ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 18 & 19

ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ ।
ಶೀತೋಷ್ಣಸುಖದುಃಖೇಷು ಸಮಃ ಸಂಗವಿವರ್ಜಿತಃ ॥೧೮॥

ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್ ।
ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ ಮೇ ಪ್ರಿಯೋ ನರಃ ॥೧೯॥

ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನ ಅಪಮಾನಯೋಃ ।

ಶೀತ ಉಷ್ಣ ಸುಖ ದುಃಖೇಷು ಸಮಃ ಸಂಗವಿವರ್ಜಿತಃ ॥

ತುಲ್ಯನಿಂದಾಸ್ತುತಿಃ ಮೌನೀ ಸಂತುಷ್ಟಃ ಯೇನ ಕೇನಚಿತ್ ।

ಅನಿಕೇತಃ ಸ್ಥಿರ ಮತಿಃ ಭಕ್ತಿಮಾನ್ ಮೇ ಪ್ರಿಯಃ ನರಃ –ಹಗೆಯ-ಗೆಳೆಯರಲ್ಲಿ ಭೇದ ಬಗೆಯದವನು; ಗೌರವಗಳನ್ನು, ಶೀತ-ಉಷ್ಣಗಳನ್ನು, ಸುಖ-ದುಃಖಗಳನ್ನು ಸಮನಾಗಿ ಕಾಣುವವನು; ಯಾವುದಕ್ಕು ಅಂಟಿಕೊಳ್ಳದವನು; ಹೊಗಳಿಕೆಯನ್ನು ತೆಗಳಕೆಯಂತೆ ಕಾಣುವವನು; ಚಿಂತನಶೀಲನು; ಏನು ಇದೆಯೊ ಅಷ್ಟರಲ್ಲಿ ತೃಪ್ತನಾದವನು; ಒಂದೆಡೆ ನೆಲೆನಿಲ್ಲದವನು [ಭಗವಂತನಲ್ಲಿ ನೆಲೆ ನಿಂತವನು;] ಭಗವಂತನ ಅರಿವು ಗಟ್ಟಿಗೊಂಡವನು-ಭಕ್ತನಾದ ಇಂಥ ಮನುಜ ನನಗೆ ಅಚ್ಚುಮೆಚ್ಚು.

ಸಾಮಾನ್ಯವಾಗಿ ನಾವು ಶತ್ರು ಅಥವಾ ಮಿತ್ರ ಅನ್ನುವ ಭಾವನೆಯನ್ನು ವ್ಯಾವಹಾರಿಕವಾಗಿ ರೂಢಿಸಿಕೊಳ್ಳುತ್ತೇವೆ. ನಮ್ಮನ್ನು ಹೊಗಳುವವರು ನಮಗೆ ಮಿತ್ರರು, ನಮ್ಮ ತಪ್ಪನ್ನು ತೆಗಳುವವರು ಶತ್ರುಗಳು. ಇದು ನಮ್ಮ ಅಪ್ರಭುದ್ದ ನಡೆ. ಸ್ನೇಹದ ಹಿಂದೆ ದ್ವೇಷವಿರಬಹುದು, ದ್ವೇಷದ ಹಿಂದೆ ಸ್ನೇಹವಿರಬಹುದು. ಪುರಂದರದಾಸರು ‘ನಿಂದಕರಿರಬೇಕು’ ಎಂದು ಹಾಡಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ನಿಂದಕರು ನಮ್ಮ ನಿಂದೆ ಮಾಡುವ ಮೂಲಕ ನಮ್ಮಲ್ಲಿರುವ ನಿಂದ್ಯವಾದ ದೋಷಗಳ ಫಲವನ್ನು ತೆಗೆದುಕೊಳ್ಳುತ್ತಾರೆ. ಹೊಗಳುವವರು ಹೊಗಳುವ ಮೂಲಕ ನಮ್ಮಲ್ಲಿರುವ ಒಳ್ಳೆಯತನದ ಪುಣ್ಯದ ಫಲದ ಪಾಲನ್ನು ಪಡೆಯುತ್ತಾರೆ. ಆದ್ದರಿಂದ ಸಾಧನೆಯ ಮಾರ್ಗದಲ್ಲಿ ಹೊಗಳುವವರಿಗಿಂತ ನಿಂದಕರು ಸಹಾಯಕರು. ಈ ಕಾರಣದಿಂದ ಶತ್ರು ಮಿತ್ರ ಎನ್ನುವ ಪರಿಭೇದ ಮಾಡಿಕೊಂಡು ಯಾರನ್ನೋ ಟೀಕೆ ಮಾಡುವುದಾಗಲಿ, ದ್ವೇಷ ಕಟ್ಟಿಕೊಳ್ಳುವುದಾಗಲಿ ಮಾಡಿಕೊಳ್ಳಬೇಡ. ದುರ್ಗುಣದಿಂದ ದೂರವಿರು. ಒಳ್ಳೆಯ ಗುಣವನ್ನು ಪ್ರೀತಿಸು. ಎಲ್ಲಿ ಒಳ್ಳೆಯತನವಿದೆ ಅವರ ಒಡನಾಟಮಾಡು(ಮೈತ್ರಿ); ದುಃಖವನ್ನು ಕಂಡು ಕರಗು(ಕರುಣ); ಇನ್ನೊಬ್ಬರ ಸಂತೋಷವನ್ನು ಕಂಡು ಸಂತೋಷಪಡು(ಮುದಿತತ); ಕೆಟ್ಟತನದಿಂದ ದೂರವಿರು(ಉಪೇಕ್ಷ). ಮೂಲಭೂತವಾಗಿ ಶತ್ರು ಮಿತ್ರ ಎನ್ನುವ ವಿಭಾಗ ಬೇಡ. ಎಲ್ಲರಲ್ಲಿಯೂ ಭಗವಂತನನ್ನು ಕಾಣು. ಲೌಕಿಕ ಶತ್ರು-ಮಿತ್ರ ಭಾವನೆಯನ್ನು ಬಿಟ್ಟುಬಿಡು.

ಸನ್ಮಾನ ಮಾಡಿದಾಗ ಉಬ್ಬಬೇಡ. ಅವಮಾನ ಮಾಡಿದಾಗ ಕುಗ್ಗಬೇಡ. ಮಾನ-ಅವಮಾನವನ್ನು ಗೆಲ್ಲು. ಇನ್ನೊಬ್ಬರು ಏನು ಹೇಳಿದರು ಎನ್ನುವುದು ಮುಖ್ಯವಲ್ಲ. ನಮ್ಮ ಅಂತರಾತ್ಮ ಏನು ಎನ್ನುವುದು ಮುಖ್ಯ. ಇನ್ನೊಬ್ಬರು ಹೊಗಳಿದಾಗ ನಮ್ಮಲ್ಲಿ ಇಲ್ಲದ ಗುಣ ನಮ್ಮನ್ನು ಬಂದು ಸೇರುವುದಿಲ್ಲ. ಅದೇ ರೀತಿ ಇನ್ನೊಬ್ಬರು ತೆಗಳಿದಾಗ ನಾವು ಕೆಳಗೆ ಹೋಗುವುದಿಲ್ಲ. ಹೊಗಳಿಕೆ ಬಗ್ಗೆ ನಾವು ಎಚ್ಚರದಿಂದಿರಬೇಕು. ಏಕೆಂದರೆ ಅದರಿಂದ ನಾವು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಅವಮಾನದಿಂದ ನಾವು ತಪ್ಪು ದಾರಿಯನ್ನು ಬಿಟ್ಟು ಸರಿ ದಾರಿಯಲ್ಲಿ ಸಾಗಿ ಎತ್ತರಕ್ಕೇರುವ ಸಾಧ್ಯತೆ ಇದೆ.

ಸುಖ ದುಃಖವನ್ನು ಸಮನಾಗಿ ಕಾಣು. ಯಾವುದೇ ವಸ್ತು ನಮಗೆ ಸುಖ-ದುಃಖವನ್ನು ಕೊಡುವುದಿಲ್ಲ. ಆ ವಸ್ತುವನ್ನು ನಾವು ನೋಡುವ ಭಾವನೆ ನಮಗೆ ಸುಖ-ದುಃಖವನ್ನು ಕೊಡುತ್ತದೆ. ಆದ್ದರಿಂದ ಶೀತ-ಉಷ್ಣದಂತೆ ಸುಖ-ದುಃಖವನ್ನು ಸಮನಾಗಿ ಕಾಣುವುದನ್ನು ರೂಢಿಸಿಕೊ.

ನಮಗನಿಸುತ್ತದೆ ಇವೆಲ್ಲವೂ ಮಾನವ ಸಹಜಪ್ರವೃತ್ತಿ(Instinct) ಎಂದು. ಆದರೆ ಇದು ಸಹಜ ಧರ್ಮವಲ್ಲ. ನಾವು ಅಂಟಿಸಿಕೊಳ್ಳುವುದರಿಂದ ನಮ್ಮಲ್ಲಿ ನಮಗೆ ಬೇಡವಾದ ಈ ಗುಣಗಳು ತುಂಬಿಕೊಳ್ಳುತ್ತವೆ. ಆದ್ದರಿಂದ ಹೊಗಳಿಕೆ ಮತ್ತು ತೆಗಳಿಕೆಗೆ ತಕ್ಷಣ ಪ್ರತಿಕ್ರಿಯಿಸಬೇಡ. ಮೌನಿಯಾಗು. ವಿಷಯದ ಬಗ್ಗೆ ಮನನ ಮಾಡು. ದುಡುಕಬೇಡ. ಎಷ್ಟು ಕಡಿಮೆ ಮಾತನಾಡಲು ಸಾಧ್ಯವೋ ಅಷ್ಟು ಕಡಿಮೆ ಮಾತನಾಡು. ಯೋಚಿಸಿ ಮಾತನಾಡು. ಏನಿದೆಯೋ ಅದನ್ನು ತೃಪ್ತಿಯಿಂದ ಅನುಭವಿಸು. ಸ್ಥಿರ-ಚರ ವಸ್ತುಗಳ(Making own property) ಹಿಂದೆ ಹೋಗಬೇಡ. ಭಗವಂತ ಕೊಟ್ಟಿರುವುದರಲ್ಲಿ ಸಂತೋಷದಿಂದ ನಿಶ್ಚಿಂತೆಯಿಂದ ಬದುಕು. ಭಕ್ತಿಯಿಂದ ಭಗವಂತನಲ್ಲಿ ಶರಣಾದಾಗ ನಾವು ನಮ್ಮ ಸಾಧನೆಯ ಹಾದಿಯಲ್ಲಿ ಈ ಎತ್ತರಕ್ಕೇರಬಹುದು. ‘ಇಂಥಹ ಗುಣವನ್ನು ಹೊಂದಿರುವ ಭಕ್ತ ನನಗೆ ಅಚ್ಚುಮೆಚ್ಚು’ ಎನ್ನುತ್ತಾನೆ ಕೃಷ್ಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *