ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 11

ಶ್ಲೋಕ – 01

ಈ ಅಧ್ಯಾಯ ಭಗವಂತನ ಉಪಾಸನೆ ಮಾಡುವಾಗ ಆತನನ್ನು ಹೇಗೆ ಚಿಂತನೆ ಮಾಡಬೇಕು ಎಂದು ಹೇಳುವ ಅಧ್ಯಾಯ. ಇದು ಭಗವಂತನ ವಿಶ್ವರೂಪ ದರ್ಶನ ಅಧ್ಯಾಯ. ಕೃಷ್ಣ ಅರ್ಜುನನಿಗೆ ದಿವ್ಯನೇತ್ರವನ್ನು ಕರುಣಿಸಿ ತನ್ನ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಆ ವಿಶ್ವರೂಪದ ವರ್ಣನೆ ಇಲ್ಲಿದೆ. ಇಲ್ಲಿ ಸರ್ವವ್ಯಾಪ್ತ, ಸರ್ವಾಂತರ್ಯಾಮಿ, ಸರ್ವಸಮರ್ಥ ಭಗವಂತನ ಚಿಂತನೆ ಹೇಗೆ ಮಾಡಬೇಕು ಎನ್ನುವ ಮಾರ್ಗದರ್ಶನವಿದೆ. ಭಗವಂತನ ರೂಪವನ್ನು ಯಾವುದೋ ಒಂದು ಲೌಕಿಕ ಅನುಭವದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಅದು ಲೋಕಾತೀತ ಅನುಭವ. ಆ ಅದ್ಭುತ ಅನುಭವದ ಚಿತ್ರಣ ಈ ಅಧ್ಯಾಯ.

ಭಗವಂತನ ಸರ್ವಗತವಾದ ವಿಶ್ವರೂಪವನ್ನು ಎಲ್ಲರೂ ಧ್ಯಾನ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲ ಕಡೆ ತುಂಬಿರುವ ಭಗವಂತನ ಕಿಂಚಿತ್ ದರ್ಶನ ಪ್ರತಿಯೊಬ್ಬರೂ ಧ್ಯಾನ ಯೋಗದಲ್ಲಿ ಪಡೆಯಲು ಸಾಧ್ಯವಿದೆ. ಹೇಗೆ ಅರ್ಜುನನಿಗೆ ಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿದನೋ ಹಾಗೆ ನಮಗೆ ಧ್ಯಾನದಲ್ಲಿ ಕೂಡ ತನ್ನ ರೂಪವನ್ನು ಆತನೇ ತೋರಿಸಬೇಕು. ಇದು ಹೊರಪ್ರಪಂಚದಲ್ಲಿ ಕಾಣುವ ರೂಪವಲ್ಲ. ನಾವು ನಮ್ಮ ಒಳಗಣ್ಣನ್ನು ತೆರೆದು ಕುಳಿತು ಧ್ಯಾನ ಮಾಡಬೇಕು, ಭಗವಂತನಲ್ಲಿ ಶರಣಾಗಬೇಕು. ಕಾತರತೆಯಿಂದ ಕರೆದಾಗ ಒಳಗಿನಿಂದ ಏನು ಅನುಭೂತಿ ಬರುತ್ತದೆ ಅದು ಲೌಕಿಕ ಅನುಭೂತಿಯನ್ನು ಮೀರಿದ ವಿಚಾರ.

ಈ ಅಧ್ಯಾಯದಲ್ಲಿ ಭಗವಂತನ ಮಾತು ಕಡಿಮೆ. ಇಲ್ಲಿ ಕೃಷ್ಣನ ವಿಶ್ವರೂಪವನ್ನು ಕಂಡವರ ಮಾತಿದೆ. ಅವರು ಕಂಡ ರೀತಿಯನ್ನು ಕೇಳಿ ನಾವು ಭಗವಂತನನ್ನು ಕಾಣಲು ಪ್ರಯತ್ನ ಮಾಡಬೇಕು. ಇದು ನಮ್ಮ ಅಂತರಂಗದ ಅಧ್ಯಾತ್ಮದ ಸಾಕ್ಷಾತ್ಕಾರಕ್ಕೆ ಪೂರಕವಾದ, ಧ್ಯಾನದ ದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುವ ಬಹಳ ಮಹತ್ವದ ಅಧ್ಯಾಯ. ಬನ್ನಿ, ವ್ಯಾಸರು ದಾಖಲಿಸಿದ ಭಗವಂತನ ಅಪೂರ್ವ ವಿಶ್ವರೂಪ ವರ್ಣನೆಯನ್ನು ಕೇಳಿ ಧನ್ಯರಾಗೋಣ.

