Thursday , 13 June 2024

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 13 & 17

ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ ।
ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ ॥೧೩॥

ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ ।
ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತಃ ಸ ಮೇ ಪ್ರಿಯಃ ॥೧೪॥

ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ ।

ನಿರ್ಮಮಃ ನಿರಹಂಕಾರಃ ಸಮದುಃಖಸುಖಃ ಕ್ಷಮೀ ॥

ಸಂತುಷ್ಟಃ ಸತತಮ್ ಯೋಗೀ ಯತಾತ್ಮಾ ದೃಢನಿಶ್ಚಯಃ ।

ಮಯಿ ಅರ್ಪಿತ ಮನಃ ಬುದ್ಧಿಃ ಯಃ ಮತ್ ಭಕ್ತಃ ಸಃ ಮೇ ಪ್ರಿಯಃ –ಯಾವ ಜೀವಿಗಳಲ್ಲು ಹಗೆಯಿರದವನು, ಎಲ್ಲರ ನೇಹಿಗನು, ದುಃಖವನ್ನು ಕಂಡು ಕರಗುವವನು, ನಾನು-ನನ್ನದು ಎಂಬ ಹಮ್ಮಿರದವನು, ಸುಖದಲ್ಲಿ ಹಿಗ್ಗದವನು, ದುಃಖದಲ್ಲಿ ಕುಗ್ಗದವನು, ತಾಳ್ಮೆ ತಪ್ಪದವನು, ಯಾವಾಗಲೂ ತೃಪ್ತಿಯಿಂದಿರುವವನು, ಧ್ಯಾನಸಾಧನೆಯಲ್ಲಿ ತೊಡಗಿದವನು, ಬಗೆ ಬಿಗಿ ಹಿಡಿದವನು, ತತ್ವದ ನಿರ್ಧಾರದಿಂದ ಬಗೆ ಗಟ್ಟಿಗೊಂಡವನು, ಬಗೆ-ತಿಳಿವುಗಳನ್ನು ನನ್ನಲ್ಲಿ ಅರ್ಪಿಸಿದವನು- ಇಂಥ ನನ್ನ ಭಕ್ತ ನನಗೆ ಅಚ್ಚುಮೆಚ್ಚು.

