Thursday , 13 June 2024
ravana

ರಾಮಾಯಣದಲ್ಲಿ ಬಚ್ಚಿಟ್ಟ ಸತ್ಯ; ಸೀತಾದೇವಿ ರಾವಣನ ಪುತ್ರಿ?

ಅರೆ ಬಹುಶಃ ನಾನು ಈ ಶೀರ್ಷಿಕೆಯನ್ನು ತಪ್ಪಾಗಿ ಓದಿರಬಹುದು ಎಂಬ ಸಂಶಯಬೇಡ. ನೀವು ಓದಿರುವುದು ಸರಿಯಾಗಿಯೇ ಇದೆ. ನಾವೆಲ್ಲರು ಓದಿರುವಂತೆ ರಾಮಾಯಣದ ಕಥೆಯಲ್ಲಿ ರಾವಣನು ತನ್ನ ತಂಗಿಗಾದ ಅಪಮಾನದ ಸೇಡನ್ನು ತೀರಿಸಿಕೊಳ್ಳಲು, ಸೀತಾದೇವಿಯನ್ನು ಅಪಹರಿಸಿದನು ಮತ್ತು ಆಕೆಯನ್ನು ಬಂಧಿಸಿ, ಮುಂದೆ ರಾಮನಿಂದ ಹತನಾದನು. ಆದರೆ ಇದಕ್ಕೆ ಸಂಪೂರ್ಣವಾಗಿ ವಿಭಿನ್ನವಾದ ಕಥೆ ಏನು ಹೇಳುತ್ತದೆ? ಭಾರತದ ಪುರಾಣಗಳೇ ಹಾಗೆ ವಿಶ್ವದಲ್ಲಿಯೇ ಅತ್ಯಂತ ಕುತೂಹಲ ಕೆರಳಿಸುವ, ಬಗೆದಷ್ಟು ಹೊರ ಬರುವ ರೋಚಕ ಕಥೆಗಳ ಆಗರ.

ಬಹುಶಃ ರಾಮಾಯಣ ಮತ್ತು ಮಹಾಭಾರತಗಳು ಕವಿಗಳಿಗೆ ನೀಡಿದಷ್ಟು ಸ್ಫೂರ್ತಿಯನ್ನು ಪ್ರಪಂಚದ ಬೇರೆ ಯಾವ ಪುರಾಣಗಳು ಸಹ ನೀಡಿರುವುದಿಲ್ಲ. ಇಂದಿಗೂ ಸಹ ಹಲವಾರು ವಿದ್ವಾಂಸರು ಇವುಗಳನ್ನು ತಮ್ಮ ದೃಷ್ಟಿಕೋನದಲ್ಲಿ ಹೊಸದಾಗಿ ಬರೆಯುತ್ತಲೇ ಇದ್ದಾರೆ. ನಮ್ಮ ಕುಮಾರವ್ಯಾಸ, ಕುವೆಂಪುರಂತಹ ಮಹಾಕವಿಗಳು ಸಹ ಇದಕ್ಕೆ ಹೊರತಾಗಲಿಲ್ಲ.

ಮೂಲ ಗ್ರಂಥಗಳ ಜೊತೆಗೆ ಮೌಖಿಕವಾಗಿ ಹರಿದು ಬಂದ ಮತ್ತು ಜನಪದರಿಂದ ಸೃಷ್ಟಿಯಾದ ಮಹಾಕಾವ್ಯಗಳ ಬಗೆಯು ಮತ್ತು ಅವುಗಳಲ್ಲಿ ಬರುವ ಪಾತ್ರಗಳ ಪೋಷಣೆಯು ಸಹ ಈ ಕಾವ್ಯಗಳ ರೋಚಕ ಕಥೆಯನ್ನು ಮತ್ತಷ್ಟು ಹೆಚ್ಚಿಸಿವುದರ ಜೊತೆಗೆ ಜನರನ್ನು ನಿಬ್ಬೆರಗಾಗಿಸುತ್ತವೆ.

