ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 03 & 04

ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ ।
ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಮ್ ॥೩॥

ಸನ್ನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ ।
ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ ॥೪॥

ಯೇತು ಅಕ್ಷರಮ್ ಅನಿರ್ದೇಶ್ಯಮ್ ಅವ್ಯಕ್ತಮ್ ಪರ್ಯುಪಾಸತೇ ।

ಸರ್ವತ್ರಗಮ್ ಆಚಿಂತ್ಯಮ್ ಚ ಕೂಟಸ್ಥಮ್ ಅಚಲಮ್ ಧ್ರುವಮ್ ॥

ಸನ್ನಿಯಮ್ಯಇಂದ್ರಿಯ ಗ್ರಾಮಮ್ ಸರ್ವತ್ರ ಸಮ ಬುದ್ಧಯಃ ।

ತೇ ಪ್ರಾಪ್ನುವಂತಿ ಮಾಮ್ ಏವ ಸರ್ವ ಭೂತ ಹಿತೇ ರತಾಃ –ಅವ್ಯಕ್ತವೂ ಅಳಿವಿರದ ತತ್ವ. ಮಾತಿಗೆ ನಿಲುಕದ, ಚಿಂತನೆಗೆ ಎಟುಕದ ತತ್ವ. ಆಗಸದಲ್ಲಿ ನೆಲೆಸಿ ಎಲ್ಲೆಡೆಯು ತುಂಬಿರುವಂಥದು. ನೆಲೆಗೆಡದ ನಿರ್ವಿಕಾರವಾದ ತತ್ವ. ಇಂದ್ರಿಯಗಳ ಗಡಣವನ್ನು ಬಿಗಿಹಿಡಿದು ಎಲ್ಲೆಡೆಯು ಸಮದೃಷ್ಟಿಯಿಂದ ಎಲ್ಲ ಪ್ರಾಣಿಗಳಿಗೆ ಒಳಿತನ್ನು ಬಯಸುತ್ತ ಇಂಥ ಅವ್ಯಕ್ತತತ್ವವನ್ನು ಸೇವಿಸುವವರೂ ಕೂಡ ನನ್ನನ್ನೆ ಸೇರುತ್ತಾರೆ.

ಅವ್ಯಕ್ತತತ್ವ ಲಕ್ಷ್ಮಿಯ ಉಪಾಸನೆಯ ಬಗ್ಗೆ ಇಲ್ಲಿ ಕೃಷ್ಣ ವಿವರಿಸುತ್ತಾನೆ. ಲೋಕನೀತಿಗೂ ಭಗವಂತನ ಉಪಾಸನೆಯಲ್ಲೂ ಒಂದು ವೆತ್ಯಾಸವಿದೆ. ಲೋಕದಲ್ಲಿ ಸಾಮಾನ್ಯವಾಗಿ ತಾಯಿ ಯಾವಾಗಲೂ ತನ್ನ ಮಕ್ಕಳ ತಪ್ಪನ್ನು ಕ್ಷಮಿಸುತ್ತಾಳೆ ಮತ್ತು ತಂದೆ ಶಿಕ್ಷಿಸುತ್ತಾನೆ. ಆದರೆ ತಾಯಿ ಶ್ರೀಲಕ್ಷ್ಮಿ ಉಪಾಸನೆ ಮತ್ತು ಭಗವಂತನ ಉಪಾಸನೆಯಲ್ಲಿ ಇದು ವ್ಯತಿರಿಕ್ತ. ಉಪಾಸನೆಯಲ್ಲಿ ಏನಾದರೂ ಲೋಪ ದೋಷಗಳಾದರೆ ಮಾತೆ ಕ್ಷಮಿಸಲಾರಳು, ಆದರೆ ಭಗವಂತ ಕ್ಷಮಿಸುತ್ತಾನೆ. ಈ ಕಾರಣಕ್ಕಾಗಿ ಅವ್ಯಕ್ತಳಾದ ಅಕ್ಷರಳ ಉಪಾಸನೆ ಕಷ್ಟ. ಇಲ್ಲಿ ಕೃಷ್ಣ ಮಾತೆ ಲಕ್ಷ್ಮಿಯನ್ನು ಉಪಾಸನೆ ಮಾಡುವವರು ತಿಳಿದಿರಬೇಕಾದ ಅಂಶಗಳನ್ನು ವಿವರಿಸುತ್ತಾನೆ. ಈ ವಿವರಣೆಯನ್ನು ಅನೇಕ ವಿಶೇಷಣಗಳನ್ನು ಬಳಸಿ ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಅಳಿವಿರದ ದೇಹವುಳ್ಳ ಆಕೆ ಅಕ್ಷರಳು; ನಮ್ಮ ಬುದ್ಧಿಗೆ ಗೋಚರವಾಗದ ಪ್ರಕೃತಿ ಅನಿರ್ದೇಶ್ಯಳು; ಎಂದೂ ವ್ಯಕ್ತವಾಗದ ಲಕ್ಷ್ಮಿ ಅವ್ಯಕ್ತಳು. ಈ ಎಲ್ಲಾ ಗುಣಗಳು ಭಗವಂತನಿಗೂ ಅನ್ವಯವಾಗುತ್ತದೆ. ಜಗತ್ತಿನ ಸೃಷ್ಟಿಗೆ ಮೂಲ ತತ್ವವಾದ ಆಕಾಶದಲ್ಲಿ ನೆಲಸಿ, ಇಡೀ ವಿಶ್ವದ ವಿಸ್ತಾರಕ್ಕೆ ಕಾರಣಳಾದವಳು ಲಕ್ಷ್ಮಿ. ಸ್ಥಿರ ಮತ್ತು ಶಾಶ್ವತವಾಗಿರುವ ಆಕೆ ಸದಾ ಭಗವಂತನ ಪಾದವನ್ನು ಸೇವಿಸುತ್ತಿರುತ್ತಾಳೆ. ಇಂಥಹ ಶಕ್ತಿ ದೇವತೆಯನ್ನು ಉಪಾಸನೆ ಮಾಡಲು ಕಠೋರವಾದ ಇಂದ್ರಿಯ ನಿಗ್ರಹ ಅಗತ್ಯ. ಎಲ್ಲವನ್ನೂ ಸಮಬುದ್ಧಿಯಿಂದ ಕಾಣುತ್ತ, ಯಾವುದೇ ನ್ಯೂನತೆ ಇಲ್ಲದೆ ಉಪಾಸನೆ ಮಾಡುವುದು ಇಲ್ಲಿ ಅತ್ಯಗತ್ಯ. [ಉದಾಹರಣೆಗೆ ಲಲಿತ ಸಹಸ್ರನಾಮ ಪಾರಾಯಣ. ಇಲ್ಲಿ ಸ್ವಲ್ಪ ಲೋಪದೋಷವಾದರೂ ಕೂಡ ಅದರಿಂದ ಅನರ್ಥವಾಗುತ್ತದೆ.] ಈ ರೀತಿ ಅತ್ಯಂತ ನಿಯಮಬದ್ಧವಾಗಿ ಅವ್ಯಕ್ತತತ್ವದ ಉಪಾಸನೆಯಿಂದ ಭಗವಂತನನ್ನು ಸೇರಲು ಸಾಧ್ಯ. ಆದರೆ ಇದು ಸುಲಭ ದಾರಿ ಅಲ್ಲ ಎನ್ನುತ್ತಾನೆ ಕೃಷ್ಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *