ಶ್ಲೋಕ – 13
ಸರ್ವತಃಪಾಣಿಪಾದಂ ತತ್ ಸರ್ವತೋSಕ್ಷಿಶಿರೋಮುಖಮ್ ।
ಸರ್ವತಃಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ॥೧೩॥
ಸರ್ವತಃಪಾಣಿಪಾದಮ್ ತತ್ ಸರ್ವತಃ ಅಕ್ಷಿ ಶಿರಃ ಮುಖಮ್ ।
ಸರ್ವತಃ ಶ್ರುತಿಮತ್ ಲೋಕೇ ಸರ್ವಮ್ ಆವೃತ್ಯ ತಿಷ್ಠತಿ—ಎಲ್ಲೆಡೆಯು ಅದಕ್ಕೆ ಕೈಕಾಲುಗಳು; ಎಲ್ಲೆಡೆಯು ಕಣ್ಣು-ತಲೆ-ಬಾಯಿಗಳು; ಎಲ್ಲೆಡೆಯು ಅದಕ್ಕೆ ಕಿವಿ; ಅದು ಲೋಕದೊಳಗೆಲ್ಲವನು ಆವರಿಸಿ ನಿಂತಿದೆ.
ಭಗವಂತ ಎಲ್ಲೆಡೆ ತುಂಬಿದ್ದಾನೆ. ಆತನಿಗೆ ಎಲ್ಲಕಡೆ ಕೈ ಕಾಲುಗಳು; ಎಲ್ಲ ಕಡೆ ಕಿವಿ, ಮುಖ, ಬಾಯಿ, ಕಣ್ಣು.(ಸಂಸ್ಕೃತದಲ್ಲಿ ಮುಖ ಎಂದರೆ ಮುಖವೂ ಹೌದು-ಬಾಯಿಯೂ ಹೌದು. ಸಮೃದ್ಧವಾದ ಈ ಭಾಷೆಯಲ್ಲಿ ‘ಬಾಯಿ’ಯನ್ನು ಸೂಚಿಸುವ ಪ್ರತ್ಯೇಕ ಪದ ಇಲ್ಲ!). ಈ ಕಾರಣದಿಂದ ಭಗವಂತನಿಗೆ ತಿಳಿಯದಂತೆ ನಾವು ಯಾವ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಆತ ಸರ್ವಜ್ಞ, ಸರ್ವಗತ, ಸರ್ವಸಮರ್ಥ. ಇದೆಲ್ಲವನ್ನು ಶ್ರುತಿ ಪ್ರಮಾಣಿಕರಿಸುತ್ತದೆ. ಆದಿಯಲ್ಲಿ ವೇದವನ್ನು ಉಚ್ಛಾರ ಮಾಡಿದವನು ಭಗವಂತ. ಆತ ಎಲ್ಲವುದರ ಒಳಗೂ ಹೊರಗೂ ಆವರಿಸಿ ನಿಂತಿದ್ದಾನೆ. ಅಖಂಡವಾದ ಭಗವಂತನೊಳಗೆ ಆತನ ಅನಂತ ರೂಪಗಳಿವೆ. ಪ್ರತಿಯೊಂದು ರೂಪಕ್ಕೂ ಜ್ಞಾನಾನಂದಮಯವಾದ, ಸ್ವರೂಪಭೂತವಾದ ಇಂದ್ರಿಯಗಳಿವೆ. ನಮ್ಮ ಸರ್ವ ಇಂದ್ರಿಯದಲ್ಲೂ ಆತ ತುಂಬಿ ನಿಂತು ನಡೆಸುತ್ತಿದ್ದಾನೆ.