ರಾಮಾಯಣದ ಕಥೆಯು ಸೀತಾಪಹರಣದ ಸುತ್ತ ತಿರುಗುತ್ತದೆ. ಇಲ್ಲಿ ರಾಮನು ಹೇಗೆ ತನ್ನ ಪತ್ನಿಯನ್ನು ಆ ರಾಕ್ಷಸನಿಂದ ಕಾಪಾಡಿದ ಎಂಬುದು ಕಥೆಯ ಮುಖ್ಯ ಘಟ್ಟವಾಗಿದೆ. ಆದರೂ ಈ ಕಥೆಯಲ್ಲಿ ಒಂದು ತಿರುವು ಇದೆ. ಹಲವಾರು ಜನಪದ ಕಥೆಗಳು ಮತ್ತು ಪ್ರಾಚೀನ ಗ್ರಂಥಗಳ ಪ್ರಕಾರ ರಾವಣನು ಸೀತೆಯ ತಂದೆಯಂತೆ. ಈ ವಿಚಾರವು ಹಲವರ ಹುಬ್ಬೆರಿಸುವುದಂತು ಖಂಡಿತ. ಆದರೆ ನಿಜ ಸಾಕ್ಷಾಧಾರಗಳು ಈ ವಿಷಯದ ಕುರಿತು ಸ್ಪಷ್ಟವಾಗಿ ಬೆಳಕನ್ನು ಚೆಲ್ಲುತ್ತವೆ. ಶೂರ್ಪನಖಿಯ ಘಟನೆಯ ಹೊರತಾಗಿ, ರಾವಣ ಸೀತೆಯನ್ನು ಏಕೆ ಅಪಹರಿಸಿದ ಎನ್ನಲು ಹಲವಾರು ಕಾರಣಗಳು ಕಂಡು ಬರುತ್ತವೆ.

ನಿಜವಾಗಿ ಸೀತೆಯು ರಾವಣನ ಮಗಳೆ?

ನಂಬಿಕೆಗಳ ಪ್ರಕಾರ ಸೀತಾದೇವಿಯು ಭೂಮಿಯಿಂದ ಹೊರ ಬಂದವಳು. ಅಂದರೆ ಜನಕ ರಾಜನು ಒಮ್ಮೆ ಹೊಲವನ್ನು ಉಳುವಾಗ ಅದರಲ್ಲಿ ಸೀತಾದೇವಿಯು ದೊರೆತಳು. ಆಗ ಜನಕರಾಜನು ಆ ಮಗುವನ್ನು ತನ್ನ ಸಾಕು ಮಗಳಾಗಿ ಸ್ವೀಕರಿಸಿ ಸಾಕಲು ತೊಡಗಿದನು. ವಾಯುವ್ಯ ಭಾರತದಲ್ಲಿ ಕಂಡು ಬರುವ ರಾಮಾಯಣದಲ್ಲಿ ಸೀತಾ ದೇವಿಯು ಮೇನಕೆಯ ದೈವೀಕ ಮಗಳಂತೆ, ನಂತರ ಜನಕ ರಾಜನು ಆಕೆಯನ್ನು ಸಾಕು ಮಗಳಾಗಿ ಸ್ವೀಕರಿಸಿದನಂತೆ. ಇನ್ನೂ ಕೆಲವು ಗ್ರಂಥಗಳ ಪ್ರಕಾರ ಸೀತಾ ದೇವಿಯು ಜನಕ ರಾಜನ ನಿಜವಾದ ಮಗಳಂತೆ. ಆದರೆ ಬಹುತೇಕ ಗ್ರಂಥಗಳ ಪ್ರಕಾರ ಸೀತಾ ದೇವಿಯು ಜನಕ ರಾಜನು ಉಳುತ್ತಿದ್ದ ವ್ಯವಸಾಯದ ಭೂಮಿಯಲ್ಲಿನ ಸಾಲುಗಳಲ್ಲಿ ದೊರೆತಳಂತೆ.

