sahana

ಸಹನಾ ಚೇತನ್

ನಾಟ್ಯ ಕಲೆಯನ್ನು ಕಲಾವಿದೆಯಾಗಿ, ಕಲಾ ಶಿಕ್ಷಕಿಯಾಗಿ, ಸಾಂಸ್ಕೃತಿಕ ಉತ್ಸವಗಳ ರೂವಾರಿಯಾಗಿ ಹಾಗೂ ಸಾಮಾಜಿಕ ಕಾಳಜಿಯಾಗಿ ರೂಪಿಸಿಕೊಂಡಿರುವವರು ಯುವಪ್ರತಿಭೆ ಶಿವಮೊಗ್ಗದ ಸಹನಾ ಚೇತನ್.

ಸಹನಾ ಚೇತನ್ ಅವರು ತಮ್ಮ ಎಳೆಯ ಹತ್ತನೇ ವಯಸ್ಸಿನಿಂದಲೇ ನೃತ್ಯದ ವ್ಯಾಮೋಹವನ್ನು ಬೆಳೆಸಿಕೊಂಡವರು. ನೃತ್ಯ, ನಾಟಕ ಮತ್ತು ಚಿತ್ರಕಲೆಗಳಲ್ಲಿ ಆಸಕ್ತರಾದ ಸಹನಾ ತಮ್ಮ ಕಾಲೇಜು ವ್ಯಾಸಂಗದ ದಿನಗಳಲ್ಲಿ ಎನ್ ಎಸ್ ಎಸ್ ಅಭ್ಯರ್ಥಿಯಾಗಿ ನವದೆಹಲಿಯ ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಂಡ ಕೀರ್ತಿವಂತರು. ನಾಟ್ಯ ಕಲೆಯಲ್ಲಿ ಶಿಸ್ತುಬದ್ಧ ಸಾಧನೆಯನ್ನು ಮಾಡಿರುವ ಸಹನಾ ಚೇತನ್, ದೇಶದಾದ್ಯಂತ ಪ್ರತಿಷ್ಟಿತ ವೇದಿಕೆಗಳಲ್ಲಿ ನೃತ್ಯ ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ಕಲಾರಸಿಕರ ಮನಸೂರೆಗೊಂಡಿರುವುದಲ್ಲದೆ, ಇನ್ನೂ ಯುವ ವಯಸ್ಸಿನಲ್ಲೇ ನೃತ್ಯ ಗುರುವೆನಿಸಿದ್ದು, ನೂರಾರು ಪ್ರತಿಭಾವಂತ ನೃತ್ಯ ಕಲಾವಿದರನ್ನು ತಯಾರುಮಾಡಿದ್ದಾರೆ. ಅವರ ಗುರು ಮಾರ್ಗದರ್ಶನದ ಲಾಭವನ್ನು ಭಾರತೀಯ ಕಲಾಸಕ್ತಿಯುಳ್ಳ ಹಲವಾರು ವಿದೇಶಿಯರೂ ಪಡೆದುಕೊಂಡಿದ್ದಾರೆ.

‘ಡಿ.ವಿ.ಜಿ ಅವರ ಅಂತಃಪುರ ಗೀತೆಗಳು’, ‘ಕಲಾ ಸುಂದರಿ’, ‘ಆದಿಕಾವ್ಯ ರಾಮಾಯಣದ ಆವಿರ್ಭಾವ’, ‘ನವರಸಗಳಲ್ಲಿ ರಾಮ’, ‘ವಚನಸಾರ’, ವಂದೇ ಮಾತರಂ’, ‘ಕೃಷ್ಣಲೀಲೆ’, ‘ಭರತನಾಟ್ಯದ ಮಾರ್ಗ’, ‘ದಾಕ್ಷಿಣಾತ್ಯ ತಪಸ್ವಿನಿ – ಅಕ್ಕಮಹಾದೇವಿಯ ಜೀವನಗಾಥೆ’, ‘ಚಂದ್ರ-ರೋಹಿಣಿ’, ‘ಯಕ್ಷಮ’, ‘ಶಿವೋಹಂ’, ‘ಋತು ರಂಗ’ ಮುಂತಾದವು ಸಹನಾ ಚೇತನರ ಸೃಜನಶೀಲ ನೃತ್ಯ ಸಂಯೋಜನೆಗಳಲ್ಲಿ ಬೆಳಕು ಕಂಡಿವೆ. ಸಹನಾ ಪ್ರಭು ಅವರು ಪ್ರಸಿದ್ಧ ನೃತ್ಯ ಕಲಾವಿದರಾದ ವೈಜಯಂತಿ ಕಾಶಿ ಅವರೊಂದಿಗೆ ಸಹಾ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಸಹನಾ ಚೇತನ್ ಅವರು 2005ರ ವರ್ಷದಲ್ಲಿ ಶಿವಮೊಗ್ಗದಲ್ಲಿ ಸಹಚೇತನ ನಾಟ್ಯಾಲಯವನ್ನು ಪುಟ್ಟ ರೀತಿಯಲ್ಲಿ ಪ್ರಾರಂಭಿಸಿದರು. ಇಂದು ಈ ಸಂಸ್ಥೆ ನೂರಾರು ವಿದ್ಯಾರ್ಥಿಗಳು, ಸಹಸ್ರಾರು ಕಲಾಭಿಮಾನಿಗಳ ಒಡನಾಟದಲ್ಲಿ ಸುದೃಢವಾಗಿ ಮುನ್ನಡೆಯುತ್ತಿದೆ. “ಸಾಂಪ್ರದಾಯಿಕ ನೃತ್ಯ ಶೈಲಿಗಳನ್ನು ಕಾಪಾಡಿಕೊಂಡು ಬರುವುದರ ಜೊತೆ ಜೊತೆಗೆ, ಅದರ ಉನ್ನತಿ ಮತ್ತು ಏಳ್ಗೆಗಾಗಿ ನಿರಂತರವಾಗಿ ಶ್ರಮಿಸುವುದು ಹಾಗೂ ಶಾಸ್ತ್ರೀಯ ಸಂಪ್ರದಾಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದು ನಮ್ಮ ಉದ್ಧೇಶ. ಅದಕ್ಕಾಗಿ ಪಟ್ಟಣಗಳಲ್ಲಷ್ಟೇ ಅಲ್ಲದೆ ಗ್ರಾಮೀಣ ಮತ್ತು ಹಿಂದುಳಿದ ಮಕ್ಕಳಲ್ಲಿಯೂ ಸಹಾ ನೃತ್ಯ ಕಲೆಯನ್ನು ಬೆಳೆಸುವ ಆಶಯಗಳೊಂದಿಗೆ ನಾವು ನಮ್ಮ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ” ಎನ್ನುತ್ತಾರೆ ಸಹನಾ. ಈ ನಿಟ್ಟಿನಲ್ಲಿ ಅವರು ತಮ್ಮ ಕಲಾಶಾಲೆಗೆ ಬರುವ ಆಸಕ್ತರಿಗಷ್ಟೇ ಅಲ್ಲದೆ, ಹಿಂದುಳಿದ ಬಡಾವಣೆಯ ಮಕ್ಕಳಿಗೂ ಉಚಿತ ನೃತ್ಯ ತರಬೇತಿಗಳನ್ನು ನೀಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಮಕ್ಕಳಿಗೆ ಕಲಾಪ್ರಕಾರಗಳಲ್ಲಿ ತರಬೇತಿ ನೀಡುತ್ತಿದ್ದಾರೆ. ಶಾಲಾ ಪಠ್ಯಕ್ಕೆ ನೃತ್ಯವನ್ನು ಅಳವಡಿಸಿ ಮಕ್ಕಳಿಂದಲೇ ಕಾರ್ಯಕ್ರಮಗಳು ಮೂಡುವಂತೆ ಮಾಡಿ, ಪಠ್ಯ ಮತ್ತು ಕಲೆ ಮಾಧ್ಯಮಗಳೆರಡಕ್ಕೂ ಆಕರ್ಷಣೆ ತರುವ ಕಾರ್ಯ ಮಾಡುತ್ತಿದ್ದಾರೆ, ಚಿಂದಿ ಆಯುವ ಮಕ್ಕಳ ಕೇಂದ್ರವಾದ ‘ಮಾಧವನೆಲೆ’ಯ ಮಕ್ಕಳಿಗೆ ಉಚಿತವಾಗಿ ಕಲಾ ತರಬೇತಿ ಮತ್ತು ಕಲಾವೇದಿಕೆಗಳನ್ನು ಸೃಷ್ಟಿಸುತ್ತಿದ್ದಾರೆ. ಇವೆಲ್ಲಕ್ಕೂ ಮೆರುಗಿಟ್ಟ ಹಾಗೆ ಪ್ರತೀ ವರ್ಷ ಆಗಸ್ಟ್ ಮಾಸದಲ್ಲಿ ದೇಶದ ಪ್ರಸಿದ್ಧ ನಾಟ್ಯ ತಂಡಗಳನ್ನು ಶಿವಮೊಗ್ಗಕ್ಕೆ ಆಹ್ವಾನಿಸಿ ಮೂರ್ನಾಲ್ಕು ದಿನಗಳ ‘ನಾಟ್ಯಾರಾಧನಾ ನೃತ್ಯ ಮಹೋತ್ಸವ’ವನ್ನು ನಡೆಸುವುದರ ಮೂಲಕ ನಾಟ್ಯಕಲೆಯ ಶ್ರೇಷ್ಠತೆಯನ್ನು, ಕಲಾವಿದರನ್ನು ಆರಾಧಿಸುವುದರ ಜೊತೆಗೆ ಶಿವಮೊಗ್ಗದ ಜನತೆಗೆ ದೇಶದ ಎಲ್ಲ ರೀತಿಯ ನೃತ್ಯ ಪ್ರಕಾರಗಳ ರಸದೌತಣವನ್ನು ಉಣಬಡಿಸುತ್ತಿದ್ದಾರೆ.

ಇನ್ನೂ ಯುವ ವಯಸ್ಸಿನಲ್ಲೇ ಕಲೆ, ಸಂಸ್ಕೃತಿ ಮತ್ತು ಸಮಾಜಸೇವೆಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಹನಾ ಚೇತನ್ ಅವರು, ‘ಅಜಿತಶ್ರೀ’ ಎಂಬ ಪುರಸ್ಕಾರವನ್ನು ಪ್ರತಿಷ್ಟಾಪಿಸಿದ್ದು ಯಾವುದೇ ಪ್ರಚಾರಾಪೇಕ್ಷೆಯಿಲ್ಲದೆ ವಿವಿಧ ರೀತಿಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗೌರವಿಸುತ್ತಲೂ ಇದ್ದಾರೆ. ಸಹನಾ ಚೇತನ್ ಅವರನ್ನು ನಾಡಿನ ಅನೇಕ ಸಾಂಸೃತಿಕ ಮತ್ತು ಸೇವಾ ಸಂಸ್ಥೆಗಳು ಗೌರವಿಸಿವೆ.

sallapa

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *