Satyakama

ಸತ್ಯಕಾಮ

ಸತ್ಯಕಾಮ (೦೨.೦೩.೧೯೨೦ – ೨೦.೧೦.೧೯೯೮): ಸತ್ಯಕಾಮರ ನಿಜನಾಮ ಅನಂತಕೃಷ್ಣ ಶಹಪೂರ. ಇವರು ಹುಟ್ಟಿದ್ದು ಗಲಗಲಿಯಲ್ಲಿ. ತಂದೆ ಕೃಷ್ಣಾ ಹಾಗೂ ತಾಯಿ ರುಕ್ಮಿಣಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ಗಲಗಲಿಯಲ್ಲೇ ಶಿಕ್ಷಣ ಪಡೆದದ್ದು. ಹೈಸ್ಕೂಲಿಗೆ ಸೇರಿದ್ದು ಬಾಗಲಕೋಟೆ. ಆದರೆ ವಿದ್ಯೆಗೆ ಶರಣುಹೊಡೆದು ಊರಿಗೆ ವಾಪಸ್ಸು ಬಂದರು. ಎಳೆವೆಯಿಂದಲೇ ಬೆಳೆದು ಬಂದದ್ದು ನಾಟಕದ ಕಡೆ ಒಲವು.

ಕಟ್ಟಿದ್ದು “ಜೀವನ ನಾಟ್ಯ ವಿಲಾಸಿ ಮಂಡಲ.” ಹಲವಾರು ನಾಟಕಗಳ ಪ್ರಯೋಗ. ದೇಶದಲ್ಲೆಲ್ಲಾ ವ್ಯಾಪಿಸಿದ್ದ ಸ್ವಾತಂತ್ರ್ಯದ ಕಾವಿಗೆ ಬಲಿಯಾಗಿ, ಚಳವಳಿಗೆ ಧುಮುಕಿದರು. ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇವರ ನೇತಾರರು ಕಾಖಂಡಕಿ ರಾಮಾಚಾರ‍್ಯರು, ತ್ರ್ಯಂಬಕ ದೇಶಪಾಂಡೆ, ಬುರ್ಲಿ ಬಿಂದುಮಾಧವರಾಯರು. ನೇತಾರರ ಮಾತಿನ ಮೋಡಿಗೆ ಒಳಗಾದರು. ಚಳವಳಿಗಾರರ ಬೆನ್ನು ಹತ್ತಿ ಹೋಗಿ ಆಪಾದನೆಗೊಳಗಾಗಿ ತಲೆಮರೆಸಿಕೊಂಡು ಓಡಾಟ ಕೆಲಕಾಲ. ಆದರೂ ಬಂಧನಕ್ಕೊಳಗಾಗಿ ಅನುಭವಿಸಿದ್ದು ಜೈಲುಶಿಕ್ಷೆ.

ಸ್ಕೂಲು ಕಾಲೇಜಿನಿಂದ ಕಲಿಯುವುದಕ್ಕಿಂತ ಜೀವನ ರಂಗದಲ್ಲಿ ಕಲಿತದ್ದೇ ಜಾಸ್ತಿ. ಸ್ವಪ್ರಯತ್ನದಿಂದ ಗಳಿಸಿದ್ದು ಅಪಾರ ಜ್ಞಾನ ಸಂಪತ್ತು. ಉಡುಪಿಯಲ್ಲಿ ಅನಂತ ಪದ್ಮನಾಭ ಎಂಬ ಹೆಸರಿನಿಂದ ಕಲಿತದ್ದು ಸಂಸ್ಕೃತ. ಒಂದೆಡೆ ನಿಲ್ಲದ, ಕೂಡದ ಮನಸ್ಸು, ವಯಸ್ಸು. ದೇಶ ಸಂಚಾರದ ಚಕ್ರವನ್ನು ಕಾಲಿಗೆ ಕಟ್ಟಿಕೊಂಡು ಸುತ್ತಿದ್ದು ಇಡೀ ಭಾರತ.

ನಾಟಕ, ಕವಿತೆ, ಕಾದಂಬರಿಗಳ ರಚನೆಯಲ್ಲಿ ಎಳೆವೆಯಿಂದಲೇ ತೊಡಗಿಸಿಕೊಂಡಿದ್ದರು. ವೀಣೆ, ಮಾತೃಮಂದಿರ, ಮಾತೃಲಹರಿ, ಗಂಗಾಲಹರಿ ನಾಲ್ಕು ಕವನ ಸಂಕಲನಗಳು. ಉತ್ತರಾಯಣ, ಬತ್ತಿದ ಕಡಲು, ಆಹುತಿ, ರಾಜಕ್ರೀಡೆ, ರಾಜಬಲಿ, ತಣ್ಣಗಿನ ಬೆಂಕಿ, ಬೆಂಕಿಯ ಮಗಳು, ಮುಂತಾದ ಇಪ್ಪತ್ತಕ್ಕಿಂತ ಹೆಚ್ಚು ಕಾದಂಬರಿಗಳು. ಶೃಂಗಾರ ತೀರ್ಥ, ನಾಯಿಮೂಗು, ಒಡೆದ ಕನ್ನಡಿ, ಮನ್ವಂತರ, ಹಳೆಯ ರಾಜಕೀಯ ಮೊದಲಾದ ಕಥಾಸಂಕಲನಗಳು. ತ್ರಿಸುಪರ್ಣ, ತಂತ್ರಯೋನಿ, ಋಷಿ ಪಂಚಮಿ, ಚಿಂತನಪರ, ಪಂಚಮಗಳ ನಡುವೆ, ಅರ್ಧನಾರಿ, ಲಾವಣ್ಯ ಇನ್ನಿತರ ಕೃತಿಗಳು.

‘ಶ್ರೀ’, ’ಕಲ್ಯಾಣ’ ಸತ್ಯಕಾಮರ ಸ್ವಂತ ಪತ್ರಿಕೆಗಳು. ಕಲ್ಕಿ, ಸಾಧನಾ, ಸಂಕ್ರಾಂತಿ, ಪಂಚಾಮೃತ, ಸಂಯುಕ್ತ ಕರ್ನಾಟಕದಲ್ಲೂ ಕೆಲ ಕಾಲ ದುಡಿದರು. ಜಮಖಂಡಿಯ ಹತ್ತಿರವಿರುವ ಕಲ್ಲಹಳ್ಳಿಯ ಗುಡ್ಡಗಾಡನ್ನು ನಂದನ ವನವನ್ನಾಗಿ ಪರಿವರ್ತಿಸಿದ ಕೃಷಿ ಅನುಭವಿ.

ಶಾಕ್ತ್ಯಾರಾಧನೆಯಲ್ಲಿ ಆಕರ್ಷಿತರಾಗಿ ೧೪ನೇ ವಯಸ್ಸಿನಿಂದಲೇ ತೊಡಗಿಸಿಕೊಂಡಿದ್ದು, ತಾಂತ್ರಿಕ ಲೋಕದ ನಿಗೂಢ ಅರಿಯಲು ಉಜ್ಜಯಿನಿ ಯಾತ್ರೆ, ಗಳಿಸಿದ್ದು ಮಂತ್ರ-ತಂತ್ರ ವಿದ್ಯೆಯಲ್ಲಿ ಅಪಾರ ಜ್ಞಾನ. ಈ ಅನುಭವದಿಂದಲೇ ಹೊಮ್ಮಿದ ಕೃತಿ ‘ಪಂಚಮಗಳ ನಡುವೆ.’

ಸಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದವು.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 2.34 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *