ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 37

ವೃಷ್ಣೀನಾಂ ವಾಸುದೇವೋSಸ್ಮಿ ಪಾಂಡವಾನಾಂ ಧನಂಜಯಃ ।
ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ ॥೩೭॥

ವೃಷ್ಣೀನಾಮ್ ವಾಸುದೇವಃ ಅಸ್ಮಿ ಪಾಂಡವಾನಾಮ್ ಧನಂಜಯಃ ।

ಮುನೀನಾಮ್ ಅಪಿ ಅಹಮ್ ವ್ಯಾಸಃ ಕವೀನಾಮ್ ಉಶನಾ ಕವಿಃ – ವೃಷ್ಣಿವಂಶದ ರಾಜನ್ಯರಲ್ಲಿ [ವಾಸು=ಎಲ್ಲವನ್ನೂ ಆವರಿಸಿ, ಎಲ್ಲದರೊಳಗೂ ನೆಲೆಸಿರುವ, ದೇವ=ದಿವ್ಯರೂಪನಾದ್ದರಿಂದ] ವಾಸುದೇವನಾಗಿ ಅವತರಿಸಿದ್ದೇನೆ. ಪಾಂಡವರಲ್ಲಿ ಅರ್ಜುನ ನಾನು. [ಸಿರಿಯನ್ನು ಗೆದ್ದವನಾಗಿ ‘ಧನಂಜಯ’ ಎನ್ನಿಸಿ ಅರ್ಜುನನಲ್ಲಿದ್ದೇನೆ.] ಮುನಿಗಳಲ್ಲಿ [ವಿ=ಎಲ್ಲಕ್ಕಿಂತ ವಿಶಿಷ್ಟನಾಗಿ, ಆ=ಎಲ್ಲೆಡೆಯು, ಸಃ =ಅವನೆ ತುಂಬಿರುವುದರಿಂದ] ವ್ಯಾಸ ನಾನು. ವಿಜ್ಞಾನಿಗಳಲ್ಲಿ ಹಿರಿಯ ವಿದ್ವಾಂಸನಾದ ಶುಕ್ರ ನಾನು. [ಇಚ್ಛಾರೂಪನಾದ್ದರಿಂದ ‘ಉಶನಸ್’ ಎನ್ನಿಸಿ ದೈತ್ಯಗುರು ಶುಕ್ರನಲ್ಲಿದ್ದೇನೆ.]

ಸಾಕ್ಷಾತ್ ವಿಭೂತಿಯನ್ನು ಹೇಳುತ್ತ ಕೃಷ್ಣ ಹೇಳುತ್ತಾನೆ “ವೃಷ್ಣೀನಾಮ್ ವಾಸುದೇವಃ ಅಸ್ಮಿ” ಎಂದು. ಇಲ್ಲಿ ಭಗವಂತನ ವಿಭೂತಿ ನಾಮ ‘ವಾಸುದೇವಃ’. ಎಲ್ಲೆಡೆ ಇದ್ದರೂ ಕಾಣಿಸದೆ, ಅಪರೋಕ್ಷ ಜ್ಞಾನವನ್ನು ಕರುಣಿಸಿ ಪ್ರತ್ಯಕ್ಷನಾಗುವ ಭಗವಂತ ವಾಸುದೇವಃ. ಪಾಂಡವರಲ್ಲಿ ‘ಧನಂಜಯಃ’ ನಾನು ಎನ್ನುತ್ತಾನೆ ಕೃಷ್ಣ. ಇದು ಏಕದೇಶ ವಿಭೂತಿ. ಅರ್ಜುನನಲ್ಲಿ ಭಗವಂತನ ವಿಶೇಷ ಆವೇಶ ಇತ್ತು. ಆತನಲ್ಲಿ ಭಗವಂತ ‘ಧನಂಜಯಃ’ ನಾಮಕನಾಗಿ ನಿಂತಿದ್ದ. ಧನಂಜಯಃ ಎನ್ನುವಲ್ಲಿ ಧನ ಎಂದರೆ ಜ್ಞಾನ. ಭಗವಂತನ ಅರಿವು, ಅದರಿಂದ ಪಡೆಯುವ ಮೋಕ್ಷ ಶಾಶ್ವತ ಧನ. ಅದನ್ನು ಕೊಡುವ ಭಗವಂತ ಧನಂಜಯಃ. ಮುನಿಗಳಲ್ಲಿ ವ್ಯಾಸ. ಇದು ಭಗವಂತನ ಸಾಕ್ಷಾತ್ ವಿಭೂತಿ. ವ್ಯಾಸರು ವೇದವನ್ನು 1137 ಸಂಹಿತೆಯಾಗಿ ವಿಭಾಗಮಾಡಿ ಜ್ಞಾನಿಗಳ ಮುಖೇನ ನಮಗೆ ಕೊಟ್ಟಿದ್ದಾರೆ. ಪ್ರಧಾನವಾಗಿ ವೇದಗಳು ನಾಲ್ಕು. ಪದ್ಯ ಸಂಕಲನ ಋಗ್ವೇದ, ಗದ್ಯ ಸಂಕಲನ ಯಜುರ್ವೇದ, ಗಾನಕ್ಕೋಸ್ಕರ ಸಾಮವೇದ, ಅಥರ್ವ ಮುನಿ ಬ್ರಹ್ಮನಿಂದ ಉಪದೇಶ ಪಡೆದು ಬರೆದ ಅಥರ್ವಣ ವೇದ. ಮೂಲಭೂತವಾಗಿ ವೇದಗಳು ಮೂರು ಆದರೆ ಋಷಿ ಸಂಪ್ರದಾಯದಿಂದ ನಾಲ್ಕು ವೇದಗಳ ಸೃಷ್ಟಿಯಾಯಿತು. ಇದನ್ನೇ ವೇದವ್ಯಾಸರು ನಾಲ್ಕು ಜನ ಮುನಿಗಳಿಗೆ (ಬೈಲ, ವೈಶಂಪಾಯನ, ಸುಮಂತು ಮತ್ತು ಜೈಮಿನಿಗೆ) ಹೇಳಿದರು. ಈ ನಾಲ್ಕು ಮುನಿಗಳು ಮತ್ತೆ ವೇದವನ್ನು ಅನೇಕ ಶಾಖೆಗಳಾಗಿ(ಸಂಹಿತೆ) ವಿಂಗಡಿಸಿದರು. ಋಗ್ವೇದದಲ್ಲಿ 24 ಸಂಹಿತೆಗಳಿವೆ; ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆ. ಒಂದು ಶುಕ್ಲ ಯಜುರ್ವೇದ ಹಾಗು ಇನ್ನೊಂದು ಕೃಷ್ಣ ಯಜುರ್ವೇದ. ಶುಕ್ಲ ಯಜುರ್ವೇದದಲ್ಲಿ 15 ಸಂಹಿತೆ, ಹಾಗು ಕೃಷ್ಣ ಯಜುರ್ವೇದದಲ್ಲಿ 86 ಸಂಹಿತೆ, ಒಟ್ಟು 101 ಸಂಹಿತೆ. ಸಾಮವೇದದಲ್ಲಿ 1000 ಶಾಖೆಗಳು, ಒಂದು ಸಾವಿರ ಬಗೆಯ ಗಾನ ಪದ್ಧತಿ! ಆದರೆ ಇಂದು ಕೇವಲ ಮೂರು (ಜೈಮಿನಿಯ, ರಣಾಯನಿಯ ಹಾಗು ಕೌತುಮನ) ಗಾನಪದ್ಧತಿ ಮಾತ್ರ ಪ್ರಚಲಿತದಲ್ಲಿದೆ. ಅಥರ್ವ ವೇದದಲ್ಲಿ ಒಟ್ಟು 12 ಶಾಖೆಗಳು. ಹೀಗೆ ವೇದವನ್ನು 1137 (24+101+12+1000) ಸಂಹಿತೆಗಳಾಗಿ ವಿಂಗಡಿಸಿ ವಿಸ್ತಾರ ಮಾಡಿದ ಮುನಿ ವ್ಯಾಸ. ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವನ್ನು ನಮ್ಮ ಮುಂದೆ ತೆರೆದಿಟ್ಟ, ಎಲ್ಲೆಡೆ ತುಂಬಿರುವ ಭಗವಂತ ವ್ಯಾಸಃ. ದೈತ್ಯ ಗುರು ಶುಕ್ರಾಚಾರ್ಯರಲ್ಲಿ ‘ಉಶನ’ ನಾಮಕನಾಗಿ ಭಗವಂತ ನಿಂತ. ಈ ಕಾರಣದಿಂದ ಗ್ರಹಗಳಲ್ಲಿ ಶುಕ್ರ ಒಬ್ಬನಾಗಿ ಸ್ಥಾನ ಪಡೆದ. ತನ್ನ ಇಚ್ಛಾಮಾತ್ರದಿಂದಲೇ ಎಲ್ಲ ಕಾರ್ಯವನ್ನು ಮಾಡುವ ಭಗವಂತ ‘ಉಶನ’.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *