ಶ್ಲೋಕ – 02
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ ।
ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ ತಜ್ ಜ್ಞಾನಂ ಮತಂ ಮಮ ॥೨॥
ಕ್ಷೇತ್ರಜ್ಞಮ್ ಚ ಅಪಿ ಮಾಮ್ ವಿದ್ಧಿ ಸರ್ವ ಕ್ಷೇತ್ರೇಷು ಭಾರತ ।
ಕ್ಷೇತ್ರ ಕ್ಷೇತ್ರಜ್ಞಯೋ ಜ್ಞಾನಮ್ ಯತ್ ತತ್ ಜ್ಞಾನಮ್ ಮತಮ್ ಮಮ –ಓ ಭಾರತ, ಎಲ್ಲ ಕ್ಷೇತ್ರಗಳಲ್ಲಿ ನೆಲೆಸಿರುವ ನನ್ನನ್ನೆ ‘ಕ್ಷೇತ್ರಜ್ಞ’ನೆಂದು ತಿಳಿ. ಕ್ಷೇತ್ರ ಮತ್ತು ಕ್ಷೇತ್ರಜ್ಞರ ಅರಿವೆ ನಿಜವಾದ ‘ಜ್ಞಾನ’ ಎನ್ನುವುದು ನನ್ನ ಅಭಿಪ್ರಾಯ.
ಒಳಗೂ ಹೊರಗೂ ತುಂಬಿರುವ, ಎಲ್ಲ ಕ್ಷೇತ್ರದಲ್ಲಿರುವ ಭಗವಂತನೇ ಕ್ಷೇತ್ರಜ್ಞ. ಜೀವ ಕೇವಲ ಕ್ಷೇತ್ರಸ್ಥ. ನಿಜವಾದ ಜ್ಞಾನವೆಂದರೆ ವಿಶ್ವದ ಅರಿವು; ವಿಶ್ವದಲ್ಲಿ ತುಂಬಿರುವ ಭಗವಂತನ ಅರಿವು. ಈ ವಿಶ್ವದೊಳಗೆ ನಾವು ಹೇಗಿದ್ದೇವೆ? ಈ ವಿಶ್ವ ನಮಗೆ ಹೇಗೆ ಬಂಧಕವಾಗಿದೆ? ಈ ಬಂಧನವನ್ನು ಕಳಚಿಕೊಂಡು ಆ ವಿಶ್ವಾತ್ಮ ಭಗವಂತನನ್ನು ನಾವು ಸೇರುವುದು ಹೇಗೆ? ಈ ಅರಿವೇ ಜ್ಞಾನ. ಹಿಂದಿನ ಅಧ್ಯಾಯದಲ್ಲಿ ಹೇಳಿದಂತೆ ನಾವು ಹದಿನೈದು ಬೇಲಿಗಳ ಸೆರೆಮನೆಯಲ್ಲಿದ್ದೇವೆ. ಆದರೆ ಇದು ಶಿಕ್ಷೆಯಲ್ಲ, ಶಿಕ್ಷಣ. ಈ ಬಂಧನದಿಂದ ಪಾರಾಗಬೇಕಾದರೆ ಭವಮೋಚಕನಾದ ಕ್ಷೇತ್ರಜ್ಞನನ್ನು ತಿಳಿಯಬೇಕು. ಈ ಎಚ್ಚರವೇ ನಿಜವಾದ ಜ್ಞಾನ.