ವಾತಾಪಿಯ ಚಾಲುಕ್ಯರು ದೇವಾಲಯ ನಿರ್ಮಿತಿಯಲ್ಲಿ ವಿಶೇಷ ಆಸಕ್ತಿಯುಳ್ಳ ವರಾಗಿದ್ದರು. ಇದಕ್ಕೆ ನಿದರ್ಶನವಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ ಮತ್ತು ಮಹಾಕೂಟಗಳಲ್ಲಿ ನೂರಾರು ಸಂಖ್ಯೆಯ ದೇವಾಲಯಗಳು ನಿರ್ಮಿತವಾದುದನ್ನು ಇಂದಿಗೂ ಕಾಣುತ್ತೇವೆ. ಶಿಲ್ಪಶಾಸ್ತ್ರದ ಬೆಳವಣಿಗೆಯ ಅಭ್ಯಾಸಕ್ಕೆ ಐಹೊಳೆಯ ಮಂದಿರಗಳು ಹೆಚ್ಚು ಸಹಾಯಕಾರಿಯಾಗಿವೆ. ರಮಣೀಯ ನಿಸರ್ಗದ ಮಡಿಲಲ್ಲಿರುವ ಸಿದ್ಧನಕೊಳ್ಳ ಐಹೊಳೆಯಿಂದ ದಕ್ಷಿಣಕ್ಕೆ ಸುಮಾರು ಮೂರು ಮೈಲು ಅಂತರದಲ್ಲಿದೆ. ಈ ಕೊಳ್ಳದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯ ಒಂದು ವಿರಾಜಮಾನವಾಗಿದೆ.
ಪೂರ್ವಾಭಿಮುಖವಾಗಿರುವ ಈ ದೇವಾಲಯವನ್ನು ಸ್ಥಳೀಕರು ಸಂಗಮೇಶ್ವರ ದೇವಾಲಯವೆಂದು ಕರೆಯುವ ವಾಡಿಕೆ ಇದೆ. ಈ ಮಂದಿರದ ತಳವಿನ್ಯಾಸ, ಗರ್ಭಗೃಹ, ಸಭಾಮಂಟಪ ಮತ್ತು ಮುಖಮಂಟಪದಿಂದ ಕೂಡಿದೆ. ಗರ್ಭಗೃಹದ ಮೇಲೆ ರೇಖಾನಗರ ಶಿಖರವಿದ್ದು ಅದು ಸ್ವಲ್ಪಮಟ್ಟಿಗೆ ಭಗ್ನವಾಗಿದೆ.
ಬಾದಾಮಿಯ ಚಾಲುಕ್ಯರ ಕಾಲಕ್ಕೆ ಸೇರಿದ ಐಹೊಳೆಯ ಅನೇಕ ದೇವ ಮಂದಿರಗಳ ತಳವಿನ್ಯಾಸವನ್ನೇ ಸಂಗಮೇಶ್ವರ ದೇವಾಲಯವು ಹೊಂದಿದೆ. ಉದಾ: ತಾರಪ್ಪ ಅಥವಾ ತಾರಕೇಶ್ವರ, ಮಲ್ಲಿಕಾರ್ಜುನ, ಲಾಡಖಾನ ಗುಂಪಿಗೆ ಸೇರಿದ ಸೂರ್ಯ ಮಂದಿರ, ಹುಚ್ಚಪ್ಪಯ್ಯನ ಗುಡಿ[1] ಇತ್ಯಾದಿಗಳನ್ನು ಹೆಸರಿಸಬಹುದು. ಸಂಗಮೇಶ್ವರ ಮಂದಿರದ ತಳವಿನ್ಯಾಸ, ಐಹೊಳೆಯ ಲಾಡಖಾನ[2] ಕೊಂತಿಗುಡಿ ಹುಚ್ಚಿಮಲ್ಲಿ ಗುಡಿ, ಮತ್ತು ಗೌಡರ ಗುಡಿ ದುರ್ಗಗುಡಿಯ[3] ತಳವಿನ್ಯಾಸಕ್ಕಿಂತ ತೀರ ಭಿನ್ನವಾಗಿದೆ. ಈ ದೇವಾಲಯದ ತಳವಿನ್ಯಾಸ, ಮೇಲೆ ಹೆಸರಿಸಿದ ದೇವಾಲಯಗಳ ತಳವಿಳಾಸ ಬೆಳವಣಿಗೆಯ ಒಂದು ಘಟ್ಟವನ್ನು ಸೂಚಿಸುತ್ತದೆ. ಇಲ್ಲಿ ಲಾಡಖಾನ ಮತ್ತು ಕೊಂತಗುಡಿಗಳಲ್ಲಿದ್ದಂತೆ ಗರ್ಭಗೃಹವು ಸಭಾ ಮಂಟಪದ ಒಳಗಡೆ ಹಿಂಬದಿಯ ಗೋಡೆಗೆ ಅಂಟಿಕೊಂಡಿಲ್ಲ ಮತ್ತು ದುರ್ಗಗುಡಿ ಗಳಲ್ಲಿದ್ದಂತೆ, ಇಲ್ಲಿ ಪ್ರಕಟಣಾಪಥಕ್ಕೆ ಅವಕಾಶವಿಲ್ಲ. ಪ್ರಸ್ತುತ ಮಂದಿರದಲ್ಲಿ ಗರ್ಭಗೃಹ ಸಭಾಮಂಟಪದ ಹೊರಮೈಗೆ ಅಂಟಿಕೊಂಡು ರಚಿತವಾದುದನ್ನು ಕಾಣಬಹುದು.
ಸಂಗಮೇಶ್ವರ ಗುಡಿಯ ಗರ್ಭಗೃಹ ಮುಖಮಂಟಪ ಮತ್ತು ಶಿಖರಗಳ ಅಗಲ ಹೆಚ್ಚು ಕಡಿಮೆ ಒಂದೇ ಆಗಿದ್ದು ಒಂದೇ ಸರಳ ರೇಖೆಯಲ್ಲಿ ನಿರ್ಮಿತವಾಗಿರುತ್ತವೆ. ಇದು ವಾತಾಪಿಯ ಚಾಲುಕ್ಯರ ರೇಖಾನಗರ ಪ್ರಸಾದ ರಚನೆಯ ವೈಶಿಷ್ಟ್ಯವಾಗಿದೆ. ಈ ಮಾದರಿಯ ದೇವಾಲಯ ಗಳನ್ನು ಐಹೊಳೆಯ ಸೂರ್ಯ ತಾರಪ್ಪ ಮತ್ತು ಹುಚ್ಚಪ್ಪಯ್ಯನ ಗುಡಿಗಳಲ್ಲಿ ಕಾಣಬಹುದು.
ಅಧಿಷ್ಠಾನ
ಸಂಗಮೇಶ್ವರ ದೇವಾಲಯದ, ಗರ್ಭಗೃಹ ಮತ್ತು ಮುಖಮಂಟಪದ ಅನುಷ್ಠಾನ ಬಹುಭಾಗ ಮಣ್ಣಿನಲ್ಲಿ ಹೂತು ಹೋಗಿದೆ. ಸಭಾಮಂಟಪದ ಅಧಿಷ್ಠಾನವು ಉಪಾನ, ಜಗತಿಗಳ ಮತ್ತು ಪಟ್ಟಿಕೆಗಳನ್ನೊಳಗೊಂಡಿದೆ. ಪಟ್ಟಿಕೆಯಲ್ಲಿ ಚೈತ್ಯಗವಾಕ್ಷಗಳನ್ನು ಕಟಿದಿದ್ದಾರೆ. ಒಂದರಲ್ಲಿ ಮಾತ್ರ ಶಿವಲಿಂಗವನ್ನು ಕೆತ್ತಿದ್ದಾರೆ. ಪ್ರಾಣಿಗಳಲ್ಲಿ ಮಯೂರವು ಅನೇಕ ಕಡೆಗಳಲ್ಲಿ ಕೆತ್ತಲ್ಪಟ್ಟಿದೆ. ಬಾದಾಮಿಯ ಚಾಲುಕ್ಯರ ಅನೇಕ ದೇವಾಲಯಗಳಲ್ಲಿ ಮಯೂರವು ಕೆತ್ತಲ್ಪಟ್ಟಿದ್ದು, ಅದು ಕಾರ್ತಿಕೇಯನ ಮೇಲೆ ಅವರಿಗಿದ್ದ ಭಕ್ತಿಯನ್ನು ಪ್ರತಿಪಾದಿಸುವಂತೆ ತೋರುತ್ತವೆ.
