ಸಮಬಂಧ-ಗುಣ

ಸಮ-ಬಂಧಮೆಂಬುದಕ್ಕುಂ ಸಮನಿಸಿ ಕಿ[1]ವಿಗೆಸಱ ಬಾ[2]ರದಾದಂ ಮಟ್ಟಂ |

ಸಮೆದ ಪದದಾ ವಿಭೇದ-ಕ್ರಮಮೆರಡಕ್ಕುಂ ಮೃದು-ಸ್ಫುಟೋಕ್ತಿಯಿನ[3]ದಱಂ ||೪೬||

ಮೃದುತರ-ವರ್ಣಾನುಗಮಾಸ್ಪದ-ವಿರಚನೆಯೊಳಗೆ ತೋರ್ಪುದದು ಮೃದುಬಂಧಂ |

ವಿದಿತ-ಸ್ಫುಟಾಕ್ಷರಾಧಿಕ-ಪದ-ವಿತಚಿತಮಪ್ಪುದಕ್ಕುಮಾ ಸ್ಫುಟಬಂಧಂ ||೫೭||

ದೊರೆಕೊಳೆ ನೋಡಿದನಾಯತ-ಕ[4]ರುಣಾಪಾಂಗದೊಳೆ ಲೋಲ-ಲೋಚನ-ಯುಗೆಯಂ |

ಗುರು-ಜಘನ-ಪಯೋಧರ-ಯುಗ-ಭರ-ವಿಧುರೆಯನಾ ಧರಾಪತಿವಿಧು-ಮುಖೀಯಂ ||೫೮||

೫೬. ಕಿವಿಗೆ ಎಡರುತೊಡರಾಗದಂತೆ ಮಟ್ಟಸವಾಗಿ ವಿರಚಿತವಾಗಿರುವ ಕಾವ್ಯ ಬಂಧವೇ ‘ಸಮ’ ಬಂಧ ಇದರಲ್ಲಿ ಎರಡು ಬಗೆಗಳು-(೧) ಮೃದೂಕ್ತಿ (೨) ಸ್ಫುಟೋಕ್ತಿ. *ಇಲ್ಲಿ – ಸೂಚಿತಪಾಠ- ‘(ಅಂದಂಬಟ್ಟಿಂ)’ ಎಂಬುದು ಪ್ರಕೃತೋಪಯೋಗಿಯಲ್ಲ. ಎಲ್ಲ ಗುಣಯೋಜನೆಯೂ ಅಂದವಾಗಿದ್ದೇ ಇರುತ್ತದೆ; ಅದು ಸಮಬಂಧದ ವೈಶಿಷ್ಟ್ಯವೇನೂ ಅಲ್ಲ. ‘ಮಟ್ಟ’ ಎಂದರೆ ಏರುತಗ್ಗಿಲ್ಲದ ಸಮತಲವೆಂಬರ್ಥ ಕನ್ನಡದಲ್ಲಿ ಪ್ರಸಿದ್ಧವಾಗಿಯೇ ಇದೆ. ಪ್ರಕೃತಾರ್ಥಕ್ಕೆ ಪೋಷಕವೂ ಆಗಿದೆ. ಇದನ್ನೇ ದಂಡಿ ‘ಅವಿಷಮ’ವೆಂದಿರುವನು I-೪೭*.

೫೭. ಮೃದುತರವಾದ ವರ್ಣಯೋಜನೆಯಿಂದ ಕಾವ್ಯರಚನೆಯಲ್ಲಿ ತೋರಿಬರುವುದೇ ‘ಮೃದು’ಬಂಧ. ಹಾಗೆಯೇ ಸ್ಫುಟವಾದ ವರ್ಣಗಳು ಹೆಚ್ಚಾಗಿ ಪ್ರಯುಕ್ತವಾಗಿರುವ ಪದರಚನೆ ‘ಸ್ಫುಟ’ಬಂಧ. *‘ಮೃದುವರ್ಣಗಳೆಂದರೆ ಅಲ್ಪಪ್ರಾಣಾಕ್ಷರಗಳೆಂದೂ, ಸ್ಫುಟವರ್ಣಗಳೆಂದರೆ ಮಹಾಪ್ರಾಣಗಳೆಂದೂ ಸಾಮಾನ್ಯವಾಗಿ ತಿಳಿಯಬಹುದು-ದಂಡಿ ಕೊಟ್ಟಿರುವ ಉದಾಹರಣೆಗಳ ಮೇಲಿಂದ (ಕಾವ್ಯದರ್ಶ, MM-೪೭-೪೮). ಅವನು ಇವೆರಡರ ‘ಮಿಶ್ರ’ಬಂಧವೊಂದನ್ನೂ ಒಪ್ಪಿದ್ದಾನೆ (II-೪೯).

೫೮. ‘ಆಕೆ ಸಮೀಪಕ್ಕೆ ಬರಲು, ಆ ಲೋಲಲೋಚನೆಯನ್ನು ಆಯತವೂ ಕರುಣಾಪೂರ್ಣವೂ ಆದ ಕಡೆಗಣ್ಣುಗಳಿಂದ ನೋಡಿದನು’ *ಇಲ್ಲಿಯ ಮೂಲ ಹಾಗು ಅನುವಾದಗಳಲ್ಲಿ ಉಪಯುಕ್ತವಾಗಿರುವ ವ್ಯಂಜನಗಳೆಲ್ಲ ಅಲ್ಪಪ್ರಾಣಗಳೇ ಆದ್ದರಿಂದ ಇದು ‘ಮೃದುಬಂಧ’ಕ್ಕೆ ಉದಾಹರಣೆ.* ‘ಭಾರವಾದ ಜಘನ ಪಯೋಧರಗಳನ್ನುಳ್ಳ ಆ ವಿಧುರೆಯಾಗಿದ್ದ ವಿಧುಮುಖಿಯನ್ನು ಧರಾಧಿಪನು ನೋಡಿದನು’, *ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಾಪ್ರಾಣಾಕ್ಷರಗಳು ಬಂದಿರುವುದರಿಂದ ಈ ರಚನೆ ‘ಸ್ಫುಟಬಂಧ’ಕ್ಕೆ ಉದಾಹರಣೆ.*

ವಿಷಮ-ಬಂಧ

ಇಂತಿದು ಸಮಬಂಧ-ದ್ವಿತಯಾಂತರಮಾ ವಿಷಮ-ಬಂಧಮಿನ್ನಿಂತಕ್ಕುಂ|

ಚಿಂತೈಕ-ಸುಖಾಕ್ರಾಂತರ್ ಸಂ[5]ತುಪ್ಪೈಕಾಗ್ರ-ಚಿತ್ತರಾದರ್ ತಮ್ಮೊಳ್ ||೫೯||

ಮಾಧುರ್ಯಗುಣ

ಸವಿವೊಡೆ ಮಧುರ-ರಸಂಬೋಲ್ ಕಿವಿಗಿನಿದಾಗಿರ್ಪ ವಚನ-ವಿರಚನೆ ಮಧುರಂ |

ಸವಿಳಾಸಾಳಾಪದಿನವಱ ವಿಶೇಷ-ವಿಶೇಷ್ಯಮಂತು ಮಾರ್ಗ-ದ್ವಯದೊಳ್ ||೬೦||

ದೆಸೆಗಳ್ ವಿಶಾಲಮಾದುವು ಕೆಸಱಂ ಪಿಂಗಿತ್ತು ಧರಣಿ ತಿಳಿದುವು ಕೊಳಗಳ್ |

ಶ್ವಸನ-ಪಥಮಮಳಮಾಯ್ತಿಂದೊಸಗೆಗಳಂ ಬೀಱುವಂತೆ ಶರದಾಗಮದೊಳ್ ||೬೧||

೫೯. ಹೀಗೆ ಈ ಪದ್ಯವು ‘ಸಮಬಂಧ’ದ ಎರಡು ಪ್ರಕಾರಗಳಿಗೂ ಉದಾಹರಣೆಯಾಯಿತು. ಇನ್ನು ‘ವಿಷಮಬಂಧ’ಕ್ಕೆ ಉದಾಹರಣೆ- ‘ಅವರು ತಮ್ಮಲ್ಲಿಯೇ ಚಿಂತೈಕಸುಖಾಕ್ರಾಂತರೂ ಸಂತುಷ್ಟೈಕಾಗ್ರಚಿತ್ತರೂ ಆದರು’. *ಹಿಂದಿನಂತೆ ಇಲ್ಲಿ ಏಕವಿಧವಾಗಿ ಮೃದುವಣಘಗಳ ಇಲ್ಲವೆ ಸ್ಫುಟವರ್ಣಗಳ ವಿಶೇಷಾವೃತ್ತಿ ಕಾಣಿಸದು. ‘ವಿಷಮ’ ಅಥವಾ ಕಿವಿಗೆ ಹಿತವಲ್ಲದ ‘ಷ್ಟೈ’, ‘ಗ್ರ’ ಮುಂತಾದ ವರ್ಣಗಳೂ ಸೇರಿ ಕೊಂಡಿವೆ. ಗ್ರಂಥಕಾರನು ಯಾವ ಬಂಧವನ್ನೂ ‘ದೂಷ್ಯ’ವೆನ್ನದಿರುವುದು ಗಮನಾರ್ಹ. ಕೆಲವು ದಕ್ಷಿಣಮಾರ್ಗದವರಿಗೆ ಪ್ರಿಯವೆನಿಸಬಹುದು; ಕೆಲವು ಉತ್ತರದವರಿಗೆ ಪ್ರಿಯವಾಗಬಹುದು. ಎಲ್ಲ ಬಂಧಗಳೂ ಉಪಾದೇಯವೇ. ‘ಸಮತೆ’ ಒಂದು ಮಾರ್ಗದ ಗುಣವಾದರೆ ಅದರ ವಿಷರ್ಯಯವಾದ ‘ವಿಷಮತೆ’ಯೂ ಇನ್ನೊಂದು ಮಾರ್ಗದ ಗುಣವೇ ಎಂಬುದನ್ನು ಮರೆಯಬಾರದು. ಸಂಸ್ಕೃತ ಲಾಕ್ಷಣಿಕರಲ್ಲಿ ಉದ್ಭಟಾದಿಗಳೂ ‘ಕೋಮಲಾ’, ‘ಪರುಷಾ’ ಎಂಬ ಕಾವ್ಯ “ವೃತ್ತಿ”ಗಳನ್ನು ಈ ವರ್ಣ ಗುಣಗಳ ಮೇಲಿಂದಲೇ ಕಲ್ಪಿಸಿದಂತೆ ತೋರುತ್ತದೆ.*

೬೦. ಸಿಹಿಯಾದ (ಪಾನಕ) ರಸದಂತೆ ಕಿವಿಗೆ ಸವಿಯಲು ಹಿತವಾಗಿರುವ ಪದರಚನೆಯೇ ‘ಮಧುರ’ವೆನಿಸುವುದು. ಆ ಉಕ್ತಿವಿಲಾಸದ ಬೇರೆ ಬೇರೆ ಪರಿಗಳು ದಕ್ಷಿಣ-ಉತ್ತರ ಮಾರ್ಗದ್ವಯದಲ್ಲಿ ಹೀಗೆ ಪ್ರತ್ಯೇಕವಾಗಿ ಕಾಣಬರುತ್ತದೆ.

೬೧. ಶರತ್ಕಾಲದ ಆಗಮನದ ಪ್ರಿಯವಾರ್ತೆಯನ್ನು ಎಲ್ಲೆಡೆಗೂ ತಿಳಿಸುವಂತೆ ದಿಕ್ಕುಗಳು ವಿಶಾಲವಾದುವು; ಕೆಸರೆಲ್ಲ ಹೋಗಿ ನೆಲ ಶುಭ್ರವಾಯಿತು; ಕೊಳಗಳ (ಬಗ್ಗಡದ) ನೀರು ತಿಳಿಯಾಯಿತು; ಆಕಾಶವು ನಿರ್ಮಲವಾಯಿತು.

ಇದು ದಕ್ಷಿಣ-ಮಾರ್ಗ-ವಿಭೇದದ ಮಧುರ-ರಸ-ಪ್ರಯೋಗಮಾಚಾರ್ಯ-ಮನೋ |

ಮುದಿತ-ವಿ[6]ತಾನಂ ವಿಗತಾಸ್ಪದಮುತ್ತರ-ಮಾರ್ಗ-ವರ್ಗ-ಮಧುರಾಳಾಪಂ ||೬೨||

ಧವಳ-ಜಳಧರ-ಕುಳಾಕುಳಮವಿಕಳಮಂಬರತಳಂ ವಿನೀಳಚ್ಛಾಯಂ |

ಕುವಲಯ-ಕೀರ್ತಿಗೆ ಶಾ[7]ರದಮ[8]ವಧಾರಿತ ಮಾಯ್ತದೆಂಬುದುತ್ತರಮಾರ್ಗಂ ||೬೩||

ನಿಬಿಡ’ ಮತ್ತು ‘ಶಿಥಿಲ’ ಬಂಧಗುಣಗಳು

ಮಿಗೆ ನಿಬಿಡ-ಬಂಧಮೆಂಬುದು ತಗುಳ್ವುವು ವರ್ಣಂಗಳಗಲದಿರೆ ಮತ್ತಕ್ಕುಂ

ನೆ[9]ಗೞ್ದಲ್ಪಪಾಣಾಕ್ಷರ-ನಿಗದಿತಮೇತದ್ವಿಪರ್ಯಯೋಕ್ತಂ ಶಿಥಿಲಂ ||೬೪||

೬೨. ಇದು ‘ದಕ್ಷಿಣಮಾರ್ಗ’ವೆಂಬ ಭೇದದ ‘ಮಧುರ’ ರಸವದ್ರಚನೆ. ಇದು ಪೂರ್ವಾಚಾರ್ಯರ ಹೃದಯಕ್ಕೆ ಅತ್ಯಂತ ಮೆಚ್ಚಿನದು. ಮುಂದೆ ಉತ್ತರಮಾರ್ಗದ ಮಧುರೋಕ್ತಿಗೆ ಉದಾಹರಣೆಯಿದೆ-

೬೩. ‘ಧವಳ ಜಳಧರಗಳ ಸಂಕುಳದಿಂದ ಮೇಳಯಿಸಿ, ನೀಳವರ್ಣದ ಅಂಬರ ತಳವು ಭೂವಳಯದ ಕೀರ್ತಿಗೆ ಶರದಾಗಮನವನ್ನು ತಿಳಿಸಿದಂತಾಯಿತು’, ಎನ್ನುವುದು ಉತ್ತರಮಾರ್ಗದ ‘ಮಧುರ’ ಗುಣ. *ದಕ್ಷಿಣ ಮಾರ್ಗದಲ್ಲಿ. ಸಮಾಸ ಪದ್ರಾಸಗಳ ವ್ಯಾಮೋಹವಿಲ್ಲದ ಪ್ರಸನ್ನ ಸುಭಗ ಪದರಚನೆ ‘ದೆಸೆಗಳ ವಿಶಾಲಮಾದುವು’ ಎಂಬ ಪದ್ಯದಲ್ಲಿರುವಂತೆ ಗೋಚರವಾದರೆ, ಇಲ್ಲಿ ‘ಳ’ಕಾರದ ಪ್ರಾಸಾಡಂಬರ, ಸಮಾಸ ಬಾಹುಲ್ಯ, ಕರ್ಮಣಿಪ್ರಯೋಗ ಮುಂತಾಗಿ ಕೃತ್ರಿಮಾಂಶಗಳೇ ಹೆಚ್ಚಾಗಿವೆ. ಈ ದಕ್ಷಿಣೋತ್ತರ ಮಾರ್ಗಗಳಲ್ಲಿರುವ ಮೂಲಭೂತ ವ್ಯತ್ಯಾಸ-ಕವಿ ಮನೋಧರ್ಮವನ್ನು ಕುರಿತದ್ದೆನ್ನಬಹುದು. ದಕ್ಷಿಣಮಾರ್ಗದ ಮನೋಧರ್ಮ ಅಕೃತಕ, ಸಹಜ ವಿಲಾಸಕ್ಕೆ ಒಲಿದರೆ, ಉತ್ತರಮಾರ್ಗದ ಮನೋಧರ್ಮ ಕೃತಕ ಆಡಂಬರ ಪ್ರದರ್ಶನಕ್ಕೆ ಒಲಿಯುತ್ತದೆ. ಈ ಗುಣಗಳು ಅನುಭವೈಕವೇದ್ಯ ಕಾವ್ಯವರ್ಮವಾದ್ದರಿಂದ, ವಿವರವಾಗಿ ಅವುಗಳನ್ನು ಬಿಡಿಸಿ ಬರೆಯಲು ಶಕ್ಯವಿಲ್ಲ; ಲಕ್ಷ್ಯಗಳಲ್ಲಿ ಅವನ್ನು ಮತ್ತೆ ಮತ್ತೆ ಅನುಸಂಧಾನಮಾಡಿ ಅನುಭವಿಸಿಯೇ ಅರಿಯಬೇಕು. ಇಲ್ಲಿ ಲಕ್ಷಣಗಳ ಕೆಲಸ ಕೇವಲ ದಿಕ್ಸೂಚನೆಯಷ್ಟಕ್ಕೆ ಸೀಮಿತವಾಗುತ್ತದೆ.

೬೪.ವರ್ಣಗಳು ಒಂದನ್ನೊಂದು ಅಗಲದೆ (ಸಂಧಿಯಾಗಿ) ಸೇರಿಕೊಂಡಿದ್ದರೆ ಅದು ‘ನಿಬಿಡ’ಬಂಧವೆನಿಸುವುದು. ಇದಕ್ಕೆ ವಿರುದ್ಧವಾಗಿ ಕೇವಲ ಅಲ್ಪಪ್ರಾಣಾಕ್ಷರಗಳು ಬಳಕೆಯಾಗಿದ್ದರೆ ಅದು ‘ಶಿಥಿಲ’ಬಂಧ. *ದಂಡಿಯ ‘ಶ್ಲೇಷ’ವೇ ಇಲ್ಲಿ ‘ನಿಬಿಡ’ವಾಗಿದೆ.*

