ಶ್ಲೋಕ – 42
ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ ।
ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್ ॥೪೨॥
ಅಥವಾ ಬಹುನಾ ಏತೇನ ಕಿಮ್ ಜ್ಞಾತೇನ ತವ ಅರ್ಜುನ ।
ವಿಷ್ಟಭ್ಯ ಅಹಮ್ ಇದಮ್ ಕೃತ್ಸ್ನಮ್ ಏಕ ಅಂಶೇನ ಸ್ಥಿತಃ ಜಗತ್ –ಅಥವಾ, ಓ ಅರ್ಜುನ, ಎಲ್ಲವನ್ನು ತಿಳಿದು ಏನು ಬಂತು ? ಸಾರವಿದು: ನಾನು ನನ್ನ ಅಳವಿನ ಒಂದು ಅಂಶದಿಂದ ಈ ಇಡಿಯ ವಿಶ್ವವನ್ನು ತಬ್ಬಿ ತಡೆಹಿಡಿದು ನಡೆಸುತ್ತಿದ್ದೇನೆ.
ಒಂದೊಂದನ್ನು ಪ್ರತ್ಯೇಕ ತಿಳಿದು ಹೇಳುವುದು ಅಸಾಧ್ಯ. ಈ ರೀತಿ ಮಾಡುವ ಅಗತ್ಯವೂ ಇಲ್ಲ. ಎಲ್ಲವುದರೊಳಗೂ ಒಂದು ವಿಶಿಷ್ಠ ಶಕ್ತಿಯಾಗಿ ಭಗವಂತನಿದ್ದಾನೆ. ಎಲ್ಲದರಲ್ಲೂ ಭಗವಂತನ ವಿಭೂತಿ ಅಡಗಿದೆ. ಕೃಷ್ಣ ಹೇಳುತ್ತಾನೆ “ ಇಡೀ ವಿಶ್ವವನ್ನು ನಾನು ನನ್ನ ಸಾಮರ್ಥ್ಯದ ಒಂದು ತುಣುಕಿನಿಂದ ವ್ಯಾಪಿಸಿ ನಿಂತಿದ್ದೇನೆ” ಎಂದು. ಪುರುಷ ಸೂಕ್ತದಲ್ಲಿ ಹೇಳುವಂತೆ:
ಪಾದೋಸ್ಯ ವಿಶ್ವಾ ಭೂತಾನಿ| ತ್ರಿಪಾದಸ್ಯಾಮೃತಂ ದಿವಿ|
ತ್ರಿಪಾದೂರ್ಧ್ವ ಉದೈತ್ಪುರುಷಃ| ಪಾದೋಸ್ಯೇಹಾಭವಾತ್ಪುನಃ|
ತತೋ ವಿಷ್ವಂವ್ಯಕ್ರಾಮತ್| ಸಾಶನಾನಶನೇ ಅಭಿ|
ಈ ಪ್ರಪಂಚದಲ್ಲಿ ವ್ಯಾಪಿಸಿರುವುದು ಭಗವಂತನ ಕೇವಲ ಕಾಲು ಭಾಗವಷ್ಟೇ. ಅಮೃತಮಯವಾದ ಮುಕ್ಕಾಲು ಭಾಗ ದಿವ್ಯಲೋಕ (ಮುಕ್ತಲೋಕ) ದಲ್ಲಿ ನೆಲೆಸಿದೆ. “ಜಗತ್ತಿನ ಸಮಸ್ತ ವಸ್ತುವಿನ ಒಳಗೂ ಹೊರಗೂ ತುಂಬಿ ನಾನು ವಿಶ್ವ ರೂಪನಾಗಿದ್ದೇನೆ” ಎನ್ನುತ್ತಾನೆ ಕೃಷ್ಣ.
ಇತಿ ದಶಮೋSಧ್ಯಾಯಃ
ಹತ್ತನೆಯ ಅಧ್ಯಾಯ ಮುಗಿಯಿತು