ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01

ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ ಅಧ್ಯಾಯ. ಈ ಹಿಂದಿನ ಹನ್ನೆರಡು ಅಧ್ಯಾಯಗಳಲ್ಲಿ ಏನು ಹೇಳಲಾಗಿದೆ ಅವೆಲ್ಲವನ್ನು ಸಂಗ್ರಹ ಮಾಡಿ ಈ ಅಧ್ಯಾಯದಲ್ಲಿ ಹೇಳಲಾಗಿದೆ. ಆದ್ದರಿಂದ ಹಿಂದಿನ ಎರಡು ಷಟ್ಕಗಳಲ್ಲಿ ಕಂಡ ವಿಷಯಗಳ ಪೂರ್ಣ ವಿಶ್ಲೇಷಣೆ ಈ ಅಧ್ಯಾಯ. ಜಡಪ್ರಪಂಚ, ಅದರಲ್ಲಿ ಪ್ರಕೃತಿಯಲ್ಲಿ ಬದ್ಧನಾಗಿ, ಪ್ರಕೃತಿಯಿಂದ ಪಾರಾಗಲು ಬಯಸುವ ಜೀವ. ಪಾರಾಗುವುದಕ್ಕೊಸ್ಕರ ಜ್ಞಾನದ ಅನುಸಂಧಾನ ಮತ್ತು ಸಾಧನೆ- ಈ ಎಲ್ಲಾ ವಿಷಯಗಳನ್ನು ನಾವು ಹಿಂದಿನ ಅಧ್ಯಾಯಗಳಲ್ಲಿ ವಿಕ್ಷಿಪ್ತವಾಗಿ ನೋಡಿದ್ದೇವೆ. ಅದೆಲ್ಲವುದರ ಒಂದು ಸಮಷ್ಠಿ ಸಂಗ್ರಹ(ಸರ್ವಾರ್ತ ಸಂಕ್ಷೇಪಃ) ಈ ಅಧ್ಯಾಯ. ಈ ಅಧ್ಯಾಯ ಗೀತೆಯಲ್ಲಿ ಅತ್ಯಂತ ಗ್ರಾಹ್ಯವಾದ ಅಧ್ಯಾಯ.

ಇಲ್ಲಿ ಪ್ರಾರಂಭದಲ್ಲಿ ಒಂದು ಶ್ಲೋಕವಿದೆ. ಈ ಅಧ್ಯಾಯದಲ್ಲಿ ಮುಂದೆ ಏನು ವಿವರಣೆ ಬರುತ್ತದೆ ಅದನ್ನು ತಾನು ತಿಳಿಯಬೇಕೆಂದು ಅರ್ಜುನ ಕೃಷ್ಣನನ್ನು ಕೇಳುವ ಶ್ಲೋಕ. ಈ ಶ್ಲೋಕ ಹೀಗಿದೆ:

ಪ್ರಕೃತಿಂ ಪುರುಷಂ ಚೈವ ಕ್ಷೇತ್ರಂ ಕ್ಷೇತ್ರಜ್ಞಮೇವ ಚ |
ಏತದ್ ವೇದಿತುಮಿಚ್ಛಾಮಿ ಜ್ಞಾನಂ ಜ್ಞೇಯಂ ಚ ಕೇಶವ ||

ಅರ್ಥಾತ್- “ಕೇಶವ, ನಾನಿದನ್ನು ತಿಳಿಯಬಯಸುತ್ತೇನೆ: ಪ್ರಕೃತಿಯನ್ನು, ಪುರುಷನನ್ನು, ಕ್ಷೇತ್ರವನ್ನು, ಕ್ಷೇತ್ರಜ್ಞನನ್ನು, ಜ್ಞಾನವನ್ನು ಮತ್ತು ಜ್ಞೇಯವನ್ನು”.

ವಾಸ್ತವವಾಗಿ ಈ ಶ್ಲೋಕ ಭಗವದ್ಗೀತೆಯ ಶ್ಲೋಕವಲ್ಲ. ಪ್ರಾಚೀನ ಭಾಷ್ಯಕಾರರು ಯಾರೂ ಈ ಶ್ಲೋಕವನ್ನು ಗೀತೆಯ ಶ್ಲೋಕವೆಂದು ಪರಿಗಣಿಸಿಲ್ಲ. ಬಹಳ ಮಂದಿಯ ಅಭಿಪ್ರಾಯದಂತೆ ಇದು ಪ್ರಕ್ಷಿಪ್ತಶ್ಲೋಕ. ಗೀತೆಯಲ್ಲಿ ಒಟ್ಟು ಏಳುನೂರು ಶ್ಲೋಕಗಳಿವೆ. ಅದಕ್ಕಾಗಿ ಗೀತೆಯನ್ನು ‘ಸಪ್ತಶತಿ’ ಎಂದು ಕರೆಯುತ್ತಾರೆ. [ಇದಕ್ಕಾಗಿ ವಾದಿರಾಜರು ತಮ್ಮ ಯುಕ್ತಿಮಲ್ಲಿಕಾದಲ್ಲಿ ಬ್ರಹ್ಮಸೂತ್ರ ಮತ್ತು ಭಗವದ್ಗೀತೆಯನ್ನು ರಚಿಸಿದ ವೇದವ್ಯಾಸರನ್ನು ‘ಸೂತ್ರಸಪ್ತಶತೀಪತೇ’ ಎಂದು ಸಂಬೊಧಿಸಿದ್ದಾರೆ]. ಇಂಥಹ ಏಳುನೂರು ಶ್ಲೋಕಗಳಿರುವ ಭಗವದ್ಗೀತೆಗೆ ಈ ಮೇಲಿನ ಶ್ಲೋಕವನ್ನು ಸೇರಿಸಿದರೆ ಒಟ್ಟು ಏಳುನೂರ ಒಂದು ಶ್ಲೋಕವಾಗುತ್ತದೆ. ಇನ್ನು ಈ ಶ್ಲೋಕದಲ್ಲಿ ಕೇಳಲಾದ ಪ್ರಶ್ನೆಗೆ ಸಂಬಂಧಪಟ್ಟಂತೆ ಹಿಂದಿನ ಅಧ್ಯಾಯದ ಕೊನೆಯಲ್ಲಿ ಎಲ್ಲೂ ಕೃಷ್ಣ ಉಲ್ಲೇಖ ಮಾಡಿಲ್ಲ. ಈ ಕಾರಣದಿಂದ ಇಲ್ಲಿ ಅರ್ಜುನ ಈ ರೀತಿ ಪ್ರಶ್ನೆ ಮಾಡುವ ಸಾಧ್ಯತೆ ಇಲ್ಲ. ಆದ್ದರಿಂದ ಈ ಶ್ಲೋಕ ಪ್ರಕ್ಷಿಪ್ತಶ್ಲೋಕ. ಗೀತೆಯ ಏಳುನೂರು ಶ್ಲೋಕಗಳಲ್ಲಿ ಇದು ಸೇರಿಲ್ಲ.

ನೇರವಾಗಿ ಕೃಷ್ಣ ಅರ್ಜುನನಿಗೆ ಕ್ಷೇತ್ರ ಮತ್ತು ಕ್ಷೇತ್ರಜ್ಞ ಎನ್ನುವುದರ ಶಾಸ್ತ್ರೀಯ ಅರ್ಥವನ್ನು ವಿವರಿಸುವುದರೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ.

ಭಗವಾನುವಾಚ ।
ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ ।
ಏತದ್ ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ ॥೧॥

ಭಗವಾನ್ ಉವಾಚ-ಭಗವಂತ ಹೇಳಿದನು :

ಇದಮ್ ಶರೀರಮ್ ಕೌಂತೇಯ ಕ್ಷೇತ್ರಮ್ ಇತಿ ಅಭಿಧೀಯತೇ ।

ಏತತ್ ಯಃ ವೇತ್ತಿ ತಮ್ ಪ್ರಾಹುಃ ಕ್ಷೇತ್ರಜ್ಞಃ ಇತಿ ತತ್ ವಿದಃ –ಭಗವಂತನ ಶರೀರದಂತಿರುವ ಈ ಚರಾಚರ ವಿಶ್ವ ‘ಕ್ಷೇತ್ರ’ ಎನಿಸಿದೆ. ಇದನ್ನು ಅರಿತವನನ್ನು ಬಲ್ಲವರು ‘ಕ್ಷೇತ್ರಜ್ಞ’ ಎನ್ನುತ್ತಾರೆ.

‘ಕ್ಷೇತ್ರ’ ಅನ್ನುವ ಪದಕ್ಕೆ ಒಂದು ನಿಶ್ಚಿತ ಅರ್ಥವಿಲ್ಲ. ಈ ಶ್ಲೋಕದಲ್ಲಿ ಕ್ಷೇತ್ರಂ ಅನ್ನುವ ಪದವನ್ನು ಯಾವ ರೀತಿ ಅರ್ಥಮಾಡಿಕೊಳ್ಳಬೇಕು ಎನ್ನುವ ಸುಳಿವನ್ನು ಕೃಷ್ಣ ಕೊಟ್ಟಿದ್ದಾನೆ. ಕ್ಷೇತ್ರ ಎಂದರೆ ‘ಇದಂ ಶರೀರಂ’ ಎಂದಿದ್ದಾನೆ ಕೃಷ್ಣ. ಆದ್ದರಿಂದ ಇಲ್ಲಿ ಕ್ಷೇತ್ರ ಎಂದರೆ ಜೀವ ವಾಸಮಾಡುವ ನೆಲೆಮನೆ ಪಿಂಡಾಂಡದಿಂದ- ಬ್ರಹ್ಮಾಂಡದ ತನಕ ಎಲ್ಲವೂ ಹೌದು. ಈ ಬ್ರಹ್ಮಾಂಡಕ್ಕೆ ‘ಕ್ಷೇತ್ರ ಮತ್ತು ಶರೀರ’ ಅನ್ನುವುದು ಅನ್ವರ್ಥನಾಮ(epithet). ಇಂಥಹ ಕ್ಷೇತ್ರವನ್ನು ಯಾರು ಸಮಗ್ರವಾಗಿ ತಿಳಿದಿದ್ದಾನೋ ಅವನು ‘ಕ್ಷೇತ್ರಜ್ಞ’. ಯಾರೀತ? ಮುಂದಿನ ಶ್ಲೋಕದಲ್ಲಿ ನೋಡೋಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 01 ಹಿಂದಿನ ಅಧ್ಯಾಯದ ಕೊನೆಯಲ್ಲಿ ಭಗವಂತ “ನಿಷ್ಕಾಮ ಭಕ್ತಿಯಿಂದ ಮಾತ್ರ ನನ್ನನ್ನು ಕಾಣಲು ಸಾಧ್ಯ” ಎಂದು ಹೇಳಿದ. …

Leave a Reply

Your email address will not be published. Required fields are marked *