ಅರವಿಂದೋತ್ಪಲ-ಪು[10]ಷ್ಪೋತ್ಕರಂಗಳೊಳ್ ಪಾಯ್ಗುಮುದ್ಭ್ರಮದ್ ಭ್ರಮರಂಗಳ್ |

ವಿರತ-ಮುದವಾದುವುರು-ಮದ-ವಿರಾಮ-ಮನ-ಕರಿ-ಕಪೋಲ-ಫಲಕದೊಳಾಗಳ್ ||೬೫||

‘ಕಾಂತ’ಗುಣ

ಇದು ನಿಬಿಡ-ಶಿಥಿಲ-ಬಂಧಾಸ್ಪದ-ಮಾರ್ಗ-ದ್ವಿತಯ-ಗದಿತ-ಲಕ್ಷ್ಯ-ವಿಭಾಗಂ |

ಸದಭಿಕಮನೀಯ-ಗುಣಮಪ್ಪುದು ನಿಯತಂ ಕಾಂತಮೆಂಬುದಭಿಗೀತಾರ್ಥಂ ||೬೬||

ದಿನಕರ-ಕ[11]ರ-ನಿಕರಂಗಳ್ ಘನ-ವಿವರ-ಪ್ರಸರಮಾಗಿಯುಂ ತಮ್ಮಂ ಕಂ- |

ಡನಿತಱೊಳೆ ತೆರಳ್ದೆನ್ನಾ ಮನೋಗತ-ಧ್ವಾಂತ-ಬಂಧಮಳಱತ್ತೆಲ್ಲಂ ||೬೭||

೬೫. ಹಾರುವ ದುಂಬಿಗಳು ಕೆಂದಾವರೆ, ಕನ್ನೈದಿಲೆ ಮುಂತಾದ ಹೂಗಳಲ್ಲಿ ಎರಗುತ್ತಿದ್ದವು; *ಮೂರು ಪದ್ಯದಲ್ಲಿ ಅರವಿಂದೋತ್ಪಲ, ಪುಷ್ಪೋತ್ಕರ ಎಂಬಲ್ಲಿ ಸಂದಿಲ್ಲದಂತೆ ಗುಣಸಂಧಿಯೂ, ಮುಂದೆ ಪಾಯ್ಗುಂ+ಉದ್ಭ್ರಮದ್ ಎಂಬಲ್ಲಿ ಸಂಧಿಯಾದಂತೆ ಭ್ರಮದ್+ಭ್ರಮರ ಎಂಬಲ್ಲಿ ವ್ಯಂಜನಸಂಧಿಯೂ ಸ್ಪಷ್ಟವಾಗಿ ಬಂದು ಬಂಧದ ನಿಬಿಡತೆಗೆ ಕಾರಣವಾಗಿದೆ.*; ಆದರೆ ಉರುಮದದಿಂದ ಅಭಿರಾಮವಾಗಿದ್ದ ವನಗಜಗಳ ಕಪೋಲಭಿತ್ತಿಗಳಲ್ಲಿ (ಕುಳಿತು) ಮಾತ್ರ ತೃಪ್ತಿಯನ್ನೈದಿದುವು. *ಇಲ್ಲಿ ಹೆಚ್ಚಾಗಿ ಒಂದು ದೀರ್ಘಸಮಾಸವಿದೆಯೇ ಹೊರತು ಪದಗಳಿಗೆ ಸಂಧಿಯಿಲ್ಲವಾಗಿ ರಚನೆ ‘ಶಿಥಿಲ’ವೆನಿಸುತ್ತದೆ.*

೬೬. ಹೀಗೆ ನಿಬಿಡ, ಶಿಥಿಲ ಎಂಬ ಎರಡು ಗುಣಗಳಿಂದ ಭಿನ್ನವಾಗುವ ಎರಡು ಮಾರ್ಗಗಳಿಗೂ ಲಕ್ಷ್ಯವನ್ನು ಹೇಳಿದ್ದಾಯಿತು. (ಜನರಲ್ಲಿ) ಚಿರಪ್ರಸಿದ್ಧವಾದ ಅರ್ಥವನ್ನು ಹೇಳುವುದರಿಂದ ಸರ್ವಜನಾಕರ್ಷಕವಾಗಿರುವ ಗುಣವೇ (ದಕ್ಷಿಣ ಮಾರ್ಗದಲ್ಲಿ* ರಮಣೀಯವಾದ ‘ಕಾಂತ’ಗುಣ. *ಇದರೊಡನೆ ದಂಡಿ I-೮೫ನ್ನು ಹೋಲಿಸಿ ನೋಡಬಹುದು.*

೬೭. ಸೂರ್ಯನ ಕಿರಣಗಳ ಸಮೂಹವೆಲ್ಲ ದಟ್ಟವಾದ ಮೋಡಗಳ ಆವರಣದಲ್ಲಿ ಸಿಕ್ಕಿಹೋಗಿದ್ದರೂ, ನಿಮ್ಮನ್ನು ಕಾಣುವಷ್ಟರಲ್ಲಿಯೇ ನನ್ನ ಮನಸ್ಸಿನಲ್ಲಿ ನೆಲೆಸಿದ್ದ ಕತ್ತಲೆಯ ಮೊತ್ತವೆಲ್ಲ ತೆರಳಿದೆ. *ಘನ=ಮಫಡ. ವಿವರ=ರಂಧ್ರ. ಅದರ ಪ್ರಸರ=ಪ್ರಸಾರ ಹೆಚ್ಚಾಗಿದ್ದರೂ; ದಟ್ಟವಾದ ಮೋಡ ಕವಿದಿದ್ದರೂ; ಹೊರಗೆ ಸೂರ್ಯಕಿರಣ ಬೀಳದಂತೆ ದಟ್ಟವಾಗಿ ಮೋಡಗಳೇ ಮುಸುಕಿದ್ದರೂ ಎಂದು ತಾತ್ಪರ್ಯ; ಹಾಗಿದ್ದರೂ ಒಳಗಿನ ಕತ್ತಲೆ ಅಥವಾ ಆಜ್ಞಾನಾಂಧಕಾರ ತೊಲಗಿತೆನ್ನುವಾಗ ವಿರೋದಾಲಂಕಾರದ ಛಾಯೆಯಿದೆ. ಹೊರಗಿನ ಸೂರ್ಯಪ್ರಕಾಶಕ್ಕಿಂತ ಆಗಮಿಸಿರುವ ಅತಿಥಿಯ ಜ್ಞಾನಪ್ರಕಾಶ ಹೆಚ್ಚಿನದೆಂಬ ವ್ಯತಿರೇಕಾಲಂಕಾರದ ಧ್ವನಿಯೂ ಇದೆ. ಇದರಿಂದ ಅವನನ್ನು ಸೂರ್ಯನಿಗಿಂತ ಅಧಿಕನೆಂದು ಶ್ಲಾಘಿಸುವಂತಾಗಿದೆ. ಇಷ್ಟಾದರೂ ಅಲಂಕಾರಗಳು ಸಂಭಾವ್ಯತೆಯ ಎಲ್ಲೆಯನ್ನು ಮೀರಿಲ್ಲ.*

ಇಂತಿದು ದಕ್ಷಿಣ-ಮಾಗ್ದ ಕಾಂತಮಸಂಭಾವಿತಾರ್ಥ ಮುದ್ದಾಮೋಕ್ತಂ |

ಸಂತತಮುತ್ತರ-ಮಾರ್ಗಗತಾಂತರಮದನಿಂತು ಕುಱತು ತಱಸಲ್ಗೆ ಬುಧರ್ ||೬೮||

ವಿಲಸಿತ್ವ-ಭವದಭ್ಯಾಗಮ-ಜಲಧಾರೆಗಳೇನುಮುೞಯದಂತು ಮದಂತ- |

ರ್ಮಲಮಂ ಕರ್ಚಿದೊಡಾನೀ ನೆಲಕೆಲ್ಲಂ ಪಾವನೀಯ-ಚರಿತನೆ[12]ನಾದೆಂ ||೬೯||

‘ಸುಕುಮಾರ’ ಗುಣ

ಸುಕುಮಾರ-ತರಾಕ್ಷರ-ಪದ-ನಿಕರ-ವಿಶಿಷ್ಟ-ಪ್ರಯೋಗಗತಮಪ್ಪುದದಾ |

ಸುಕುಮಾರಮೆಂಬುದಕ್ಕುಂ ಪ್ರಕಟಿತಮದಱಾ ಪ್ರಯೋಗಮೀ ತೆಱನಕ್ಕುಂ ||೭೦||

ತೊಳಪೆಳವೆಱೆಯಂ ಮೊರೆವಳಿ-ಕುಳಂಗಳುಂ ಮೆಲ್ಲನೆಸೆವ ಮಳಯಾನಿಳನುಂ |

ಮುಳಿಸಂ ಕೞಲ್ಚಿ ಕಳೆದವು ಕಳಿಕಾಂಕುರ-ಚೂತ-ತತಿಗಳುಂ ಕಾಮಿಗಳಾ ||೭೧||

೬೮. ಇದು ದಕ್ಷಿಣಮಾರ್ಗದಲ್ಲಿನ ‘ಕಾಂತ’ದ ಉದಾಹರಣೆಯಾಯಿತು. ಇನ್ನು ಪಂಡಿತರು ಅತ್ಯಂತ ಅಸಂಭಾವ್ಯವಾದ ಅರ್ಥವನ್ನು ಅತಿಶಯೋಕ್ತಿಯಿಂದ ಹೇಳುವ ಉತ್ತರಮಾರ್ಗದಲ್ಲಿನ ‘ಕಾಂತ’ವನ್ನು ಮುಂದಿನ ಉದಾಹರಣೆಯಲ್ಲಿ ನೋಡಿ ನಿಶ್ಚಯಿಸಿರಿ-

೬೯. ಪೂಜ್ಯನಾದ ನಿನ್ನಾಗಮನವೆಂಬ ಜಲಧಾರೆಗಳು ನನ್ನ ಅಂತರಂಗದ ಮಲವನ್ನೆಲ್ಲ ನಿಶ್ಯೇಷವಾಗಿ ತೊಳೆದಿರುವ ಕಾರಣ, ನಾನೀಗ ಭೂಮಿಗೆಲ್ಲ ಪಾವನ-ಚರಿತ್ರನೇ ಆದೆನು. *ಇಲ್ಲಿ ಆಗಮನವನ್ನು ಜಲಧಾರೆಗಳೆಂದು ಹೇಳುವ ರೂಪಕಾಲಂಕಾರ ಕವಿಸಮಯದಲ್ಲಿ ಪ್ರಸಿದ್ಧವಾಗಿರದೆ ತುಂಬಾ ಅಪ್ರಸಿದ್ಧವಾದುದು. ಅತ್ಯಂತ ಅಸಂಭಾವ್ಯವೂ ಅದುದು. ಆಗಮನ ಒಂದು ಕ್ರಿಯೆ. ಜಲಧಾರೆ ದ್ರವ್ಯ. ಒಂದು ದ್ರವ್ಯಕ್ಕೂ ಒಂದು ಕ್ರಿಯೆಗೂ ಅಭೇದಾರೋಪ ಯುಕ್ತಿಯುಕ್ತವಾಗದು.*

೭೦. ಸುಕುಮಾರತರ ಅಥವಾ ತುಂಬಾ ಕೋಮಲವಾದ ಪದಪುಂಜಗಳಿಂದ ಕೂಡಿದ ರಚನೆಯಲ್ಲಿ ಪ್ರಕಟಗೊಳ್ಳುವ ಗುಣವೇ ‘ಸುಕುಮಾರ’ ಎಂಬುದು. ಅದರ ಉದಾಹರಣೆ (ದಕ್ಷಿಣಮಾರ್ಗದಲ್ಲಿ) ಹೀಗೆ ಇರುತ್ತದೆ-

೭೧. ‘ತೊಳಗುವ ಬಾಲಚಂದ್ರನೂ ಮೊರೆವ ದುಂಬಿವಿಂಡೂ ಮೆಲ್ಲನೆ ಬೀಸುವ ಮಲಯಮಾರುತನೂ ಮಾವಿನ ಹೂಮೊಗ್ಗೆಗಳೂ ಕಾಮಿಗಳ ಪ್ರಣಯ ಕೋಪವನ್ನು ಇಲ್ಲವಾಗಿಸಿದುವು.’ *ಇಲ್ಲಿ ಪದಗಳೆಲ್ಲ ತುಂಬಾ ಸುಕುಮಾರವಾಗಿರುವುದು ಸ್ಪಷ್ಟ.*

ಇದಱ ವಿಪರ್ಯಯ-ವಿವಿಧಾಸ್ಪದಾಕ್ಷರ-ವಿಕಲ್ಪಮಿಂತಿದುತ್ತರ-ಮಾರ್ಗಂ |

ತ್ರಿದಶಾಧೀಶ್ವರ*ಭೂತ್ಯತ್ಯುದಾರ-ವಿವಿಧಾರ್ಥ-ವಿಭವನೀ ಭೂಪೇಂದ್ರಂ ||೭೨||

‘ಸಮಾಹಿತ’ (=ಸಮಾಧಿ) ಗುಣ

ಒಂದಱ ಮಾತುಗಳಂ ಪೆಱತೊಂದಱೊಳಱದಿಟ್ಟು ಕೂ[13]ಡೆ ಪೇೞ್ದೊಡದಕ್ಕುಂ |

ಸುಂದರತರಂ ಸಮಾಹಿತಮೆಂದುಂ ಮತ್ತದಱ ಲಕ್ಷ್ಯಮೀ ತೆಱನಕ್ಕುಂ ||೭೩||

ವಿನಿಮೀಳಿತ-ಕುಮುದ-ವನಂ ಜನಿತೋನ್ನೀಲಾರವಿಂದ-ವನ-ಲ*ಕ್ಷ್ಮೀಕಂ |

ದಿನಕರನುದಯಂಗೆಯ್ದಂ ವಿನಿಹತ-ತಿಮಿರಂ ವಿಶಿಷ್ಟ-ಸಂಧ್ಯಾಶ್ಲೇಷಂ ||೭೪||

ವಿನಿಮೀಳಾದಿಗಳಿವು ಲೋಚನಾದಿ-ಧರ್ಮಂಗಳಿವನೆ ಕುಮುದಾದಿಗಳೊಳ್ |

ನೆನೆದಿಂತು ಪೇೞ್ದೊಡಕ್ಕುಂ ವಿನಿಶ್ಚಿತ-ಕ್ರಮ-ಸಮಾಹಿತಾಲಂಕಾರಂ ||೭೫||

೭೫. ಇದರ ವಿಪರ್ಯಯವಾದ ನಾನಾಕ್ಷರಗಳ ಆರೋಪಿಸಿಕೊಂಡು ಸಮುಚ್ಚಯ ಬರುವುದೇ ಉತ್ತರಮಾರ್ಗದ ‘ಸುಕುಮಾರ’ ಗುಣ. *ಅದಕ್ಕೆ ಉದಾಹರಣೆ-* ‘ಈ ಭೂಪೇಂದ್ರನು ತ್ರಿದಶಾಧೀಶ್ವರನಾದ ಇಂದ್ರನ ಐಶ್ವರ್ಯ ಮತ್ತು ವಿವಿಧ ವಿಭವವನ್ನು ಪಡೆದಿರುವನು.’ *ಇಲ್ಲಿ ವರ್ಣಿತಾಕ್ಷರಗಳಂತೆ ವರ್ಣಿತಾರ್ಥದಲ್ಲೂ ಹೆಚ್ಚಿನ ಅಡಂಬರ ಸ್ಪಷ್ಟವಾಗಿದೆ.*

೭೩. ಒಂದರ ಧರ್ಮವನರ‍್ನು ಇನ್ನೊಂದರಲ್ಲಿ ಅರೋಪಿಸಿಕೊಂಡು ಹೇಳಿದರೆ ರಮಣೀಯವಾದ ‘ಸಮಾಹಿತ’ (=‘ಸಮಾಧಿ’) ಎಂಬ ಗುಣವಾಗುವುದು. ಅದರ ಉದಾಹರಣೆ ಈ ತೆರನಾಗಿರುತ್ತದೆ. *ಹೋಲಿಸಿ-ದಂಡಿ, M-೯೨*.

೭೪. ಕುಮುದವನಶ್ರೀಯ ಕಣ್ಮುಚ್ಚಿಸಿದವನಾಗಿ, ಕಮಲವನಲಕ್ಷ್ಮಿಯ ಕಣ್ಣರಳಿಸಿದವನಾಗಿ, ಕತ್ತಲೆಯನ್ನು ಕೊಂದು ಕಡಹಿದವನಾಗಿ, ಸಂಧ್ಯಾದೇವಿಯ ಆಲಿಂಗನ ಗೈದವನಾಗಿ, ದಿನಕರನು ಉದಯಗೊಂಡನು.

೭೫.ಕಣ್ಮುಚ್ಚುವುದು (ಅರಳಿಸುವುದು) ಮುಂತಾದವು ನೇರವಾಗಿ ನೇತ್ರಾದಿಗಳ ಧರ್ಮಗಳು. ಅವನ್ನು ಕುಮುದಾದಿಗಳಲ್ಲಿ ಆರೋಪಿಸಿ ಹೀಗೆ ಹೇಳಿದಾಗ ನಿಶ್ಚಿತವಾಗಿ ‘ಸಮಾಹಿತ’ ಗುಣ(=ಅಲಂಕಾರ)ವೆನಿಸುವುದು. *ಇಲ್ಲಿ ಬರುವ ‘ಅಲಂಕಾರ’ ಶಬ್ದಕ್ಕೆ ಪ್ರಸಂಗವಶದಿಂದ ಗುಣವೆಂದೇ ತಾತ್ಪುರ್ಯ ಹೇಳಬೇಕು. ಇಲ್ಲಿಯ ಅಲಂಕಾರ ನಿಜವಾಗಿ “ಸಮಾಸೋಕ್ತಿ”ಯಾಗುತ್ತದೆ.*

ವಿನಿಹತ-ಸಮಸ್ತ-ರಿಪು-ಕುಳನನಿಮಿಷ-ಲೋಚನದೆ ನೋಡಿ ನೀಡುಂ ಪ್ರಿಯೆಯಂ |

ವಿನಿಮೀಳಿತ-ಲೋಚನೆಯಂ ಜನಪತಿ ನಿಜ-ಬಾಹು-ಯುಗದಿನಾಶ್ಲೇಸಿಸಿದಂ ||೭೬||

‘ಪ್ರಸನ್ನ’(=ಪ್ರಸಾದ) ಗುಣ

ಈ ಕುಱಪುಗಳಿಂದಱವುದನೇಕ-ಸಮಾಹಿತ-ಪದ-ಪ್ರಯೋಗಾಂತರಮಂ |

ಲೋಕ-ಪ್ರತೀತ-ಸುಭಗ-ವಿವೇಕಾಳಾಪಂ ಪ್ರಸನ್ನಮದುಮಿಂತಕ್ಕುಂ ||೭೭||

ಶರದಮಲಾಂಬರದೊಳ್ ಹಿಮಕರನೆಸೆದತ್ತೆಂಬುದಾ ಪ್ರಸನ್ನಮಿದಕ್ಕುಂ |

ಕರಮೊಪ್ಪಿತ್ತುಷ್ಣೇತರ-ಕಿರಣಂ ವರ್ಷಾಂತ-ಸಮಯ-ಜಳಧರ-ಪಥದೊಳ್ ||೭೮||

೭೬. ಸಮಸ್ತ ವೈರಿಸಮೂಹವನ್ನು ಕೊಂದವನಾದ ರಾಜನು ಕಣ್ಮುಚ್ಚಿದ್ದ ಪ್ರಿಯೆಯನ್ನು ಎವೆಯಿಕ್ಕದ ಕಣ್ಣುಗಳಿಂದ ನೋಡಿ ತನ್ನ ತೋಳ್ಗಳಿಂದ ಆಲಿಂಗಿಸಿದನು. *ಇದು ಒಂದರಲ್ಲಿ ಇನ್ನೊಂದರ ಧರ್ಮವನ್ನು ಅಧ್ಯಾರೋಪಮಾಡದೆ ಇರುವ, ಕೇವಲ ವಾಚ್ಯಶಬ್ದಗಳಿರುವ ಪ್ರತ್ಯುದಾಹರಣೆಯೆಂದು ತಿಳಿಯಬೇಕು. ಹಿಂದಿನ ಉದಾಹರಣೆಯಲ್ಲಿ (ಪದ್ಯ ೭೪) ಪುಷ್ಪಕ್ಕೆ ನೇತ್ರಧರ್ಮವನ್ನು ಅಧ್ಯಾರೋಪಮಾಡಿದ್ದರೆ, ಇಲ್ಲಿ ನೇತ್ರಕ್ಕೆ ನೇತ್ರಧರ್ಮವನ್ನು ಮಾತ್ರ ನೇರವಾಗಿ ಹೇಳಲಾಗಿದೆ. ಇದು ಕೂಡ ಉತ್ತರಮಾರ್ಗದಲ್ಲಿ ‘ಸಮಾಹಿತ’ವೆಂದು ಪರಿಗಣಿತವಾಗುತ್ತಿದ್ದಿತೆಂಬುದು ಗ್ರಂಥಕಾರನ ಆಶಯವೋ, ಇಲ್ಲವೆ ಅನ್ಯಾಧ್ಯಾರೋಪವಿಲ್ಲದ ಕಾರಣ ಇದು ‘ಸಮಾಹಿತ’ವಿಲ್ಲದ್ದಕ್ಕೆ ಕೊಟ್ಟಿರುವ ಪ್ರತ್ಯುದಾಹರಣೆಯೋ ನಿರ್ಣಯಿಸುವುದು ಕಷ್ಟ. ಇಲ್ಲಿಯ ಪೂರ್ವಾಪರ ಸಂದರ್ಭವನ್ನು ನೋಡಿದರೆ ಇದೂ ಒಂದುಬಗೆಯ ಸಮಾಹಿತ-ಅದರ ಯುಕ್ತಧರ್ಮವನ್ನು ಅದರಲ್ಲೇ ಹೇಳುವುದು-ಎಂದೆನಿಸುತ್ತದೆ. ಇದನ್ನೊಪ್ಪಿದರೆ ದಕ್ಷಿಣ ಮಾರ್ಗದಲ್ಲಿ ವ್ಯಂಗ್ಯಾರ್ಥಕ್ಕೆ ಪ್ರಾಶಸ್ತ್ಯವಿದ್ದರೆ, ಉತ್ತರಮಾರ್ಗದಲ್ಲಿ ವಾಚ್ಯಾರ್ಥಕ್ಕೇ ಪ್ರಾಶಸ್ತ್ಯವೆಂಬ ತಾತ್ಪರ್ಯವನ್ನು ಗ್ರಹಿಸಬಹುದು.*

೭೭. ಈ ಲಕ್ಷಣಗಳ ಮೇಲಿಂದ ನಾನಾಬಗೆಯ ‘ಸಮಾಹಿತ’ ಪದ-ಪ್ರಯೋಗಗಳನ್ನು ಅರಿಯಬಹುದು. ಜನಕ್ಕೆಲ್ಲ ಸುಗಮವಾಗಿ ತಿಳಿಯಲು ಬರುವತಂಹ ಸೂಕ್ತಿಯೇ ‘ಪ್ರಸನ್ನ’. ಅದರ ಉದಾಹರಣೆ ಹೀಗೆ ಇರುತ್ತದೆ-

೭೮. ‘ಶರದೃತುವಿನ ವಿಮಲಾಕಾಶದಲ್ಲಿ ಚಂದ್ರ(ಬಿಂಬ) ಬೆಳಗುತ್ತಿತ್ತು’ ಇದು (ದಕ್ಷಿಣಮಾರ್ಗದ) ಪ್ರಸನ್ನಗುಣ. ಇದನ್ನೇ ‘ವರ್ಷಾಂತಸಮಯದ (=ಶರತ್ಕಾಲದ) ಮೇಘಮಾರ್ಗದಲ್ಲಿ (=ಆಕಾಶದಲ್ಲಿ) ಉಷ್ಣೇತರಕಿರಣ (=ಚಂದ್ರ) ಬಿಂಬ ಬೆಳಗುತ್ತಿತ್ತು’ ಎಂದರೆ ಉತ್ತರಮಾರ್ಗದ ಪ್ರಸನ್ನಗುಣ. *ಇಲ್ಲಿ ಸರಲವಾದ ಶಬ್ದಗಳಿಗೆ ಪರ್ಯಾಯಗಳನ್ನು ಪ್ರೌಢಿಮೆಯಿಂದ ಕಲ್ಪಿಸಿರುವುದನ್ನು ಕಾಣಬಹುದು*.

‘ಉದಾರ’ಗುಣ

ಮಿಗೆ ವಸ್ತು-ಗತ-ಸ್ಥಿತಿಯಂ ಬಗೆದಗ್ಗಳಮಾ[14]ಗಿ ಪೇೞ್ದೊಡಕ್ಕುಮುದಾರಂ |

ಬಗೆವೊಡೆ ಕಾವ್ಯದ ಪದವಿಯ ನೆಗೞ್ತೆಗದು ಮೂಲಮದಱ ಪಾಂಗಿಂತಕ್ಕುಂ ||೭೯||

ಪುರುಷೋತ್ತಮರಾರ್ ನಿ[15]ನ್ನನ್ನರುದಾರರರಾತಿ-ಸಮಿತಿಯಂ ಕೊಂದಿರ್ದುಂ |

ಸುರ-ಸುಂದರಿ**ಸುರ-ಸುದತೀ?* ಲೀಲಾಲಸ-ಪರಿರಂಭಾರಂಭ-ಸುರತ-ಸುಖದೊಳ್

ನಿ[16]ಱಪರ್ ||೮೦||

೭೯. (ವರ್ಣಿತ) ವಸ್ತುವಿನ ಸ್ವಭಾವಸಿದ್ಧ ಸ್ಥಿತಿಯನ್ನು ತುಂಬಾ ಅತಿಶಯವಾಗಿ ಉತ್ಪ್ರೇಕ್ಷಿಸಿ ಹೇಳಿದರೆ ‘ಉದಾರ’ ಗುಣವಾಗುತ್ತದೆ. ವಿಚಾರ ಮಾಡಿದ್ದಾದರೆ, ಕಾವ್ಯಮಾರ್ಗದ ಮೇಲ್ಮೆಗೆ ಅದು ಮೂಲಾಧಾರ. ಅದರ ಪರಿಯಿದು-*ಹೋಲಿಸಿ-ದಂಡಿ, I-೭೬.*

೮೦.ಶತ್ರುಸಮುದಾಯವನ್ನೆಲ್ಲ ಕೊಂದಿದ್ದರೂ ಅವರನ್ನೆಲ್ಲ ಸುರಸುಂದರಿಯರ ಲೀಲಾವಿಲಾಸದಲ್ಲಿ ಹಾಗು ಆಲಿಂಗನ ಸುರತಾದಿಸುಖಭೋಗದಲ್ಲಿ ನೆಲೆಗೊಳಿಸುವ ನಿನ್ನಂತಹ ಉದಾರರಾದ ಪುರುಷೋತ್ತಮರು (ಬೇರೆ) ಯಾರಿದ್ದಾರೆ? *ವ್ಯಾಕರಣ ಪ್ರಕಾರ ‘ಸುರಸುಂದರಿ’ ಎಂಬಲ್ಲಿ ಅಂತ್ಯಾಕ್ಷರದ ಹ್ರಸ್ವ ತಪ್ಪಾಗುತ್ತದೆ; ‘ಸುಂದರೀ’ ಎಂದಿರಬೇಕು. ಆದರೆ ಛಂದಶ್ಯಾಸ್ತ್ರರೀತ್ಯಾ ಅದು ದೀರ್ಘವಾಗಲವಕಾಶವಿಲ್ಲ, ಹ್ರಸ್ವವೇ ಇರಬೇಕು. ಈ ಉಭಯಸಂಕಟದ ಫಲವಾಗಿ ಹಸ್ತಪ್ರತಿಗಳಲ್ಲಿ ಉಪಲಬ್ಧಪಾಠ ಅಪಪಾಠವೆಂದೇ ನಿರ್ಣಯಿಸಬಹುದು. ‘ಸುರಸುದತೀ’ ಎಂದೋ ‘ಸುರತರುಣೀ’ ಎಂದೋ ‘ಸುರವನಿತಾ’ ಎಂದೋ ವ್ಯಾಕರಣ ಛಂದಸ್ಸುಗಳೆರಡಕ್ಕೂ ಅನುಗುಣವಾಗುವ ಪಾಠಾಂತರವನ್ನು ಕಲ್ಪಿಸಿಕೊಳ್ಳಬೇಕಾಗಿದೆ. ಕಲ್ಪನಾಚಮತ್ಕಾರದ ಲಕ್ಷ್ಯಗಳೆಂದು ಕೊಟ್ಟಿರುವ ಇಂತಹ ರಾಜಸುತ್ತಿ ಪದ್ಯಗಳೆಲ್ಲ ಸಾಮಾನ್ಯ ರೀತಿಯವೇ ಹೊರತು ಅಲ್ಲೆಲ್ಲ ನೃಪತುಂಗನ ವೈಯಕ್ತಿಕ ಪ್ರಭಾವಾತಿಶಯವನ್ನೇ ಗುರುತಿಸಬೇಕಾದ ಅಗತ್ಯವೇನೂ ಇಲ್ಲ.*

ಇದು ದಾಕ್ಷಿಣಾತ್ಯ-ಕವಿ-ಮಾರ್ಗದುದಾರಮುದೀಚ್ಯರು*ರು-ವಿಶೇಷಣ-ಯುತಮ- |

ಪ್ಪುದನೊ[17]ಲ್ವರಿಂತು ಹೇಮಾಂಗದ-ಲೀ[18]ಲಾಂಬುಜ-ವಿಚಿತ್ರ-ಚಿ[19]ತ್ರಾದಿಕಮಂ ||೮೧||


[1] ಕಿವಿಗೆದಱ ‘ಮ’. [2] ಬಾರದಂದಂ ಬಟ್ಟಂ- ‘ಸೀ’ ಸೂಚಿತಪಾಠ; ಬಾರದಾನಂ ಮುಟ್ಟಂ ‘ಅ, ಕ’; ಬಾರದಾನಂ ಮುಟ್ಟುಂ-ಮುಳಿಯ ತಿಮ್ಮಪ್ಪಯ್ಯ ಸೂಚಿತಪಾಠ. [3] ನದರಾ ‘ಬ’. [4] ತರಳಾ ‘ಬ’. [5] ಸಂತುಷ್ಟೈಕಾಂತ ‘ಬ’. [6] ವಿಧಾನಂ ‘ಬ’. [7] ಶ್ಯಾರದಂ ‘ಬ’. [8] ವಧೀರಿತ ‘ಪಾ’. [9] ನೆಗೞ್ವ ‘ಮ’. [10] ಪುಷ್ಪಾಕರಂ ‘ಬ’. [11] ಖರ‘ಬ’. [12] ಯಾದಂ ‘ಆ’ ಅದೆಂ ‘ಪಾ’. [13] ಕೂಡಿ ‘ಕ’.

* ಲಕ್ಷ್ಮೀಶಂ ‘ಪಾ,ಮ,ಶೀ’. ಇದು ಸೂರ್ಯನಿಗೆ ‘ಈಶಂ’ ಎಂದು ನೇರವಾಗಿ ಅನ್ವಯಿಸಲಾರದು. ಪ್ರಸ್ತುತ ಅಲಂಕಾರ ಸಿದ್ಧಿಯಾಗಬೇಕಿದ್ದರೆ, ಅದು ‘ವನಲಕ್ಷ್ಮಿಯುಳ್ಳವನು’ ಎಂದೇ ಅನ್ವಯಿಸುಬೇಕೆಂದು ಇಲ್ಲಿ ಪರಿಷ್ಕೃತ.

[14] ಮಾಗೆ ‘ಪಾ’. [15] ನಿನ್ನನ್ನರುದಾರಾರಾತಿ ‘ಪಾ’, ‘ಮ’; ಉದಾರ, ಇದು ಶ್ರುತುಗಳಿಗೆ ಅನ್ವಯಿಸುವುದರಕ್ಕಿಂತಲೂ ಹೆಚ್ಚಾಗಿ ರಾಜನಿಗೆ ಅನ್ವಯಿಸಬೇಕಾದ ವಿಶೇಷಣವೆಂದು ಮುಳಿಯ ತಿಮ್ಮಪ್ಪಯ್ಯನವರು ಪರಿಷ್ಕರಿಸಿರುವ ಪಾಠ; ‘ಸೀ’ ಅವರಿಂದಲೂ ಸ್ವೀಕೃತ. ನೋಡಿ ‘ಕವಿರಾಜಮಾರ್ಗವಿವೇಕ’ ಪು. ೧೮೮.

* ವ್ಯಾಕರಣರೀತ್ಯಾ ಇದು ದೀರ್ಘವಾಗಬೇಕಾಗಿತ್ತು.ಹೇಗೂ ಇದು ಸ್ತ್ರೀ ಸಮಬೋಧನೆಯೆಂಬಂತಿಲ್ಲ.

[16] ನಿಲಿಪರ್ ‘ಕ’.

* ದುರು- ‘ಪಾ, ಚ, ಸೀ’.ಇಲ್ಲಿಯ ಪರಿಷ್ಕೃತ ಪಾಠ ವಾಕ್ಯಾನ್ವಯಕ್ಕೆ ಹೆಚ್ಚು ಸಹಕಾರಿಯಾಗಿದೆ.

[17] ನೊಲ್ದರಿಂತು ‘ಕ’. [18] ನೀಲಾಂಬುಜ ‘ಮ’. [19] ಚಿತ್ರಾಧಿಕಮಂ ‘ಪಾ, ಮ, ಸೀ’. ಅರ್ಥವೈಶದ್ಯಕ್ಕಾಗಿ ಇಲ್ಲಿ ಪಾಠ ಪರಿಸ್ಕೃತ.

ಆಧಾರ: ಕಣಜ

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. …

Leave a Reply

Your email address will not be published.