ಭಗವಂತ ಮೆಚ್ಚುವ ಮಾನವ ವರ್ತನೆಯ ಬಗ್ಗೆ ಕೃಷ್ಣ ವಿವರಿಸುತ್ತ ಮೊದಲನೆಯದಾಗಿ ಹೇಳುತ್ತಾನೆ: “ಅದ್ವೇಷ್ಟಾ ಸರ್ವಭೂತಾನಾಂ”ಎಂದು. ಅಂದರೆ ಯಾರನ್ನೂ ದ್ವೇಷಿಸದಿರುವುದು. ಇದು ಭಗವದ್ಭಕ್ತನಲ್ಲಿ ಇರಬೇಕಾದ ಮೊದಲನೇ ಗುಣ. ದ್ವೇಷದಲ್ಲಿ ಎರಡು ವಿಧ. ಒಂದು ಒಳ್ಳೆಯವರನ್ನು(ಅವರ ಉದ್ಧಾರವನ್ನು ಕಂಡು) ದ್ವೇಷಿಸುವುದು; ಇನ್ನೊಂದು ಕೆಟ್ಟವರನ್ನು(ಅವರ ಕೆಟ್ಟತನವನ್ನು ಕಂಡು) ದ್ವೇಷಿಸುವುದು. ದ್ವೇಷ ಬರುವುದು ಅಸಹನೆ ಮತ್ತು ಹೊಟ್ಟೆಕಿಚ್ಚಿನಿಂದಾಗಿ. ಇನ್ನೊಬ್ಬರ ಉತ್ಕರ್ಷವನ್ನು ಕಂಡು ಸಂಕಟಪಡುವುದು ದ್ವೇಷ. ಒಳ್ಳೆಯವನಿರಲಿ, ಕೆಟ್ಟವನಿರಲಿ-ಹೊಟ್ಟೆಕಿಚ್ಚು ಅಸಹನೆ ಬೇಡ. ಎಲ್ಲಿ ಒಳ್ಳೆಯತನವಿದೆ ಅದನ್ನು ಪ್ರೀತಿಸು, ಸ್ನೇಹ ಬೆಳೆಸು. ದುಷ್ಟರನ್ನು ದೂರ ಬಿಟ್ಟುಬಿಡು, ಒಳ್ಳೆಯತನವನ್ನು, ಒಳ್ಳೆಯವರನ್ನು ಪ್ರೀತಿಸು. ಇನ್ನೊಬ್ಬರ ಕಷ್ಟವನ್ನು ಕಂಡು ಕರಗು. ನಾನು, ನನ್ನದು ,ನನ್ನಿಂದ ಎನ್ನುವ ಅಹಂಕಾರ ಮಮಕಾರವನ್ನು ಬಿಟ್ಟುಬಿಡು. ‘ಈಶಾವಾಸ್ಯಂ ಇದಮ್ ಸರ್ವಂ’ –ಎಲ್ಲವುದರ ಒಡೆಯ ಆ ಭಗವಂತ. ಆತ ಕೊಟ್ಟಿರುವುದರಿಂದ ಇದೆ ಅನ್ನುವ ಮನೋಭಾವ ಇರಲಿ. ಹೇಗೆ ಅಹಂಕಾರ ಒಳ್ಳೆಯದಲ್ಲವೋ ಹಾಗೆ ಅತಿಯಾದ ಮಮಕಾರ ಒಳ್ಳೆಯದಲ್ಲ. ಪುರಂದರದಾಸರಂತೆ ಪ್ರೀತಿಯಲ್ಲಿ ನಿರ್ಲಿಪ್ತತೆ(Detached attachment)ಇರಲಿ. ಅವರಿಗೆ ಒಬ್ಬ ಮಗನಿದ್ದ. ಆತನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಒಂದು ದಿನ ಪ್ರೀತಿಯ ಮಗ ಸತ್ತು ಹೋದ. ಆಗ ಅವರು “ಗಿಳಿಯು ಪಂಜರದೊಳಿಲ್ಲ-ನೀನು ಕೊಟ್ಟ ಗಿಳಿ ನಿನ್ನನ್ನು ಸೇರಿತು” ಎಂದು ನಿರ್ಲಿಪ್ತರಾಗಿ ಬದುಕಿದರು. ನಾವು ದುಃಖ-ಸುಖವನ್ನು ಕಾಣುವುದರಲ್ಲಿ ಸಮತೋಲನ ಸಾಧಿಸಬೇಕು. ಸುಖ ಬಂದಾಗ ಹಾರಾಟ ಬೇಡ. ದುಃಖ ಬಂದಾಗ ಕುಸಿಯದೆ ಬಂದದ್ದನ್ನು ಎದುರಿಸಬೇಕು. ಇನ್ನೊಬ್ಬರ ಮೇಲೆ ಕ್ಷಮಾ ಭಾವನೆ ಇರಲಿ, ಪ್ರತೀಕಾರ ಬೇಡ. [ತಪ್ಪು ಮಾಡಿದವರನ್ನು ನ್ಯಾಯಾಧೀಶರು, ಅಧಿಕಾರಿಗಳು ದಂಡಿಸಬಹುದು. ಅದು ಅವರ ಕರ್ತವ್ಯಧರ್ಮ-ಅಲ್ಲಿ ಪ್ರತೀಕಾರವಿಲ್ಲ].

