ಶ್ಲೋಕ – 20
ಕಾರ್ಯಕಾರಣಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ ।
ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುರುಚ್ಯತೇ ॥೨೦॥
ಕಾರ್ಯ ಕಾರಣ ಕರ್ತೃತ್ವೇ ಹೇತುಃ ಪ್ರಕೃತಿಃ ಉಚ್ಯತೇ ।
ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುಃ ಉಚ್ಯತೇ –ದೇಹ ಮತ್ತು ಇಂದ್ರಿಯಗಳ ನಿರ್ಮಾಣದಲ್ಲಿ ಜಡಪ್ರಕೃತಿ[ಚೇತನಪ್ರಕೃತಿಯಾದ ಶ್ರೀ ತತ್ವ] ಕಾರಣವೆನಿಸಿದೆ. ಸುಖ-ದುಃಖಗಳ ಅನುಭವದಲ್ಲಿ ಜೀವ[ಪರಮಾತ್ಮ] ಕಾರಣಭೂತನಾಗಿದ್ದಾನೆ.
ಈ ಶ್ಲೋಕದಲ್ಲಿ ಎರಡು ವಿಚಾರವನ್ನು ಕೃಷ್ಣ ಬಿಡಿಸಿ ತೋರಿದ್ದಾನೆ. ನಮಗೆ ಒಂದು ದೇಹವಿದೆ. ದೇಹದಲ್ಲಿ ಐದು ಬಗೆಯ ಸುಖ-ದುಃಖ ಭೋಗವನ್ನು ಅನುಭವಿಸಲು ಐದು ಇಂದ್ರಿಯಗಳಿವೆ. ಹೀಗೆ ಶರೀರ, ಶರೀರದಲ್ಲಿ ಇಂದ್ರಿಯಗಳು- ಇಂದ್ರಿಯಗಳ ಮೂಲಕ ಸುಖ-ದುಃಖ ಭೋಗ-ಇದು ಜೀವನ. ಜೀವನಿಗೆ ಅವನು ಹಿಂದೆ ಮಾಡಿದ ಕರ್ಮಕ್ಕನುಗುಣವಾಗಿ ಕಾರ್ಯ ಕಾರಣಗಳ ಕರ್ತೃತ್ವ. ಅಂದರೆ ನಮ್ಮ ಕರ್ಮಕ್ಕನುಗುಣವಾಗಿ ಭಗವಂತ ಈ ಜನ್ಮದಲ್ಲಿ ಒಂದು ರೂಪವನ್ನು ಕೊಟ್ಟ. ಈ ನಮ್ಮ ದೇಹ ರೂಪುಗೊಳ್ಳಲು ಅಧಿಷ್ಠಾನಕಾರಣ ನಮ್ಮ ತಂದೆ ತಾಯಿ. ನಮ್ಮ ದೇಹ ಜಡಪ್ರಕೃತಿಯಿಂದಾಗಿದೆ. ತಾಯಿಯ ಹೊಟ್ಟೆಯಲ್ಲಿ ನಮಗೆ ಈ ರೂಪವನ್ನು ಕೊಟ್ಟವಳು ಜಗನ್ಮಾತೆ ಶ್ರೀಲಕ್ಷ್ಮಿ. ಭಗವಂತನಿಗೆ ಅಂಗವಾಗಿ ಲಕ್ಷ್ಮಿ ದೇಹ ರಚನೆ ಮಾಡುತ್ತಾಳೆ. ಈ ರೀತಿ ದೇಹದ ಅಂಗಾಂಗ ಮತ್ತು ಇಂದ್ರಿಯಗಳನ್ನು ಪಡೆದ ಜೀವ, ಅದರಿಂದ ಸುಖ-ದುಃಖದ ಭೋಗವನ್ನು ಅನುಭವಿಸುತ್ತದೆ. ಪರಮಪುರುಷ ಭಗವಂತ ಜೀವನಿಗೆ ಸುಖ-ದುಃಖದ ಅನುಭವವನ್ನು ಕೊಡುತ್ತಾನೆ. ಹೀಗಾಗಿ ದೇಹರಚನೆಯಲ್ಲಿ ಚೇತನ ಮತ್ತು ಜಡ ಪ್ರಕೃತಿ ಒಳಗೊಂಡರೆ, ಭಗವಂತ ಜೀವನಿಗೆ ಭೋಕ್ತೃತ್ವದ ಅನುಭವವನ್ನು ಸ್ವಯಂ ಅಂತರ್ಯಾಮಿಯಾಗಿ ನಿಂತು ನೀಡುತ್ತಾನೆ.