ಗರ್ಭಗೃಹ
ಗರ್ಭಗೃಹ ಚೌಕೋನಾಕಾರವಾಗಿದ್ದು ೮’ x೭’ ಇದೆ. ಮಧ್ಯದಲ್ಲೆ ಒಂದು ಲಿಂಗವಿದೆ. ಭುವನೇಶ್ವರಿ ಯಾವ ಕುಸುರಿನ ಕೆಲಸವೂ ಇರದೇ ಚಪ್ಪಟೆಯಾಗಿದೆ. ಕೂಡ್ಯ ಸ್ತಂಭವನ್ನೊಳಗೊಂಡ ಲಿಂಗದ್ವಾರವು ವಿಶೇಷ ಆಕರ್ಷಣೆಯನ್ನೊಳಗೊಳ್ಳದೆ ನಿರಾಭರಣ ಸುಂದರವಾಗಿದೆ. ದ್ವಾರದಲ್ಲಿ ಮಂಗಲ ಫಲಕಕ್ಕೆ ಎಡೆ ಇಲ್ಲ. ದ್ವಾರ ಶಾಖದ ಕೆಳಭಾಗದಲ್ಲಿ ದ್ವಾರಪಾಲಕರ ಮೂರ್ತಿಗಳನ್ನು ಕಾಣಬಹುದು. ಆದರೆ ಇಂದು ಅವುಗಳ ಸ್ಥಿತಿ ಶೋಚನೀಯ ವಾಗಿದೆ. ಇದಕ್ಕೆ ಅವುಗಳ ಮೇಲೆ ಹಚ್ಚಿದ ತೈಲವೇ ಕಾರಣ. ಲಿಂಗದ್ವಾರಕ್ಕೆ ಸುಮಾರು ೧೦ ಅಡಿ ಎತ್ತರದ ಹೊಸ್ತಿಲು ಇದೆ. ಈ ಹೊಸ್ತಿಲು ಎತ್ತರವನ್ನು ಹೆಚ್ಚಿಸುವುದಕ್ಕಾಗಿ ಕೆಲ ಕಾಲದ ನಂತರ ಮತ್ತೊಂದು ಕಲ್ಲನ್ನು ಅದರ ಮೇಲೆ ಹೊದಿಸಿದ್ದಾರೆ. ಲಿಂಗದ್ವಾರ ಸುಮಾರು ೨.೪’ x ೫.೧೦’ನದಾಗಿದೆ.
ಬಾಗಿಲ ಪಟ್ಟಿಯ ಮೇಲ್ಭಾಗದಲ್ಲಿ ಮೂರು ದೊಡ್ಡ ಚೈತ್ಯಗವಾಕ್ಷಗಳಿವೆ. ನಡುವಿನ ಚೈತ್ಯಗವಾಕ್ಷವನ್ನುಳಿದು ಉಳಿದವುಗಳ ಮೇಲ್ಭಾಗದಲ್ಲಿ ಆಮಲಕಗಳನ್ನು ಕೊರೆದಿದ್ದಾರೆ. ಐಹೊಳೆಯ ಸಮಕಾಲೀನ ಕೆಲವು ಮಂದಿರಗಳಲ್ಲಿ ಆಮಲಕವನ್ನುಳ್ಳ ಚೈತ್ಯಗವಾಕ್ಷಗಳನ್ನು ಕಾಣಬಹುದು. ಆದರೆ ಕೆಲವು ಚೈತ್ಯಗವಾಕ್ಷಗಳು ಗುಮ್ಮಟಾಕಾರದ ಕೆತ್ತನೆಯನ್ನು ಮೇಲ್ಭಾಗದಲ್ಲಿ ಹೊಂದಿರುವುದನ್ನು