ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 27

ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್ ।
ವಿನಶ್ಯತ್ಸ್ವವಿನಶ್ಯಂತಂ ಯಃ ಪಶ್ಯತಿ ಸ ಪಶ್ಯತಿ ॥೨೭॥

ಸಮಮ್ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್ ।

ವಿನಶ್ಯತ್ಸು ಅವಿನಶ್ಯಂತಂ ಯಃ ಪಶ್ಯತಿ ಸಃ ಪಶ್ಯತಿ – ಎಲ್ಲ ಜೀವಿಗಳಲ್ಲು ಏಕರೂಪದಿಂದಿರುವವನು ಸರ್ವಶಕ್ತನಾದ ಭಗವಂತ-ಅವು ಅಳಿದಾಗಳೂ ಅಳಿಯದೆ ಉಳಿದವನು. ಅವನನ್ನು ತಿಳಿದವನೆ ‘ನಿಜವಾಗಿ ತಿಳಿದವನು’.

ಎಲ್ಲ ಜೀವರೊಳಗೂ ಏಕರೂಪದಿಂದಿರುವ ಸರ್ವಶಕ್ತ ಭಗವಂತ ಪರಮ-ಈಶ-ವರ. ಯಾರ ಆಜ್ಞೆಯನ್ನು ನಾವು ಪಾಲಿಸದೇ ಇರಲಾರೆವೋ; ಪಾಲಿಸುವುದು ನಮ್ಮ ಕರ್ತವ್ಯವೋ; ನಮಗರಿವಿಲ್ಲದೆ ನಮ್ಮೊಳಗಿದ್ದು ಪಾಲಿಸುವ ಅಜ್ಞಾತಶಕ್ತಿ- ‘ಈಶ-ವರ’. ಅಂದರೆ ತತ್ವಾಭಿಮಾನಿ ದೇವತೆಗಳು. ಇಂತಹ ತತ್ವಾಭಿಮಾನಿ ದೇವತೆಗಳನ್ನೂ ನಿಯಂತ್ರಿಸುವ ಭಗವಂತ ಪರಮೇಶ್ವರ. ಇಂಥ ಭಗವಂತ ಎಲ್ಲೋ ಕೂತು ನಮ್ಮನ್ನು ನಿಯಮಿಸುತ್ತಿಲ್ಲ. ಆತ ನಮ್ಮೊಳಗಿದ್ದು ನಮ್ಮನ್ನು ನಿಯಂತ್ರಿಸುತ್ತಿದ್ದಾನೆ. ಆತ ನಮ್ಮೊಳಗೆ ಸ್ವತಂತ್ರವಾಗಿದ್ದು ನಮ್ಮನ್ನು ಹೊತ್ತು ನಡೆಸುತ್ತಿದ್ದಾನೆ [ಹಿಂದಿನ ಕಾಲದವರು ಜನರಿಗೆ ಈ ಸಂದೇಶವನ್ನು ದೇವಸ್ಥಾನದಲ್ಲಿ ತಟ್ಟಿರಾಯನ ಮೂಲಕ ಕೊಟ್ಟರು]. ಭಗವಂತ ಮುಕ್ತಾSSಮುಕ್ತ ನಿಯಾಮಕ. ಎಲ್ಲರನ್ನು ಎಲ್ಲ ಕಾಲದಲ್ಲಿ ಅವರವರ ಯೋಗ್ಯತೆಗನುಗುಣವಾಗಿ, ಆಯಾ ವಸ್ತುವಿನ ಸ್ವಭಾವಕ್ಕನುಗುಣವಾಗಿ ಒಳಗಿದ್ದು ಪ್ರೇರಣೆ ಮಾಡುವವ ಭಗವಂತ. ಭಗವಂತನ ಶಕ್ತಿಯಲ್ಲಿ ಮೇಲು ಕೀಳು ಇಲ್ಲ. ಆನೆಯಲ್ಲಿರುವ ಭಗವಂತ ಇರುವೆಯಲ್ಲಿರುವ ಭಗವಂತ ಬೇರೆಬೇರೆ ಅಲ್ಲ. ಆದರೆ ಆತನ ಸನ್ನಿಧಾನದಲ್ಲಿ ವೆತ್ಯಾಸವಿರುವುದರಿಂದ ಆ ಸನ್ನಿಧಾನದ ಅಧಿಷ್ಠಾನದಲ್ಲಿ ವೆತ್ಯಾಸ ಬರುತ್ತದೆ. ನಮ್ಮ ದೇಹದಲ್ಲಿರುವ ಬಿಂಬ ರೂಪಿ ಭಗವಂತ ಅವಿನಾಶಿ. ಆತನಿಗೆ ದೇಹನಾಶ, ಸ್ವರೂಪನಾಶವಿಲ್ಲ. ದುಃಖಪ್ರಾಪ್ತಿ ಇಲ್ಲ. ಆತ ಅಪೂರ್ಣನಲ್ಲ. ಈ ಸತ್ಯವನ್ನು ತಿಳಿದವನು ಯಥಾರ್ಥ ಜ್ಞಾನವುಳ್ಳವನು.

ಈ ಶ್ಲೋಕದಲ್ಲಿ ಹೇಳಿದ ವಿಚಾರವನ್ನು ಇನ್ನೂ ಬಿಡಿಸಿ ಮತ್ತೆ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ:

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 01 ಹಿಂದಿನ ಅಧ್ಯಾಯದ ಕೊನೆಯಲ್ಲಿ ಭಗವಂತ “ನಿಷ್ಕಾಮ ಭಕ್ತಿಯಿಂದ ಮಾತ್ರ ನನ್ನನ್ನು ಕಾಣಲು ಸಾಧ್ಯ” ಎಂದು ಹೇಳಿದ. …

Leave a Reply

Your email address will not be published. Required fields are marked *