ಶ್ಲೋಕ – 05
ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋSಯಶಃ ।
ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ ವಿಧಾಃ ॥೫॥
ಅಹಿಂಸಾ ಸಮತಾ ತುಷ್ಟಿಃ ತಪಃ (ಅ)ದಾನಮ್ ಯಶಃ ಅಯಶಃ ।
ಭವಂತಿ ಭಾವಾಃ ಭೂತಾನಾಮ್ ಮತ್ತಃ ಏವ ಪೃಥಕ್ ವಿಧಾಃ — ಅಹಿಂಸೆ, ಸಮದೃಷ್ಟಿ, ತೃಪ್ತಿ, ತಪಸ್ಸು, ದಾನ, ಹೆಸರು, ಕೆಟ್ಟ ಹೆಸರು- ಬಗೆ ಬಗೆಯ ಈ ಎಲ್ಲ ಬಗೆಗಳೂ ನನ್ನಿಂದಲೆ ಉಂಟಾಗುತ್ತವೆ.
ಕೃಷ್ಣ ಹೇಳುತ್ತಾನೆ “ಅಹಿಂಸೆ, ಸಮದೃಷ್ಟಿ, ತೃಪ್ತಿ, ತಪಸ್ಸು, (ಅ)ದಾನ, ಹೆಸರು, ಕೆಟ್ಟ ಹೆಸರು” ಇವು ನನ್ನಿಂದ ಎಂದು. ಇಲ್ಲಿ ಅಹಿಂಸೆ ಮತ್ತು ಸಮದೃಷ್ಟಿ ತುಂಬಾ ವಿಶೇಷವಾದುದ್ದು. ಏಕೆಂದರೆ ಹಿಂಸೆಯೂ ಕೆಲವೊಮ್ಮೆ ಅಹಿಂಸೆಯಾಗುತ್ತದೆ ಮತ್ತು ಅಸಮಾನತೆಯೂ ಸಮಾನತೆಯಾಗುತ್ತದೆ. ಅದಕ್ಕಾಗಿ ಇದನ್ನು ಇಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದ್ದಾನೆ ಕೃಷ್ಣ.
ಮೊದಲಿಗೆ ಅಹಿಂಸೆ: ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು ಅಹಿಂಸೆ. ಇಲ್ಲಿ ಅಹಿಂಸೆ ಎಂದರೆ ಕೇವಲ ಶಾರೀರಿಕವಾಗಿ ಮಾತ್ರವಲ್ಲ, ಮನಸ್ಸು ಮತ್ತು ಮಾತಿನಲ್ಲೂ ನಾವು ಅಹಿಂಸೆಯನ್ನು ಸಾಧಿಸಬೇಕು. ಉದಾಹರಣೆಗೆ: ಒಬ್ಬರನ್ನು ಚುಚ್ಚು ಮಾತಿನಿಂದ ಹಂಗಿಸುವುದು, ಮಾನಸಿಕವಾಗಿ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಶಾಪ ಹಾಕುವುದು ಕೂಡಾ ಹಿಂಸೆ. ಕೆಲವೊಮ್ಮೆ ಹಿಂಸೆಯೇ ಅಹಿಂಸೆಯಾಗುತ್ತದೆ. ಉದಾಹರಣೆಗೆ: ಒಂದು ನರಭಕ್ಷಕ ಹುಲಿಯನ್ನು ಕೊಲ್ಲುವುದರಿಂದ ಊರಿನ ಅನೇಕ ಜನರ ಪ್ರಾಣ ಉಳಿಯುವುದಾದರೆ ಅದನ್ನು ಕೊಲ್ಲುವುದು ಅಹಿಂಸೆ.[ನಾವು ಈ ರೀತಿಯ ಅಹಿಂಸೆಯನ್ನು ಕೃಷ್ಣನ ಅನೇಕ ಕೃತಿಗಳಲ್ಲಿ ಕಾಣುತ್ತೇವೆ]. ದೊಡ್ಡ ಹಿಂಸೆಯನ್ನು ತಡೆಯುವುದಕ್ಕೊಸ್ಕರ ಮಾಡುವ ಚಿಕ್ಕ ಹಿಂಸೆ-ಅಹಿಂಸೆ. ನಾವು ನಮ್ಮ ಮಾತಿನಿಂದ, ಕೃತಿಯಿಂದ ಮತ್ತು ಮನಸ್ಸಿನಿಂದ ಇನ್ನೊಬ್ಬರಿಗೆ ಹಿಂಸೆಯಾಗದಂತೆ ನಡೆದುಕೊಳ್ಳಬೇಕು.
ಎರಡನೆಯ ಗುಣ ಸಮದೃಷ್ಟಿ (ಸಮತಾಃ) : ಇಲ್ಲಿ ಸಮದೃಷ್ಟಿ ಎಂದರೆ ಎಲ್ಲರನ್ನೂ ಏಕ ರೂಪದಲ್ಲಿ ನೋಡುವುದು ಎಂದರ್ಥವಲ್ಲ. ಇದು ಯೋಗ್ಯತೆಗನುಗುಣವಾದ ಸಮದೃಷ್ಟಿ. ಉದಾಹರಣೆಗೆ: ಒಂದು ಶಾಲೆಯಲ್ಲಿ ಚನ್ನಾಗಿ ಓದಿ ಬರೆದ ವಿದ್ಯಾರ್ಥಿ ಹಾಗು ಓದದೆ ಪೋಲಿಯಾಗಿರುವ ಇನ್ನೊಬ್ಬ ವಿದ್ಯಾರ್ಥಿಗೆ ಸಮನಾದ ಅಂಕವನ್ನು ಕೊಡುವುದು ಸಮಾನತೆ ಅಲ್ಲ. ಯಾವುದೇ ದ್ವೇಷವಿಲ್ಲದೆ, ಶತ್ರು, ಮಿತ್ರ, ಸ್ಥಳೀಯ, ಪರಕೀಯ ಎನ್ನುವ ಭೇದವಿಲ್ಲದೆ, ಅವರವರ ಯೋಗ್ಯತೆಗೆ ತಕ್ಕಂತೆ ಅಂಕ ವಿತರಣೆ ಮಾಡುವುದು ಸಮಾನತೆ. ಯಾರನ್ನು ಹೇಗೆ ನೋಡಬೇಕೋ ಅವರನ್ನು ಹಾಗೆ ನೋಡುವುದು. ತಂದೆಯನ್ನು ತಂದೆಯಂತೆ, ತಾಯಿಯನ್ನು ತಾಯಿಯಂತೆ, ಗುರುವನ್ನು ಗುರುವಂತೆ ಹೀಗೆ ಯಾರು ಸಮಾನರೋ ಅವರನ್ನು ಸಮಾನವಾಗಿ ಗೌರವಿಸುವುದು ಸಮದೃಷ್ಟಿ.
ಮೂರನೆಯ ಗುಣ ತೃಪ್ತಿ: ಮನುಷ್ಯನ ಎಲ್ಲಾ ದುಃಖಗಳಿಗೆ ಮುಖ್ಯ ಕಾರಣ ಅತೃಪ್ತಿ. ಇಂದಿನ ಸಮಾಜದಲ್ಲಿ ನಮ್ಮ ಮನೆಯಲ್ಲಿ ನಮಗೆ ಅಗತ್ಯಕ್ಕೆ ಬೇಕಾದಷ್ಟು ಇದ್ದರೂ ಕೂಡ ಮಾಧ್ಯಮಗಳಲ್ಲಿ ಬರುವ ಜಾಹಿರಾತಿಗೆ ಮರುಳಾಗಿ, ಅಥವಾ ನೆರಮನೆಯವರಿಗೆ ಪ್ರತಿಸ್ಪರ್ಧಿಯಾಗಿ, ಸದಾ ಅತೃಪ್ತಿಯಲ್ಲಿ ನಾವು ಬದುಕುತ್ತೇವೆ. ಕೆಲಸ ಇಲ್ಲದಾಗ ಕೆಲಸದ ಆಸೆ, ನಂತರ ಎಷ್ಟು ಸಂಬಳ ಬಂದರೂ ಅಲ್ಲಿ ಅತೃಪ್ತಿ. ಇಲ್ಲದ್ದನ್ನು ಯೋಚಿಸಿ ಕೊರಗದೆ, ಇದ್ದದ್ದನ್ನು ಯೋಚಿಸಿ ಖುಷಿ ಪಡುವುದು(Be content with whatever you have) ನಿಜವಾದ ತೃಪ್ತಿ.
ನಾಲ್ಕನೆಯದು ತಪಸ್ಸು: ಇದರಲ್ಲಿ ಮೂರು ಬಗೆ: ಕಾಯಾ-ವಾಚಾ-ಮನಸಾ ತಪಃ. ಕಾಯ ಅಂದರೆ ದೇಹ. ದೇಹದ ಮೂಲಕ ತಪಸ್ಸು. ಸಾಮಾನ್ಯವಾಗಿ ದೇಹ ಹೇಳಿದಂತೆ ಕೇಳದೆ ಇರುವುದು ಆಹಾರ ಅತ್ಯಯ ಅಥವಾ ವ್ಯತ್ಯಯದಿಂದ. ಆಹಾರ ನಿಯಂತ್ರಣ ಮಾಡಿದಾಗ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ಮನಸ್ಸು ನಿಯಂತ್ರಣದಲ್ಲಿದ್ದರೆ ದೇಹ ಸ್ಥಿರವಾಗಿರಲು ಸಾಧ್ಯ. ಇದಕ್ಕಾಗಿ ನಾನಾ ರೀತಿಯ ನಿಯಂತ್ರಣ ಸಾಧನವಾದ ವೃತಾನುಷ್ಠಾನ ಮಾಡುವುದು. ಒಟ್ಟಿನಲ್ಲಿ ಅಹಂಕಾರ ಅಸೂಯೆ ಪಡದೆ ಬಗ್ಗುವ ಗುಣ ಬರುವುದು ದೇಹದ ತಪಸ್ಸಿನಿಂದ. ಇನ್ನೊಬ್ಬರಿಗೆ ಹಿತವೆನಿಸುವ, ಸತ್ಯವಾದ-ಸಹಜ ಮಾತನ್ನಾಡುವುದು; ಶಾಸ್ತ್ರಗಳ ಶ್ರವಣ-ಮನನ ಮಾಡಿ ಅದರಿಂದ ಸ್ವಪ್ರವಚನ ಅಭ್ಯಸಿಸಿ ಅದನ್ನು ಅರಗಿಸಿಕೊಂಡು ಇನ್ನೊಬ್ಬರಿಗೆ ಪ್ರವಚನ ಮಾಡಿ, ಮುಂದಿನ ತಲೆಮಾರಿಗೆ ಕೊಡುವುದು ವಾಚ-ತಪಃ. ಮಾನಸಿಕವಾಗಿ ಸದಾ ಆಳವಾದ ಚಿಂತನೆ ಮನಸಾ-ತಪಃ.
ಐದನೆಯದು (ಅ)ದಾನ: ದಾನ ಶಬ್ದಕ್ಕೆ ಸಂಸ್ಕೃತದಲ್ಲಿ ಎರಡು ಅರ್ಥವಿದೆ. ಒಂದು ‘ಕೊಡುವುದು’ ಇನ್ನೊಂದು ‘ತುಂಡರಿಸುವುದು’. ಕೊಡುವುದರಿಂದ ಅದು ನಮ್ಮ ಪಾಪವನ್ನು ತುಂಡರಿಸಿದರೆ ಅದು ದಾನ. ಬದಲಿಗೆ ನಮ್ಮ ಪುಣ್ಯವನ್ನು ತುಂಡರಿಸಿದರೆ ಅದು ಅದಾನ.
ನಮಗೆ ಅನುಪಯುಕ್ತವಾದ ವಸ್ತುವನ್ನು ಸಾಗಹಾಕುವುದಕ್ಕೋಸ್ಕರ ಕೊಡುವ ದಾನ ದಾನವಲ್ಲ. ಅತೀ ಅಗತ್ಯವಾದ ವಸ್ತು ಇನ್ನೊಬ್ಬರಲ್ಲಿ ಇಲ್ಲದೆ ಅದು ನಮ್ಮಲ್ಲಿ ಇದ್ದರೆ, ನಮ್ಮಲ್ಲಿರುವುದನ್ನು ಅವರಿಗೆ ಹಂಚಿ ಅವರ ಕೊರತೆ ನೀಗಿಸುವುದು ನಿಜವಾದ ದಾನ. ಒಬ್ಬ ವ್ಯಕ್ತಿ ಒಂದು ಹೊತ್ತಿನ ಊಟಕ್ಕೆ ಗತಿ ಇಲ್ಲದೆ ಪರದಾಡುತ್ತಿರುವಾಗ ನಮ್ಮಲ್ಲಿ ಎರಡು ಹೊತ್ತಿನ ಊಟಕ್ಕಾಗುವಷ್ಟು ಧಾನ್ಯವಿದ್ದರೆ, ನಮ್ಮ ನಾಳೆಯ ಬಗ್ಗೆ ಯೋಚಿಸದೆ, ಆ ವ್ಯಕ್ತಿಗೆ ಒಂದು ಹೊತ್ತಿನ ಧಾನ್ಯವನ್ನು ದಾನ ಮಾಡುವುದು ನಿಜವಾದ ದಾನ.
ದಾನದಲ್ಲಿ ಅಶನ-ವಸನ-ಅನ್ನ ಇದನ್ನು ಯಾರಿಗೆ ಬೇಕಾದರೂ ದಾನ ಮಾಡಬಹುದು. ಇರುವುದಕ್ಕೆ ತಾಣ, ಉಡುವುದಕ್ಕೆ ಬಟ್ಟೆ, ಹಸಿದವನಿಗೆ ಅನ್ನ. ಇದನ್ನು ಕೊಡುವುದಕ್ಕೆ ಯೋಗ್ಯ-ಅಯೋಗ್ಯ ಎನ್ನುವ ನಿರ್ಬಂಧವಿಲ್ಲ. ಆದರೆ ಇತರೆ ವಸ್ತುವನ್ನು ದಾನ ಮಾಡುವಾಗ ಯಾವುದು ಯಾರಿಗೆ ಅಗತ್ಯ ಮತ್ತು ಯೋಗ್ಯ ಎಂದು ನೋಡಿ ದಾನ ಮಾಡಬೇಕು. ಪ್ರಚಾರಕ್ಕಾಗಿ ದಾನ ಮಾಡುವುದು-ಅದಾನ. ಯಾವುದೇ ಬಯಕೆ ಇಲ್ಲದೆ ನಿಷ್ಪೃಹತೆಯಿಂದ ಕರ್ತವ್ಯ ದೃಷ್ಟಿಯಿಂದ ಯೋಗ್ಯವಾದ ದೇಶದಲ್ಲಿ, ಯೋಗ್ಯವಾದ ಕಾಲದಲ್ಲಿ, ಯೋಗ್ಯವಾದ ವ್ಯಕ್ತಿಗೆ ಮಾಡುವ ದಾನ ನಿಜವಾದ ದಾನ.
ಕೊನೆಯದಾಗಿ ಕೃಷ್ಣ ಯಶಃ-ಅಯಶಃವನ್ನು ಇಲ್ಲಿ ಹೇಳಿದ್ದಾನೆ. ಇದು ತುಂಬಾ ವಿಚಿತ್ರವಾದದ್ದು. ಒಬ್ಬ ಕೆಟ್ಟದ್ದನ್ನು ಮಾಡಿ ಒಳ್ಳೆಯವನು ಎಂದು ಯಶಸ್ಸನ್ನು ಗಳಿಸಬಹುದು. ಇನ್ನೊಬ್ಬ ಜೀವಮಾನವೆಲ್ಲ ಒಳ್ಳೆಯ ಕೆಲಸ ಮಾಡಿ ಬೇಡವಾದ ಅಪವಾದ ಕೇಳಿ ದುರಂತಕ್ಕೊಳಗಾಗಬಹುದು. ಇದು ತೀರ್ಮಾನವಾಗುವುದು ನಮ್ಮ ಜೀವನದ ನಡೆಯ ಮೇಲೆ. ಇದಕ್ಕಾಗಿ ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಅಪವಾದ ಬಂದಾಗ ಹೇಗಿರಬೇಕು ಎನ್ನುವುದನ್ನು ಕೃಷ್ಣ ತನ್ನ ಜೀವನ ಕ್ರಮದಲ್ಲಿ ನಮಗೆ ತೋರಿಸಿಕೊಟ್ಟಿದ್ದಾನೆ. ಶಮಂತಕ ಮಣಿಯನ್ನು ಕೃಷ್ಣ ಕದ್ದ ಎನ್ನುವ ಅಪವಾದ ಕೃಷ್ಣನಿಗೆ ಬಂದಾಗ ಕೃಷ್ಣನ ನಡೆ ಇದಕ್ಕೆ ಉತ್ತಮ ದೃಷ್ಟಾಂತ.
ಹೀಗೆ “ಈ ಎಲ್ಲಾ ಭಾವಗಳು ಜೀವಜಾತಕ್ಕೆ ಬರುವುದು ನನ್ನಿಂದಲೆ” ಎನ್ನುತ್ತಾನೆ ಕೃಷ್ಣ. ಯಾರಿಗೆ ಯಾವ ಕಾಲದಲ್ಲಿ ಯಾವ ಭಾವ ಬರಬೇಕು ಅನ್ನುವುದು ಭಗವಂತನ ನಿರ್ಧಾರ. ನಮ್ಮ ಮನಸ್ಸಿನ ಸ್ಥಿತಿಯ ಒಂದೊಂದು ಚಲನ-ವಲನ ಭಗವಂತನ ಅಧೀನ. ಇದು ನಾವು ನಮ್ಮ ಉಪಾಸನೆಯಲ್ಲಿ ತಿಳಿದಿರಬೇಕಾದ ಮೂಲಭೂತ ಸತ್ಯ. ಇದು ಕೃಷ್ಣ ಕೊಟ್ಟ ಮಾನಸಿಕ ಉಪಾಸನೆಯ ಅದ್ಭುತ ಚಿತ್ರಣ.