ಶ್ಲೋಕ – 17
ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ ।
ಶುಭಾಶುಭಪರಿತ್ಯಾಗೀ ಭಕ್ತಿಮಾನ್ ಯಃ ಸ ಮೇ ಪ್ರಿಯಃ ॥೧೭॥
ಯಃ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ ।
ಶುಭ ಅಶುಭ ಪರಿತ್ಯಾಗೀ ಭಕ್ತಿಮಾನ್ ಯಃ ಸಃ ಮೇ ಪ್ರಿಯಃ –ಬೀಗುವುದಿಲ್ಲ; ಹೇಸುವುದಿಲ್ಲ; ಕೊರಗುವುದಿಲ್ಲ; ಬಯಸುವುದಿಲ್ಲ. ಒಳಿತು ಕೆಡುಕುಗಳ ಕುರಿತು ಕಾಳಜಿಯಿಲ್ಲ, ಇಂಥ ಭಕ್ತನು ನನಗೆ ಅಚ್ಚುಮೆಚ್ಚು.
ಇಲ್ಲಿ ಹಿಂದೆ ಹೇಳಿದ ಕೆಲವು ವಿಚಾರ ಪುನರುಕ್ತಿಯಾಗಿದೆ. ಸಾಮಾನ್ಯವಾಗಿ ಒಂದು ವಿಷಯವನ್ನು ಹೆಚ್ಚು ಸ್ಪಷ್ಟಪಡಿಸುವುದಕ್ಕಾಗಿ ಮತ್ತು ಒಂದು ವಿಚಾರಕ್ಕೆ ಹೆಚ್ಚು ಒತ್ತು ಕೊಡುವುದಕ್ಕಾಗಿ ಪುನರುಕ್ತಿ. ಇಲ್ಲಿ ಕೃಷ್ಣ ಹೇಳುತ್ತಾನೆ: ಯಾವುದೋ ಒಂದು ಒಳ್ಳೆಯ ಕೆಲಸ ಮಾಡಿದಾಗ ಬೀಗಬೇಡ ಮತ್ತು ಇನ್ನೊಬ್ಬರನ್ನು ಕಂಡು ಹೇಸಿಗೆ ಪಡಬೇಡ. ಸಿಕ್ಕಿತೆಂದು ಅತೀವ ಖುಶಿ, ಸಿಗಲಿಲ್ಲವೆಂದು ದುಃಖ ಅಥವಾ ದ್ವೇಷ ಬೇಡ. ಜೀವನದಲ್ಲಿ ಜ್ಞಾನ ಭಕ್ತಿ ವೈರಾಗ್ಯ ಇದು ಶುಭ. ಉಳಿದ ಎಲ್ಲಾ ವಿಷಯಗಳ ಒಳಿತು ಕೆಡುಕುಗಳ ವಿಶ್ಲೇಷಣೆ ಬೇಡ. ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆ ಹಿಂದೆ ನಮಗೆ ತಿಳಿಯದೇ ಇರುವ ಒಂದು ಕಾರಣವಿರುತ್ತದೆ. ಅದಕ್ಕಾಗಿ ಅದನ್ನು ಶುಭ-ಅಶುಭ ಎಂದು ನಿರ್ಧರಿಸಲು ನಾವು ಸಮರ್ಥರಲ್ಲ. ಈ ರೀತಿ ತಿಳಿದು ಬದುಕುವ ಭಕ್ತ ನನಗೆ ಪ್ರಿಯ ಎನ್ನುತ್ತಾನೆ ಕೃಷ್ಣ.