ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 17

ಜ್ಯೋತಿಷಾಮಪಿ ತಜ್ ಜ್ಯೋತಿಸ್ತಮಸಃ ಪರಮುಚ್ಯತೇ ।
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್ ॥೧೭॥

ಜ್ಯೋತಿಷಾಮ್ ಅಪಿ ತತ್ ಜ್ಯೋತಿಃ ತಮಸಃ ಪರಮ್ ಉಚ್ಯತೇ ।

ಜ್ಞಾನಮ್ ಜ್ಞೇಯಮ್ ಜ್ಞಾನಗಮ್ಯಮ್ ಹೃದಿ ಸರ್ವಸ್ಯ ವಿಷ್ಠಿತಮ್ –ಅದು ಬೆಳಕುಗಳಿಗೆಲ್ಲ ಹಿರಿ ಬೆಳಕು. ಕತ್ತಲೆಯ ಆಚೆಗಿರುವಂಥದು. ಅದು ತಿಳಿವಿನ ರೂಪ. ತನ್ನನು ತಾನೇ ತಿಳಿವಂಥದು. ತಿಳಿವಿನಿಂದ ಪಡೆಯಬಹುದಾದಂಥದು. ಎಲ್ಲರ ಹೃದಯದಲ್ಲು ನೆಲೆಸಿರುವಂಥದು.

ಈವರೆಗೆ ಕೃಷ್ಣ ವಿವರಿಸಿದ ವಿಚಾರವನ್ನು ನಾವು ನಮ್ಮ ಧ್ಯಾನದಲ್ಲಿ ಕಾಣುವುದು ಕಷ್ಟ. ಅದಕ್ಕಾಗಿ ಕೃಷ್ಣ ಈ ಶ್ಲೋಕದಲ್ಲಿ ತನ್ನನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ. ಭಗವಂತ ಕತ್ತಲಿಲ್ಲದ ಬೆಳಕು. ಆ ಬೆಳಕಿಗೆ ಒಂದು ಅವಧಿ ಇಲ್ಲ. ಅದು ಅನಂತ. ಎಲ್ಲ ಬೆಳಕುಗಳಿಗೂ ಬೆಳಕು ಕೊಡುವ ಮಹಾಜ್ಯೋತಿ ಭಗವಂತ. ಭಗವಂತನನ್ನು ಧ್ಯಾನದಲ್ಲಿ ಕಾಣಬೇಕು ಎಂದು ಕಣ್ಣು ಮುಚ್ಚಿ ಕುಳಿತಾಗ ನಮಗೆ ನಮ್ಮ ಇಷ್ಟವಾದ ವಸ್ತು ಅಥವಾ ವ್ಯಕ್ತಿ ಕಾಣಬಹುದು. ಆಗ ಆ ವ್ಯಕ್ತಿಯೊಳಗೆ/ವಸ್ತುವಿನೊಳಗೆ ನಾವು ಭಗವಂತನನ್ನು ಕಾಣಲು ಪ್ರಯತ್ನಿಸಬೇಕು (ಏಕೆಂದರೆ ಭಗವಂತ ಸರ್ವಾಂತರ್ಯಾಮಿ-ಆತ ಎಲ್ಲವುದರ ಒಳಗೂ ಹೊರಗೂ ತುಂಬಿ ನಿಂತಿದ್ದಾನೆ). ನಂತರ “ಸೂರ್ಯನಲ್ಲಿ ಭಗವಂತನಿದ್ದಾನೆ, ಸೌರಶಕ್ತಿ ಆತನ ಕೊಡುಗೆ” ಎಂದು ಅನುಸಂಧಾನ ಮಾಡಬೇಕು. ನಂತರ ಸೌರಮಂಡಲದ ಮಧ್ಯದಲ್ಲಿ ಭಗವಂತನ ಪಾದವನ್ನು ಕಾಣುವ ಪ್ರಯತ್ನ ಮಾಡಬೇಕು. ಆ ಪಾದದ ಬೆರಳಿನ ತುದಿಯಿಂದ ಚಿಮ್ಮಿದ ಬೆಳಕು ನಮ್ಮ ಹೃದಯವನ್ನು ಪ್ರವೇಶಿಸಿ ಬೆಳಗುತ್ತಿರುವುದನ್ನು ಧ್ಯಾನದಲ್ಲಿ ನಾವು ಅನುಭವಿಸಬೇಕು. ಇದು ಧ್ಯಾನದಲ್ಲಿ ಹಂತ ಹಂತವಾಗಿ ನಾವು ಭಗವಂತನನ್ನು ಕಾಣುವ ಪ್ರಕ್ರಿಯೆ. ಭಗವಂತ ಈ ಜಗತ್ತಿನ ಎಲ್ಲ ಬೆಳಕುಗಳಿಗೂ ಬೆಳಕು ಕೊಟ್ಟವ. ನಮ್ಮ ಅಂತರಂಗವನ್ನು ಬೆಳಗಿಸುವ ಸಾಮರ್ಥ್ಯ ಇರುವುದು ಕೇವಲ ಭಗವಂತನಿಗೆ. ಭಗವಂತನೆಂಬ ಬೆಳಕು ಕತ್ತಲನ್ನು ಮೀರಿದ್ದು. ಅದು ಜ್ಞಾನಾನಂದಸ್ವರೂಪದ ಬೆಳಕು. ಭಗವಂತನನ್ನು ಪೂರ್ಣ ತಿಳಿದವನು ಭಗವಂತನೊಬ್ಬನೆ. ನಾವು ಯಥಾಶಕ್ತಿ ಆತನನ್ನು ತಿಳಿಯುವ ಪ್ರಯತ್ನವನ್ನು ಮಾಡಬೇಕು. ಭಗವಂತ ನಮ್ಮ ಹೃದಯದಲ್ಲೇ ನೆಲೆಸಿದ್ದಾನೆ. ಆತ ಎಲ್ಲಕ್ಕಿಂತ ವಿಲಕ್ಷಣನಾಗಿ ನಮ್ಮ ಹೃತ್ಕಮಲ ಮಧ್ಯದಲ್ಲಿ ಸೂಕ್ಷಕ್ಕಿಂತ ಸೂಕ್ಷ್ಮನಾಗಿ ನೆಲೆಸಿದ್ದಾನೆ. ಇಂಥಹ ಭಗವಂತನನ್ನು ನಾವು ಭಕ್ತಿಪೂರ್ವಕ ಜ್ಞಾನದಿಂದ ಮಾತ್ರ ಅರಿಯಲು ಸಾಧ್ಯ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 01 ಹಿಂದಿನ ಅಧ್ಯಾಯದ ಕೊನೆಯಲ್ಲಿ ಭಗವಂತ “ನಿಷ್ಕಾಮ ಭಕ್ತಿಯಿಂದ ಮಾತ್ರ ನನ್ನನ್ನು ಕಾಣಲು ಸಾಧ್ಯ” ಎಂದು ಹೇಳಿದ. …

Leave a Reply

Your email address will not be published. Required fields are marked *