ವೇದವತಿಯ ಕಥೆ: ಇನ್ನೂ ಕೆಲವು ಕಥೆಗಳು ಹೇಳುವುದೇನೆಂದರೆ ಸೀತಾದೇವಿಯು ವೇದವತಿಯ ಅವತಾರವಂತೆ. ವೇದವತಿಯು ಒಬ್ಬ ಬ್ರಾಹ್ಮಣ ಸ್ತ್ರೀಯಾಗಿದ್ದಳು. ಈಕೆಯು ರಾವಣನಿಂದ ಬಲತ್ಕಾರಕ್ಕೆ ಒಳಪಟ್ಟಳು. ರಾವಣನಿಂದ ತನ್ನ ಪಾವಿತ್ರ್ಯಕ್ಕೆ ಭಂಗ ಬಂದ ಕಾರಣದಿಂದ, ಆಕೆಯು ಅಲ್ಲಿಯೇ ಉರಿಯುತ್ತಿದ್ದ ಚಿತೆಯನ್ನು ಏರಿ ಮುಂದಿನ ಜನ್ಮದಲ್ಲಿ ರಾವಣನ ಮೃತ್ಯುವಿನ ಸಲುವಾಗಿ ಜನ್ಮ ತಾಳುವುನೆಂದು ಹೇಳಿ ಪ್ರಾಣ ಬಿಟ್ಟಳು. ಹೀಗೆ ಸೀತಾದೇವಿಯು ಜನಿಸಿದಳು.

ರಾವಣನ ಮಗಳು: ಉತ್ತರ ಪುರಾಣದ ಪ್ರಕಾರ, ಒಮ್ಮೆ ರಾವಣನು ಅಲಕಪುರಿಯ ಯುವ ರಾಣಿಯಾದ ಮೈನಾವತಿಯ ಮೇಲೆ ಕೆಟ್ಟ ಭಾವನೆಯನ್ನು ತಳೆದನಂತೆ. ಆಗ ಆಕೆಯು ರಾವಣನ ಮೇಲೆ ಸೇಡು ತೀರಿಸಿಕೊಳ್ಳುವ ಶಪಥ ಮಾಡಿದಳಂತೆ. ಮುಂದೆ ಆಕೆ ರಾವಣ ಮತ್ತು ಮಂಡೋದರಿಯರ ಮಗಳಾಗಿ ಜನಿಸಿದಳಂತೆ. ಆದರೆ ಜ್ಯೋತಿಷ್ಯಗಳ ಆ ಮಗುವು ಸಾಮ್ರಾಜ್ಯವನ್ನು ನಾಶ ಮಾಡುತ್ತದೆ ಎಂದು ಭವಿಷ್ಯ ನುಡಿದರಂತೆ. ಆಗ ರಾವಣನು ಆ ಮಗುವನ್ನು ಕೊಲ್ಲುವಂತೆ ತನ್ನ ಸೇವಕನಿಗೆ ಆದೇಶ ಮಾಡಿದನಂತೆ. ಆದರೆ ಆ ಸೇವಕನು ಆ ಮಗುವನ್ನು ಕೊಲ್ಲಲಿಲ್ಲವಂತೆ, ಅವನು ಆ ಮಗುವನ್ನು ಮಿಥಿಲೆಯಲ್ಲಿ ಹೂತಿಟ್ಟು ಹೋಗಿಬಿಟ್ಟನಂತೆ. ಅದೇ ಮಗುವೇ ಜನಕ ರಾಜನಿಗೆ ದೊರೆಯಿತಂತೆ. ಅವಳೇ ಸೀತೆ.

ರಾವಣ ತನ್ನ ಮಗಳನ್ನು ತ್ಯಜಿಸಿದ್ದು: ಜೈನ ರಾಮಾಯಣಗಳಲ್ಲಿ, ಸೀತೆಯು ರಾವಣನ ಮಗಳಾಗಿಯೇ ಜನಿಸಿದಳೆಂದು ಚಿತ್ರಿತಗೊಂಡಿದೆ. ಅಲ್ಲಿಯೂ ಸಹ ಜ್ಯೋತಿಷ್ಯಗಳು ರಾವಣನ ಜ್ಯೇಷ್ಠ ಪುತ್ರಿಯಿಂದ ಕುಲ ನಾಶವೆಂದು ಭವಿಷ್ಯ ನುಡಿಯುತ್ತಾರೆ. ಆದ್ದರಿಂದ ರಾವಣನು ಆ ಮಗುವನ್ನು ತುಂಬಾ ದೂರ ತೆಗೆದುಕೊಂಡು ಹೋಗಿ, ನೆಲದಲ್ಲಿ ಊತು ಹಾಕುವಂತೆ ತನ್ನ ಸೇವಕರಿಗೆ ಆದೇಶ ನೀಡುತ್ತಾನೆ. ಅವರು ಹಾಗೆಯೇ ಮಾಡಿದರು. ಆ ಮಗುವು ಜನಕನಿಗೆ ದೊರೆತು, ಜಾನಕಿಯಾಗಿ ಅಲ್ಲಿಯೇ ಬೆಳೆದು ದೊಡ್ಡವಳಾದಳು.

ರಾವಣನಿಗೆ ಸೀತೆಯ ಕುರಿತಾದ ಪ್ರೀತಿ: ರಾವಣನು ಸೀತೆಯನ್ನು ಇಷ್ಟಪಟ್ಟನು. ಆದರೆ ಆ ಪ್ರೀತಿಯು ಒಬ್ಬ ತಂದೆ ಮಗಳೆಡೆಗೆ ಹೊಂದಿದ್ದ ಪ್ರೀತಿಯಾಗಿತ್ತು. ಈ ವರ್ಣನೆಯು ನಮಗೆ ದೊರೆಯುವುದು ಜೈನ ರಾಮಾಯಣದಲ್ಲಿ. ಅದರ ಪ್ರಕಾರ ಸೀತೆಯು ಮಂಡೋದರಿಗೆ ಜನಿಸಿದಾಗ ರಾವಣನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಮುಂದೆ ಈಕೆ ಕುಲ ಕಂಟಕಳಾಗುತ್ತಾಳೆ ಎಂಬ ಜ್ಯೋತಿಷ್ಯಗಳ ಭವಿಷ್ಯವನ್ನು ಕೇಳಿದ ನಂತರ ರಾವಣನು ಈ ಮಗುವನ್ನು ದೂರಕ್ಕೆ ತೆಗೆದುಕೊಂಡು ಹೋಗಲು ಆದೇಶ ನೀಡಿದನು. ಆದರೆ ರಾವಣನು ಆ ಮಗುವಿನ ಮೇಲೆ ನಿಗಾವಹಿಸಿದ್ದನು. ಯಾವಾಗ ಜನಕ ರಾಜನಿಗೆ ಈ ಮಗುವು ದೊರೆತು, ಆತ ಆ ಮಗುವನ್ನು ತನ್ನ ಸಾಕು ಮಗಳಾಗಿ ಬೆಳೆಸುತ್ತಿದ್ದಾನೆ ಎಂದು ತಿಳಿಯಿತೋ, ಆಗ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನ ಮಗಳು ಯುವರಾಣಿಯಾಗಿ ಬೆಳೆಯುತ್ತಿರುವುದನ್ನು ಈತನು ಆಗಾಗ ಕಾಣುತ್ತಿದ್ದನು. ಅಷ್ಟೇ ಅಲ್ಲ ಇದರಲ್ಲಿ ರಾವಣನು ಸೀತಾ ಸ್ವಯಂವರಕ್ಕೆ ಆಗಮಿಸಿ, ಆ ವಿವಾಹಕ್ಕೆ ತಾನು ಸಾಕ್ಷಿಯಾಗುತ್ತಾನೆ. ಆರ್ಯು ಪುತ್ರನಾದ ಕ್ಷತ್ರಿಯ ರಾಮನನ್ನು ಸೀತೆಯು ವರಿಸಿದ್ದಕ್ಕೆ ರಾವಣನು ಸಂತೋಷವನ್ನು ಪಡುತ್ತಾನೆ. ಆದರೆ ಎಲ್ಲವೂ ಸರಿಯಾಗಿರುತ್ತದೆ. ರಾಮನು 14 ವರ್ಷ ವನವಾಸಕ್ಕೆ ಹೋಗುವವರೆಗು.

ಸೀತಾ ದೇವಿಯ ಅಪಹರಣ: ತಂದೆ ಪ್ರೀತಿಯೇ ಅಥವಾ ದ್ವೇಷವೇ?

ಯಾವಾಗ ರಾವಣನು ಸೀತೆಯು ರಾಮನೊಂದಿಗೆ ವನವಾಸವನ್ನು ಮಾಡುತ್ತಿರುವುದನ್ನು ತಿಳಿದನೋ, ಆಗಲೇ ಅವನು ತನ್ನ ಮಗಳನ್ನು ಅಪಹರಿಸಿ, ಆಕೆ ಅನುಭವಿಸುತ್ತಿರುವ ದುಃಖಕ್ಕೆ ಅಂತ್ಯ ಹಾಡುವ ತೀರ್ಮಾನಕ್ಕೆ ಬಂದನು. ಆದ್ದರಿಂದ ಆತನು ಸೀತೆಯನ್ನು ಅಪಹರಿಸಿ, ಲಂಕೆಗೆ ತಂದನು. ಜನರು ಇದನ್ನು ರಾಮ ಮತ್ತು ಲಕ್ಷ್ಮಣರ ದ್ವೇಷದ ಪ್ರತೀಕವಾಗಿ ಕಂಡರು. ಲಕ್ಷ್ಮಣನು ರಾವಣನ ತಂಗಿಯ ಮೂಗನ್ನು ಕತ್ತರಿಸಿದ್ದನು. ಆದರೆ ಅದು ತಂದೆಯು ತನ್ನ ಮಗಳನ್ನು ದುಃಖದಿಂದ ಪಾರು ಮಾಡುವ ಕೃತ್ಯವಾಗಿತ್ತು. ಯಾವಾಗ ರಾವಣನು ಸೀತೆಯ ಹೆಸರನ್ನು ಮಲಗಿರುವಾಗಲು ಕನವರಿಸಲು ಆರಂಭಿಸಿದನೊ, ಆಗ ರಾವಣನ ಹೆಂಡತಿ ಮಂಡೋದರಿ ಸಹ ರಾವಣನನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಳು.

ರಾವಣನ ಅಂತ್ಯ: ಸೀತೆ ರಾವಣನ ಮಗಳೋ ಅಥವಾ ಅಲ್ಲವೋ, ಆದರೆ ರಾವಣನ ಅಂತ್ಯಕ್ಕೆ ಸೀತೆಯೆ ಕಾರಣಳಾದಳು. ಮೂಲಗಳ ಪ್ರಕಾರ ರಾವಣನು ಸೀತೆಯನ್ನು ರಾಮನಿಗೆ ಒಪ್ಪಿಸಲಿಲ್ಲ. ಆತನಿಗೆ ಸೀತೆಯು ರಾಮನೊಂದಿಗೆ ಮರಳಿ ವನವಾಸಕ್ಕೆ ಹೋಗುವುದು ಇಷ್ಟವಿರಲಿಲ್ಲ. ಈ ವಿಚಾರ ರಾವಣನಲ್ಲಿದ್ದ ತಂದೆಯ ಮನಸ್ಸಿಗೆ ಒಪ್ಪದ ವಿಷಯವಾಗಿತ್ತು. ಅದಕ್ಕಾಗಿ ಆತ ರಾಮನ ಮೇಲೆ ಉಗ್ರವಾದ ಹೋರಾಟವನ್ನೆ ಮಾಡಿದನು. ಅದರಲ್ಲಿ ತಾನೂ ಮಡಿದನು. ಕೊನೆಗೆ ಜ್ಯೋತಿಷ್ಯಗಳ ಭವಿಷ್ಯವು ನಿಜವಾಯಿತು.

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *