ಶ್ಲೋಕ – 23
ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ ।
ಸರ್ವಥಾ ವರ್ತಮಾನೋSಪಿ ನ ಸ ಭೂಯೋSಭಿಜಾಯತೇ ॥೨೩॥
ಯಃ ಏವಮ್ ವೇತ್ತಿ ಪುರುಷಮ್ ಪ್ರಕೃತಿಮ್ ಚ ಗುಣೈಃ ಸಹ ।
ಸರ್ವಥಾ ವರ್ತಮಾನಃ ಅಪಿ ನ ಸಃ ಭೂಯಃ ಅಭಿಜಾಯತೇ –ಹೀಗೆ ಪ್ರಕೃತಿ-ಪುರುಷರನ್ನು ಗುಣಗಳ ಜತೆಗೆ ಅರಿತವನು ಹೇಗೆ ಬದುಕಿದರೂ ಮತ್ತೆ ಮರಳಿ ಹುಟ್ಟುವುದಿಲ್ಲ.
ಅನಾಧಿನಿತ್ಯವಾದ ಪ್ರಕೃತಿ(ಜಡ ಮತ್ತು ಚೇತನ), ಎಲ್ಲವುದಕ್ಕೂ ಕಾರಣ ಪುರುಷನಾದ ಪರಮಾತ್ಮ, ಆತನ ಅಧೀನವಾಗಿರುವ ಜೀವಜಾತ ಇದನ್ನು ಗುಣಗಳ ಜೊತೆಗೆ ಅರಿತವನು ಜ್ಞಾನಿ. ಇಂಥಹ ಜ್ಞಾನಿ ಬಾಹ್ಯವಾಗಿ ಹೇಗೆ ಕಾಣಿಸಿಕೊಂಡರೂ ಕೂಡ, ಸತ್ಯದ ಸಾಕ್ಷಾತ್ಕಾರದಿಂದ ಆತ ಮೋಕ್ಷವನ್ನು ತಲುಪುತ್ತಾನೆ. ಇಲ್ಲಿ ಬಾಹ್ಯ ಸಂಸ್ಕಾರಕ್ಕಿಂತ ಜ್ಞಾನ ಎಷ್ಟು ಮುಖ್ಯ ಎನ್ನುವುದನ್ನು ಕೃಷ್ಣ ಒತ್ತಿ ಹೇಳಿದ್ದಾನೆ. ಮುಖವಾಡದ ಬದುಕಿನಿಂದ ಏನೂ ಉಪಯೋಗವಿಲ್ಲ. ಅದಕ್ಕಿಂತ ಮಿಗಿಲಾದದ್ದು ಸತ್ಯದ ಸಾಕ್ಷಾತ್ಕಾರ. ಸತ್ಯದ ಸಾಕ್ಷಾತ್ಕಾರವಾದಾಗ ತಾನಾಗಿಯೇ ಲೌಕಿಕ ಪ್ರಪಂಚ ಎಷ್ಟು ಅರ್ಥಹೀನ ಎನ್ನುವುದು ತಿಳಿಯುತ್ತದೆ. ಜ್ಞಾನಕ್ಕಿಂತ ಮಿಗಿಲಾದ ಇನ್ನೊಂದು ಪವಿತ್ರಸಾಧನವಿಲ್ಲ. ಕರ್ಮಾನುಷ್ಠಾನದಲ್ಲಿ ಅಕಾಸ್ಮಾತ್ ಚ್ಯುತಿಯಾದರೂ ಜ್ಞಾನ ಮಾರ್ಗದಲ್ಲಿ ಸಾಗುವವನಿಗೆ ಅದು ಬಾಧಕವಾಗುವುದಿಲ್ಲ. ಜ್ಞಾನ ಅವನನ್ನು ಸರಿದಾರಿಗೆ ತಂದು ನಿಲ್ಲಿಸುತ್ತದೆ ಮತ್ತು ಆತ ಮೋಕ್ಷವನ್ನು ಪಡೆಯುತ್ತಾನೆ.