ಶ್ಲೋಕ – 30
ಯದಾ ಭೂತಪೃಥಗ್ ಭಾವಮೇಕಸ್ಥಮನುಪಶ್ಯತಿ ।
ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ ॥೩೦॥
ಯದಾ ಭೂತ ಪೃಥಕ್ ಭಾವಮ್ ಏಕಸ್ಥಮ್ ಅನುಪಶ್ಯತಿ ।
ತತಃ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ –ಬಗೆಬಗೆಯ ಜೀವರಾಶಿ ಒಬ್ಬ ಭಗವಂತನಲ್ಲಿ ನೆಲೆಸಿದೆ ಎಂದು, ಅವನಿಂದಲೆ ಈ ಬಗೆಬಗೆಯ ಬಿತ್ತರ ಎಂದು ತಿಳಿದಾಗ ಭಗವಂತನನ್ನೇ ಸೇರುತ್ತಾನೆ.
ಜೀವ ಅನಾಧಿನಿತ್ಯ. ಸೃಷ್ಟಿಯಾಗುವುದು, ಸಂಹಾರವಾಗುವುದು ಕೇವಲ ಕಾಣುವ ರೂಪ ಅಷ್ಟೆ. ಜೀವಜಾತಗಳು ಒಂದೊಂದೂ ಪೃಥಕ್ ಭಾವ. ಯಾವ ಎರಡು ಜೀವಜಾತವೂ ನೂರಕ್ಕೆ ನೂರು ಸದೃಶವಾಗಿಲ್ಲ. ಈ ಅನೇಕ ಜೀವ ಸಮುದಾಯ ಏಕನಾದ ಭಗವಂತನಲ್ಲಿದೆ. ಸೃಷ್ಟಿ ಕಾಲದಲ್ಲಿ ಭಗವಂತನ ಉದರದಿಂದ ಹೊರ ಬಂದು ಆಕಾರ ಪಡೆಯುವ ಜೀವ ಜಾತಗಳು ಪ್ರಳಯ ಕಾಲದಲ್ಲಿ ಮರಳಿ ಸೂಕ್ಷ್ಮ ರೂಪದಲ್ಲಿ ಭಗವಂತನ ಉದರವನ್ನು ಸೇರುತ್ತವೆ. ಇದನ್ನು ನಾವು ವಸ್ತುಃಸ್ಥಿತಿಗೆ ಅನುಗುಣವಾಗಿ ಗ್ರಹಣ ಮಾಡಬೇಕು. ಯಾರು ಈ ಸತ್ಯವನ್ನು ಗ್ರಹಣ ಮಾಡಬಲ್ಲನೋ ಆತ ಮೋಕ್ಷವನ್ನು ಪಡೆಯಬಲ್ಲ.