ಕಾಣುತ್ತೇವೆ. ಇದಕ್ಕೆ ಲಾಡಖಾನ ಗುಂಪಿನ ಸೂರ್ಯನ ಗುಡಿಯನ್ನು ಉದಾಹರಿಸಬಹುದು. ಆಮಲಕಗಳಿಂದ ಕೂಡಿದ ಚೈತ್ಯಗವಾಕ್ಷಗಳನ್ನು ತಾರಪ್ಪ, ಚೆಕ್ಕೆ ಗುಡಿ, ಗೌಡರಗುಡಿ ಮತ್ತು ಹುಚ್ಚಪ್ಪಯ್ಯನ ಗುಡಿಗಳಲ್ಲಿ ಕಾಣಬಹುದು. ಸಂಗಮೇಶ್ವರ ಗುಡಿಯ ಚೈತ್ಯಗವಾಕ್ಷಗಳಿಗೂ ಮತ್ತು ಐಹೊಳೆಯ ಮೇಲೆ ಉದಾಹರಿಸಿದ ಚೈತ್ಯಗವಾಕ್ಷ ಗಳಿಗೂ ಒಂದು ವ್ಯತ್ಯಾಸವಿದೆ. ಅಂದರೆ ಐಹೊಳೆಯ ಚೈತ್ಯಗವಾಕ್ಷಗಳಲ್ಲಿ ನಾವು ಮೂರ್ತಿಗಳು ಕೆತ್ತಲ್ಪಟ್ಟಿರುವುದನ್ನು ಕಾಣುತ್ತೇವೆ. ಈ ಮೂರ್ತಿಗಳು ಕೆಲವು ಸಂದರ್ಭಗಳಲ್ಲಿ ಮಂದಿರದಲ್ಲೆ ಪ್ರತಿಷ್ಠಾಪಿಸಲ್ಪಟ್ಟ ಆಯಾ ಆರಾಧ್ಯಮೂರ್ತಿಯ ಕುರುಹನ್ನು ಸೂಚಿಸುವ ಪ್ರತೀಕಗಳಂತೆ ತೋರುತ್ತವೆ. ಆದರೆ ಇದೇ ಖಚಿತವೆಂದು ಹೇಳಲಿಕ್ಕಾಗದು(?) ಚೆಕ್ಕೆಗುಡಿ ಉದಾಹರಣೆಗಾಗಿ ಚೆಕ್ಕೆಗುಡಿಯ ಚೈತ್ಯಗವಾಕ್ಷಗಳಲ್ಲಿ ಬ್ರಹ್ಮ, ಶಿವ, ವಿಷ್ಣು ಇವರ ಮೂರ್ತಿಗಳನ್ನು ಕೆತ್ತಿದ್ದಾರೆ. ಗೌಡರ ಗುಡಿಯ ಚೈತ್ಯಗವಾಕ್ಷಗಳಲ್ಲಿ ಕ್ರಮವಾಗಿ ತ್ರಿಭಂಗಿಯಲ್ಲಿ ನಿಂತ ಸ್ತ್ರೀ ಗಜಲಕ್ಷ್ಮಿ ಮತ್ತು ತ್ರಿಭಂಗಿಯಲ್ಲಿ ನಿಂತ ಸ್ತ್ರೀಯ ಪ್ರತಿಮೆಗಳನ್ನು ಕೆತ್ತಿದ್ದಾರೆ. ತಾರಪ್ಪಗುಡಿಯ ಚೈತ್ಯಗವಾಕ್ಷ ಗಳಲ್ಲಿ ಅನುಕ್ರಮವಾಗಿ ಬ್ರಹ್ಮ, ನಟರಾಜ ಮತ್ತು ವಿಷ್ಣು(?)ವಿನ ಮೂರ್ತಿಗಳನ್ನು ಕೆತ್ತಿದ್ದಾರೆ.
ಸಭಾ ಮಂಟಪ
ಗರ್ಭಗೃಹಕ್ಕೆ ಹೊಂದಿಕೊಂಡು ಸಭಾ ಮಂಟಪವಿದೆ. ಇದು ಚೌಕೋನಾಕಾರವಾಗಿದ್ದು ಸುಮಾರು ೧೮.೬’x೧೮.೧೦’ ಅಳತೆಯುಳ್ಳದ್ದಾಗಿದೆ. ನೆಲಗಟ್ಟು ಮತ್ತು ಮಧ್ಯದ ವೇದಿಕೆ ಇತ್ತೀಚಿನವು. ಸಭಾಮಂಟಪದ ಮೇಲ್ಛಾವಣಿ ಇಕ್ಕೆಲಗಳಲ್ಲಿ ಇಳಿಜಾರಾಗಿದೆ. ಹಜಾರ ಭುವನೇಶ್ವರಿ ಎತ್ತರ ಮತ್ತು ಚಪ್ಪಟೆಯಾಗಿದ್ದು ಯಾವುದೇ ರೀತಿಯ ಕೆತ್ತನೆಯಿಂದ ಕೂಡಿಲ್ಲ. ಹಜಾರದಲ್ಲಿ ನಾಲ್ಕು ಸ್ತಂಭಗಳು ಮತ್ತು ಎರಡು ಕೂಡ್ಯ ಸ್ತಂಭಗಳಿವೆ.
ಸಭಾಮಂಟಪದ ಮಧ್ಯದ ವೇದಿಕೆಯ ಮೇಲೆ ನಾಲ್ಕು ಸ್ತಂಭಗಳಿರುತ್ತವೆ. ಇವು ಚೌಕೋನಾಕಾರವಾಗಿದ್ದು ಕೆಳಭಾಗದಲ್ಲಿ ಅಷ್ಟೇನೂ ಎತ್ತರವಲ್ಲದ ಪಟ್ಟಿಕೆ, ಮಧ್ಯಬಂಧ ಮತ್ತು ಮೇಲ್ಭಾಗದಲ್ಲಿ ತ್ರಿಪಟ್ಟಿಕೆಗಳನ್ನು ಹೊಂದಿವೆ. ಸ್ತಂಭದ ಮೇಲೆ ಎರಡು ಕೈಗಳುಳ್ಳ ತರಂಗ ಬೋದಿಗೆಗಳಿರುತ್ತದೆ. ತರಂಗದಲ್ಲಿ ಮಧ್ಯ ಪಟ್ಟಿಕೆ ಇದೆ. ಲಾಡಖಾನದ ಸಬಾ ಮಂಟಪದ ಸ್ತಂಭಗಳಲ್ಲಿ ಇಂತಹ ತರಂಗ ಬೋದಿಗೆಗಳು ಮೊಟ್ಟಮೊದಲ ಸಲ ಕಂಡು ಬರುತ್ತವೆ.[4] ಇಂತಹ ತರಂಗ ಬೋದಿಗೆಗಳನ್ನು ಗಳಗನಾಥ, ತಾರಪ್ಪ ಮತ್ತು ಮಲ್ಲಿಕಾರ್ಜುನ ಮಂದಿರಗಳಲ್ಲಿ ಕಾಣಬಹುದು. ಸಂಗಮೇಶ್ವರ ದೇವಾಲಯದ ಸ್ತಂಭಗಳನ್ನು ಹೋಲುತ್ತವೆ.
ಲಿಂಗದ್ವಾರದ ಇಕ್ಕೆಲಗಳಲ್ಲಿರುವ ಕೂಡ್ಯಸ್ತಂಭಗಳು ವೇದಿಕೆಯ ಮೇಲಿರುವ ಸ್ತಂಭಗಳನ್ನು ಹೋಲುತ್ತವೆ. ಆದರೆ ಇವುಗಳಲ್ಲಿ ಒಂದೇ ಕೈಯ ಬೋದಿಗೆಯಿದೆ. ವೇದಿಕೆಯ ಮೇಲಿರುವ ಸ್ತಂಭಗಳು ಸುಮಾರು ೭.೫’ ಎತ್ತರ ಮತ್ತು ೧.೯’ ಅಗಲ ಇರುತ್ತವೆ. ಬೋದಿಗೆಯ ಅಗಲ ಸುಮಾರು ೪.೯’ ಮತ್ತು ೧.೪’ ಎತ್ತರವಿರುತ್ತದೆ. ಬೋದಿಗೆಯ ಬಾಹುಗಳ ಅಗಲ ಸುಮಾರು ೧.೭’ ಇದ್ದು ಮಧ್ಯ ಪಟ್ಟಿಕೆ ಸುಮಾರು ೪ ಅಗಲವಿದೆ.
ಮುಖಮಂಟಪ
ಸಭಾ ಮಂಟಪ್ಕೆ ಹೊಂದಿಕೊಂಡು ಮುಂಭಾಗದಲ್ಲಿ ಮುಖಮಂಟಪವನ್ನು ರಚಿಸಿರುತ್ತಾರೆ. ಇದರ ವಿಸ್ತಾರ ಸುಮಾರು ೧೧.೬’x೧೦.೬’. ಈ ಮುಖಮಂಟಪ ನಾಲ್ಕುಸ್ತಂಭಗಳ ಮೇಲೆ ನಿಂತಿದೆ. ಈ ಸ್ತಂಭಗಳು ಸಭಾಮಂಟಪದ ಸ್ತಂಭಗಳಿಗಿಂತ ಭಿನ್ನವಾಗಿವೆ. ಇಲ್ಲಿಯ ಚೌಕ ಸ್ತಂಭಗಳ ಕೆಳಭಾಗದಲ್ಲಿ ಪಟ್ಟಿಕೆಯ ಮೇಲೆ ಕಟೆದಿದ್ದಾರೆ. ಹಾಗೆಯೇ ತ್ರಿಪಟ್ಟಿಕೆಯ ಮೇಲೆಯೂ ಇದೆ. ಈ ಪ್ರತೀಕವು ವೃತ್ತಾಕಾರವಾಗಿದೆ. ಸಭಾಮಂಟಪಕ್ಕೆ ಸನಿಹವಿರುವ ಸ್ತಂಭಗಳ ಬೋದಿಗೆಗಳು ಮೂರು ಬಾಹುಗಳ್ಳದ್ದಾಗಿದೆ. ಉಳಿದ ಸ್ತಂಭಗಳ ಬೋದಿಗೆಗಳಿಗೆ ನಾಲ್ಕು ಬಾಹುಗಳಿವೆ. ಇಂತಹ ವೃತ್ತಾಕಾರದ ಬೋದಿಗೆಗಳನ್ನು ನಾವು ಐಹೊಳೆಯ ಸೂರ್ಯ ಮತ್ತು ತಾರಪ್ಪ ದೇವಾಲಯಗಳ ಮುಖಮಂಟಪದಲ್ಲಿ ಕಾಣುತ್ತೇವೆ. ಪ್ರಸ್ತುತ ಮುಖಮಂಟಪದ ಸ್ತಂಭವೊಂದರ ಮೇಲೆ ಹನ್ನೊಂದನೆಯ ಶತಮಾನದ್ದೆಂದು ಹೇಳಬಹುದಾದ ನಾಗರೀ ಶಾಸನವೊಂದಿದೆ.
ಮುಖಮಂಟಪದ ಕಪೋತವು ತಾರಪ್ಪ ಸೂರ್ಯ ಮತ್ತು ಮಲ್ಲಿಕಾರ್ಜುನ ದೇವಾಲಯ ಗಳಲ್ಲಿರುವಂತೆ ಬಾಹ್ಯ ಗೋಲಾಕಾರವಿದೆ.
ಶಿಖರ
ಗರ್ಭಗೃಹದ ಮೇಲೆ ರೇಖನಾಗರ ಶಿಖರವಿದೆ. ಇದು ಅಲ್ಲಲ್ಲಿ ಭಗ್ನವಾಗಿದೆ. ಅಲ್ಲದೆ ನಿಸರ್ಗದ ಕೈಗೆ ಸಿಕ್ಕು ಧಕ್ಕೆಗೊಂಡಿದೆ. ವಾತಾಪಿಯ ಚಾಲುಕ್ಯರು ದೇವಾಲಯಗಳನ್ನು ನಿರ್ಮಿಸುವಾಗ ರೇಖಾನಾಗರ ಶಿಖರವನ್ನು, ಕೆಲ ವ್ಯತ್ಯಾಸಗಳನ್ನೊಳಗೊಂಡು ಕದಂಬ ನಾಗರ ಶಿಖರವನ್ನು, ಅಲ್ಲದೆ ದ್ರಾವಿಡ ವಿಮಾನವನ್ನು, ಅಳವಡಿಸಿಕೊಂಡಿದ್ದಾರೆ. ಐಹೊಳೆ ಮತ್ತು ಪಟ್ಟದಕಲ್ಲ[5] ಗುಡಿಗಳಲ್ಲಿ ಈ ರೀತಿಯ ಶಿಖರಗಳನ್ನು ಕಾಣಬಹುದು. ಐಹೊಳೆಯಲ್ಲಿ ಇಂತಹ ರೇಖಾನಾಗರ ಶಿಖರಗಳನ್ನು ಹುಚ್ಚಿಮಲ್ಲಿ,[6] ಹುಚ್ಚಪ್ಪಯ್ಯ[7], ದುರ್ಗ[8], ಚಕ್ರಗುಡಿ[9] ಮುಂತಾದ ದೇವಾಲಯಗಳಲ್ಲಿ ಕಾಣಬಹುದು.
ಪ್ರಸ್ತುತ ರೇಖಾನಾಗರ ಶಿಖರದಲ್ಲಿ ಇಕ್ಕೆಲದ ವಕ್ರರೇಖೆಗಳು ಅಷ್ಟೇನೂ ಪ್ರಾಮುಖ್ಯ ವಾಗಿಲ್ಲ. ರಾಹಾಪಗವು ಕೂಡ ಮಹತ್ವದ್ದಾಗಿಲ್ಲ. ಸುಕನಾಸದ ಮುಂಚಾಚುವಿಕೆಗೆ ಹೆಚ್ಚಿನ ಪ್ರಾಧಾನ್ಯತೆ ಇಲ್ಲ. ಸುಕನಾಸ ಸುಮಾರು ೧.೧’ ಮುಂಚಾಚಿದೆ. ಸುಕನಾಸಕ್ಕೆ ಹೊಂದಿಕೊಂಡಂತೆ ಮಹಾನಾಸಿಕವಿದೆ. ಇತರ ಎತ್ತರ ಸುಮಾರು ೬.೬’ ಮತ್ತು ಅಗಲ ಸುಮಾರು ೭.೨’. ಇದರೊಳಗೆ ಕೊರೆದಿದ್ದ ಮೂರ್ತಿ ಕಾಲದ ಕೈಯಲ್ಲಿ ಸಿಕ್ಕು ಗುರುತು ಹಿಡಿಯಲು ಬರದಂತಾಗಿದೆ.
ಸಂಗಮೇಶ್ವರ ದೇವಾಲಯದ ಕಾಲ ಸುಮಾರು ಏಳನೆಯ ಶತಮಾನದ ಅಂತ್ಯ ಭಾಗವಿರಬಹುದು. ಈ ದೇವಾಲಯ ಮೇಲೆ ಹೇಳಿದಂತೆ ಐಹೊಳೆಯ ಕೆಲ ದೇವಾಲಯಗಳಲ್ಲಿ ಕಾಣಬರುವ ಕೆಲ ವೈಶಿಷ್ಟ್ಯಗಳನ್ನು ಪಡೆದಿದೆ. ಇದರ ತಳವಿನ್ಯಾಸ ಅಲ್ಲಿಯ ಸೂರ್ಯ ಹುಚ್ಚಪ್ಪಯ್ಯ ಮತ್ತು ತಾರಪ್ಪನ ಗುಡಿಯ ತಳವಿನ್ಯಾಸವನ್ನು ಹೋಲುತ್ತದೆ. ಆದರೆ ಪ್ರಸ್ತುತ ದೇವಾಲಯ, ಐಹೊಳೆಯ ದೇವಾಲಯಗಳಿಂದ ಒಂದು ರೀತಿಯಲ್ಲಿ ಭಿನ್ನವೇ ಆಗಿದೆ. ಅದು ಏನೆಂದರೆ, ಪ್ರಸ್ತುತ ದೇವಾಲಯದ ಗರ್ಭಗೃಹದ ಅಧಿಷ್ಠಾನದಲ್ಲಿಯಾಗಲೀ ಅಥವಾ ಗೋಡೆಗಳಲ್ಲೆಯಾಗಲೀ ಯಾವುದೇ ಅದಿಷ್ಠಾನದ ಮಧ್ಯಭಾಗದಲ್ಲಿ ಮುಂಚಾಚುವಿಕೆ ಇದ್ದು, ಗೋಡೆಗಳಲ್ಲಿ ಕೋಷ್ಠಕಗಳಿವೆ.[10] ಆದರೆ, ಈ ವಿಶಿಷ್ಟಗಳು ಸಂಗಮೇಶ್ವರನಲ್ಲಿ ಕಾಣಸಿಗುವುದಿಲ್ಲ. ಆದ್ದರಿಂದಾಗಿ ಸಂಗಮೇಶ್ವರ ದೇವಾಲಯಗಳು ನಿರ್ಮಿತವಾಗುವ ಕೆಲ ವರ್ಷಗಳ ಪೂರ್ವದಲ್ಲಿ ಕಟ್ಟಲ್ಪಟ್ಟಿರಬೇಕು ಎಂದೆನಿಸುತ್ತದೆ.
ಲಜ್ಜಾ ಗೌರಿ
ಸಂಗಮೇಶ್ವರ ದೇವಾಲಯದ ಹತ್ತಿರವೇ ದುಗುದವೊಂದಿದೆ. ಇದರ ಹತ್ತಿರದ ಬಂಡೆಗಲ್ಲೊಂದರ ಮೇಲೆ ವಾತಾಪಿಯ ಚಾಲುಕ್ಯರ ಕಾಲದೆಂದು ಹೇಳಬಹುದಾದ, ಲಜ್ಜಾಗೌರಿಯ ಮೂರ್ತಿಯನ್ನು ಕಟೆದಿದ್ದಾರೆ. ಇದನ್ನು ಮುಕ್ತಾವೈಕಕ್ಷಕ, ವೈಜಯಂತಿಮಾಲಾ, ಕಟಿಬಂಧ, ಕಾಲುಗಳಲ್ಲಿ ಕಿರುಗಂಟೆಗಳು, ಮುಂತಾದ ಆಭರಣಗಳಿಂದ ಅಲಂಕರಿಸಿದ್ದಾರೆ. ಲಜ್ಜಾಗೌರಿ ಎರಡೂ ಕೈಗಳನ್ನೂ ಮೇಲಕ್ಕೆತ್ತಿ ಕಾಲುಗಳನ್ನು ಪಕ್ಕಕ್ಕೆ ಮಡಚಿದ್ದಾಳೆ. ಶಿರದ ಬದಲು ಕಮಲವಿದೆ. ಈ ಮೂರ್ತಿ ಸುಮಾರು ೨’ x ೨.೬’ ಪ್ರಮಾಣವಿದೆ.
ಲಜ್ಜಾಗೌರಿಯ ಮೂರ್ತಿಗಳು ವಿರಳ. ಈ ಮೂರ್ತಿಗಳನ್ನು ಪ್ರಾಚೀನಕಾಲದ ಗುಡಿಗಳ ಹತ್ತಿರ ಕಾಣಬಹುದು. ಮಧ್ಯಕಾಲೀನ ದೇವಾಲಯಗಳಲ್ಲಿ ಕಾಣಸಿಗುವುದು ಬಹಳ ವಿರಳ. ಇಂತಹ ಮೂರ್ತಿಗಳು ಐಹೊಳೆಯ ಗಳಗನಾಥ ಗುಡಿ ಹತ್ತಿರ (ಈಗ ಐಹೊಳೆಯ ಮ್ಯೂಸಿಯಂನಲ್ಲಿದೆ) ಮತ್ತು ನಾಗನಾಥಕೊಳದ ದೇವಾಲಯದ ಹತ್ತಿರ (ಈಗ ಬಾದಾಮಿಯ ಮ್ಯೂಸಿಯಂನಲ್ಲಿದೆ) ಇದ್ದುದ್ದನ್ನು ಇಲ್ಲಿ ಸ್ಮರಿಸಬಹುದು.
—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)
ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಎಂ.ಟಿ. ಕಾಂಬಳೆ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ಎ. ಮುರಿಗೆಪ್ಪ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