ಶ್ಲೋಕ – 25
ಅನ್ಯೇ ತ್ವೇವಮಜಾನಂತಃ ಶ್ರುತ್ವಾSನ್ಯೇಭ್ಯ ಉಪಾಸತೇ ।
ತೇSಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿಪರಾಯಣಾಃ ॥೨೫॥
ಅನ್ಯೇ ತು ಏವಂ ಅಜಾನಂತಃ ಶ್ರುತ್ವಾ ಅನ್ಯೇಭ್ಯಃ ಉಪಾಸತೇ ।
ತೇ ಅಪಿ ಚ ಅತಿತರಂತಿ ಏವ ಮೃತ್ಯುಮ್ ಶ್ರುತಿಪರಾಯಣಾಃ –ಹೀಗೆ ಭಗವಂತನನ್ನರಿಯಲಾರದ ಇನ್ನು ಕೆಲವರು ಬಲ್ಲವರಿಂದ ಕೇಳಿ ಉಪಾಸನೆ ಮಾಡುತ್ತಾರೆ. ಶ್ರವಣವನ್ನೆ ನಂಬಿ ನಡೆವ ಅವರೂ ಸಾಧನೆಯಿಂದ ಬೆಳೆದು ಸಾವನ್ನು ಗೆಲ್ಲುತ್ತಾರೆ.
ಜನಸಾಮಾನ್ಯರು, ಮೇಲಿನ ಯಾವ ವಿಧದಲ್ಲೂ ಸಾಧನೆ ಮಾಡಲಾರದವರು-ಇನ್ನೊಬ್ಬರಿಂದ ಕೇಳಿ ತಿಳಿದು ಸಾಧನೆಯ ಮೊದಲ ಮೆಟ್ಟಿಲನ್ನು ಹತ್ತಬಲ್ಲರು. ಇದು ಸಾಧನೆಯ ಮಾರ್ಗದಲ್ಲಿನ ಅತ್ಯಂತ ಕೆಳಗಿನ ಮೆಟ್ಟಿಲಾದರೂ ಸಹ, ಇವರು ನಿರಂತರ ಶ್ರವಣ, ಮನನ, ನಿಧಿಧ್ಯಾಸನದಿಂದ, ಅಹಂಕಾರವಿಲ್ಲದೆ, ಜ್ಞಾನ ಸಂಪಾದಿಸಿ, ಆ ಜ್ಞಾನದಿಂದ-ಧ್ಯಾನದಲ್ಲಿ ಭಗವಂತನನ್ನು ಕಾಣಬಲ್ಲರು. ಇದು ಸಾಮಾನ್ಯ ಮಾನವನಿಗೆ ಕೃಷ್ಣ ತೋರಿಸಿದ ಮೋಕ್ಷ ಮಾರ್ಗ. ಹೀಗೆ ಇವರು ಶ್ರವಣ ಮತ್ತು ಉಪಾಸನೆಯಿಂದ ಮೃತ್ಯುವನ್ನು ಗೆದ್ದು ಭಗವಂತನನ್ನು ಸೇರಬಲ್ಲರು.