ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 09

ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್ ।
ಅಭ್ಯಾಸಯೋಗೇನ ತತೋ ಮಾಮಿಚ್ಛಾSಪ್ತುಂ ಧನಂಜಯ ॥೯॥

ಅಥ ಚಿತ್ತಮ್ ಸಮಾಧಾತುಮ್ ನ ಶಕ್ನೋಷಿ ಮಯಿ ಸ್ಥಿರಮ್ ।

ಅಭ್ಯಾಸಯೋಗೇನ ತತಃ ಮಾಮ್ ಇಚ್ಛಾ ಆಪ್ತುಂ ಧನಂಜಯ –ಧನಂಜಯ, ಒಂದೊಮ್ಮೆ ನನ್ನಲ್ಲಿ ಒಳಬಗೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗಲಿಲ್ಲ, ಆಗ ಮರಳಿಮರಳಿ ಅಭ್ಯಾಸದ ಬಳಕೆಯಿಂದ ನನ್ನನ್ನು ಸೇರುವ ಬಯಕೆಯನ್ನು ಬೆಳೆಸಿಕೊ.

ಮನಸ್ಸಿನಲ್ಲಿ ಭಗವಂತನ ಬಗ್ಗೆ ಭಕ್ತಿ ಇದೆ, ಬುದ್ಧಿಯಲ್ಲಿ ಜ್ಞಾನಪೂರ್ಣ ಭಕ್ತಿಯ ಅಂಕುರವಿದೆ. ಆದರೂ ಕೂಡ ಸ್ಥಿರವಾದ ಸ್ಮರಣೆ ಬರುತ್ತಿಲ್ಲ, ಮನಸ್ಸು ಗಟ್ಟಿಯಾಗಿ ನೆಲೆಗೊಳ್ಳುತ್ತಿಲ್ಲ ಆಗ ಏನು ಮಾಡುವುದು? ಶಾಸ್ತ್ರದಲ್ಲಿ ಹೇಳುವಂತೆ:

ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವ್ಯೋ ನ ಜಾತುಚಿತ್ |

ಸರ್ವೇ ವಿಧಿ ನಿಷೆಧಾಸ್ಸ್ಯುಹುಃ ಏತಯೋರೇವ ಕಿಂಕರಾಃ ||

ಅಂದರೆ ‘ನಾವು ನಿರಂತರ ಭಗವಂತನನ್ನು ನೆನಪಿನಲ್ಲಿಡಬೇಕು, ಎಂದೂ ಭಗವಂತನನ್ನು ಮರೆಯಬಾರದು’. ಸಮಸ್ತ ವಿಧಿನಿಷೇಧ ಹೇಳುವುದು ಕೂಡಾ ಇದನ್ನೆ. ಮನಸ್ಸು ನಿರಂತರ ಭಗವಂತನಲ್ಲಿ ನಿಲ್ಲದೆ ಈ ಅಖಂಡ ಸ್ಮರಣೆ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದನ್ನು ಕೃಷ್ಣ ವಿವರಿಸುತ್ತಾನೆ. “ಮನಸ್ಸನ್ನು ಏಕಾಗ್ರತೆಯೆಡೆಗೆ ಕೊಂಡೊಯ್ಯುವ ಶಕ್ತಿ ಕೊಡು ಎಂದು ನನ್ನನ್ನು ಪ್ರಾರ್ಥಿಸು. ಅಧ್ಯಾತ್ಮದ ದಾರಿಯಲ್ಲಿ ಏನು ಇಚ್ಛೆ ಮಾಡಿದರೂ ಅದನ್ನು ಪೂರೈಸುವ ಜವಾಬ್ಧಾರಿ ನನ್ನದು” ಎನ್ನುವ ಭರವಸೆ ಕೃಷ್ಣನದು. ಅಭ್ಯಾಸ ಮತ್ತು ಇಚ್ಛೆ ಇದ್ದರೆ ಖಂಡಿತವಾಗಿ ಏಕಾಗ್ರತೆ ಸಾಧ್ಯ. ನಾವು ಹೇಗೆ ಮಕ್ಕಳಿಗೆ ತರಬೇತಿಕೊಟ್ಟು, ಅಭ್ಯಾಸ ಮಾಡಿಸಿ ಕಲಿಸುತ್ತೇವೆ, ಹಾಗೆ ನಮ್ಮ ಮನಸ್ಸನ್ನು ರಮಿಸಿರಮಿಸಿ ಬುದ್ಧಿವಾದ ಹೇಳಿ ಅಭ್ಯಾಸಮಾಡಿಸಬೇಕು. ಹೀಗೆ ಮಾಡಿದಾಗ ಮನಸ್ಸು ಅದನ್ನು ರೂಢಿ ಮಾಡಿಕೊಳ್ಳುತ್ತದೆ. ಮೊದಲು ನಾವು ಲೌಕಿಕ ಸಂಪತ್ತಿನ ಬೆನ್ನುಹತ್ತುವುದನ್ನು ಬಿಟ್ಟು, ಭಗವಂತನೆಂಬ ಅಮೂಲ್ಯ ಧನವನ್ನು ಗೆಲ್ಲುವ ಧನಂಜಯರಾಗಬೇಕು.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *