ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ, ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು, ಸಂಯುಕ್ತ ಪದಗಳಾಗುವದನ್ನು ‘ಸಮಾಸ’ ವೆನ್ನಲಾಗುತ್ತದೆ. ಉದಾ: ‘ಕೆಂಪಾದ ತಾವರೆ’ ಎಂಬಲ್ಲಿ, ಕೆಂಪು – ತಾವರೆ ಪದಗಳು ಕೂಡಿ, ‘ಕೆಂದಾವರೆ’ ಎಂಬ ಸಮಸ್ತ ಪದವಾಗುತ್ತದೆ.
ವಿಗ್ರಹವಾಕ್ಯ
ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು ‘ವಿಗ್ರಹ’ ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, ‘ವಿಗ್ರಹವಾಕ್ಯ’ ಎನ್ನಲಾಗುತ್ತದೆ. “ಸಮಸ್ತ ಪದವನ್ನು ಬಿಡಿಸಿ ಬರೆಯುವುದನ್ನು ವಿಗ್ರಹ ವಾಕ್ಯ ಎನ್ನುವರು”
ಸಮಾಸದ ವಿಧಗಳು
- ತತ್ಪುರುಷ ಸಮಾಸ
- ಕರ್ಮಧಾರಯ ಸಮಾಸ
- ದ್ವಿಗು ಸಮಾಸ
- ಅಂಶಿ ಸಮಾಸ
- ದ್ವಂದ್ವ ಸಮಾಸ
- ಬಹುವ್ರೀಹಿ ಸಮಾಸ
- ಕ್ರಿಯಾ ಸಮಾಸ
- ಗಮಕ ಸಮಾಸ