ಶ್ಲೋಕ – 26
ಯಾವತ್ ಸಂಜಾಯತೇ ಕಿಂಚಿತ್ ಸತ್ವಂ ಸ್ಥಾವರಜಂಗಮಮ್ ।
ಕ್ಷೇತ್ರಕ್ಷೇತ್ರಜ್ಞಸಂಯೋಗಾತ್ ತದ್ ವಿದ್ಧಿ ಭರತರ್ಷಭ ॥೨೬॥
ಯಾವತ್ ಸಂಜಾಯತೇ ಕಿಂಚಿತ್ ಸತ್ವಮ್ ಸ್ಥಾವರ ಜಂಗಮಮ್ ।
ಕ್ಷೇತ್ರ ಕ್ಷೇತ್ರಜ್ಞ ಸಂಯೋಗಾತ್ ತದ್ ವಿದ್ಧಿ ಭರತರ್ಷಭ — ಭರತರ್ಷಭ, ಸ್ಥಿರ-ಚರ ಜೀವಿಯಲ್ಲಿ ಯಾವುದು ಹುಟ್ಟಿದರೂ ಅದು ಕ್ಷೇತ್ರ[ಶ್ರೀತತ್ವ] ಮತ್ತು ಕ್ಷೇತ್ರಜ್ಞನಾದ ಭಗವಂತನ ಸಹಯೋಗದಿಂದಲೆ ಎಂದು ತಿಳಿ.
ಈ ಪ್ರಪಂಚದಲ್ಲಿ ಏನೆಲ್ಲ ಹುಟ್ಟುತ್ತದೋ, ಚಲಿಸುವ-ಚಲಿಸದಿರುವ ಸಮಸ್ತ ಜೀವ ಜಡಾತ್ಮಕ ಪ್ರಪಂಚ ಮತ್ತು ಅದರ ಅಭಿಮಾನಿನಿಯಾದ ಪ್ರಕೃತಿದೇವಿ-ಇಷ್ಟನ್ನು ಒಟ್ಟಿಗೆ ಕ್ಷೇತ್ರವೆನ್ನುತ್ತಾರೆ. ಇವೆಲ್ಲವನ್ನು ಬಲ್ಲವ ಕ್ಷೇತ್ರಜ್ಞನಾದ ಭಗವಂತ. ಆದ್ದರಿಂದ ಕ್ಷೇತ್ರವೆಂದರೆ ಭಗವಂತನಿಂದ ನಿರ್ಮಾಣವಾದ ಸಮಸ್ತ ಜೀವ ಜಡಾತ್ಮಕ ಪ್ರಪಂಚ. ಸಮಸ್ತ ಸೃಷ್ಟಿ ಲಕ್ಷ್ಮೀ ನಾರಾಯಣರ ಸಮಾಗಮದಿಂದ ನಿರ್ಮಾಣವಾಯಿತು. ಅವರು ಈ ಪ್ರಪಂಚದ ಮೊದಲ ದಂಪತಿಗಳು. ಆದ್ದರಿಂದ ಎಲ್ಲರ ತಂದೆ ತಾಯಿ ನಾರಾಯಣ ಮತ್ತು ಶ್ರೀಲಕ್ಷ್ಮಿ. “ಇದನ್ನು ತಿಳಿದಾಗ ನೀನು ನಿಜವಾದ ಭರತರ್ಷಭನಾಗುತ್ತೀಯ” ಎನ್ನುತ್ತಾನೆ ಕೃಷ್ಣ. ಭಗವಂತನಲ್ಲಿ ರಥನಾದವನು, ಭಗವಂತನಲ್ಲಿ ಪೂರ್ಣಭಕ್ತಿ ಉಳ್ಳವನು ಭರತರ್ಷಭ.