ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 38

ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ ।
ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ್ ॥೩೮॥

ದಂಡಃ ದಮಯತಾಮ್ ಅಸ್ಮಿ ನೀತಿಃ ಅಸ್ಮಿ ಜಿಗೀಷತಾಮ್ ।

ಮೌನಮ್ ಚ ಏವ ಅಸ್ಮಿ ಗುಹ್ಯಾನಾಮ್ ಜ್ಞಾನಮ್ ಜ್ಞಾನವತಾಮ್ ಅಹಮ್ –ಬಗ್ಗುಬಡಿಯುವವರ ದಂಡನೀತಿ ನಾನು. [ದಂಡಿಸುವವನಾದ್ದರಿಂದ ‘ದಂಡ’ ಎನ್ನಿಸಿ ದಂಡನೀತಿಯಲ್ಲಿದ್ದೇನೆ.] ಗೆಲ್ಲಬಯಸುವವರ ನಯಗಾರಿಕೆ ನಾನು. [ಗೆಲುವಿನತ್ತ ಕರೆದೊಯ್ಯುವುದರಿಂದ ‘ನೀತಿ’ ಎನ್ನಿಸಿ ನಯಗಾರಿಕೆಯಲ್ಲಿದ್ದೇನೆ.] ಗುಟ್ಟುಗಳಲ್ಲಿ ಮೌನ ನಾನು. [ಮುನಿಗಳಿಂದ ಸ್ತುತನಾಗಿ ‘ಮೌನ’ ಎನ್ನಿಸಿ ಮೌನದಲ್ಲಿದ್ದೇನೆ.] ಬಲ್ಲವರ ತಿಳಿವು ನಾನು. [ಅರಿವಿನ ಮೂರ್ತಿಯಾದ್ದರಿಂದ ‘ಜ್ಞಾನ’ ಎನ್ನಿಸಿ ತಿಳಿವಿನಲ್ಲಿದ್ದೇನೆ.]

“ದುಷ್ಟರನ್ನು ದಮನ ಮಾಡುವ ದಮನಶಕ್ತಿ ನಾನು” ಎನ್ನುತ್ತಾನೆ ಕೃಷ್ಣ. ಈ ದಮನಶಕ್ತಿಯಾಗಿ ವೀರರಲ್ಲಿ ಭಗವಂತ ಕೂತಿದ್ದಾನೆ. ದಂಡ ಎಂದರೆ ಶಿಕ್ಷೆ. ಸಂಸ್ಕೃತದಲ್ಲಿ ಶಿಕ್ಷೆ ಎನ್ನುವುದಕ್ಕೆ ಶಿಕ್ಷಣ ಎನ್ನುವ ಅರ್ಥವಿದೆ. ಆದರೆ ಇಲ್ಲಿ ದಂಡ ಎಂದರೆ ದಂಡಿಸುವುದು(Punishment). ತಪ್ಪು ಮಾಡಿದವರಿಗೆ ದೇವರ ರಾಜ್ಯದಲ್ಲಿ ಕ್ಷಮೆ ಇಲ್ಲ. ನಾವು ಮಾಡಿದ ಕರ್ಮವನ್ನು ನಾವು ಅನುಭವಿಸಲೇಬೇಕು. ತಪ್ಪು ಮಾಡಿದವರಿಗೆ ನಿರ್ದಾಕ್ಷಿಣ್ಯ ಹಾಗು ನಿಷ್ಠುರವಾದ ದಂಡನೆಯನ್ನು ಕೊಡುವ ಭಗವಂತ ‘ದಂಡಃ’. ಗೆಲ್ಲುವ ಶಕ್ತಿಯಾಗಿ ಎಲ್ಲರನ್ನು ನಿಯಂತ್ರಣ ಮಾಡುವ ಭಗವಂತ ‘ನೀತಿಃ’. ಮನನಶಕ್ತಿಯಾಗಿ ನಿಂತ ಭಗವಂತ ‘ಮೌನಃ’. ಬಲ್ಲವರ ತಿಳಿವಾಗಿರುವ ಭಗವಂತ ‘ಜ್ಞಾನಃ’.

ಮೂಲಭೂತವಾಗಿ ವಿಭೂತಿಗಳ ವಿಸ್ತಾರ ಇಲ್ಲಿಗೆ ಮುಗಿಯಿತು. ಮುಂದೆ ವಿಭೂತಿಯ ಉಪಸಂಹಾರವನ್ನು ಈ ಅಧ್ಯಾಯದ ಉಳಿದ ಭಾಗದಲ್ಲಿ ನೋಡೋಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *