ಶಿವನ ಈ ದೇವಾಲಯಕ್ಕೆ ಪ್ರತಿ 12 ವರ್ಷಗಳಿಗೊಮ್ಮೆ ಸಿಡಿಲು ಬಡಿದು, ಶಿವಲಿಂಗ ಛಿದ್ರವಾಗಿ, ಮತ್ತೆ ಬೆಳಗಾಗುವುದರಲ್ಲಿ ಜೋಡಿರುತ್ತದೆ.
ಎಂತಹ ವಿಸ್ಮಯ ನೋಡಿ. ಇಂತಹ ರಹಸ್ಯಗಳನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಇಲ್ಲಿದೆ ಒಂದು ವಿಚಿತ್ರ ಸಂಗತಿ. ನಂಬಲು ಕಷ್ಟ ಆದರೂ ಸತ್ಯ. ಹಿಮಾಚಲ ಪ್ರದೇಶದ ಕುಲೂ ಕಣಿವೆಯಲ್ಲಿ ಹೀಗೊಂದು ಶಿವನ ದೇವಾಲಯವಿದೆ. ಇದರ ಹೆಸರು ಬಿಜಲೀ ಮಹಾದೇವ ಮಂದಿರ. ಪ್ರತೀ 12 ವರ್ಷಗಳಿಗೊಮ್ಮೆ ಮಹಾದೇವನ ಈ ದೇವಾಲಯಕ್ಕೆ ಸಿಡಿಲು ಬಡಿದು, ಅದರ ಹೊಡೆತಕ್ಕೆ ಶಿವಲಿಂಗ ಛಿದ್ರವಾಗುತ್ತೆ. ಆದರೆ ಬೆಳಗಾಗುವಷ್ಟರಲ್ಲಿ ಮತ್ತೆ ಒಂದಾಗಿರುತ್ತದೆ. ಹೀಗೇಕೆ ಆಗುತ್ತದೆಂದು ಕಂಡುಹಿಡಿಯಲು ವಿಜ್ಞಾನಿಗಳಿಗೂ ಸಾಧ್ಯವಾಗುತ್ತಿಲ್ಲ. ಗುಡುಗು ಸಿಡಿಲು ಈ ವಿಕೃತ ಶಬ್ಧಕ್ಕೆ ಸುತ್ತ ಮುತ್ತಲಿನ ಬೆಟ್ಟಗಳು ಕಂಪಿಸುತ್ತವೆ. ಜನ ಹೆದರಿ ನಡುಗುತ್ತಾರೆ.
ಸಿಡಿಲಿನ ಹೊಡೆತಕ್ಕೆ ಶಿವಲಿಂಗ ಛಿದ್ರವಾದರೂ ದೇಗುಲಕ್ಕೆ ಮಾತ್ರ ಯಾವುದೇ ಹಾನಿ ಸಂಭವಿಸುವುದಿಲ್ಲ. ಬೆಟ್ಟದ ಮೇಲಿನ ಕಲ್ಲುಗಳು ಕೆಳಗೆ ಬೀಳುವುದಿಲ್ಲ. ಮಾರನೇ ದಿನ ದೇವಾಲಯಕ್ಕೆ ಅರ್ಚಕ ಹೋಗಿ…ತುಂಡು ತುಂಡಾಗಿದ್ದ ಶಿವಲಿಂಗದ ತುಣುಕುಗಳನ್ನು ಒಂದು ಕಡೆ ಸೇರಿಸಿ ಅಭಿಷೇಕ ಮಾಡುತ್ತಾರೆ. ಒಂದು ದಿನ ಕಳೆಯುವಷ್ಟರಲ್ಲಿ ಶಿವಲಿಂಗಕ್ಕೆ ಯಥಾರೂಪ ಬಂದು ಹಿಂದಿನಂತೆಯೇ ಆಗಿರುತ್ತದೆ. ಅಲ್ಲಿ ಏನೂ ನಡೆದಿಲ್ಲವೇನೋ ಎನ್ನುವಂತೆ ಕಾಣುತ್ತದೆ. ಇದನ್ನು ವಿಚಿತ್ರವೆನ್ನಬೇಕೋ..ಶಿವನ ಲೀಲೆ ಎನ್ನಬೇಕೊ ಎಂದು ಅರ್ಥವಾಗದ ಸ್ಥಿತಿಯಲ್ಲಿ ಜನರಿದ್ದಾರೆ.
ಹೀಗೆ ನಡೆಯಲು ಕಾರಣವೇನೆಂಬುವುದನ್ನು ತಿಳಿಸುವ ಒಂದು ಕತೆ ಇಲ್ಲಿದೆ.