ಮುಂದುವರಿದು ಕೃಷ್ಣ ಹೇಳುತ್ತಾನೆ: “ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ” ಎಂದು. ಯಾವುದೇ ಒಬ್ಬ ಮನುಷ್ಯ ಹಾಯಾಗಿರಬೇಕಾದರೆ ಇರಬೇಕಾದ ಚಿತ್ತವೃತ್ತಿ ‘ಅತೃಪ್ತಿ ಇಲ್ಲದೆ ಇರುವುದು’. ಜೀವನದಲ್ಲಿ ನಮ್ಮೆಲ್ಲ ದುಃಖಗಳಿಗೆ ಕಾರಣ ಅತೃಪ್ತಿ. ಇಲ್ಲದೆ ಇರುವುದರ ಬಗೆಗೆ ಅತೃಪ್ತಿ ಪಡುವುದರ ಬದಲು ಇರುವುದರ ಬಗ್ಗೆ ತೃಪ್ತಿ ಪಡು. ಏನಿದೆ ಅದರಲ್ಲಿ ತೃಪ್ತಿ ಪಡುವುದನ್ನು ಅಭ್ಯಾಸ ಮಾಡು. ಸದಾ ಯೋಗಿಯಾಗು. ಇಲ್ಲಿ ಯೋಗಿ ಅನ್ನುವುದಕ್ಕೆ ಅನೇಕ ಅರ್ಥಗಳಿವೆ. ವಿವಿಧ ಆಸನಗಳ ಅಭ್ಯಾಸ ಯೋಗವಲ್ಲ. ಮನಸ್ಸನ್ನು ಏಕಾಗ್ರಗೊಳಿಸಲು ಮಾಡಬೇಕಾದ ಪ್ರಕ್ರಿಯೆ ಯೋಗ. ಕೋತಿಯಂತೆ ಹರಿದಾಡುವ ನಮ್ಮ ಮನಸ್ಸನ್ನು ಹಿಡಿದು ನಿಲ್ಲಿಸುವುದು-ಗಾಳಿಯನ್ನು ಹಿಡಿದು ನಿಲ್ಲಿಸಿದಂತೆ. ಅದು ತುಂಬಾ ವಿಚಿತ್ರ. ಮನಸ್ಸು ಜಾರಿ ಹೋಗುವುದು ನಮಗೆ ತಿಳಿಯುವುದು ಅದು ಹೋದ ಮೇಲೆ. ಇಂಥಹ ಮನಸ್ಸನ್ನು ಹಿಡಿದು ನಿಲ್ಲಿಸಲು ಮೊದಲು ಬೆನ್ನುಹುರಿಯನ್ನು ನೆಟ್ಟಗೆ ಮಾಡಿ ಸ್ಥಿರವಾಗಿ ಕುಳಿತುಕೊಳ್ಳಲು ಅಭ್ಯಾಸ ಮಾಡುವುದು-ಆಸನ(ಯಾವ ಆಸನವಾದರೂ ಸರಿ). ನಂತರ ಪ್ರಾಣಾಯಾಮದ ಮೂಲಕ ಒಳಗಿನ ಚಿಂತನೆಯನ್ನು ಜಾಗೃತಗೊಳಿಸುವುದು ಯೋಗ. ಸ್ವಚ್ಛ ಮನಸ್ಸಿನಲ್ಲಿ ಭಗವಂತನನ್ನು ಕೂರಿಸುವುದು ಯೋಗ, ಬದುಕಿನಲ್ಲಿ ಜೀವನ ನಿರ್ವಹಣೆಗೆ ಕಂಡುಕೊಂಡ(ಸಿಕ್ಕಿದ) ದಾರಿಯನ್ನು ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಮಾಡುವುದು ಯೋಗ. ಈ ರೀತಿ ಅಭ್ಯಾಸದಿಂದ ಮನಸ್ಸನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು. ಏನನ್ನೂ ಕೆಟ್ಟ ಭಾವದಿಂದ ಕಾಣದೆ ಇರವುದನ್ನು ಅಭ್ಯಸಿಸು. ಅಧ್ಯಾತ್ಮ ದಾರಿಯಲ್ಲಿ ಅಚಲವಾದ ನಿರ್ಧಾರವಿರಲಿ. ಏನೇ ಬರಲಿ ದೃಢನಿಶ್ಚಯದಿಂದ ಮುಂದೆ ಸಾಗು. ಮನಸ್ಸು ಭಗವಂತನಿಗಾಗಿ ಹಾತೊರೆಯಲಿ, ಬುದ್ಧಿ ಭಗವಂತನನ್ನು ಅರಿಯಲಿ. “ಈ ರೀತಿ ಯಾರು ನನ್ನನ್ನು ಪ್ರೀತಿಸುತ್ತಾರೋ(ಭಕ್ತ) ಅವರು ನನಗೆ ಅತಿಪ್ರೀಯ” ಎನ್ನುತ್ತಾನೆ ಕೃಷ್ಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

One comment

  1. where are those chapters from 14 to 18?

Leave a Reply

Your email address will not be published. Required fields are marked *