ಶ್ಲೋಕ – 14
ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯವಿವರ್ಜಿತಮ್ ।
ಅಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತೃ ಚ ॥೧೪॥
ಸರ್ವೇಂದ್ರಿಯ ಗುಣ ಆಭಾಸಂ ಸರ್ವೇಂದ್ರಿಯ ವಿವರ್ಜಿತಮ್ ।
ಅಸಕ್ತಮ್ ಸರ್ವಭೃತ್ ಚ ಏವ ನಿರ್ಗುಣಮ್ ಗುಣಭೋಕ್ತೃ ಚ –ಎಲ್ಲ ಇಂದ್ರಿಯಗಳನ್ನು, ಎಲ್ಲ ವಿಷಯಗಳನ್ನು ಬೆಳಗಿಸುತ್ತಿರುವುದು; ಅದಕೆ ಭೌತಿಕವಾದ ಯಾವ ಇಂದ್ರಿಯಗಳೂ ಇಲ್ಲ. ಯಾವುದಕು ಅಂಟದೆ ಎಲ್ಲವನು ಹೊತ್ತಿದೆ. ತ್ರಿಗುಣಗಳ ನಂಟಿಲ್ಲ; ಎಲ್ಲ ಸದ್ಗುಣಗಳ ನೆಲೆ.
ಜಗತ್ತಿನಲ್ಲಿರುವ ಎಲ್ಲ ಜೀವಜಾತಗಳು ತಮ್ಮ ಇಂದ್ರಿಯಗಳಿಂದ ಇಂದ್ರಿಯ ವಿಷಯವನ್ನು ಗ್ರಹಿಸುವುದು ಭಗವಂತನಿಂದ. ಇಂಥಹ ಭಗವಂತನಿಗೆ ಪಾಂಚಭೌತಿಕವಾದ, ನಶ್ವರವಾದ, ನಮ್ಮಂತೆ ಒಂದು ದಿನ ನಾಶವಾಗುವ, ತನ್ನ ಸ್ವರೂಪಕ್ಕಿಂತ ಭಿನ್ನವಾದ ಯಾವ ಇಂದ್ರಿಯಗಳೂ ಇಲ್ಲ. ಈ ಜಗತ್ತನ್ನು ಹೊತ್ತಿರುವ ತಂದೆ ಆ ಭಗವಂತ ಗಂಡು. ಜಗತ್ತನ್ನು ಹೆತ್ತ ಆತ ತಾಯಿಯೂ ಹೌದು. ಭೌತಿಕವಾಗಿ ಆತ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಆತ ಸ್ವರೂಪಭೂತವಾಗಿ ಗಂಡೂ ಹೌದು-ಹೆಣ್ಣೂ ಹೌದು. ಭಗವಂತ ಎಲ್ಲರೊಳಗೆ ತುಂಬಿದ್ದಾನೆ ಆದರೆ ಆತ ಯಾವುದನ್ನೂ ಅಂಟಿಸಿಕೊಂಡಿಲ್ಲ. ಆತ ಎಲ್ಲವನ್ನು ಹೊತ್ತಿದ್ದಾನೆ ಆದರೆ ಅದರ ಬಾಂಧವ್ಯದ ಬೆಸುಗೆ(Attachment) ಆತನಿಗಿಲ್ಲ. ಭಗವಂತ ತ್ರಿಗುಣಾತೀತ. ಆತನಿಗೆ ತ್ರಿಗುಣಗಳ ನಂಟಿಲ್ಲ. ಆದರೆ ಆತ ಸದ್ಗುಣಗಳ ನೆಲೆ. ಅವನು ನಿರಾಕಾರನೂ ಹೌದು, ಸಾಕಾರನೂ ಹೌದು.