ಅಧ್ಯಾಯಕ್ಕೆ ಪ್ರವೇಶಿಸುವ ಮುನ್ನ ನಾವು ಒಂದು ವಿಚಾರವನ್ನು ತಿಳಿದುಕೊಳ್ಳಬೇಕು. ನಮ್ಮಲ್ಲಿ ಕೆಲವರಿಗೆ ಒಂದು ತಪ್ಪು ತಿಳುವಳಿಕೆ ಇದೆ. “ಅರ್ಜುನನಿಗೆ ಭಗವಂತನ ಸಂದೇಶವನ್ನು ಮನವರಿಕೆ ಮಾಡಿಸಲು ಕೃಷ್ಣ ತನ್ನ ವಿಶ್ವರೂಪ ದರ್ಶನ ಮಾಡಿಸಬೇಕಾಯಿತು” ಎಂದು. “ಸ್ವತಃ ಶ್ರೀಕೃಷ್ಣನಿಂದಲೇ ಉಪದೇಶ ಪಡೆದರೂ ಸಹ ಅರ್ಜುನನಿಗೆ ಮನವರಿಕೆ ಆಗಲಿಲ್ಲ, ಇನ್ನು ನಮ್ಮ ಪಾಡೇನು? ನಮಗೆ ಯಾರು ವಿಶ್ವರೂಪ ದರ್ಶನ ಮಾಡಿಸುತ್ತಾರೆ”-ಎಂದು ಯೋಚಿಸುವವರಿದ್ದಾರೆ. ಆದರೆ ಇದು ನಮ್ಮ ತಪ್ಪು ತಿಳುವಳಿಕೆ. ಅರ್ಜುನನಿಗೆ ಭಗವಂತನ ಸಂದೇಶ ಪೂರ್ಣ ಮನವರಿಕೆ ಆಗಿತ್ತು. ಈ ವಿಚಾರ ಈ ಅಧ್ಯಾಯದ ಮೊದಲ ಶ್ಲೋಕದಲ್ಲೇ ತಿಳಿಯುತ್ತದೆ. ಅರ್ಜುನ ಹೇಳುತ್ತಾನೆ “ಮೋಹೋಯಂ ವಿಗತೋ ಮಮ”- ‘ನಿನ್ನ ಮಹಿಮೆ ತಿಳಿದು ನನ್ನ ಎಲ್ಲ ಸಂಶಯವೂ ಕಳೆಯಿತು’ ಎಂದು. ಇದರಿಂದ ತಿಳಿಯುವುದೇನೆದರೆ ಅರ್ಜುನ ಭಗವಂತನ ವಿಶ್ವರೂಪ ದರ್ಶನ ಬಯಸಿದ್ದು ಕೇವಲ ನೋಡಿ ಧನ್ಯನಾಗುವುದಕ್ಕೋಸ್ಕರ ಹೊರತು, ಪುರಾವೆಗಾಗಿ ಅಲ್ಲ. ಸಾಮಾನ್ಯವಾಗಿ ಮನುಷ್ಯ ಸ್ವಭಾವವೇನೆಂದರೆ ಒಂದು ವಿಷಯವನ್ನು ಕೇಳಿದ ಮೇಲೆ ಅದನ್ನೊಮ್ಮೆ ನೋಡಬೇಕು ಎನ್ನುವ ಸಹಜ ಅಭಿಲಾಷೆ. ಅರ್ಜುನ ಕೃಷ್ಣನ ಮುಂದಿಟ್ಟಿರುವುದು ಕೂಡಾ ಇಂಥಹದ್ದೇ ಬಯಕೆಯನ್ನು. ಮುಂದಿನ ನಾಲ್ಕು ಶ್ಲೋಕಗಳಲ್ಲಿ ಈ ವಿಚಾರ ಸ್ಪಷ್ಟವಾಗಿ ತಿಳಿಯುತ್ತದೆ.

ಅರ್ಜುನ ಉವಾಚ ।
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್ ।
ಯತ್ ತ್ವಯೋಕ್ತಂ ವಚಸ್ತೇನ ಮೋಹೋSಯಂ ವಿಗತೋ ಮಮ ॥೧॥

ಅರ್ಜುನಃ ಉವಾಚ- ಅರ್ಜುನ ಹೇಳಿದನು :ಮತ್ ಅನುಗ್ರಹಾಯ ಪರಮಮ್ ಗುಹ್ಯಮ್ ಅಧ್ಯಾತ್ಮಸಂಜ್ಞಿತಮ್ ।

ಯತ್ ತ್ವಯಾ ಉಕ್ತಮ್ ವಚಃ ತೇನ ಮೋಹಃ ಅಯಮ್ ವಿಗತಃ ಮಮ –-ನನ್ನ ಮೇಲೆ ದಯೆದೋರಲೆಂದು, ಅಧ್ಯಾತ್ಮವೆಂಬ ಹಿರಿಯ ಗುಟ್ಟನ್ನು ನೀನು ನುಡಿದೆ. ಆ ನುಡಿಯಿಂದ ನನ್ನೀ ಮಂಕು ಕಳೆಯಿತು.

