ಸಿಸು ಸಂಗಮೇಶ (೨೯.೪.೧೯೨೯ – ೨೯.೫.೨೦೦೧): ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದ ‘ಸಿಸು’ ಸಂಗಮೇಶರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಬಾಗೇವಾಡಿ ಸಮೀಪದ ಯರನಾಳವೆಂಬ ಗ್ರಾಮ. ಇವರ ಮೊದಲ ಹೆಸರು ಸಂಗಮೇಶ ಸಿದ್ಧರಾಮಪ್ಪ ಮನಗೊಂಡ. ತಂದೆ ಸಿದ್ಧರಾಮಪ್ಪ, ತಾಯಿ ಗೌರಮ್ಮ. ಶಿಕ್ಷಣ ಪಡೆದುದು ವಿಜಾಪುರ ಜಿಲ್ಲೆಯ ಹಲವಾರು ಕಡೆ.
[sociallocker]ಶಾಲಾ ಅಧ್ಯಾಪಕರಾಗಿ ೧೯೪೮ರಲ್ಲಿ ಉದ್ಯೋಗಕ್ಕೆ ಸೇರಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೧೯೮೪ರಲ್ಲಿ ನಿವೃತ್ತರಾದರು. ಅಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತರು. ಕವಿತೆ, ಅನುವಾದ, ಪ್ರೌಢಸಾಹಿತ್ಯ, ಸಂಪಾದನೆ, ಮಕ್ಕಳ ಸಾಹಿತ್ಯ ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ . ತಮ್ಮಂತೆಯೇ ಶಿಕ್ಷಕರಲ್ಲಿ ಹುದುಗಿದ್ದ ಸಾಹಿತ್ಯವನ್ನು ಪ್ರಕಾಶಿಸಲು ಪ್ರಾರಂಭಿಸಿದ್ದು ‘ಭಾರತೀಯ ಸಾಹಿತ್ಯ ಭಂಡಾರ ಪ್ರಕಾಶನ’ ಸಂಸ್ಥೆಯ ಮೂಲಕ. ಈ ಸಂಸ್ಥೆಗೆ ಪೂರಕವಾಗಿ ೧೯೬೪ರಲ್ಲಿ ಪ್ರಾರಂಭಿಸಿದ್ದು ಶಕ್ತಿ ಮುದ್ರಣಾಲಯ. ತಮ್ಮ ಕೃತಿಗಳನಷ್ಟೇ ಅಲ್ಲದೆ ಭಾರತೀಯ ಸಾಹಿತ್ಯ ಭಂಡಾರ ಪ್ರಕಾಶನದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ಸಾಹಿತಿಗಳಿಗೆ ಮಕ್ಕಳ ಸಾಹಿತ್ಯ ರಚಿಸಲು ನೀಡಿದ ಮಾರ್ಗದರ್ಶನ, ಅಗಾಧ ನೆರವು. ಬಾಲಭಾರತಿ ಪ್ರಕಾಶನದಡಿ ಸುಮಾರು ೮೦ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ ಹಿರಿಮೆ. ಇವುಗಳಲ್ಲಿ ಹನ್ನೆರಡು ಕೃತಿಗೆ ರಾಷ್ಟ್ರ ಪ್ರಶಸ್ತಿ, ಹದಿನಾರು ಕೃತಿಗೆ ರಾಜ್ಯ ಪ್ರಶಸ್ತಿ, ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಗಳಿಸಿವೆ. ಅಂತಾರಾಷ್ಟ್ರೀಯು ಮಕ್ಕಳ ವರ್ಷದಲ್ಲಿ (೧೯೭೮) ಮಕ್ಕಳ ಮಾಸಪತ್ರಿಕೆ ‘ಬಾಲಭಾರತಿ’ ಆರಂಭಿಸಿ ನಾಲ್ಕು ವರ್ಷ ನಡೆಸಿದರು. ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಅಕಾಡಮಿ ೧೯೮೩ರಲ್ಲಿ ಸ್ಥಾಪನೆ.ಮಕ್ಕಳಿಗಾಗಿ ರಚಿಸಿದ ಕೃತಿಗಳು-ನಾಯಿ ಫಜೀತಿ, ಯಾರು ಜಾಣರು ? ಮಂಕು ಮರಿ, ಆಶೆಬುರುಕಿ ಆಶಾ, ಹೇಗಿದ್ದರು ಹೇಗಾದರು, ದಾರಿಯ ಬುತ್ತಿ ಮುಂತಾದುವು. ಕವಿತಾ ಸಂಕಲನಗಳು-ಸವಿ ಸಾಹಿತ್ಯ, ಕಾಡಿನ ಕಲಿಗಳು, ಶಾಲೆಗಿಂತ ಚೀಲಭಾರ, ಚುಟುಕು-ಗುಟುಕು, ಸೂರ‍್ಯ ಚಂದ್ರರ ನಡುವೆ ಮೊದಲಾದುವು. ಅನುವಾದಿತ-ಗೋಮುಖಯಾತ್ರೆ, ಕನಸಿನ ಲೋಕ, ಚತುರ ಚಾಣಾಕ್ಷ. ಸಂಪಾದಿತ-ಪುಟಿಚೆಂಡು, ಆಣೆಕಲ್ಲು, ನಾವು ನಮ್ಮವರು ಮೊದಲಾದುವು. ರಾಜ್ಯಮಟ್ಟದಲ್ಲಲ್ಲದೆ ದೇಶದ ವಿವಿಧೆಡೆ ಮಕ್ಕಳ ಸಾಹಿತ್ಯಕ್ಕೆ ಸಂಬಂಸಿದ ಸಮ್ಮೇಳನ, ಕಮ್ಮಟ, ವಿಚಾರ ಗೋಷ್ಠಿಗಳಲ್ಲಿ ಭಾಗಿ.
ಗೌರವ ಪುರಸ್ಕಾರಗಳು ಹಲವಾರು: ಆದರ್ಶ ಶಿಕ್ಷಕ ಪ್ರಶಸ್ತಿ, ‘ನನ್ನ ಮನೆ’ ಮತ್ತು ‘ನನ್ನ ಗೆಳೆಯ ಜಪಾನದ ಟಾರೊ’ ಕೃತಿಗೆ ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ, ಚನ್ನಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ್ದ ಮಕ್ಕಳ ಸಾಹಿತ್ಯ ಸಮಾವೇಶದ ಸರ್ವಾಧ್ಯಕ್ಷತೆ. ಭೂಪಾಲದಲ್ಲಿ ನಡೆದ ಅಖಿಲ ಭಾರತ ಭಾಷಾ ಸಮ್ಮೇಳನದ ‘ಭಾರತ ಭಾಷಾ ಭೂಷಣ ಪ್ರಶಸ್ತಿ’ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದುವು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
[/sociallocker]
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.