ಶ್ಲೋಕ – 21
ಪುರುಷಃ ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ ಗುಣಾನ್ ।
ಕಾರಣಂ ಗುಣಸಂಗೋSಸ್ಯ ಸದಸದ್ಯೋನಿಜನ್ಮಸು ॥೨೧॥
ಪುರುಷಃ ಪ್ರಕೃತಿಸ್ಥಃ ಹಿ ಭುಂಕ್ತೇ ಪ್ರಕೃತಿಜಾನ್ ಗುಣಾನ್ ।
ಕಾರಣಮ್ ಗುಣಸಂಗಃ ಅಸ್ಯ ಸತ್ ಅಸತ್ ಯೋನಿ ಜನ್ಮಸು –ಪ್ರಕೃತಿಯ ಕಟ್ಟಿಗೊಳಗಾದ ಜೀವ, ಪ್ರಕೃತಿ ಕಾರ್ಯಗಳಾದ ಸುಖ-ದುಃಖಾದಿಗಳನ್ನು ಅನುಭವಿಸುತ್ತಾನೆ. ಒಳ್ಳೆಯ ಮತ್ತು ಕೆಟ್ಟ ಬಸಿರಿನಲ್ಲಿ ಹುಟ್ಟಿಬರಲು ಜೀವನಿಗೆ ತ್ರಿಗುಣಗಳ ನಂಟೇ ಕಾರಣ.
ಪ್ರಕೃತಿ ನಿರ್ಮಿತವಾದ ದೇಹದಲ್ಲಿ ಭಗವಂತನಿದ್ದಾನೆ, ದೇವತೆಗಳಿದ್ದಾರೆ. ಆದರೆ ದೇಹದಲ್ಲಿದ್ದು ಸುಖ-ದುಃಖದ ಭೋಗವನ್ನು ಅನುಭವಿಸುವವನು-ಜೀವ. ದೇಹ ಪ್ರಕೃತಿಯ ಗುಣದಿಂದ ನಿರ್ಮಾಣವಾಗಿರುತ್ತದೆ. ಜೀವ ತನ್ನ ಸ್ವಭಾವಕ್ಕನುಗುಣವಾಗಿ, ಪೂರ್ವ ಜನ್ಮದ ಕರ್ಮಫಲಕ್ಕನುಗುಣವಾಗಿ ಈ ಜನ್ಮದಲ್ಲಿ ದೇಹವನ್ನು ಪಡೆಯುತ್ತದೆ. ಹಿಂದೆ ಹೇಳಿದಂತೆ ಜೀವ ತನ್ನ ದೇಹವನ್ನು ಬಿಟ್ಟು ಹೊರಬರುವಾಗ ಯಾವುದನ್ನು ಗಾಢವಾಗಿ ನೆನೆಯುತ್ತದೋ -ಅದಕ್ಕನುಗುಣವಾಗಿ ಅದರ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಉತ್ತಮ ಅಥವಾ ಹೀನ ಯೋನಿಯಲ್ಲಿ ಹುಟ್ಟಿಬರಲು ಜೀವನಿಗೆ ತ್ರಿಗುಣಗಳ ನಂಟೇ ಕಾರಣ.