ಹಿಂದೆ ಕುಲೂ ಕಣಿವೆಯಲ್ಲಿ ಬಲಿಷ್ಟನಾದ ರಾಕ್ಷಸನೊಬ್ಬನಿದ್ದನಂತೆ. ಅಲ್ಲಿರುವ ಜನರನ್ನು , ಪಶು ಪಕ್ಷಿಗಳನ್ನು ಅಂತ್ಯಮಾಡಲು ಆತ ಒಂದು ಹಾವಿನ ರೂಪ ತಳೆದನಂತೆ. ಬೀಯಾಸ್ ನದಿ ಪ್ರವಾಹಕ್ಕೆ ಅಡ್ಡಲಾಗಿ ಮಲಗಿ ಸುತ್ತ ಮುತ್ತಲ ಗ್ರಾಮಗಳನ್ನು ಮುಳುಗಿಸಲು ಪ್ರಯತ್ನಿಸುತ್ತಾನಂತೆ. ಇದನ್ನು ನೋಡಿದ ಈಶ್ವರ ತನ್ನ ತ್ರಿಶೂಲದಿಂದ ಆ ರಾಕ್ಷಸನನ್ನು ಸಂಹರಿಸುತ್ತಾನೆ. ಆ ರಾಕ್ಷಸ ಸಾಯುತ್ತಾ ದೊಡ್ಡ ಬೆಟ್ಟವಾಗಿ ರೂಪತಳೆಯುತ್ತಾನೆ.
ಆದರೆ, ಭಕ್ತರಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ತಿಳಿದ ಶಿವ ಭಕ್ತರನ್ನು ರಕ್ಷಿಸಲು ಈ ಬೆಟ್ಟದಲ್ಲಿ ನೆಲಸಿದ್ದಾನೆಂದು ಭಕ್ತರ ನಂಬಿಕೆ. ಆ ರಾಕ್ಷಸನ ದೇಹವನ್ನು ನಾಶಪಡಿಸಲು ಬೆಟ್ಟದ ಮೇಲೆ ಸಿಡಿಲು ಬಡಿಯಬೇಕೆಂದು ಇದ್ರನಿಗೆ ಶಿವ ಹೇಳುತ್ತಾನೆ. ಒಂದು ವೇಳೆ ಸಿಡಿಲು ಬಡಿದರೆ, ಅಲ್ಲಿರುವ ಜನ, ಪಶು ,ಪಕ್ಷಿಗಳು ನಾಶವಾಗುವುದನ್ನು ತಡೆಯಲು ,ಶಿವ ಆ ಸಿಡಿಲು ತನಗೇ ಬಡಿಯುವಂತೆ ಮಾಡಿದ್ದಾನೆಂದು ಪುರಾಣ ಹೇಳುತ್ತದೆ. ಮಹಾದೇವನ ಆಜ್ಞೆಯಂತೆಯೇ 12 ವರ್ಷಗಳಿಗೊಮ್ಮೆ ಸಿಡಿಲು ಬಡಿಯುತ್ತದೆಂದು…ನಂತರ ಆ ಶಿವಲಿಂಗ ಒಂದುಗೂಡುತ್ತದೆಂಬ ಪ್ರತೀತಿಯಿದೆ.
ಮಹಾದೇವನ ದರ್ಶನ ಪಡೆಯಲು ಇಚ್ಛಿಸುವ ಭಕ್ತರಿಗೆ ಈ ದೇಗುಲವನ್ನು ತಲುಪುವುದು ಸುಲಭಸಾಧ್ಯವಲ್ಲ. ಸಮುದ್ರ ಮಟ್ಟದಿಂದ 2,450 ಮೀಟರ್ ಎತ್ತರದ ಬೆಟ್ಟದ ಮೇಲಿರುವ ಈ ದೇವಾಲಯವನ್ನು ತಲುಪಲು ಕಲ್ಲು, ಮುಳ್ಳುಗಳ ಮೇಲೆ ನಡೆದುಕೊಂಡು ಹೋಗಬೇಕು. ಅದೃಷ್ಟವಂತರಿಗೆ ಮಾತ್ರ ಈ ದೇವರ ದರ್ಶನ ಲಭಿಸುತ್ತದಂತೆ. ಪರ್ವತವನ್ನು ಏರುತ್ತಿದ್ದಂತೆ ಆಮ್ಲಜನಕ ಕಡಿಮೆಯಾಗುವುದರಿಂದ ಉಸಿರಾಡಲು ಕಷ್ಟವಾಗುತ್ತದೆ. ವರ್ಷಕ್ಕೊಮ್ಮೆ ಉತ್ಸವವನ್ನು ಏರ್ಪಡಿಸುತ್ತಾರೆ.