ಶ್ಲೋಕ – 15
ಬಹಿರಂತಶ್ಚ ಭೂತಾನಾಮಚರಂ ಚರಮೇವ ಚ ।
ಸೂಕ್ಷ್ಮತ್ವಾತ್ ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್ ॥೧೫॥
ಬಹಿಃ ಅಂತಃ ಚ ಭೂತಾನಾಮ್ ಆಚರಮ್ ಚರಮ್ ಏವ ಚ ।
ಸೂಕ್ಷ್ಮತ್ವಾತ್ ತತ್ ಅವಿಜ್ಞೇಯಮ್ ದೂರಸ್ಥಮ್ ಚ ಅಂತಿಕೇ ಚ ತತ್ –ಅದು ಜೀವಿಗಳ ಹೊರಗಿದೆ; ಒಳಗೂ ಇದೆ; ಆದರೂ ಎಲ್ಲೆಡೆ ಚಲಿಸುತ್ತಿದೆ. ಅದು ಅಣುವಿಗಿಂತ ಅಣು; ಅದಕೆಂದೆ ತಿಳಿವಿಗೆಟುಕದ್ದು. ಅದು ದೂರದಲ್ಲಿದ್ದರೂ ಎಲ್ಲರ ಹತ್ತಿರದಲ್ಲಿದೆ.
ಭೂತ ಎಂದರೆ ಸಮಸ್ತ ಬ್ರಹ್ಮಾಂಡ, ಸಮಸ್ತ ಜೀವಜಾತ(ಪಿಂಡಾಂಡ). ಭಗವಂತ ಈ ಬ್ರಹ್ಮಾಂಡದ ಒಳಗೂ ಹೊರಗೂ ತುಂಬಿದ್ದಾನೆ. ನಾರಾಯಣ ಉಪನಿಷತ್ತಿನಲ್ಲಿ ಹೇಳುವಂತೆ “ಅಂತರ್ಬಹಿಶ್ಚ ತತ್-ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ”. ನಮ್ಮ ಒಳಗೆ ಮತ್ತು ಹೊರಗೆ ತುಂಬಿ, ಎಲ್ಲವನ್ನು ವ್ಯಾಪಿಸಿ ನಿಂತಿರುವ ಭಗವಂತ-ನಾರಾಯಣ. ಒಂದು ಅತಿ ಕ್ಷುದ್ರ ಜೀವದಿಂದ ಹಿಡಿದು ಚತುರ್ಮುಖ ಬ್ರಹ್ಮನ ತನಕ ಎಲ್ಲರ ಒಳಗೂ ಹೊರಗೂ ಭಗವಂತ ತುಂಬಿದ್ದಾನೆ. ನಮ್ಮ ಒಳಗೆ ಅಂತರ್ಯಾಮಿಯಾಗಿ ಬಿಂಬರೂಪದಲ್ಲಿದ್ದು ನಮ್ಮನ್ನು ನಡೆಸುತ್ತಿದ್ದಾನೆ ಮತ್ತು ನಮ್ಮ ಹೊರಗೆ ನಿಂತು ನಮ್ಮನ್ನು ಧಾರಣೆ ಮಾಡಿದ್ದಾನೆ. ಜ್ಞಾನಿಗಳಿಗೆ ಅವರ ಅಂತರಂಗದಲ್ಲಿ ದರ್ಶನ ಕೊಡುವ ಭಗವಂತ ಅಜ್ಞಾನಿಗಳಿಗೆ ಬಹಿ(ಬಹುದೂರ). ಸರ್ವಗತನಾದ ಭಗವಂತ ಅಚಲ ಆದರೆ ಆತನ ಅನಂತ ರೂಪಗಳು ಸದಾ ಚಲಿಸುತ್ತಿರುತ್ತವೆ. ಸಮಸ್ತ ಚರಾಚಾರಾತ್ಮಕ ಜೀವದೊಳಗೆ ಭಗವಂತ ತುಂಬಿ ನಿಂತಿದ್ದಾನೆ. ಭಗವಂತ ಅಣುವಿನೊಳಗೆ ಅಣುವಾಗಿ ತುಂಬಿದ್ದಾನೆ. ಭಗವಂತ ಜ್ಞೇಯ ಆದರೆ ವಿಜ್ಞೇಯ ಅಲ್ಲ. ಭಗವಂತನ ವಿವರವನ್ನು ನಾವು ಕಿಂಚಿತ್ ತಿಳಿಯಬಹುದು ಆದರೆ ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ನಾವು ಸಮುದ್ರದಲ್ಲಿರುವ ಒಂದು ಪುಟ್ಟ ಮೀನಿನಂತೆ. ಅದು ಹೇಗೆ ಸಮುದ್ರದ ಅಗಾಧತೆಯನ್ನು ತಿಳಿಯಲಾರದೋ ಹಾಗೆ ಜಗತ್ತಿನ ಯಾವ ಜೀವಜಾತವೂ ಭಗವಂತನನ್ನು ಪೂರ್ಣವಾಗಿ ತಿಳಿಯಲಾರವು. ಏಕೆಂದರೆ ಅದು ನಮ್ಮ ಮನಸ್ಸು ಗ್ರಹಿಸಲಾರದಷ್ಟು ಸೂಕ್ಷ್ಮ ಮತ್ತು ಅಗಾಧ.