ಅರ್ಜುನ ಹೇಳುತ್ತಾನೆ: “ನನ್ನ ಮೇಲಿನ ಅನುಗ್ರಹದಿಂದ ಅಧ್ಯಾತ್ಮದ ಪರಮ ಗುಹ್ಯವಾದ ವಿಚಾರವನ್ನು ನನಗೆ ಹೇಳಿದಿ” ಎಂದು. ಇಲ್ಲಿ ‘ಅನುಗ್ರಹ’ ಎಂದರೆ-ತಮ್ಮಿಂದ ಚಿಕ್ಕವರನ್ನು ಸರಿದಾರಿಯಲ್ಲಿ ತಂದು, ಎತ್ತರಕ್ಕೇರಿಸಿ ಉದ್ಧಾರ ಮಾಡಬೇಕು ಎಂಬ ಹಿರಿಯರ ಇಚ್ಛೆ. “ದಾರಿ ತಪ್ಪಿ ನಡೆಯಲಿದ್ದ ನನ್ನನ್ನು ಸರಿದಾರಿಗೆ ತಂದು ಉದ್ಧಾರ ಮಾಡಿದಿ” ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ್ದಾನೆ. ಇಲ್ಲಿ ‘ಮತ್’ ಎನ್ನುವ ಪದ ಬಳಕೆಯಾಗಿದೆ. ‘ಮತ್’ ಎಂದರೆ ಕೇವಲ ‘ನನ್ನ ಅಥವಾ ನನಗೆ’ ಅನ್ನುವ ಅರ್ಥವಷ್ಟೇ ಅಲ್ಲ. ‘ಮತ್’ ಎನ್ನುವುದು ಯತ್ ಇದ್ದಂತೆ. ‘ಮಾತೀತಿ ಮತ್’-ಅಂದರೆ ‘ಸಮಸ್ತ ಜ್ಞಾನಿಗಳು’ ಅನ್ನುವ ಅರ್ಥವನ್ನು ಕೊಡುತ್ತದೆ. ಆದ್ದರಿಂದ ಮದನುಗ್ರಹ ಅಂದರೆ ‘ಸಮಸ್ತ ಜ್ಞಾನಿಗಳ ಉದ್ಧಾರಕ್ಕೋಸ್ಕರ’ ಎಂದರ್ಥ. ಭಗವಂತ ಸಮಸ್ತ ಮನುಕುಲಕ್ಕೆ ಈ ಅಪೂರ್ವ ಸಂದೇಶವನ್ನು ತಲುಪಿಸಲು ಗೀತೆಯನ್ನು ಅರ್ಜುನನಿಗೆ ಉಪದೇಶ ಮಾಡಿ, ಅದನ್ನು ತಾನೇ ವ್ಯಾಸರೂಪನಾಗಿ ದಾಖಲಿಸಿ ನಮಗೆ ಕೊಟ್ಟನೆ ಹೊರತು, ಕೇವಲ ಅರ್ಜುನನಿಗೋಸ್ಕರ ಹೇಳಿದ್ದಲ್ಲ.

ಈ ಪ್ರಪಂಚದಲ್ಲಿ ಅತ್ಯಂತ ಗೋಪ್ಯವಾಗಿರಬೇಕಾದ ವಿದ್ಯೆ-ಅಧ್ಯಾತ್ಮ ವಿದ್ಯೆ. ಯಾವಾಗಲೂ ಅಪೂರ್ವ ವಿಷಯವನ್ನು ಗೋಪ್ಯವಾಗಿಡುತ್ತಾರೆ. ಏಕೆಂದರೆ ಅದು ದುರುಪಯೋಗವಾಗಬಾರದು ಮತ್ತು ಅದರ ಮಹತ್ವ ತಿಳಿಯದವರಿಗೆ ತಲುಪಬಾರದೆಂದು. ಅಧ್ಯಾತ್ಮ-ಮನೋವಿಜ್ಞಾನ, ಜೀವವಿಜ್ಞಾನ ಮತ್ತು ಪರಮಾತ್ಮವಿಜ್ಞಾನ. ಇಂತಹ ಅಪೂರ್ವ ವಿದ್ಯೆಯನ್ನು ಕೃಷ್ಣ ಅರ್ಜುನನ ಮುಂದೆ ತೆರೆದಿಟ್ಟಿರುವುದಕ್ಕೆ ಅರ್ಜುನ ಭಗವಂತನನ್ನು ಕೊಂಡಾಡುತ್ತಾನೆ ಮತ್ತು ಹೇಳುತ್ತಾನೆ “ಇದರಿಂದ ನನ್ನೆಲ್ಲ ಮಾನಸಿಕ ಗೊಂದಲ ಹೊರಟು ಹೋಗಿ ಮೋಹ ಕಳೆಯಿತು” ಎಂದು.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *