೆ. ನಾಲ್ಕು ಸಾವಿರ ವರ್ಷಗಳಿಂದ ಭಾರತ ಎಷ್ಟೇ ಸಂಸ್ಕೃತಿಗಳ ಪ್ರಭಾವಗಳಿಗೆ ಒಳಪಟ್ಟರೂ, ಎಷ್ಟೇ ವಿದೇಶಿ ರಾಜರುಗಳ ಆಡಳಿತವನ್ನು ಕಂಡರೂ ನಮ್ಮ ನೆಲದ ನಾರಿಯರ ಉಡುಗೆ ಮಾತ್ರ ಬದಲಾಗಲೇ ಇಲ್ಲ. ಇದು ಕೇವಲ ಸಾಂದರ್ಭಿಕ ಉಡುಪಾಗಿರದೇ ದೇಶದ ಬಹುತೇಕ ಸ್ತ್ರೀಯರ ದಿನನಿತ್ಯದ ಉಡುಪಾಗಿದೆ. ಸಾಮಾನ್ಯವಾಗಿ 1 ಮೀಟರ್‌ ಅಗಲ ಹಾಗೂ 5.5 ಮೀಟರ್‌ ಉದ್ದವಿರುವ ಈ ಬಟ್ಟೆ ಎಲ್ಲ ನಾರಿಯರಿಗೂ ಒಪ್ಪುವ ಉಡುಪು.

ಭಾರತ ದೇಶದ ನೆರಯ ದೇಶಗಳಾದ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್, ಬರ್ಮಾದಲ್ಲಿಯೂ ಸೀರೆಯುಡುವ ಸಂಸ್ಕೃತಿ ಇದೆ.

ಸೀರೆಯ ಸಂಸ್ಕೃತಿ ಇಡೀ ಭಾರತದಾದ್ಯಂತ ಬಳಕೆಯಲ್ಲಿದ್ದರೂ ಕೂಡ ಸೀರೆಯುಡುವ ಶೈಲಿ ಮಾತ್ರ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ. ನೀವಿ ಶೈಲಿ, ಗುಜರಾತಿ ಶೈಲಿ, ಬೆಂಗಾಲಿ ಶೈಲಿ, ಆಂಧ್ರಾ ಶೈಲಿ, ಕರ್ನಾಟಕದ ಕೂರ್ಗಿ ಶೈಲಿ, ಮರಾಠಿ ಶೈಲಿ, ಕೇರಳದ ಶೈಲಿ ಹೀಗೆ ಭಾರತದಲ್ಲಿಯೇ ವಿಭಿನ್ನ ಶೈಲಿಗಳಿವೆ. ಆದರೆ ಇಡೀ ಭಾರತವೇ ಸೀರೆಯನ್ನು ಒಪ್ಪಿಕೊಂಡಿದೆ, ಅಪ್ಪಿಕೊಂಡಿದೆ ಅನ್ನೋದು ಸತ್ಯದ ಮಾತು.

ಹಾಗೇ, ನಾಲ್ಕು ಸಾವಿರ ವರ್ಷಗಳಿಂದ ಭಾರತದ ನಾರಿಯರ ಉಡುಪಾಗಿ ಗುರುತಿಸಿಕೊಂಡ ಸೀರೆ, ಈಗ ನಿಧಾನವಾಗಿ ಸಾಂದರ್ಭಿಕ ಉಡುಪಾಗಿ ಪರಿಗಣಿಸಲ್ಪಡುತ್ತಿದೆ. ಪಾಶ್ಚಾತ್ಯ ಉಡುಪುಗಳಿಗೆ ಮನಸೋತಿರುವ ಇಂದಿನ ಯುವ ಪೀಳಿಗೆ ಭಾರತೀಯ ಸಂಸ್ಕೃತಿಯ ಜೀವಾಳವಾಗಿರುವ ಸೀರೆಯಂತಹ ಸುಂದರ ಉಡುಪನ್ನು ಮರೆಯುತ್ತಿದ್ದಾರೆ ಎಂಬುದೂ ಕೂಡ ವಾಸ್ತವ ಸತ್ಯ.

ಹಿಂದೂ ದೇವತೆಗಳ ಉಡುಪು ಕೂಡ ಸೀರೆಯೇ. ದೇವತೆಗಳನ್ನು ನಾವು ಎಂದಿಗೂ ಬೇರೆ ಉಡುಗೆಗಳಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗೇ ನಮ್ಮ ನಮ್ಮ ತಾಯಂದಿರನ್ನು ಕೂಡ ಚಿಕ್ಕಂದಿನಿಂದ ಸೀರೆಯಲ್ಲಿಯೇ ನೋಡಿದ ಅಭ್ಯಾಸ ನಮಗೆ. ಅಮ್ಮ ಅಂದಾಕ್ಷಣ ಸೀರೆಯುಟ್ಟು ನಗುತ್ತಿರುವ ಅಮ್ಮನ ಮುಖವೇ ನೆನಪಿಗೆ ಬರುತ್ತದೆ. ಅಮ್ಮನ ಸೀರೆಯ ಸೆರಗು ಹಿಡಿದು ಆಟವಾಡಿದ ದಿನಗಳು ನೆನಪಿಗೆ ಬುರುತ್ತವೆ. ಇಂಥಹ ಭಾವನಾತ್ಮಕ ಸಂಬಂಧಗಳು ಸೀರೆಯ ಸುತ್ತವಿದೆ. ನಮ್ಮ ದೇಶದ ಸೀರೆಗೆ ತಾಯಿಯ ಸ್ಥಾನವಿದೆ, ಅಷ್ಟೇ ಮಮತೆಯ ಭಾವನೆಯಿರುವ ಸೀರೆ ಭಾರತ ಮಾತೆಯ ಹೆಮ್ಮೆಯ ಉಡುಪು ಎಂಬುದರಲ್ಲಿ ಎರಡು ಮಾತಿಲ್ಲ.

ಇತಿಹಾಸ ಚಿತ್ರ
ಇತಿಹಾಸ ಚಿತ್ರ, ಸೀರೆ

ಮೈಸೂರರಸರ ಕೊಡುಗೆ: ಸನ್, ೧೯೧೨ ರಲ್ಲಿ ಮೈಸೂರಿನ ಮಹಾರಾಜರು, ಸ್ಥಾಪಿಸಿದ್ದ ರೇಷ್ಮೆ ಗಿರಣಿಯಲ್ಲಿ ತಯಾರಾಗುತ್ತಿದ್ದ ಸೀರೆಗಳಿವು. ಆಗ ಮಹಾರಾಜರು ‘ಸ್ವಿಟ್ಸರ್ಲೆಂಡ್’ನಿಂದ ೩೨ ಯಂತ್ರಮಗ್ಗಗಳನ್ನು ಆಮದು ಮಾಡಿಕೊಂಡು ಆ ಗಿರಣಿಯನ್ನು ಆರಂಭಿಸಿದ್ದರು. ಸನ್, ೧೯೮೦ ರಲ್ಲಿ ಈ ಕಾರ್ಖಾನೆಯನ್ನು ‘ಕೆ.ಎಸ್.ಐ.ಸಿ’ ಯ ಆಡಳಿತದ ವಶಕ್ಕೆ ಒಪ್ಪಿಸಲಾಯಿತು. ಈಗ ಇಲ್ಲಿ ಸುಮಾರು ೧೫೯ ಮಗ್ಗಗಳಿವೆ. ಸರಕಿನ ದುರುಪಯೋಗವನ್ನು ತಡೆಯಲು ಇಲ್ಲಿ ತಯಾರಿಸಲಾಗುವ ಪ್ರತಿ ಸೀರೆಯ ಮೇಲೂ ಅದರ ಸಂಕೇತ ಸಂಖ್ಯೆ ಹಾಗೂ ಒಂದು ಸಾಂಕೇತಿಕ ಚಿತ್ರವಿರುತ್ತದೆ. ಮೈಸೂರು ರೆಷ್ಮೆ ಸೀರೆಗಳ ತಯಾರಿಕೆಯಲ್ಲಿ ಇತ್ತೀಚಿನ ದಿನಗಳಲ್ಲಿ ‘ಕಸೂತಿ ಚಿತ್ರಿಕೆ’ಗಳನ್ನು ‘ದಪ್ಪನೆಯ ನೇಯ್ಗೆಯ ಸೆರಗು’, ಬಂಧಿನಿ ತಂತ್ರದ ಒಳ ಹೆಣಿಗೆಯ ಜೊತೆಗೆ ‘ಲೈಲಾಕ್ ಹೂವಿನ ಬಣ್ಣ’, ‘ಕಾಫಿ ಕಂದು’ ಹಾಗೂ ‘ಆನೆಯ ಮೈಯಂಥಹ ಬೂದು ಬಣ್ಣ’ದ ಬಳಕೆ ಇತ್ಯದಿಗಳೊಂದಿಗೆ ಹಲವಾರು ವಿನೂತನ ಉತ್ಪಾದನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮೊಳಕಾಲ್ಮೂರು ಸೀರೆ, ಆರು ವಾರಿ ಸೀರೆ, ಎಂಟು ವಾರಿ ಸೀರೆ, ಗಜಗಾತ್ರದ ಸೀರೆ, ಮಣಭಾರದ ಸೀರೆ, ರತ್ನಖಚಿತವಾದ ಭರ್ಜರಿ ಸೀರೆ.

