ಶ್ಲೋಕ – 12
ಶ್ರೇಯೋ ಹಿ ಜ್ಞಾನಮಭ್ಯಾಸಾಜ್ ಜ್ಞಾನಾದ್ ಧ್ಯಾನಂ ವಿಶಿಷ್ಯತೇ ।
ಧ್ಯಾನಾತ್ ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನಂತರಮ್ ॥೧೨॥
ಶ್ರೇಯಃ ಹಿ ಜ್ಞಾನಮ್ ಅಭ್ಯಾಸಾತ್ ಜ್ಞಾನಾತ್ ಧ್ಯಾನಮ್ ವಿಶಿಷ್ಯತೇ ।
ಧ್ಯಾನಾತ್ ಕರ್ಮ ಫಲ ತ್ಯಾಗಃ ತ್ಯಾಗಾತ್ ಶಾಂತಿಃ ಅನಂತರಮ್ –ಅರಿವಿಲ್ಲದ ಅಭ್ಯಾಸಕ್ಕಿಂತ ಅರಿವು ಮಿಗಿಲು. ಬರಿದೆ ಅರಿವಿಗಿಂತ ಅರಿತು ಧ್ಯಾನಿಸುವುದು ಮಿಗಿಲು. ಬರಿದೆ ಧ್ಯಾನಕ್ಕಿಂತ ಕರ್ಮಫಲದ ನಂಟಿರದ ಧ್ಯಾನ ಮಿಗಿಲು. ಅಂಥ ಧ್ಯಾನದ ಮುಂದಿನ ಮಜಲೇ ಮುಕ್ತಿ.
ಜ್ಞಾನವಿಲ್ಲದ ಧ್ಯಾನಕ್ಕಿಂತ ಜ್ಞಾನ ಶ್ರೇಷ್ಠ. ಜ್ಞಾನ ಅಧ್ಯಾತ್ಮ ಸಾಧನೆಯಲ್ಲಿ ಮೂಲಭೂತ ಅವಶ್ಯಕತೆ(Fundamental requirement). ಜ್ಞಾನವಿಲ್ಲದೆ ಧ್ಯಾನ ಅಥವಾ ಕರ್ಮ ಮಾಡಿ ಉಪಯೋಗವಿಲ್ಲ. ತಿಳುವಳಿಕೆ ಇಲ್ಲದ ಶ್ರದ್ಧೆ ಅಂಧಃಶ್ರದ್ಧೆಯಾಗುತ್ತದೆ. ಹಾಗೆ ನಂಬಿಕೆ ಇಲ್ಲದ ತಿಳುವಳಿಕೆ ಅಹಂಕಾರವೆನಿಸುತ್ತದೆ. ಆದ್ದರಿಂದ ತಿಳಿಯಬೇಕು, ತಿಳಿದು ನಂಬಬೇಕು. ಕೇವಲ ತಿಳುವಳಿಕೆ ಇದ್ದರೆ ಸಾಲದು. ಜ್ಞಾನಕ್ಕಿಂತ ಜ್ಞಾನ ಸಹಿತ ಧ್ಯಾನ ಮೇಲು. ಎಲ್ಲಕ್ಕಿಂತ ಹಿರಿದು ಕರ್ಮಫಲ ತ್ಯಾಗ. ಆದ್ದರಿಂದ ಮೊದಲು ತಿಳಿದುಕೋ, ತಿಳಿದು ಅಭ್ಯಾಸ ಮಾಡು. ಆದರೆ ನಿನ್ನ ಧ್ಯಾನ ಕರ್ಮಫಲವಿಲ್ಲದ ಧ್ಯಾನವಾಗಿರಲಿ. ಈ ರೀತಿಯ ಜೀವನ ಶೈಲಿಯಿಂದ ಮೊಕ್ಷಪ್ರಾಪ್ತಿ ಸಾಧ್ಯ.
ಇಲ್ಲಿಯ ತನಕೆ ಭಗವಂತನ ಉಪಾಸನೆ ಹೇಗಿರಬೇಕು ಎನ್ನುವುದನ್ನು ವಿವರಿಸಿದ ಕೃಷ್ಣ, ಮುಂದೆ ನಾವು ದೇವರು ಮೆಚ್ಚುವ ಬದುಕನ್ನು ಬದುಕಬೇಕಾದರೆ ಯಾವ ರೀತಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು, ನಮ್ಮ ಜೀವನಕ್ರಮ ಮತ್ತು ಅನುಷ್ಠಾನ ಹೇಗಿರಬೇಕು ಎನ್ನುವುದನ್ನು ಮುಂದಿನ ಕೆಲವು ಶ್ಲೋಕಗಳಲ್ಲಿ ವಿವರಿಸುತ್ತಾನೆ.