ಶ್ಲೋಕ – 22
ಉಪದ್ರಷ್ಟಾSನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ ।
ಪರಮಾತ್ಮೇತಿ ಚಾಪ್ಯುಕ್ತೋ ದೇಹೇSಸ್ಮಿನ್ ಪುರುಷಃ ಪರಃ ॥೨೨॥
ಉಪದ್ರಷ್ಟಾ ಅನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ ।
ಪರಮಾತ್ಮ ಇತಿ ಚ ಅಪಿ ಉಕ್ತಃ ದೇಹೇ ಅಸ್ಮಿನ್ ಪುರುಷಃ ಪರಃ –ಎಲ್ಲದರ ಮೇಲಿದ್ದು ಎಲ್ಲವನು ನೋಡುವವನು, ತನ್ನಿಷ್ಟದಂತೆ ಎಲ್ಲವನು ನಡೆಸುವವನು, ಎಲ್ಲವನು ಹೊತ್ತವನು, ಸಾರವನುಣ್ಣುವವನು-ಸರ್ವಶಕ್ತನಾದ ಪರಮಾತ್ಮ. ಅವನೆ ಈ ದೇಹದಲ್ಲಿ ಜೀವನ ಜೊತೆಗಿರುವ ಪರಮಪುರುಷ.
ಚಿತ್ ಪ್ರಕೃತಿ ಜಡಪ್ರಕೃತಿಯಿಂದ ದೇಹ ನಿರ್ಮಿಸುವಾಗ, ಜೀವ ಆ ದೇಹದಲ್ಲಿದ್ದು ಇಂದ್ರಿಯಗಳ ಮುಖೇನ ಸುಖ ದುಃಖವನ್ನು ಭೋಗಿಸುವಾಗ- ಎಲ್ಲದಕ್ಕೂ ಪ್ರೇರಕನಾಗಿ, ಎಲ್ಲವುದಕ್ಕಿಂತ ಎತ್ತರದಲ್ಲಿದ್ದು ಎಲ್ಲವನ್ನು ಹತ್ತಿರದಿಂದ ಸಾಕ್ಷಾತ್ ಕಾಣುವ ಭಗವಂತ ಪರಮಪುರುಷ. ಆತ ನಮ್ಮ ಕರ್ಮವನ್ನು ಬಲ್ಲವನು. ಯಾವ ರೀತಿಯ ಕರ್ಮದಿಂದ ಏನಾಗಬೇಕು ಎಂದು ತಿಳಿದವನು. ಆತ ಒಳಗೆ ಕೂತು ಪ್ರೇರಣೆ ಮಾಡುವುದರಿಂದ ಈ ದೇಹ ನಿಂತಿದೆ. ಆತ ಹೊರಟು ಹೋದರೆ ದೇಹ ಬಿದ್ದು ಹೋಗುತ್ತದೆ. ಆತ ನಮ್ಮೊಳಗಿದ್ದು ಯಾವ ದುಃಖದ ಸ್ಪರ್ಶವೂ ಇಲ್ಲದೆ ಸದಾ ಆನಂದದಿಂದಿರುವ ಆನಂದ ಭೋಕ್ತ.