ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 16

ಅನಪೇಕ್ಷಃ ಶುಚಿರ್ದಕ್ಷ ಉದಾಸೀನೋ ಗತವ್ಯಥಃ ।
ಸರ್ವಾರಂಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ ॥೧೬॥

ಅನಪೇಕ್ಷಃ ಶುಚಿಃ ದಕ್ಷಃ ಉದಾಸೀನಃ ಗತವ್ಯಥಃ ।

ಸರ್ವ ಆರಂಭ ಪರಿತ್ಯಾಗೀ ಯಃ ಮತ್ ಭಕ್ತಃ ಸಃ ಮೇ ಪ್ರಿಯಃ –ಏನನ್ನೂ ಬಯಸದವನು, ಚೊಕ್ಕವಾಗಿ ಚುರುಕಾಗಿರುವವನು, ಯಾವುದನ್ನೂ ಹಚ್ಚಿಕೊಳ್ಳದವನು, ಕಂಗೆಡದವನು, ಭಗವಂತನ ಆರಾಧನೆಯಲ್ಲದ ಯಾವ ತೊಡಗುವಿಕೆಯಲ್ಲು ತೊಡಗದವನು,[ಎಲ್ಲವನ್ನೂ ಭಗವಂತನಿಗೆ ಅರ್ಪಿಸಿ ನಾನು-ನನ್ನದು ಎಂಬ ಹಮ್ಮು ತೊರೆದವನು], ಇಂಥ ನನ್ನ ಭಕ್ತ ನನಗೆ ಅಚ್ಚುಮೆಚ್ಚು.

ತನ್ನ ಭಕ್ತನಲ್ಲಿರಬೇಕಾದ, ಭಕ್ತಿಗೆ ಪೂರಕವಾದ ಆರು ಗುಣಗಳನ್ನು ಕೃಷ್ಣ ಈ ಶ್ಲೋಕದಲ್ಲಿ ವಿವರಿಸಿದ್ದಾನೆ.

(೧) ಅನಪೇಕ್ಷಃ : ಅದು ಬೇಕು ಇದು ಬೇಕು ಎಂದು ಬಯಸದೆ ಇರುವುದು. ಯಾವುದರಿಂದ ತಾತ್ಕಾಲಿಕ ಸುಖ ಬರುತ್ತದೋ ಅದರ ಹಿಂದೆ ಹೋಗದೆ, ಶಾಶ್ವತವಾದ ಮೋಕ್ಷ ಮಾರ್ಗದಲ್ಲಿ ನಡೆಯುವುದು. ಏನು ಸಿಕ್ಕಿತೋ ಅದರಲ್ಲಿ ಸಂತೋಷಪಡುವುದು-ಇದು ಅನಪೇಕ್ಷಃ.

(೨) ಶುಚಿಃ : ನಿರ್ಮಲ ಮತ್ತು ನಿರಾಳವಾಗಿರುವುದು. ಇದೇ ಮಡಿ. ಬಾಯಲ್ಲಿ ಕೆಟ್ಟ ಮಾತು, ಮನಸ್ಸಿನಲ್ಲಿ ಕೆಟ್ಟ ಯೋಚನೆ, ಮೈಯಲ್ಲಿ ಕೊಳೆ-ಇದು ಮೈಲಿಗೆ. ಮೊದಲು ನಾವು ನಮ್ಮ ಮನಸ್ಸಿನ ಕೊಳೆ ತೊಳೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಬಾಹ್ಯ ಶುದ್ಧಿ. ಇದಕ್ಕಾಗಿ ಶಾಂತಿ ಪಾಠದಲ್ಲಿ ಹೀಗೆ ಹೇಳುತ್ತೇವೆ: “ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ” ಎಂದು. ನಾವು ಒಳ್ಳೆಯದನ್ನು ನೋಡೋಣ, ಒಳ್ಳೆಯದನ್ನು ಮಾತನಾಡೋಣ, ಒಳ್ಳೆಯದನ್ನು ಯೋಚಿಸೋಣ. ಇದು ನಿಜವಾದ ಮಡಿ.

ಮಡಿಯ ಬಗ್ಗೆ ಹೆಚ್ಚು ಪ್ರಸಿದ್ಧವಾದ ಎರಡು ಶ್ಲೋಕಗಳಿವೆ:

ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||

ಮತ್ತು ಅತಿನೀಲಘನಶ್ಯಾಮಂ ನಲಿನಾಯತಲೋಚನಂ |
ಸ್ಮರಾಮಿ ಪುಂಡರೀಕಾಕ್ಷಂ ತೇನ ಸ್ನಾತೋ ಭಾವಾಮ್ಯಹಂ||

ಇಲ್ಲಿ ಪುಂಡರೀಕಾಕ್ಷನನ್ನು ಸ್ಮರಣೆ ಮಾಡಬೇಕು ಎಂದು ಹೇಳಿದ್ದಾರೆ. ಇದೊಂದು ಭಗವಂತನ ವಿಶೇಷ ನಾಮ. ಪುಂಡರೀಕಾಕ್ಷ ಎಂದರೆ ಕೆಂದಾವರೆಯಂತಹ ಕಣ್ಣುಳ್ಳವನು ಎಂದರ್ಥ. ಭಗವಂತನ ಕಣ್ಣು ಯಾವಾಗಲೂ ಕೆಂದಾವರೆ ಎಸಳಿನಂತೆ ಅರಳಿ ನಳನಳಿಸುತ್ತಿರುತ್ತದೆ. ಸಾಮಾನ್ಯವಾಗಿ ನಮಗೆ ಅತ್ಯಂತ ಸಂತೋಷವಾದಾಗ ನಮ್ಮ ಕಣ್ಣು ಅರಳುತ್ತವೆ. ಆದರೆ ಭಗವಂತ ಸದಾ ಸಂತೋಷದ ಬುಗ್ಗೆ. ಭಗವಂತ ಪ್ರೀತಿಯಿಂದ ಕಣ್ಣರಳಿಸಿ ನನ್ನನ್ನು ನೋಡುತ್ತಿದ್ದಾನೆ. ಅವನ ಕಣ್ಣಿನಿಂದ ಹರಿದುಬರುತ್ತಿರುವ ಅನುಗ್ರಹದ ರಸಧಾರೆಯಲ್ಲಿ ನಾನು ಮೀಯುತ್ತಿದ್ದೇನೆ. ಅವನ ಅನುಗ್ರಹದ ಕೃಪಾದೃಷ್ಟಿ ನನ್ನ ಮೇಲೆ ಹರಿದಿದೆ. ನಾನು ಅದರಲ್ಲಿ ಮಿಂದೆ ಎನ್ನುವ ಅನುಸಂಧಾನ ಶುಚಿ. ಹೀಗೆ ನಾವು ಭಗವಂತನ ಅನುಗ್ರಹದಿಂದ ಒಳಗೂ ಹೊರಗೂ ಮಡಿಯಾಗಬೇಕು.

(೩) ದಕ್ಷಃ : ನಮ್ಮಲ್ಲಿ ಮನಸ್ಸನ್ನು ಭಗವಂತನೆಡೆಗೆ ಹರಿಸುವ ದಕ್ಷತೆ ಇರಬೇಕು. ಆತ ನಮ್ಮ ಬಾಹ್ಯ ಪ್ರಯತ್ನಕ್ಕೆ ಒಲಿಯಲಾರ. ನಾವು ಅಂತರಂಗದಿಂದ ಆತನೆಡೆಗೆ ಹೋಗಬೇಕು. ಬಾಹ್ಯ ಕ್ರಿಯೆ ನಮ್ಮ ಅಂತರಂಗದ ಸಾಧನೆಗೆ ಪೂರಕ ಅಷ್ಟೆ. ಭಗವಂತನನ್ನು ಹೇಗೆ ಸೇರಬಹುದು ಎನ್ನುವ ತಿಳುವಳಿಕೆ, ಜಾಣತನ ನಮ್ಮಲ್ಲಿರಬೇಕು.

(೪) ಉದಾಸೀನ : ಅಂತರ್ಯಾಮಿಯಾಗಿರುವುದು. ಯಾವುದೇ ಬಾಹ್ಯ ಕ್ರಿಯೆಗೆ ಒತ್ತು ಬೇಡ, ಆಗ್ರಹ ಬೇಡ. ಉದಾಹರಣೆಗೆ- ನಿಮ್ಮ ಕುಟುಂಬದಲ್ಲಿ ಯಾರೋ ಒಬ್ಬರು ತಮ್ಮ ಯಾವುದೋ ಒಂದು ಫಲಾಪೇಕ್ಷೆಯನ್ನು ಈಡೇರಿಸಿಕೊಳ್ಳಲು ಯಾವುದೋ ಒಂದು ಪೂಜೆ ಮಾಡಿಸುತ್ತಿದ್ದಾರೆ. ಅಂಥಹ ಸಂದರ್ಭದಲ್ಲಿ ಅದನ್ನು ವಿರೋಧಿಸಿ ನಿಲ್ಲುವುದು ಒಳ್ಳೆಯದಲ್ಲ. ಏನೇ ಇರಲಿ ಅದು ಭಗವಂತನ ಸೇವೆ, ಅದು ಭಗವಂತನನ್ನು ಸೇರಲಿ ಎಂದು ಪ್ರಾರ್ಥಿಸಿ, ಎಲ್ಲರೊಂದಿಗಿದ್ದು ಯಾವುದೇ ಆಗ್ರಹವಿಲ್ಲದೆ ಇರುವುದು.

(೫) ಗತವ್ಯಥಃ : ಏನೇ ಆದರೂ ಬೇಸರಿಸಿಕೊಳ್ಳದೆ ಸದಾ ಆನಂದವಾಗಿರುವುದು.

(೬) ಸರ್ವಾರಂಭಪರಿತ್ಯಾಗಿ : ಭಗವಂತನ ಪಾರಮ್ಯಕ್ಕೆ ವಿರುದ್ಧವಾದ ಯಾವ ಆರಂಭಕ್ಕೂ ತೊಡಗದಿರುವುದು. ಎಲ್ಲ ಆರಂಭವನ್ನು ಫಲಕಾಮನೆಯಿಂದ ಮಾಡುವುದನ್ನು ಬಿಡು. ಎಲ್ಲವನ್ನೂ ಕೊನೆಗೆ ಕೃಷ್ಣಾರ್ಪಣಮಸ್ತು ಎಂದು ಭಗವಂತನಲ್ಲಿ ಅರ್ಪಿಸು.

“ಯಾರು ಈ ಗುಣಗಳೊಂದಿಗೆ ನನ್ನನ್ನು ಪ್ರೀತಿಸುತ್ತಾರೋ ಅಂಥಹ ಭಕ್ತ ನನಗೆ ಅಚ್ಚುಮೆಚ್ಚು” ಎನ್ನುತ್ತಾನೆ ಕೃಷ್ಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *