ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 15

ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ ।
ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯಃ ಸ ಚ ಮೇ ಪ್ರಿಯಃ ॥೧೫॥

ಯಸ್ಮಾತ್ ನ ಉದ್ವಿಜತೇ ಲೋಕಃ ಲೋಕಾತ್ ನ ಉದ್ವಿಜತೇ ಚ ಯಃ ।

ಹರ್ಷ ಅಮರ್ಷ ಭಯ ಉದ್ವೇಗೈಃ ಮುಕ್ತಃ ಯಃ ಸಃ ಚ ಮೇ ಪ್ರಿಯಃ –ಯಾರಿಂದಲೂ ನೋಯದವನು, ಯಾರನ್ನೂ ನೋಯಿಸದವನು, ಹಮ್ಮಿನಿಂದ ಕೇಡಿಗೆಳೆಸದವನು, ರೇಗದವನು, ಅಂಜದವನು, ತಲ್ಲಣಗೊಳ್ಳದವನು-ಅವನು ನನಗೆ ಅಚ್ಚುಮೆಚ್ಚು.

ನಮ್ಮನ್ನು ನೋಡಿ ಇನ್ನೊಬ್ಬರು ಉದ್ವೇಗಗೊಳ್ಳಬಾರದು ಹಾಗು ನಾವು ಇನ್ನೊಬ್ಬರನ್ನು ಉದ್ವೇಗಗೊಳಿಸಬಾರದು. ಯಾರೂ ನಮ್ಮನ್ನು ನೋಡಿ ಅಸಹನೆ-ಅತೃಪ್ತಿ ತಾಳಬಾರದು ಮತ್ತು ಇನ್ನೊಬ್ಬರನ್ನು ನೋಡಿ ನಾವು ಅಸಹನೆ ತಾಳಬಾರದು. ಪ್ರಪಂಚವನ್ನು ಪ್ರೀತಿಸಿದಾಗ ಇದನ್ನು ಸಾಧಿಸಲು ಸಾಧ್ಯ. ಭಗವಂತ ಮೆಚ್ಚುವ ಕೆಲಸ ಮಾಡಿದಾಗ ಭಗವಂತ ನಮ್ಮನ್ನು ಪ್ರೀತಿಸುತ್ತಾನೆ. ಭಗವಂತ ಪ್ರೀತಿಸುವವರನ್ನು ಇಡೀ ಪ್ರಪಂಚವೇ ಪ್ರೀತಿಸುತ್ತದೆ.

ನಾವು ಹರ್ಷ ಅಮರ್ಷ ಭಯ ಮತ್ತು ಉದ್ವೇಗದಿಂದ ಮುಕ್ತರಾಗಬೇಕು.ಮಾಡಬಾರದ್ದನ್ನು ಮಾಡುವುದರಲ್ಲಿ ಹಿಗ್ಗು ಹರ್ಷ; ಇನ್ನೊಬ್ಬರು ಮಾಡಬೇಕಾದ್ದನ್ನು ಮಾಡಿದಾಗ ಅದನ್ನು ನೋಡಿ ಹೊಟ್ಟೆಕಿಚ್ಚು ಪಡುವುದು ಅಮರ್ಷ. ಹರ್ಷ ಅಮುರ್ಷದಿಂದ ನಾವು ಮುಕ್ತರಾಗಬೇಕು. ಹೆದರುವಂತಹ ಕೆಲಸ ಮಾಡಬೇಡ ಮತ್ತು ತಪ್ಪು ಮಾಡದಿದ್ದಾಗ ಭಯಬೇಡ. ಇನ್ನೊಬ್ಬರನ್ನು ನಾವು ಸಂಶಯ ದೃಷ್ಟಿಯಿಂದ ನೋಡಿದರೆ ಅವರೂ ನಮ್ಮನ್ನು ಸಂಶಯ ದೃಷ್ಟಿಯಿಂದ ನೋಡುತ್ತಾರೆ, ಇನ್ನೊಬ್ಬರನ್ನು ನಂಬದಿದ್ದಾಗ ಅವರೂ ನಮ್ಮನ್ನು ನಂಬುವುದಿಲ್ಲ. ಇದರಿಂದ ಉದ್ವೇಗ. “ಜೀವನದಲ್ಲಿ ಎಲ್ಲರನ್ನು ಪ್ರೀತಿಸುವವರು, ಹರ್ಷ ಅಮರ್ಷ ಭಯ ಮತ್ತು ಉದ್ವೇಗದಿಂದ ಮುಕ್ತರಾದವರು-ನನಗೆ ಪ್ರಿಯ” ಎನ್ನುತ್ತಾನೆ ಕೃಷ್ಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *