ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 28

ಸಮಂ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮೀಶ್ವರಮ್ ।
ನ ಹಿನಸ್ತ್ಯಾತ್ಮನಾSSತ್ಮಾನಂ ತತೋ ಯಾತಿ ಪರಾಂ ಗತಿಮ್ ॥೨೮॥

ಸಮಮ್ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮ್ ಈಶ್ವರಮ್ ।

ನ ಹಿನಸ್ತಿ ಆತ್ಮನಾ ಆತ್ಮನಮ್ ತತಃ ಯಾತಿ ಪರಾಮ್ ಗತಿಮ್ – ಸರ್ವ ಶಕ್ತನಾದ ಭಗವಂತ ಎಲ್ಲೆಡೆಯು ಏರುಪೇರಿಲ್ಲದೆ ಏಕರೂಪನಾಗಿದ್ದಾನೆ ಎಂದು ತಿಳಿದವನು ತನ್ನ ಏಳಿಗೆಗೆ ತಾನೇ ತಾನು ಅಡ್ಡಿಯನ್ನೂಡ್ಡಿಕೊಳ್ಳುವುದಿಲ್ಲ. ಮುಂದೆ ಪರಮ ಪದವನ್ನು ಪಡೆಯುತ್ತಾನೆ.

ನಾವು ನಮ್ಮ ದೇಹದಲ್ಲಿ ಸ್ಥಿತರು. ಆದರೆ ಭಗವಂತ ‘ಸಂಸ್ಥಿತ’ . ಈ ದೇಹದೊಳಗಿರುವ ನಮಗೆ ಈ ದೇಹದ ಜ್ಞಾನ ಕೂಡ ಇಲ್ಲ. ಏಕಿದ್ದೇವೆ ಎಂದೂ ಗೊತ್ತಿಲ್ಲ. ನಾವು ಒಳಗಿದ್ದು ಆನಂದ ದುಃಖವನ್ನು ಅನುಭವಿಸುತ್ತಿರುತ್ತೇವೆ. ಆದರೆ ಭಗವಂತ ದುಃಖ ಅಜ್ಞಾನದ ಸ್ಪರ್ಶವಿಲ್ಲದ ಆನಂದಮೂರ್ತಿ. ಆತ ನಮ್ಮೊಳಗಿರುವ ಸರ್ವ ತತ್ವಾಭಿಮಾನಿ ದೇವತೆಗಳಿಗೆ ಸಮವಸ್ಥಿತನಾಗಿ ಎತ್ತರದಲ್ಲಿದ್ದಾನೆ. ದುಃಖ ಅಜ್ಞಾನದ ಸ್ಪರ್ಶವಿಲ್ಲದ ಭಗವಂತ ಯಾರನ್ನೂ ಮೇಲು-ಕೀಳು ಭಾವದಿಂದ ನೋಡುವುದಿಲ್ಲ. ಪ್ರತಿಯೊಬ್ಬರನ್ನೂ ಅವರವರ ಕರ್ಮ ಮತ್ತು ಜೀವಯೋಗ್ಯತೆಗೆ ತಕ್ಕಂತೆ ಸಮನಾಗಿ ಕಾಣುತ್ತಾನೆ. ಭಗವಂತ ಸಮಸ್ತ ಜಡ-ಚೇತನದೊಳಗೆ ಜಗದೀಶ್ವರನಾಗಿ ನಿಂತು ನಮ್ಮ ಜೀವ ಸ್ವಭಾವಕ್ಕೆ ತಕ್ಕಂತೆ, ಕರ್ಮಕ್ಕನುಗುಣವಾಗಿ ನಮ್ಮನ್ನು ನಡೆಸುತ್ತಿದ್ದಾನೆ. ಈ ಸತ್ಯ ತಿಳಿದಾಗ “ನೀನು ನಿನಗೆ ಹಿಂಸೆ ಮಾಡದೆ ಬದುಕಬಹುದು” ಎನ್ನುತ್ತಾನೆ ಕೃಷ್ಣ. ನಿನ್ನ ಅರಿವಿಲ್ಲದೆ, ಭಗವಂತನ ಅರಿವಿಲ್ಲದೆ ಬದುಕುವುದು ಒಂದು ಆತ್ಮಹಿಂಸೆ. ಒಮ್ಮೆ ‘ನಾನು’ ಅಂದರೇನು, ನನ್ನೊಳಗಿರುವ ಭಗವಂತನಂದರೇನು ಎನ್ನುವ ವಸ್ತುಃಸ್ಥಿತಿ ತಿಳಿದರೆ ಹಿಂಸೆಯಾಗುವುದಿಲ್ಲ. ಅದು ತಿಳಿಯದೆ ಬದುಕುವುದು ಅಜ್ಞಾನದ ಮತ್ತು ದುಃಖದ ಬದುಕು. ಜೀವನದಲ್ಲಿ ಬರುವ ಪ್ರತಿಯೊಂದು ಸಂಗತಿಯನ್ನು-“ನಾನು ಹಿಂದೆ ಮಾಡಿದ ಕರ್ಮದ ಫಲ-ಅದನ್ನು ಭಗವಂತ ಮಾಡಿಸಿದ” ಎಂದು ತಿಳಿದುಕೊಂಡರೆ ದುಃಖವಿಲ್ಲದೆ ಆನಂದದಿಂದ ಬದುಕಬಹುದು. ನಮ್ಮ ಮನಸ್ಸೇ ನಮಗೆ ದುಃಖ ಕೊಡುವುದು. ಅದೇ ಆನಂದ ಕೊಡುವುದು. ನಮಗೆ ದುಃಖವಾಗುವುದು ನಮ್ಮ ತಿಳುವಳಿಕೆಯಿಂದ ಹೊರತು ಇನ್ಯಾವುದರಿಂದಲೂ ಅಲ್ಲ. ಉದಾಹರಣೆಗೆ ಒಬ್ಬ ಶ್ರೀಮಂತ ಯಾವುದೋ ಕಾರಣದಿಂದ ತನ್ನಲ್ಲಿರುವ ಎಲ್ಲ ಸಂಪತ್ತನ್ನು ಕಳೆದುಕೊಳ್ಳುತ್ತಾನೆ. ಆಗ ಆತ “ನನ್ನ ಪೂರ್ವ ಜನ್ಮದ ಕರ್ಮಕ್ಕನುಗುಣವಾಗಿ ಈ ಘಟನೆ ನಡೆಯಿತು. ಎಲ್ಲವೂ ಭಗವಂತನ ಲೀಲೆ; ಕೊಡುವವನೂ ಅವನೆ, ತೆಗೆದುಕೊಳ್ಳುವವನೂ ಅವನೆ; ಪಾಲಿಸುವವನೂ ಅವನೆ; ಇದಕ್ಕಾಗಿ ನಾನೇಕೆ ಚಿಂತಿಸಬೇಕು” ಎಂದು ತಿಳಿದುಕೊಂಡರೆ ಆತ ಆನಂದದಿಂದಿರಬಹುದು. ಇದನ್ನು ಬಿಟ್ಟು ಬ್ರಹ್ಮಾಂಡವೇ ತಲೆಮೇಲೆ ಬಿದ್ದಂತೆ ವರ್ತಿಸಿದರೆ ಅದು ನಮ್ಮನ್ನು ನಾವು ಹಿಂಸಿಸಿಕೊಂಡಂತೆ. ನಾವು ಎಲ್ಲವನ್ನು ಪ್ರೇಕ್ಷಕರಾಗಿ ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು. ಭಗವಂತನ ಅರಿವಿನೊಂದಿಗೆ ಶಾಂತವಾದ ಇಂತಹ ಬದುಕು ನಮ್ಮನ್ನು ಪರಮಪದವಾದ ಮೊಕ್ಷದತ್ತ ಕೊಂಡೊಯ್ಯಬಲ್ಲದು.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 01 ಹಿಂದಿನ ಅಧ್ಯಾಯದ ಕೊನೆಯಲ್ಲಿ ಭಗವಂತ “ನಿಷ್ಕಾಮ ಭಕ್ತಿಯಿಂದ ಮಾತ್ರ ನನ್ನನ್ನು ಕಾಣಲು ಸಾಧ್ಯ” ಎಂದು ಹೇಳಿದ. …

One comment

  1. ಬಹಳ ಚೆನ್ನಾಗಿದೆ

Leave a Reply

Your email address will not be published. Required fields are marked *