ಶ್ಲೋಕ – 40
ನಾಂತೋSಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ ।
ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ ॥೪೦॥
ನ ಅಂತಃ ಅಸ್ತಿ ಮಮ ದಿವ್ಯಾನಾಮ್ ವಿಭೂತೀನಾಮ್ ಪರಂತಪ ।
ಏಷಃ ತು ಉದ್ದೇಶತಃ ಪ್ರೋಕ್ತಃ ವಿಭೂತೇಃ ವಿಸ್ತರಃ ಮಯಾ—ಓ ಅರಿಗಳ ಉರಿಯೆ, ನನ್ನ ದಿವ್ಯರೂಪಗಳ ಹಿರಿಮೆಗಳಿಗೆ ಕೊನೆಯಿಲ್ಲ. ನನ್ನ ಹಿರಿಮೆಯ ಬಿತ್ತರದ ಕೆಲವನ್ನಷ್ಟೆ ಇಲ್ಲಿ ಹೆಸರಿಸಿ ಹೇಳಿದೆ.
ಕೃಷ್ಣ ಹೇಳುತ್ತಾನೆ “ನನ್ನ ವಿಭೂತಿ ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಇದೆ. ಅದನ್ನು ಹೇಳಿ ಕೊನೆ ಇಲ್ಲ” ಎಂದು. ಲೋಕವಿಲಕ್ಷಣವಾದ ಭಗವಂತನ ವಿಭೂತಿಗೆ ಕೊನೆ ಇಲ್ಲ. ಅದನ್ನು ಹೇಳಿ ಮುಗಿಯುವುದಿಲ್ಲ. ಇಲ್ಲಿ ಕೃಷ್ಣ ಅತ್ಯಂತ ಮುಖ್ಯವಾದ, ನಾವು ನಿರಂತರ ಉಪಾಸನೆ ಮಾಡಬೇಕಾದ, ನಿತ್ಯ ಅನುಸಂಧಾನದಲ್ಲಿರಬೇಕಾದದ್ದನ್ನು ಹೇಳಿದ.