ರತ್ನಖಚಿತವಾದ ಭರ್ಜರಿ ಸೀರೆ: ನಿರಾಭರಣ ಸುಂದರಿಯರಿಗೆ ಮಾತ್ರ ಸಲ್ಲುವ ಆ ಸೀರೆಯನ್ನು ಚಿನ್ನ, ವಜ್ರ,ಮುತ್ತು ರತ್ನ ಹವಳ ಸೇರಿಸಿ ನೇಯ್ದಿದ್ದಾರೆ ಕುಶಲಕರ್ಮಿ ತಮಿಳು ನೇಕಾರರು. ಆ ಸೀರೆಯ ಮನಮೋಹಕ ಪಲ್ಲು ಒಳಗೆ ರಾಜಾ ರವಿವರ್ಮ ರಚಿಸಿದ ತೈಲಚಿತ್ರದ ಕಲೆ ಒಪ್ಪವಾಗಿ ಅರಳಿದೆ. (೪೦ಲಕ್ಷ ಇಂಡಿಯನ್ ಡಾಲರ್ಸ್) ಸೀರೆಯನ್ನು ಹರವಿ ನಿಮಗೆ ತೋರಿಸ್ತಾರೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿರುವ ಈಪಾಟಿ ಭಾರೀ ಸೀರೆ, ಗಿನ್ನಿಸ್ ದಾಖಲೆ ಪುಸ್ತಕ ಸೇರುವ ಛಾನ್ಸೂ ಇದೆಯಂತೆ. ೩೦ನೇಕಾರರು ಏಳು ತಿಂಗಳು ಕಾಲ ಏಕಪ್ರಕಾರವಾಗಿ ಕುಸುರಿ ಕೆಲಸ ಮಾಡಿ ತಯಾರಿಸಿದ ಈ ಸೀರೆ ಬರೋಬ್ಬರಿ ಎಂಟು ಕೆಜಿ ಭಾರ ಇದೆ.

ಆಧಾರ: wikipedia, bangalorewaves, ಅಮೃತಾ ಹೆಗಡೆ

Review Overview

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ಅಲೆಮಾರಿಗಳ ‘ಬುಡ್ಗನಾದ’

ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ …

Leave a Reply

Your email address will not be published. Required fields are marked *