ಶ್ಲೋಕ – 08
ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ ।
ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾಃ ॥೮॥
ಅಹಮ್ ಸರ್ವಸ್ಯ ಪ್ರಭವಃ ಮತ್ತಃ ಸರ್ವಮ್ ಪ್ರವರ್ತತೇ ।
ಇತಿ ಮತ್ವಾ ಭಜಂತೇ ಮಾಮ್ ಬುಧಾಃ ಭಾವ ಸಮನ್ವಿತಾಃ –-ತಿಳಿದವರು ‘ನಾನು ಎಲ್ಲದರ ಮೂಲಕಾರಣ, ನನ್ನಿಂದಲೆ ಎಲ್ಲವೂ ನಡೆಯುತ್ತಿದೆ’ ಎಂದರಿತು ಭಕ್ತಿಯಿಂದ ನನ್ನನ್ನು ಸೇವಿಸುತ್ತಾರೆ.
ಜ್ಞಾನಿಗಳು ‘ಎಲ್ಲದರ ನಿಯಾಮಕ ಭಗವಂತ, ಎಲ್ಲವೂ ಭಗವಂತನಿಂದ ಸೃಷ್ಟಿಯಾಗಿದೆ, ಎಲ್ಲವೂ ಭಗವಂತನಿಂದ ನಿಯತವಾಗಿದೆ’ ಎನ್ನುವ ಸತ್ಯವನ್ನು ಅರಿತು ಭಕ್ತಿಯಿಂದ ಉಪಾಸನೆ ಮಾಡುತ್ತಾರೆ. “ಈ ರೀತಿ ಭಗವಂತನ ಬಗೆಗೆ ಅನನ್ಯ ಭಕ್ತಿ ಮತ್ತು ಸರ್ವೋತ್ತಮ ಜ್ಞಾನವುಳ್ಳವರು: ತಮ್ಮೆಲ್ಲ ಮನ್ಸಸ್ಸಿನ ಪ್ರಪಂಚ ನನ್ನ ಅಧೀನ, ಎಲ್ಲಕ್ಕೂ ಕಾರಣ ನಾನು, ಎಲ್ಲವೂ ಹುಟ್ಟಿದ್ದು ನನ್ನಿಂದ, ಎಲ್ಲವೂ ನಿಯಂತ್ರಿತವಾಗುವುದು ನನ್ನಿಂದ, ಎಲ್ಲವೂ ನನ್ನ ಅಧೀನ ಎಂದು ತಿಳಿದು ಉಪಾಸನೆ ಮಾಡುತ್ತಾರೆ” ಎನ್ನುತ್ತಾನೆ ಕೃಷ್ಣ.