ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 29

ಭಗವಂತನ ಚಿಂತನೆಯ ಇನ್ನೊಂದು ಅನುಸಂಧಾನವನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಎಚ್ಚರಿಕೆಯಿಂದ ಈ ಶ್ಲೋಕವನ್ನು ನಾವು ನೋಡಿದರೆ ನಮಗೆ ಸತ್ಯ ತಿಳಿಯುತ್ತದೆ. ನಮ್ಮಲ್ಲಿ ಎಲ್ಲರಲ್ಲೂ ಇರುವ ಒಂದು ಗೊಂದಲ ಎಂದರೆ- “ಕ್ರಿಯೆಯನ್ನು ನಾನು ಮಾಡುವುದೇ ಅಥವಾ ನನ್ನಿಂದ ಭಗವಂತ ಮಾಡಿಸುವುದೇ? ಭಗವಂತ ಮಾಡಿಸುವುದಾದರೆ ಏಕೆ ನನ್ನಿಂದ ಕೆಟ್ಟ ಕೆಲಸವನ್ನು ಮಾಡಿಸುತ್ತಾನೆ?”ಎಂಬುದು. ಈ ಪ್ರಶ್ನೆಗೆ ಕೃಷ್ಣ ಈ ಶ್ಲೋಕದಲ್ಲಿ ಅಡಕವಾಗಿ ಉತ್ತರ ಕೊಟ್ಟಿದ್ದಾನೆ. ಇಲ್ಲಿ ಹಿಂದೆ ಕೃಷ್ಣ ಹೇಳಿದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ಶ್ಲೋಕವನ್ನು ನಾವು ನೋಡಬೇಕಾಗಿದೆ.

ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ ।
ಯಃ ಪಶ್ಯತಿ ತಥಾSSತ್ಮಾನಮಕರ್ತಾರಂ ಸ ಪಶ್ಯತಿ ॥೨೯॥

ಪ್ರಕೃತ್ಯಾ ಏವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ ।

ಯಃ ಪಶ್ಯತಿ ತಥಾ ಆತ್ಮಾನಮ್ ಅಕರ್ತಾರಮ್ ಸಃ ಪಶ್ಯತಿ — ಪ್ರಕೃತಿಯಿಂದಲೆ ಎಲ್ಲ ಕಾರ್ಯಗಳೂ ನಡೆಯುತ್ತಿವೆ[ಜೀವನ ಕರ್ಮಕ್ಕನುಗುಣವಾಗಿ ಭಗವಂತನೆ ತೊಡಗಿ ಎಲ್ಲ ಕಾರ್ಯಗಳಲ್ಲು ಮುನ್ನೆಡೆಸುತ್ತಾನೆ] ಎಂದು ತಿಳಿದವನು ಮತ್ತು ಏನು ಮಾಡುವುದಕ್ಕೂ ತಾನು ಸ್ವತಂತ್ರನಲ್ಲ[ಭಗವಂತನಿಗೆ ಇನ್ನೊಬ್ಬ ಕಾರಣ ಪುರುಷನಿಲ್ಲ] ಎಂದು ತಿಳಿದವನು ‘ನಿಜವಾಗಿ ತಿಳಿದವನು’.

ಕೃಷ್ಣ ಹೇಳುತ್ತಾನೆ “ಯಾರಿಗೆ ‘ನಾನು’ ಮಾಡುತ್ತಿಲ್ಲ ಎಂದು ಗೊತ್ತಿದೆಯೋ ಅವನು ತಿಳಿದವನು” ಎಂದು. ಆದ್ದರಿಂದ ಮೊದಲು ನಾವು “ನಾನು ಮಾಡುತ್ತಿದ್ದೇನೆ” ಎನ್ನುವ ಅಹಂಕಾರವನ್ನು ಬಿಟ್ಟುಬಿಡಬೇಕು. ನಾನು ಮಾಡುತ್ತಿದ್ದೇನೆ ಎನ್ನುವುದು ಕೇವಲ ವ್ಯವಹಾರಿಕ ಸತ್ಯ ಹೊರತು ಪಾರಮಾರ್ಥಿಕ ಸತ್ಯವಲ್ಲ. ಉದಾಹರಣೆಗೆ: “ನಾನು ಮಾತನಾಡುತ್ತಿದ್ದೇನೆ”. ಇಲ್ಲಿ ನಾನು ಮಾತನಾಡಬೇಕಾದರೆ ಮೊದಲು ನಾನು ಮೂಗನಾಗಿರಬಾರದು. ಅದಕ್ಕೆ ಸರಿಯಾದ ಅಂಗಾಂಗವಿರುವ ಮಾನವ ಶರೀರವಿರಬೇಕು. ಮಾತನಾಡಬೇಕಾದರೆ ನನ್ನ ಮನಸ್ಸು ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಯೋಚಿಸಿ ಸಂದೇಶವನ್ನು ರವಾನಿಸಬೇಕು. ಅಂದರೆ ಇದಕ್ಕೆ ಸರಿಯಾದ ಮೆದುಳಿನ ಶಕ್ತಿ ನನಗೆ ಬೇಕು. ಮಾತನಾಡುವ ಧೈರ್ಯ ನನಗೆ ಬೇಕು. ಈಗ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ: ನನಗೆ ಮಾತನಾಡಬಲ್ಲ ಮಾನವ ದೇಹವನ್ನು ಕೊಟ್ಟವನ್ಯಾರು? ನನಗೆ ಯೋಚಿಸಬಲ್ಲ ಮೆದುಳನ್ನು ವಿನ್ಯಾಸಗೊಳಿಸಿ ಕರುಣಿಸಿದನ್ಯಾರು? ಸಮಯಕ್ಕೆ ಸರಿಯಾಗಿ ಈ ಮೆದುಳಿನಿಂದ ಸಂದೇಶವನ್ನು ರವಾನಿಸಿದವನ್ಯಾರು? ಮಾತನಾಡುವ ಅದ್ಭುತ ಕಲೆಯನ್ನು ನನಗೆ ದಯಾಪಾಲಿಸಿದವನ್ಯಾರು? ಈ ಎಲ್ಲಾ ಪ್ರಶ್ನೆಯಿಂದ ನಮಗೆ ತಿಳಿಯುವುದೇನೆಂದರೆ: “ನನ್ನೊಳಗಿರುವ ಭಗವಂತ ನುಡಿಸಿದ-ನಾನು ನುಡಿದೆ” ಎನ್ನುವ ಸತ್ಯ. ಇದನ್ನೇ ಇಲ್ಲಿ ಭಗವಂತ ವಿವರಿಸುತ್ತ ಹೇಳುತ್ತಾನೆ “ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ” ಎಂದು. ಅವರವರ ಜೀವಪ್ರಕೃತಿ(ಜೀವ ಸ್ವಭಾವ)ಗೆ ಅನುಗುಣವಾಗಿ, ಪ್ರಕೃತಿ(ತ್ರಿಗುಣಗಳ) ಪ್ರಭಾವದಿಂದ, ಪ್ರಕೃತಿಪುರುಷರು(ಲಕ್ಷ್ಮೀನಾರಾಯಣರು) ನಮ್ಮಿಂದ ಕರ್ಮವನ್ನು ಮಾಡಿಸುತ್ತಾರೆ. ಆದ್ದರಿಂದ ಜೀವನಿಗೆ ಅನಾಧಿನಿತ್ಯವಾಗಿ ಬಂದ ಜೀವಸ್ವಭಾವಕ್ಕನುಗುಣವಾಗಿ ಆತನ ದೇಹ ಸೃಷ್ಟಿ; ಅದಕ್ಕನುಗುಣವಾಗಿ ಆತನ ಮೇಲೆ ವಾತಾವರಣದಲ್ಲಿನ ತ್ರಿಗುಣಗಳ ಪ್ರಭಾವ; ತ್ರಿಗುಣಗಳ ಪ್ರಭಾವದಂತೆ ಆತನ ಎಲ್ಲಾ ವಿಧದ ಕರ್ಮ. ಇದೆಲ್ಲವನ್ನು ಮಾಡಿಸುವವ- ಸರ್ವದೇವತೆಗಳ ಅಧಿಪತಿಯಾದ, ಲಕ್ಷ್ಮೀ ಸಮೇತನಾದ ನಾರಾಯಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 01 ಹಿಂದಿನ ಅಧ್ಯಾಯದ ಕೊನೆಯಲ್ಲಿ ಭಗವಂತ “ನಿಷ್ಕಾಮ ಭಕ್ತಿಯಿಂದ ಮಾತ್ರ ನನ್ನನ್ನು ಕಾಣಲು ಸಾಧ್ಯ” ಎಂದು ಹೇಳಿದ. …

Leave a Reply

Your email address will not be published. Required fields are marked *