ಶ್ಲೋಕ – 34
ಕ್ಷೇತ್ರಕ್ಷೇತ್ರಜ್ಞಯೋರೇವಮಂತರಂ ಜ್ಞಾನಚಕ್ಷುಷಾ ।
ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್ ॥೩೪॥
ಕ್ಷೇತ್ರ ಕ್ಷೇತ್ರಜ್ಞಯೋಃ ಏವಮ್ ಅಂತರಮ್ ಜ್ಞಾನೊ ಚಕ್ಷುಷಾ ।
ಭೂತ ಪ್ರಕೃತಿ ಮೋಕ್ಷಮ್ ಚ ಯೇ ವಿದುಃ ಯಾಂತಿ ತೇ ಪರಮ್ – ಕ್ಷೇತ್ರ-ಕ್ಷೇತ್ರಜ್ಞರೊಳಗಣ ಈ ಅಂತರವನ್ನು, ಪಂಚಭೂತಗಳಿಂದ ಮತ್ತು ಪ್ರಕೃತಿಯಿಂದ [ಜೀವರಿಗೆ ಚೇತನ ಪ್ರಕೃತಿಯಿಂದ] ಬಿಡುಗಡೆಗೆ ಕಾರಣವಾದ ತಿಳಿವಿನ ದಾರಿಯನ್ನು ತುಳಿದವರು ಪರಮಾತ್ಮನನ್ನು ಪಡೆಯುತ್ತಾರೆ.
ಈ ಶ್ಲೋಕ ಈ ಅಧ್ಯಾಯದ ಉಪಸಂಹಾರ. ಕ್ಷೇತ್ರ ಅಂದರೇನು, ಕ್ಷೇತ್ರಜ್ಞ ಅಂದರೇನು, ಕ್ಷೇತ್ರ ಮತ್ತು ಕ್ಷೇತ್ರಜ್ಞರ ನಡುವಿನ ವೆತ್ಯಾಸವೇನು; ಜೀವಜಾತ ಜಡದಿಂದ ಬಿಡುಗಡೆ ಹೊಂದಲು ಇರಬೇಕಾದ ಮೋಕ್ಷ ಸಾಧಕ ಗುಣಗಳು-ಇವೆಲ್ಲವನ್ನು ಅರಿತು ಆಚರಣೆಗೆ ತಂದು ಬದುಕುವವರು ಸರ್ವಶ್ರೇಷ್ಠನಾದ ಭಗವಂತನನ್ನು ಸೇರುತ್ತಾರೆ.
ಇತಿ ತ್ರಯೋದಶೋSಧ್ಯಾಯಃ
ಹದಿಮೂರನೆಯ ಅಧ್ಯಾಯ ಮುಗಿಯಿತು